ಮಂಗಳವಾರ, ಜೂಲೈ 7, 2020
24 °C
ಪಿಇಬಿ ಇದ್ದರೂ ವರ್ಗಾವಣೆ ಮಾಡುತ್ತವೆ ಬೇರೆ ಮಂಡಳಿಗಳು!

ಪೊಲೀಸ್‌ ಸುಧಾರಣೆ ಎಂಬ ಕನ್ನಡಿಯೊಳಗಿನ ಗಂಟು

ಪ್ರವೀಣ ಕುಲಕರ್ಣಿ Updated:

ಅಕ್ಷರ ಗಾತ್ರ : | |

ಪೊಲೀಸ್‌ ಸುಧಾರಣೆ ಎಂಬ ಕನ್ನಡಿಯೊಳಗಿನ ಗಂಟು

ಸಾಂಸ್ಥಿಕ ವ್ಯವಸ್ಥೆಯಲ್ಲಿ ಮೂಲದಿಂದಲೇ ಉಳಿದುಕೊಂಡಿರುವ ದೋಷ, ರಾಜಕೀಯ ವರ್ಗಾವಣೆ, ಸಿಬ್ಬಂದಿ ಕೊರತೆಯಂತಹ ಸಮಸ್ಯೆಗಳಲ್ಲಿ ಸಿಲುಕಿ ಕಾರ್ಯಕ್ಷಮತೆಯನ್ನೇ ಕಳೆದುಕೊಂಡಿರುವ ಪೊಲೀಸ್‌ ವ್ಯವಸ್ಥೆಗೆ ಬಲ ತುಂಬುವ ಕೆಲಸವನ್ನು ಇದುವರೆಗಿನ ಯಾವ ಸರ್ಕಾರವೂ ಮಾಡಿಲ್ಲ. ಏಕೆಂದರೆ, ಆಡಳಿತಾರೂಢ ರಾಜಕಾರಣಿಗಳಿಂದ ಆರಂಭಿಸಿ ಸ್ವತಃ ಪೊಲೀಸರ ತನಕದ ಎಲ್ಲರಿಗೂ ವ್ಯವಸ್ಥೆ ಈಗ ಇರುವಂತೆಯೇ ಮುಂದುವರಿಯುವುದು ಬೇಕಾಗಿದೆ.

ಯಾವ ಶಾಸಕರಿಗೇ ಆಗಲಿ, ತಹಶೀಲ್ದಾರ್‌, ಇನ್‌ಸ್ಪೆಕ್ಟರ್‌ ಹಾಗೂ ಎಂಜಿನಿಯರ್‌- ಈ ಮೂವರ ಸಹಕಾರ ತುಂಬಾ ಮುಖ್ಯ. ಕ್ಷೇತ್ರದಲ್ಲಿ ಮಾತು ಕೇಳುವ ಅಧಿಕಾರಿಗಳಿದ್ದರೆ ತಮ್ಮ ‘ಹುಕುಂ’ಗಳಿಗೆ ಕಿಮ್ಮತ್ತು ಬರುತ್ತದೆ ಎನ್ನುವುದು ಅವರ ಆಲೋಚನೆ. ಶಾಸಕರಿಗೆ ಹೀಗೆ ಬೇಕಾದ ಅಧಿಕಾರಿಯನ್ನು ಹಾಕಿಸಿಕೊಳ್ಳುವ ಅವಕಾಶದ ಹೆಬ್ಬಾಗಿಲನ್ನು ತೆರೆದಿದ್ದು 1983ರಲ್ಲಿ ಅಸ್ತಿತ್ವಕ್ಕೆ ಬಂದ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ. ಹಾಗೆ ಒದಗಿಬಂದ ಆ ಅವಕಾಶಕ್ಕೆ ‘ಮಿನಿಟ್‌’ (ಸೂಚನಾಪತ್ರ) ಎಂದು ಹೆಸರು.

