ಶನಿವಾರ, ಡಿಸೆಂಬರ್ 14, 2019
20 °C

ಹೊಸ ಅಲೆಯ ಮೌನರಾಗ

ರಘುನಾಥ ಚ ಹ Updated:

ಅಕ್ಷರ ಗಾತ್ರ : | |

ಹೊಸ ಅಲೆಯ ಮೌನರಾಗ

ಬೆಂಗಳೂರು: ಎಪ್ಪತ್ತು ಎಂಬತ್ತರ ದಶಕದ ಕನ್ನಡ ಚಿತ್ರರಂಗದ ಹೊಸ ಅಲೆಯ ಅನೇಕ ಸಿನಿಮಾಗಳ ಹಿನ್ನೆಲೆಯಲ್ಲಿ ನೆನಪಿಸಿಕೊಳ್ಳಬಹುದಾದ ಹಿರಿಯ ನಿರ್ದೇಶಕ ಟಿ.ಎಸ್‌. ರಂಗಾ (69) ಭಾನುವಾರ ಹೃದಯಾಘಾತದಿಂದ ನಿಧನರಾದರು. ಮಧುಮೇಹದಿಂದ ಬಳಲುತ್ತಿದ್ದ ಅವರು, ಕೆಲವು ಕಾಲದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ರಾಜಕಾರಣದಲ್ಲಿ ಹಾಗೂ ಸಮಾಜಸೇವೆಯಲ್ಲಿ ಹೆಸರು ಮಾಡಿದ್ದ ಗಾಂಧಿವಾದಿ ಟಿ.ಎಸ್‌. ಶಾಮಣ್ಣನವರ ಪುತ್ರರಾದ ರಂಗಾ, ಸಿನಿಮಾ ಮತ್ತು ರಂಗಭೂಮಿಯನ್ನು ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಆರಿಸಿಕೊಂಡಿದ್ದರು.

ನಟ, ಚಿತ್ರಕಥಾ ಲೇಖಕ, ನಿರ್ದೇಶಕನಾಗಿ ಕಾರ್ಯನಿರ್ವಹಿಸಿರುವ ಅವರು, ಸಾಕ್ಷ್ಯಚಿತ್ರಗಳ ನಿರ್ಮಾಣ–ನಿರ್ದೇಶನದಲ್ಲೂ ಹೆಸರು ಮಾಡಿದ್ದರು.

ರಂಗಾ ಚಿತ್ರರಂಗ ಪ್ರವೇಶಿಸಿದ್ದು ಟಿ.ಎಸ್‌. ನಾಗಾಭರಣ ನಿರ್ದೇಶನದ ’ಗ್ರಹಣ’ ಚಿತ್ರದ ಮೂಲಕ. ಈ ಸಿನಿಮಾಕ್ಕೆ ಭರಣರೊಂದಿಗೆ ಚಿತ್ರಕಥೆ ರಚಿಸಿದ್ದು ಮಾತ್ರವಲ್ಲದೆ, ಚೊಚ್ಚಿಲ ಪ್ರಯತ್ನಕ್ಕೇ ರಾಷ್ಟ್ರಪ್ರಶಸ್ತಿ ಪಡೆದಿದ್ದರು.

’ಗೀಜಗನ ಗೂಡು’ (1978) ರಂಗಾ ಅವರು ಸ್ವತಂತ್ರ ನಿರ್ದೇಶಕನಾಗಿ ರೂಪಿಸಿದ ಮೊದಲ ಸಿನಿಮಾ. ಶ್ರೀಕೃಷ್ಣ ಆಲನಹಳ್ಳಿಯವರ ಕೃತಿಯನ್ನಾಧರಿಸಿದ ಈ ಸಿನಿಮಾದ ಚಿತ್ರಕಥೆ, ಸಂಭಾಷಣೆಯೂ ಅವರದ್ದೇ.

1980ರಲ್ಲಿ ನಿರ್ದೇಶಿಸಿದ ’ಸಾವಿತ್ರಿ’ ಅವರಿಗೆ ಹೆಸರು ತಂದು ಕೊಟ್ಟ ಸಿನಿಮಾ. ರಂ.ಶ. ಲೋಕಾಪುರ ಅವರ ಕಾದಂಬರಿ ಆಧರಿಸಿದ ಈ ಸಿನಿಮಾ ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದಲ್ಲದೆ, ದ್ವಿತೀಯ ಅತ್ಯುತ್ತಮ ಚಿತ್ರ ರಾಜ್ಯಪ್ರಶಸ್ತಿ ಗಳಿಸಿತ್ತು. ಚಂದ್ರಶೇಖರ ಕಂಬಾರರು ಹಾಡುಗಳನ್ನು ರಚಿಸಿದ್ದು ’ಸಾವಿತ್ರಿ’ ಸಿನಿಮಾದ ಮತ್ತೊಂದು ವಿಶೇಷ.

