ಶನಿವಾರ, ಡಿಸೆಂಬರ್ 14, 2019
20 °C

ಪ್ರವೀಣ್ ಗೋಡ್ಖಿಂಡಿ, ರಿಂಪಾ ಶಿವಗೆ ‘ಸದ್ಗುರುಶ್ರೀ’ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರವೀಣ್ ಗೋಡ್ಖಿಂಡಿ, ರಿಂಪಾ ಶಿವಗೆ ‘ಸದ್ಗುರುಶ್ರೀ’ ಪ್ರದಾನ

ಬೆಂಗಳೂರು: ಶ್ರೀ ಸದ್ಗುರು ಮ್ಯೂಜಿಕ್ ಅಕಾಡೆಮಿ ವತಿಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ವಾದ್ಯನಾದ ವೈಭವ’ ಕಾರ್ಯಕ್ರಮದಲ್ಲಿ ಬಾನ್ಸುರಿ ವಾದಕ ಪ್ರವೀಣ್ ಗೋಡ್ಖಿಂಡಿ ಹಾಗೂ ತಬಲ ವಾದಕಿ ರಿಂಪಾ ಶಿವ ಅವರಿಗೆ ‘ಸದ್ಗುರುಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪ್ರದಾನ ಮಾಡಿದ ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ, ‘ದೇಶದ ಅತ್ಯಂತ ದೊಡ್ಡ ಆಸ್ತಿ ಕಲೆ, ಸಾಹಿತ್ಯ ಹಾಗೂ ಸಂಗೀತ. ಇದಕ್ಕೆ ಸಾಕ್ಷಿ ಇಲ್ಲಿ ಸೇರಿರುವ ಕಲಾವಿದರು ಹಾಗೂ ಕಲಾಸಕ್ತರು. ದೈನಂದಿನ ಒತ್ತಡ, ಹಣಕಾಸಿನ ಸಮಸ್ಯೆ, ಅನಾರೋಗ್ಯ... ಹೀಗೆ ಎಲ್ಲ ತೊಂದರೆಗಳನ್ನು ಮರೆತು ಇಲ್ಲಿ ಸೇರಿದ್ದಾರೆ. ಬೆಂಗಳೂರು ಸಹೃದಯರ ನಗರ ಎಂಬುದನ್ನು ಇದು ಸಾಕ್ಷೀಕರಿಸುತ್ತದೆ’ ಎಂದರು.

‘ಕೋಲ್ಕತ್ತದ ರಿಂಪಾ ಶಿವ ಅವರ ತಬಲ ವಾದನಕ್ಕೆ ಮೂಕವಿಸ್ಮಿತನಾಗಿದ್ದೇನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬ್ರೈನ್ಸ್‌ ಸಂಸ್ಥೆಯ ಸಂಸ್ಥಾಪಕ ಡಾ.ಎನ್.ಕೆ.ವೆಂಕಟರಮಣ, ‘ಶಬ್ದ ಎಂಬುದು ನಮ್ಮ ಸಂಸ್ಕೃತಿ, ಪರಂಪರೆಯಲ್ಲೇ ಅಡಗಿದೆ. ಶಿವ ಡಮರುಗ ನುಡಿಸುತ್ತಿದ್ದ ಎಂದು ಪುರಾಣ ಹೇಳುತ್ತದೆ. ಆ ಶಬ್ದವೇ ಸಂಗೀತಕ್ಕೆ ಪ್ರೇರಣೆ’ ಎಂದರು.

ಪ್ರವೀಣ್‌ ಗೋಡ್ಖಿಂಡಿ ಅವರು 8 ಅಡಿ ಉದ್ದದ ಕೊಳಲು ನುಡಿಸುತ್ತಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲಿಗರು. ಕೃಷ್ಣನೂ ಇಂತಹ ಕೊಳಲು ನುಡಿಸುತ್ತಿದ್ದನಂತೆ ಎಂದು ತಿಳಿಸಿದರು.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಪ್ರಾದೇಶಿಕ ವ್ಯವಸ್ಥಾಪಕ ಎಸ್‌.ದಿನೇಶ್‌, ‘ ಕಲೆ ಹಾಗೂ ಕಲಾವಿದರಿಗೆ ಎಸ್‌ಬಿಐ ಪ್ರೋತ್ಸಾಹ ನೀಡುತ್ತಾ ಬಂದಿದೆ’ ಎಂದರು.

ಬಳಿಕ, ಪ್ರವೀಣ್‌ ಗೋಡ್ಖಿಂಡಿ, ರಿಂಪಾ ಶಿವ ಹಾಗೂ ಸತೀಶ್‌ ಕೊಳ್ಳಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಪ್ರತಿಕ್ರಿಯಿಸಿ (+)