ಬಹುಮತ ಉಳಿಸಿಕೊಳ್ಳುವ ಕತ್ತಿ ಅಲಗಿನ ಮೇಲೆ ಸರ್ಕಸ್‌ ನಡೆಸುತ್ತಿದ್ದ ಆಗಿನ ಸರ್ಕಾರಕ್ಕೆ ಶಾಸಕರ ಬೆಂಬಲ ಕಾಪಾಡಿಕೊಳ್ಳುವುದು ಅನಿವಾರ್ಯವಾಗಿತ್ತು. ಹಾಗೆಂದು ಎಲ್ಲರನ್ನೂ ಮಂತ್ರಿ ಇಲ್ಲವೇ ನಿಗಮ–ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಲು ಸಾಧ್ಯವಿರಲಿಲ್ಲ. ಯಾವುದೇ ಹುದ್ದೆಯನ್ನು ತೋರಿಸಲಾಗದ ಶಾಸಕರಿಗೆ ಅಧಿಕಾರದ ‘ರುಚಿ’ ತೋರಿಸಲು ಆಗ ಹುಡುಕಿಕೊಂಡ ದಾರಿಯೇ ‘ಮಿನಿಟ್‌’. ಹೌದು, ಶಾಸಕರು ಕೊಟ್ಟ ಸೂಚನಾಪತ್ರದ ಮೇಲೆ ಪೊಲೀಸ್‌ ವರ್ಗಾವಣೆ ಆರಂಭವಾದ ಕಾಲಘಟ್ಟ ಅದು.

‘ಟಿಪ್ಪಣಿ ಮೂಲಕ ಪೊಲೀಸರನ್ನು ವರ್ಗ ಮಾಡುವ ವ್ಯವಸ್ಥೆ ಶಾಸಕರ ಪಾಲಿಗೆ ಜಿಲೇಬಿಯಂತೆ ಕಂಡಿತು’ ಎಂದು ವ್ಯಂಗ್ಯದ ಧಾಟಿಯಲ್ಲಿ ಹೇಳುತ್ತಾರೆ ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ.ಶಿವರಾಂ. ‘ಜಿಲೇಬಿ ಗಾತ್ರ ದೊಡ್ಡದಾದಂತೆ ಮಂತ್ರಿಗಳೂ ಅದರ ರುಚಿಗೆ ಹಾತೊರೆದರು. ಸರ್ಕಾರದ ಮುಖ್ಯಸ್ಥರ ಬಳಿಗೆ ವಿವಾದ ಹೋದಾಗ ಅಲ್ಲಿದ್ದವರು ಮಾರ್ಜಾಲ ನ್ಯಾಯ ಅನುಸರಿಸಿದರು’ ಎಂದು ಅವರು ಒಳನೋಟ ಬೀರುತ್ತಾರೆ.

ಮದ್ಯದ ದೊರೆಗಳು ಮತ್ತು ಗುತ್ತಿಗೆದಾರರು ಮಾತ್ರ ಹಿಂಡುವ ಹಸುಗಳು ಎಂದುಕೊಂಡಿದ್ದ ಆಡಳಿತ ವ್ಯವಸ್ಥೆಗೆ, ವರ್ಗಾವಣೆ ಸಹ ಹಾಲು ನೀಡುವ ಹಸುವಾಗಿ ಗೋಚರಿಸಿದ್ದು ಆ ದಿನಗಳಲ್ಲೇ. ಉಪ್ಪಾರಪೇಟೆಯಂತಹ ಆದಾಯದ ಠಾಣೆಗಳಿಗೆ ‘ಹೆಚ್ಚಿನ ಹಾಲು ಕೊಡುವ ಹಸು’ಗಳು ಬರಲಾರಂಭಿಸಿದ ದಾರಿಯೂ ಇದಾಗಿದೆ.

ವರ್ಗಾವಣೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದದ್ದು ಮನವರಿಕೆ ಆಗಿದ್ದರಿಂದ, ಆ ಪಿಡುಗನ್ನು ತೊಡೆದುಹಾಕಲು ಪೊಲೀಸ್‌ ಸಿಬ್ಬಂದಿ ಮಂಡಳಿಯನ್ನು (ಪಿಇಬಿ) ಎಲ್ಲ ರಾಜ್ಯ ಸರ್ಕಾರಗಳೂ ರಚಿಸಲೇಬೇಕು ಎನ್ನುವ ನಿರ್ದೇಶನವನ್ನು ಸುಪ್ರೀಂ ಕೋರ್ಟ್‌ ನೀಡಿತು. ನ್ಯಾಯಾಂಗ ನಿಂದನೆಯ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ರಾಜ್ಯದಲ್ಲೂ ಪೊಲೀಸ್‌ ಸಿಬ್ಬಂದಿ ಮಂಡಳಿ ಅಸ್ತಿತ್ವಕ್ಕೆ ಬಂದಿತು. ಆದರೆ, ವರ್ಗಾವಣೆ ಮಾಡಲು ಬೇರೆ ಮಂಡಳಿಗಳೇ ಸೃಷ್ಟಿಯಾದವು!