ಹಿಂದಿಯಲ್ಲಿ ನಿರ್ದೇಶಿಸಿದ ’ಗಿಧ್’ (ರಣಹದ್ದುಗಳು) ಸಿನಿಮಾ, ದೇವದಾಸಿ ಸಂಪ್ರದಾಯದ ಹೆಸರಿನಲ್ಲಿ ನಡೆಯುವ ಹೆಣ್ಣುಮಕ್ಕಳ ಶೋಷಣೆಗೆ ದೃಶ್ಯಮಾಧ್ಯಮದ ಮೂಲಕ ವ್ಯಕ್ತಪಡಿಸಿದ ಸೃಜನಶೀಲ ಪ್ರತಿಭಟನೆಯಾಗಿತ್ತು.  ಭಾರತೀಯ ಚಿತ್ರರಂಗದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಓಂಪುರಿ ಕಲಾವಿದನಾಗಿ ಹೆಚ್ಚು ಹೆಸರು ಮಾಡಿದ್ದು ’ಗಿಧ್‌’ ಚಿತ್ರದ ಮೂಲಕವೇ. ಸ್ಮಿತಾ ಪಾಟೀಲ್, ನಾನಾ ಪಾಟೇಕರ್ ನಟಿಸಿದ್ದ ಮತ್ತು ಬಿ.ವಿ. ಕಾರಂತರು ಸಂಗೀತ ಸಂಯೋಜಿಸಿದ್ದ ’ಗಿಧ್’ ತೀರ್ಪುಗಾರರ ವಿಶೇಷ ‍ರಾಷ್ಟ್ರಪ್ರಶಸ್ತಿ ಗೌರವಕ್ಕೆ ಪಾತ್ರವಾಗಿತ್ತು.

ಸಿನಿಮಾ ನಿರ್ದೇಶಕನಾದ ನಂತರವೂ ರಂಗಭೂಮಿಯ ಬಗ್ಗೆ ಸೆಳೆತ ಉಳಿಸಿಕೊಂಡಿದ್ದರು. ಬಿ.ವಿ. ಕಾರಂತರೊಂದಿಗಿನ ಒಡನಾಟ ಈ ಆಕರ್ಷಣೆಗೆ ಕಾರಣವಾಗಿತ್ತು. ಕಾರಂತರ ಶಿಷ್ಯರಾಗಿ, ಗುರುವಿನ ಸಿನಿಮಾ ಹಾಗೂ ರಂಗಪ್ರಯೋಗಗಳ ನೇಪಥ್ಯದಲ್ಲಿ ದುಡಿಯುತ್ತಿದ್ದರು. ’ಬೆನಕ’ ರಂಗತಂಡ ರೂಪುಗೊಳ್ಳಲು ಕಾರಣಕರ್ತರಾದವರಲ್ಲಿ ಒಬ್ಬರಾಗಿದ್ದರು. ಕಾರಂತರ ನಾಟಕಗಳನ್ನು ದೇಶದ ವಿವಿಧ ಭಾಗಗಳಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಜಿ.ವಿ. ಅಯ್ಯರ್‌ ಅವರ ಕೆಲವು ಚಿತ್ರಗಳಲ್ಲಿ ಹಾಗೂ ’ಸತ್ತವರ ನೆರಳು’ ನಾಟಕದಲ್ಲಿ ನಟಿಸಿ

ದ್ದರು. ’ಪಲ್ಲವಿ’ ಚಿತ್ರದಲ್ಲಿ ಲಂಕೇಶರ ಪಾತ್ರಕ್ಕೆ ಧ್ವನಿ ನೀಡಿದ್ದು ಅವರ ಸಿನಿಮಾ ಜೀವನದ ವಿಶೇಷಗಳಲ್ಲೊಂದು.

ರಾಷ್ಟ್ರ–ರಾಜ್ಯ ಪ್ರಶಸ್ತಿ ಸಲಹಾ ಸಮಿತಿಗಳಲ್ಲಿ, ಎನ್‌.ಎಫ್‌.ಡಿ.ಸಿ.ಯ ಚಿತ್ರಸಾಹಿತ್ಯ ಸಮಿತಿಯಲ್ಲಿ ಕಾರ್ಯನಿರ್ವಹಿಸಿದ್ದರು. ಎಚ್‌.ನರಸಿಂಹಯ್ಯನವರ ಬದುಕು–ಸಾಧನೆಯ ಕುರಿತು ವಾರ್ತಾ ಇಲಾಖೆಗಾಗಿ ಅವರು ರೂಪಿಸಿದ ಸಾಕ್ಷ್ಯಚಿತ್ರ ಕನ್ನಡದ ಅತ್ಯುತ್ತಮ ಸಾಕ್ಷ್ಯಚಿತ್ರಗಳಲ್ಲೊಂದು.

ರಂಗಾ ಅವರ ಪತ್ನಿ ಅಶ್ವಿನಿ ಕೂಡ ಸಿನಿಮಾ ಕಲಾವಿದೆ. ಕನ್ನಡದ ಜೊತೆಗೆ ತಮಿಳು, ತೆಲುಗು ಚಿತ್ರಗಳಲ್ಲೂ ಅವರು ನಟಿಸಿದ್ದಾರೆ.

ಪ್ರತಿಕ್ರಿಯಿಸಿ (+)