ಸೋಮವಾರ, ಆಗಸ್ಟ್ 10, 2020
26 °C

ಜನಾಶೀರ್ವಾದ ಯಾತ್ರೆ ಸಮಾಪನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನಾಶೀರ್ವಾದ ಯಾತ್ರೆ ಸಮಾಪನ

ಬೆಂಗಳೂರು: ಇಲ್ಲಿನ ಅರಮನೆ ಮೈದಾನದಲ್ಲಿ ಕಾಂಗ್ರೆಸ್‌ ಜನಾಶೀರ್ವಾದ ಯಾತ್ರೆ ಭಾನುವಾರ ಸಮಾಪನಗೊಂಡಿತು.

ರಾಜ್ಯದ ವಿವಿಧ ಭಾಗಗಳಿಂದ ಜನರು ಸಮಾವೇಶಕ್ಕೆ ಬಂದಿದ್ದರು. ಈ ವೇಳೆ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ‘ಪ್ರಧಾನಿ ನರೇಂದ್ರ ಮೋದಿ ಹೋದಲ್ಲೆಲ್ಲ ಮನದ ಮಾತು ಹೇಳುತ್ತಾರೆ. ಕಾಂಗ್ರೆಸ್ ಪಕ್ಷವು ಜನಸಾಮಾನ್ಯನ ಮನದ ಮಾತು ಆಲಿಸಿ, ಸಮಸ್ಯೆಗಳಿಗೆ ದನಿಯಾಗುತ್ತದೆ’ ಎಂದರು.

‘ಜನಾಶೀರ್ವಾದ ಯಾತ್ರೆಯಲ್ಲಿ ವಿವಿಧ ವರ್ಗದವರೊಂದಿಗೆ ಸಮಾಲೋಚನೆ ನಡೆಸಿ ಆಲಿಸಿದ ವಿಚಾರಗಳನ್ನು ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿ ಸೇರಿಸುವಂತೆ ರಾಜ್ಯ ನಾಯಕರಿಗೆ ಹೇಳುತ್ತೇನೆ. ಅಧಿಕಾರಕ್ಕೆ ಬಂದ ನಂತರ ಅವೆಲ್ಲವನ್ನೂ ಈಡೇರಿಸುತ್ತೇವೆ’ ಎಂದರು.

‘ಬೆಂಗಳೂರಿನ ನಿವಾಸಿಗಳ ಪರಿಶ್ರಮದಿಂದ ಬೆಂಗಳೂರಿನ ಹೆಸರು ಚಿರಸ್ಥಾಯಿಯಾಗಿದೆ. ಅಮೆರಿಕದವರು ಬೆಂಗಳೂರನ್ನು ಸ್ಪರ್ಧೆಯಲ್ಲೂ ಪರಿಗಣಿಸಿದ್ದಾರೆ’ ಎಂದರು.

ಸಮಾವೇಶ ಮೂರು ಗಂಟೆಗೆ ಶುರುವಾಗಬೇಕಿತ್ತು. 4 ಲಕ್ಷ ಜನರು ಸೇರಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷರು ಪ್ರಕಟಿಸಿದ್ದರು. ಸಂಜೆ 5.15ರವರೆಗೂ ಜನರು ನಿರೀಕ್ಷಿತ ಸಂಖ್ಯೆಯಲ್ಲಿ ಸೇರಿರಲಿಲ್ಲ. ಬಳಿಕ ಕಾರ್ಯಕರ್ತರು ಬರಲಾರಂಭಿಸಿದರು.

ರಾಹುಲ್‌ ಬಂದಾಗ ಸಂಜೆ 6.40 ಆಗಿತ್ತು. ಈ ವೇಳೆ ಮೈದಾನದಲ್ಲಿ ಶೇ 75 ಮಂದಿ ಸೇರಿದ್ದರು. ರಾಹುಲ್‌ ಭಾಷಣ ಆರಂಭಿಸುವಾಗ ಕತ್ತಲಾಗಿತ್ತು. ಆಗ ಜನರು ನಿರ್ಗಮಿಸಲಾರಂಭಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಮಾಡುವ ವೇಳೆಗೆ ಅರ್ಧದಷ್ಟು ಕುರ್ಚಿಗಳು ಖಾಲಿಯಾಗಿದ್ದವು.

ಉಪ್ಪಿಟ್ಟು ಪ್ರಯೋಗಾಲಯಕ್ಕೆ!

ಪೌರ ಕಾರ್ಮಿಕರೊಂದಿಗಿನ ಸಂವಾದಕ್ಕೆ ತೆರಳುವ ಮುನ್ನ ರಾಹುಲ್‌ ಅವರು ಶ್ರೀನಿವಾಸ್‌– ಸುನೀತಾ ದಂಪತಿ ಮನೆಯಲ್ಲಿ ಉಪ್ಪಿಟ್ಟು ತಿಂದರು.

ಮೈದಾನದ ಪ್ರವೇಶ ದ್ವಾರದಲ್ಲೇ ಕಾರಿನಿಂದಿಳಿದು ವೇದಿಕೆಯತ್ತ ಕಾಲ್ನಡಿಗೆಯಲ್ಲಿ ಹೊರಟ ರಾಹುಲ್ ಅವರನ್ನು ದಂಪತಿ, ‘ರಾಹುಲ್‌ ಗಾಂಧಿ...’ ಎಂದು ಕೂಗಿ ಕರೆದರು. ದಂಪತಿಯ ಮಾತಿಗೆ ಸ್ಪಂದಿಸಿದ ಅವರು, ಹಿಂಬಾಲಿಸಿದರು.

ಮನೆಯೊಳಗೆ ಹೋದ ರಾಹುಲ್‌ಗೆ, ‘ಉಪ್ಪಿಟ್ಟು ತಿನ್ನುತ್ತೀರಾ‘ ಎಂದು ದಂಪತಿ ಕೇಳಿದರು. ‘ಹ್ಞೂಂ..’ ಎಂದ ಅವರು, ತಿಂಡಿ ತಿಂದು ನಿರ್ಗಮಿಸಿದರು.

ಕೊನೆಗೆ ಎಸ್‌ಪಿಜಿ ಅಧಿಕಾರಿಗಳ ಸೂಚನೆಯಂತೆ ಪೊಲೀಸರು ಉಪ್ಪಿಟ್ಟನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.