ಸದ್ಯದ ಸರ್ಕಾರದ ಅವಧಿಯಲ್ಲಿ ಸಲಹೆಗಾರರೊಬ್ಬರ ಮೇಲೆ ಆ ಗುರುತರ ‘ಹೊಣೆ’ ಇತ್ತಂತೆ. ಬೆಂಗಳೂರಿನ ಉಪ್ಪಾರಪೇಟೆ ಠಾಣೆ ಇನ್‌ಸ್ಪೆಕ್ಟರ್‌ ಆಗಿದ್ದ ವ್ಯಕ್ತಿಯೊಬ್ಬರು ಹಿಂದಿನ ಸರ್ಕಾರದ ಕಾಲಕ್ಕೆ ವರ್ಗಾವಣೆ ವ್ಯವಹಾರ ನೋಡಿಕೊಂಡರೆ, ಅದಕ್ಕಿಂತ ಹಿಂದೆ ಸಿಸಿಬಿ ಎಸಿಪಿಯೊಬ್ಬರು ಅದರ ಹೊಣೆ ಹೊತ್ತಿದ್ದರು. ಐಜಿ ಶ್ರೇಣಿಯ ಅಧಿಕಾರಿಗಳೂ ಅವರಿಗೆ ಸೆಲ್ಯೂಟ್‌ ಹೊಡೆಯುವ ಸನ್ನಿವೇಶ ಸೃಷ್ಟಿಯಾಗಿತ್ತು ಎಂದು ನಿವೃತ್ತ ಅಧಿಕಾರಿಗಳು ಗುಟ್ಟು ಬಿಟ್ಟುಕೊಡುತ್ತಾರೆ.

ಸಮಸ್ಯೆಯನ್ನು ಬಗೆಹರಿಸಬೇಕಾದ ಪೊಲೀಸ್‌ ಸಿಬ್ಬಂದಿ ಮಂಡಳಿ, ಅದರ ಬದಲು ಮತ್ತಷ್ಟು ಸುಲಿಗೆಗೆ ಕಾರಣವಾದ ಬಗೆಯನ್ನು ಅವರು ಖಾಸಗಿಯಾಗಿ ವಿವರಿಸುತ್ತಾರೆ. ‘ಒಬ್ಬ ವ್ಯಕ್ತಿಗೆ ಕನಿಷ್ಠ ಎರಡು ವರ್ಷ ಒಂದೇ ಸ್ಥಳದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು’ ಎಂದಿದ್ದ ನಿಯಮಕ್ಕೆ ತಿದ್ದುಪಡಿ ತಂದು, ಅದನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಲಾಗಿದೆ. ಅಂದರೆ, ವರ್ಷವಾದೊಡನೆ ‘ನವೀಕರಣ’ಕ್ಕೆ ಹೋಗಬೇಕು. ವರ್ಗಾವಣೆ ಮಾಡಿಸುವವರ ಬಳಿ ಯಾರ ವರ್ಷದ ಅವಧಿ ಯಾವಾಗ ಮುಗಿಯಲಿದೆ ಎಂಬ ಪಟ್ಟಿ ಸಿದ್ಧವಾಗಿಯೇ ಇರುತ್ತದಂತೆ!

