ಗುರುವಾರ , ಡಿಸೆಂಬರ್ 12, 2019
20 °C

ಮುಂದುವರಿದ ಗೊಂದಲ

ಎಂ.ಎನ್‌.ಯೋಗೇಶ್‌ Updated:

ಅಕ್ಷರ ಗಾತ್ರ : | |

ಮುಂದುವರಿದ ಗೊಂದಲ

ಮಂಡ್ಯ: ಚುನಾವಣೆಗೆ ಸ್ಪರ್ಧಿಸುವ ಕುರಿತು ಏಪ್ರಿಲ್‌ 8ರ ರಾತ್ರಿ 8 ಗಂಟೆಯೊಳಗೆ ಸ್ಪಷ್ಟ ನಿರ್ಧಾರ ತಿಳಿಸುವಂತೆ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಶಾಸಕ ಅಂಬರೀಷ್‌ಗೆ ನೀಡಿದ್ದ ಗಡುವು ಮುಗಿದಿದೆ. ಆದರೆ, ಅಂಬರೀಷ್‌ ಮೌನಕ್ಕೆ ಶರಣಾಗಿರುವುದು ಗೊಂದಲಕ್ಕೆ ಕಾರಣವಾಗಿದ್ದು ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜಿಲ್ಲಾ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಅಂಬರೀಷ್‌ ಗೈರುಹಾಜರಾಗಿದ್ದರು. ಇಡೀ ಜಿಲ್ಲೆಗೆ ನಾಯಕರಾಗಿರುವ ಅಂಬರೀಷ್‌, ರಾಹುಲ್‌ ಕಾರ್ಯಕ್ರಮಗಳಿಗೆ ಬಾರದೇ ಇದ್ದುದು ವರಿಷ್ಠರ ಅಸಮಾಧಾನಕ್ಕೆ ಕಾರಣವಾಗಿತ್ತು. ಅಲ್ಲದೆ, ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆಯೂ ಅವರು ಸ್ಪಷ್ಟವಾಗಿ ತಿಳಿಸಿಲ್ಲ, ಪತ್ನಿ ಸುಮಲತಾ ಸ್ಪರ್ಧೆ ಮಾಡುವ ಬಗ್ಗೆಯೂ ಮಾತನಾಡಿಲ್ಲ ಅಥವಾ ಬೆಂಬಲಿಗರಿಗೆ ಟಿಕೆಟ್‌ ನೀಡುವಂತೆಯೂ ಕೇಳಿಲ್ಲ. ಅವರ ನಡೆಯಿಂದ ಬೇಸರಗೊಂಡಿದ್ದ ಜಿಲ್ಲೆಯ 500ಕ್ಕೂ ಹೆಚ್ಚು ಕಾರ್ಯಕರ್ತರು ಬೆಂಗಳೂರಿಗೆ ತೆರಳಿ ಮಂಡ್ಯಕ್ಕೆ ಬರುವಂತೆ ಆಹ್ವಾನ ಕೊಟ್ಟಿದ್ದರು. ಇಷ್ಟಾದರೂ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಚಕಾರ ಎತ್ತಿಲ್ಲ. ಇದು ಜಿಲ್ಲೆಯ ಕಾಂಗ್ರೆಸ್‌ ಮುಖಂಡರಲ್ಲಿ ಗೊಂದಲ ಸೃಷ್ಟಿಸಿದೆ.

ಅಂಬರೀಷ್‌ ಮೌನದಿಂದ ಅಸಮಾಧಾನಗೊಂಡಿದ್ದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಏ.6ರಂದು ಅಂಬರೀಷ್‌ಗೆ ಮೂರು ದಿನ ಗಡುವು ವಿಧಿಸಿದ್ದರು. ಸ್ಪಷ್ಟ ನಿರ್ಧಾರ ತಿಳಿಸದಿದ್ದರೆ ಹೈಕಮಾಂಡ್‌ ಈ ಕುರಿತು ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದರು. ಅಂಬರೀಷ್‌ ತಮ್ಮ ನಿರ್ಧಾರ ತಿಳಿಸಲು ಭಾನುವಾರ ಕಡೆಯ ದಿನವಾಗಿತ್ತು. ನಗರದಿಂದ ಬೆಂಗಳೂರಿಗೆ ತೆರಳಿದ್ದ ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ಶೀಘ್ರ ನಿರ್ಧಾರ ತಿಳಿಸುವಂತೆ ಒತ್ತಡ ಹೇರಿದ್ದರು. ಆದರೆ ಅಂಬರೀಷ್‌, ಸೋಮವಾರ ಮಧ್ಯಾಹ್ನ ನಿರ್ಧಾರ ಪ್ರಕಟಿಸುವುದಾಗಿ ಕಾರ್ಯಕರ್ತರಿಗೆ ಹೇಳಿದ್ದಾರೆ.

‘ಅಂಬರೀಷ್‌ ಅಣ್ಣನ ಮನಸ್ಸಿನಲ್ಲಿ ಏನಿದೆ ಎಂಬುದು ನಮಗೂ ತಿಳಿಯುತ್ತಿಲ್ಲ. ನಿರ್ಧಾರ ತಿಳಿಸುವಂತೆ ನಾವೂ ಒತ್ತಾಯ ಮಾಡುತ್ತಿದ್ದೇವೆ. ಹೈಕ

ಮಾಂಡ್‌ ನೀಡಿರುವ ಗಡುವಿನ ಬಗ್ಗೆ ನೆನಪು ಮಾಡಿದೆವು. ಅದಕ್ಕೆ ಅವರು ಕ್ಯಾರೇ ಎನ್ನಲಿಲ್ಲ. ಸೋಮವಾರ ಈ ಕುರಿತು ಮಾತನಾಡುವುದಾಗಿ ತಿಳಿಸಿದರು. ಅದರಲ್ಲೂ ಸ್ಪಷ್ಟತೆ ಇರಲಿಲ್ಲ’ ಎಂದು ಅಂಬರೀಷ್ ಆಪ್ತ, ನಗರಸಭೆ ಸದಸ್ಯ ಅನಿಲ್‌ ಹೇಳಿದರು.