ಹೆಚ್ಚುವರಿ ಎಸ್ಪಿ ಮತ್ತು ಅದಕ್ಕಿಂತ ಮೇಲಿನ ಹುದ್ದೆಗಳನ್ನು ಪೊಲೀಸ್ ಸಿಬ್ಬಂದಿ ಮಂಡಳಿಯ ಕಾರ್ಯಕ್ಷೇತ್ರದಿಂದ ಹೊರಗಿಡಲು ಅನುವಾಗುವಂತೆ ಕಾಯ್ದೆಗೆ ಈಗಿನ ಸರ್ಕಾರ ತಿದ್ದುಪಡಿ ತಂದಿದೆ. ಡಿವೈಎಸ್ಪಿ ಮತ್ತು ಕೆಳಗಿನ ಹಂತದ ಅಧಿಕಾರಿಗಳ ವರ್ಗಾವಣೆ ನಿರ್ಣಯ ಕೈಗೊಳ್ಳುವಂತಹ ಪಿಇಬಿ ಸದಸ್ಯರ ನೇಮಕಕ್ಕೆ ಇದ್ದ ಜ್ಯೇಷ್ಠತಾ ಸೂತ್ರವನ್ನು ಕೈಬಿಡಲಾಗಿದೆ. ಇದರಿಂದ ವರ್ಗಾವಣೆಯಲ್ಲಿ ಪರೋಕ್ಷವಾಗಿ ಕೈ ಹಾಕಲು ಸರ್ಕಾರಕ್ಕೆ ಆಸ್ಪದವಾಗಿದೆ.

‘ಪ್ರತಿ ತಿಂಗಳು ವಂತಿಗೆ ಪಡೆಯುವುದು, ಮನೆಯ ಸಮಾರಂಭಗಳನ್ನು ನಿಭಾಯಿಸಲು ಸೂಚಿಸುವುದು, ಕೇಸುಗಳನ್ನು ಕೈಬಿಡಿಸುವುದು... ಹೀಗೆ ಹಲವು ರೀತಿಯಲ್ಲಿ ರಾಜಕಾರಣಿಗಳು ಪೊಲೀಸ್ ಅಧಿಕಾರಿಗಳನ್ನು ಬಳಸಿಕೊಂಡಿದ್ದಾರೆ. ಕೆಲವು ಕಡೆ ಕೇಸು ದಾಖಲಾಗುವ ಮುನ್ನ ಶಾಸಕರ ಅನುಮತಿ ಪಡೆಯಬೇಕಾದ ಪರಿಸ್ಥಿತಿ ಇರುವುದೂ ಗಮನಕ್ಕೆ ಬಂದಿದೆ’ ಎಂದು ಹೇಳುತ್ತಾರೆ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಎಸ್‌.ಮರಿಸ್ವಾಮಿ.

‘ತಾವೇ ಕರೆತಂದ ಅಧಿಕಾರಿ ಆಗಿರುವುದರಿಂದ ರಾಜಕಾರಣಿಗಳು ಅಂಥವರ ದಕ್ಷತೆ ಮತ್ತು ಕಾರ್ಯಕ್ಷಮತೆಯ ಕುರಿತು ಚಿಂತಿಸುವುದಿಲ್ಲ. ಹೆಚ್ಚಿನ ವೇಳೆ ಅವರೆಲ್ಲರ ಕುಂದು ಕೊರತೆಗಳನ್ನೂ, ವೈಫಲ್ಯಗಳನ್ನೂ ಸಮರ್ಥಿಸಿಕೊಳ್ಳಬೇಕಾಗುತ್ತದೆ. ಇದರಿಂದ ಇಲಾಖೆಯಲ್ಲಿ ಅದಕ್ಷತೆ ಉಂಟಾಗಿ ಠಾಣೆಗಳಲ್ಲಿ ಹೆಚ್ಚು ಲಂಚಕೋರತನಕ್ಕೆ ಎಡೆಮಾಡಿಕೊಡುತ್ತದೆ’ ಎಂದು ಅವರು ಹೇಳುತ್ತಾರೆ.

ರಾಜಕೀಯ ವರ್ಗಾವಣೆಗಳು ಮೇಲಧಿಕಾರಿಗಳ ಆತ್ಮಗೌರವವನ್ನು ತಗ್ಗಿಸುತ್ತವೆ. ಒಂದು ಲಕ್ಷಕ್ಕೂ ಹೆಚ್ಚು ಸೂಕ್ಷ್ಮ ಸಿಬ್ಬಂದಿಯನ್ನು ಮುನ್ನಡೆಸುವ ಡಿಜಿ ಮತ್ತು ಐಜಿಪಿಯವರು ಸರ್ಕಾರ ಸೂಚಿಸುವ ವರ್ಗಾವಣೆಗೆ ದಸ್ಕತ್ತು ಹಾಕುವ ಗುಮಾಸ್ತರಾಗಿ ಬಿಡುತ್ತಾರೆ. ಇತರ ಕೆಲಸಗಳಲ್ಲಿಯೂ ಇದು ತನ್ನ ಪರಿಣಾಮ ಬೀರಿ, ಯಾವುದೇ ನಿಲುವು ತಾಳಲು ಹೆದರುತ್ತಾರೆ ಎನ್ನುವುದು ನಿವೃತ್ತ ಅಧಿಕಾರಿಗಳ ಕಳವಳ. ಸೋಜಿಗವೆಂದರೆ, ಬಹುತೇಕ ಅಧಿಕಾರಿಗಳು ‌‌ಸೇವೆಯಲ್ಲಿದ್ದಾಗ ಮಾತನಾಡುವುದಿಲ್ಲ.

ಸಿಬ್ಬಂದಿಯ ದಕ್ಷತೆ, ಕಾರ್ಯಕ್ಷಮತೆ, ಪ್ರಾಮಾಣಿಕತೆ ಹಾಗೂ ವಿಶೇಷ ಪರಿಣತಿ ಸೂಚಿಸುವ, ಕಾಲದಿಂದ ಕಾಲಕ್ಕೆ ವಾಸ್ತವಾಂಶದ ಮೇಲೆ ದಾಖಲಾಗುವ ಪೊಲೀಸ್ ವೈಯಕ್ತಿಕ ದಾಖಲೆಗಳು, ರಾಜಕೀಯ ವರ್ಗಾವಣೆಯಿಂದಾಗಿ ತಮ್ಮ ಪ್ರಾಮುಖ್ಯವನ್ನು ಕಳೆದುಕೊಳ್ಳುತ್ತವೆ. ಆಗ ಇಲಾಖೆಯಲ್ಲಿ ಕತ್ತೆ, ಕುದುರೆ ಎಲ್ಲವೂ ಒಂದೇ ಆಗಿಬಿಡುತ್ತವೆ. ತಾವು ಹೇಳಿದುದಕ್ಕೆ ಗೋಣು ಆಡಿಸುತ್ತಾ ತಮ್ಮ ಸುತ್ತ ಓಡಾಡುವವರು ಆಳುವವರಿ

ಗೇನೋ ತುಂಬಾ ಹಿಡಿಸಬಹುದು. ಆದರೆ, ಆ ವೇಳೆಗೆ ಪೊಲೀಸ್‌ ವ್ಯವಸ್ಥೆಯ ಸ್ಥಿತಿ ಹಳ್ಳ ಹಿಡಿದಿರುತ್ತದೆ.

ಕ್ಷೇತ್ರದಲ್ಲಿ ಯಾರಾದರೂ ಕಾನೂನು ಉಲ್ಲಂಘಿಸಿದರೆ ಪೊಲೀಸರಿಂದ ಅವರನ್ನು ಪಾರು ಮಾಡಿಸುವಂತೆ ಕರೆಗಳು ಬರುತ್ತವೆ. ಮಧ್ಯೆ ಪ್ರವೇಶಿಸದಿದ್ದರೆ ಮತಬ್ಯಾಂಕ್‌ಗೆ ಹೊಡೆತ ಬೀಳುತ್ತದೆ. ಠಾಣೆಗಳಲ್ಲಿ ಕೆಲಸ ಆಗಬೇಕಾದರೆ ಮಾತು ಕೇಳುವ ಅಧಿಕಾರಿ ಬೇಕು ಎಂದು ಪಿಎಸ್‌ಐ ಹುದ್ದೆಗೆ ರಾಜೀನಾಮೆ ನೀಡಿ, ರಾಜಕೀಯಕ್ಕೆ ಧುಮುಕಿದ ಯುವ ಶಾಸಕರೊಬ್ಬರು, ಚುನಾವಣಾ ರಾಜಕೀಯದ ಜತೆ ಪೊಲೀಸ್‌ ವರ್ಗಾವಣೆ ಸಮ್ಮಿಳಿತವಾದ ಬಗೆಯನ್ನು ವಿವರಿಸುತ್ತಾರೆ.