ಊಟಕ್ಕೆ ಬಾರದ ಮುಖ್ಯಮಂತ್ರಿ: ಏಪ್ರಿಲ್‌ 3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಂಬರೀಷ್‌ ತಮ್ಮ ಮನೆಗೆ ಊಟಕ್ಕೆ ಆಹ್ವಾನಿಸಿದ್ದರು. ಅಂದು ಅವರು ಮಂಡ್ಯದಲ್ಲಿ ಸ್ಪರ್ಧಿಸುವ ಕುರಿತು ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದೇ ಬಿಂಬಿಸಲಾಗಿತ್ತು. ಆದರೆ, ಅಂದು ಮೈಸೂರಿನಲ್ಲಿ ಪ್ರಚಾರಕ್ಕೆ ಹೆಚ್ಚು ಒತ್ತು ಕೊಟ್ಟ ಕಾರಣ ಊಟಕ್ಕೆ ಹೋಗಲು ಮುಖ್ಯಮಂತ್ರಿಗೆ ಸಾಧ್ಯವಾಗಲಿಲ್ಲ. ಮರುದಿನ ರಾಹುಲ್‌ ಪ್ರವಾಸದಲ್ಲಿ ಮುಖ್ಯಮಂತ್ರಿ ಪಾಲ್ಗೊಂಡರು.

‘ಹೊಸಪೇಟೆ, ಕುಷ್ಟಗಿಯಲ್ಲಿ ನಡೆದ ರಾಹುಲ್‌ ಸಮಾವೇಶದಲ್ಲಿ ಅಂಬರೀಷ್‌ ಪಾಲ್ಗೊಂಡಿದ್ದರು. ಆದರೆ ರಾಹುಲ್‌ ಮಂಡ್ಯಕ್ಕೆ ಬಂದಾಗ, ಆರೋಗ್ಯ ಸಮಸ್ಯೆಯಿಂದ ಅವರು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗಾಗಿ ಮಂಡ್ಯಕ್ಕೆ ಬರಲು ಸಾಧ್ಯವಾಗಿಲ್ಲ. ಏ.12ರೊಳಗೆ ಅವರು ಗೊಂದಲಕ್ಕೆ ತೆರೆ ಎಳೆಯಲಿದ್ದಾರೆ’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಡಿ. ಗಂಗಾಧರ್‌ ಹೇಳಿದರು.

ಐದು ಬಿ.ಫಾರಂಗೆ ಒತ್ತಾಯ

ಮಳವಳ್ಳಿ ಮತ್ತು ನಾಗಮಂಗಲ ಕ್ಷೇತ್ರ ಹೊರತುಪಡಿಸಿ ಉಳಿದ ಐದು ಕ್ಷೇತ್ರಗಳ ಬಿ.ಫಾರಂಗಳನ್ನು ತಮ್ಮ ಕೈಗೆ ಕೊಡಬೇಕು ಎಂದು ಅಂಬರೀಷ್‌ ಪಟ್ಟು ಹಿಡಿದಿದ್ದಾರೆ. ಶ್ರೀರಂಗಪಟ್ಟಣ ಕ್ಷೇತ್ರದಿಂದ ರಮೇಶ್‌ ಬಂಡಿಸಿದ್ಧೇಗೌಡರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಕೂಡದು, ತಮ್ಮ ಬೆಂಬಲಿಗ ಪುಟ್ಟೇಗೌಡರಿಗೆ ನೀಡಬೇಕು. ಮದ್ದೂರು ಕ್ಷೇತ್ರದಿಂದ ಕಲ್ಪನಾ ಸಿದ್ಧರಾಜು, ಕೆ.ಆರ್‌.ಪೇಟೆಯಿಂದ ಕಿಕ್ಕೇರಿ ಸುರೇಶ್‌, ಮೇಲುಕೋಟೆ ಕ್ಷೇತ್ರದಿಂದ ಎಲ್‌.ಡಿ.ರವಿ ಅವರಿಗೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಮೇಲುಕೋಟೆ ಕ್ಷೇತ್ರದಲ್ಲಿ ದರ್ಶನ್‌ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಆದರೆ ಅಂಬರೀಷ್‌ಗೆ ಇದು ಇಷ್ಟವಿಲ್ಲ. ಹೀಗಾಗಿ ಅಂಬರೀಷ್‌, ಮುಖ್ಯಮಂತ್ರಿ ಜೊತೆ ಮುನಿಸಿಕೊಂಡಿದ್ದಾರೆ ಎಂಬ ಸುದ್ದಿ ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.

ಮುಂದುವರಿದ ಅಂಬರೀಷ್‌–ಮುಖ್ಯಮಂತ್ರಿ ಮುನಿಸು

ಮಂಡ್ಯ ಕ್ಷೇತ್ರದ ಸ್ಪರ್ಧೆ ಬಗ್ಗೆ ಸ್ಪಷ್ಟನೆ ನೀಡದ ರೆಬಲ್‌ಸ್ಟಾರ್‌

ಮುಗಿದ ಗಡುವು: ಸೋಮವಾರ ನಿರ್ಧಾರ ಪ್ರಕಟ ಸಾಧ್ಯತೆ

ಪ್ರತಿಕ್ರಿಯಿಸಿ (+)