150 ವರ್ಷಗಳಷ್ಟು ಹಿಂದಿನ ಪೊಲೀಸ್‌ ಕಾನೂನಿನ ಉದ್ದೇಶ ಬ್ರಿಟಿಷ್‌ ರಾಜ್‌ ವ್ಯವಸ್ಥೆಯಿಂದ ಜನರನ್ನು ದೂರ ಇಡುವುದಾಗಿತ್ತು. ಹೀಗಾಗಿ ಅದರಲ್ಲಿ ಸುಖಾಸುಮ್ಮನೆ ದಸ್ತಗಿರಿ ಮಾಡಲು, ಖೊಟ್ಟಿ ಎಫ್‌ಐಆರ್‌ ದಾಖಲಿಸಲು ಸಿಕ್ಕಾಪಟ್ಟೆ ಅವಕಾಶ ನೀಡಲಾಗಿದೆ. ಆ ಕಾನೂನನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡದ ಕಾರಣ ಪೊಲೀಸ್‌ ವ್ಯವಸ್ಥೆ ಈಗಲೂ ಜನರಿಂದ ಅಂತರ ಕಾಯ್ದುಕೊಂಡಿದೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಈ ವ್ಯವಸ್ಥೆಗೆ ಬಲ ತುಂಬಲು ಈಗಿನ ಕಾಲಕ್ಕೆ ತಕ್ಕಂತೆ ಕಾಯ್ದೆ ಬದಲಾಯಿಸುವ ಜತೆಗೆ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪವನ್ನೂ ನಿಲ್ಲಿಸಬೇಕು. ಆದರೆ, ಅನಾಯಾಸವಾಗಿ ಸಿಕ್ಕ ಅಧಿಕಾರವನ್ನು ಬಿಟ್ಟುಕೊಡಲು ಯಾವ ಶಾಸಕರು ಸಿದ್ಧರಿದ್ದಾರೆ?

ಹಸ್ತಕ್ಷೇಪ ನಿಲ್ಲುತ್ತದೆ ಎನ್ನುವುದು ಕನಸು

ಪೊಲೀಸ್‌ ಸಿಬ್ಬಂದಿ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದರಿಂದ ವರ್ಗಾವಣೆಯಲ್ಲಿ ರಾಜಕೀಯ ಹಸ್ತಕ್ಷೇಪ ನಿಲ್ಲುತ್ತದೆ ಎನ್ನುವುದು ಕೇವಲ ಕನಸು. ಪೊಲೀಸ್‌ ಮಹಾನಿರ್ದೇಶಕರ ಹುದ್ದೆಯಲ್ಲಿ ಇರುವವರು ಕೂಡ ಮನುಷ್ಯರೇ. ರಾಜಕಾರಣಿಗಳಿಂದ ಬರುವ ಮೌಖಿಕ ಆದೇಶಗಳನ್ನು ಅವರು ಧಿಕ್ಕರಿಸಲು ಸಾಧ್ಯವಾಗುವುದಿಲ್ಲ. ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವವರು ಹಾಗೂ ತಮಗೆ ಒಗ್ಗದವರನ್ನು ಸರ್ಕಾರ ನಡೆಸುವವರು ಎಂದಿಗೂ ಉನ್ನತ ಹುದ್ದೆಗೆ ನೇಮಕ ಮಾಡುವುದಿಲ್ಲ. ಅನುಭವ ಕಡಿಮೆ ಇರುವವರು ಮತ್ತು ಮಾತು ಕೇಳುವವರನ್ನೇ ಅವರು ಹುಡುಕುತ್ತಾರೆ.

ಚುನಾವಣೆಯಲ್ಲಿ ಗೆದ್ದು ಬರುವಾಗಲೇ ರಾಜಕಾರಣಿಗಳು ತಮಗೆ ಬೇಕಾದ ಅಧಿಕಾರಿಯನ್ನು ವರ್ಗ ಮಾಡಿಸಿಕೊಳ್ಳುವ, ಅವರ ಮೇಲೆ ನಿಯಂತ್ರಣ ಸಾಧಿಸುವ ಸಂಕಲ್ಪ ಮಾಡಿಯೇ ಬಂದಿರುತ್ತಾರೆ. ತಮಗೆ ಸಹಾಯ ಮಾಡುವ, ತಮ್ಮ ಜಾತಿಯ ಅಧಿಕಾರಿಯನ್ನೇ ಅವರು ಹುಡುಕಿಕೊಳ್ಳುತ್ತಾರೆ. ಸರ್ಕಾರದ ಯಾವುದೇ ಉದ್ಯೋಗಿಗೆ ಒಂದು ಸೇವಾ ನಿಯಮವಿದೆ. ಆದರೆ, ರಾಜಕಾರಣಿಗಳಿಗೆ ಅಂತಹ ಯಾವ ನಿಯಮವೂ ಇಲ್ಲ. ಅವರಿಗೂ ಒಂದು ನೀತಿ ಸಂಹಿತೆ ರೂಪಿಸಬೇಕು ಹಾಗೂ ನೀತಿ ಸಂಹಿತೆ ಉಲ್ಲಂಘನೆ ಮಾಡುವವರಿಗೆ ಚುನಾವಣೆಗೆ ನಿಲ್ಲದಂತೆಯೇ ನಿರ್ಬಂಧಿಸಬೇಕು. ಸದ್ಯದ ಸನ್ನಿವೇಶದಲ್ಲಿ ಇದೊಂದೇ ಪರಿಹಾರ.

–ಎಸ್‌.ಟಿ.ರಮೇಶ್‌, ನಿವೃತ್ತ ಪೊಲೀಸ್‌ ಮಹಾನಿರ್ದೇಶಕ

ಶಾಸಕರ ಮರ್ಜಿಗೆ ಒಳಗಾಗದೆ ಪೊಲೀಸ್‌ ವರ್ಗಾವಣೆಯಲ್ಲಿ ಪಾರದರ್ಶಕತೆಯನ್ನು ತರಲು ನಿಮ್ಮ ಪಕ್ಷ ಹೇಗೆ ಯತ್ನಿಸಲಿದೆ? ಪೊಲೀಸ್‌ ವ್ಯವಸ್ಥೆ ಬಲಪಡಿಸಲು ಏನು ಮಾಡಲಿದೆ ಎಂಬ ಪ್ರಶ್ನೆಗಳಿಗೆ ಮೂರೂ ಪಕ್ಷಗಳ ಮುಖಂಡರು ನೀಡಿದ ಪ್ರತಿಕ್ರಿಯೆ ಇಲ್ಲಿದೆ:

ಪೊಲೀಸ್‌ ಸಿಬ್ಬಂದಿಯನ್ನು ಈಗ ಪಿಇಬಿಯೇ ವರ್ಗ ಮಾಡುತ್ತಿದೆಯಲ್ಲ? ಮರಳಿ ಅಧಿಕಾರಕ್ಕೆ ಬಂದರೆ ಒಬ್ಬ ವ್ಯಕ್ತಿ ಕನಿಷ್ಠ ಎರಡು ವರ್ಷ, ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸಲು ಅನುವಾಗುವಂತೆ ಕಾನೂನಿಗೆ ಮತ್ತೆ ತಿದ್ದುಪಡಿ ತರಲಿದ್ದೇವೆ. ಪ್ರಸಕ್ತ ಅಧಿಕಾರದ ಅವಧಿಯಲ್ಲಿ 32 ಸಾವಿರ ಹುದ್ದೆಗಳನ್ನು ಭರ್ತಿ ಮಾಡಿದ್ದು, ಮುಂದೆ ಸಿಬ್ಬಂದಿ ಕೊರತೆಯನ್ನು ನೀಗಿಸಲಿದ್ದೇವೆ. ಸೈಬರ್‌ ಅಪರಾಧ ಪ್ರಕರಣಗಳ ಪತ್ತೆಗೆ ಹೊಸ ವ್ಯವಸ್ಥೆ ರೂಪಿಸಲಿದ್ದೇವೆ.

–ರಾಮಲಿಂಗಾರೆಡ್ಡಿ, ಕಾಂಗ್ರೆಸ್‌

ಶಾಸಕರು ಮಾತ್ರವಲ್ಲ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ಕೆಲ ನ್ಯಾಯಾಧೀಶರೂ ತಮ್ಮ ಊರಿಗೆ ಇಂಥ ಪೊಲೀಸ್‌ ಅಧಿಕಾರಿಯೇ ಬೇಕೆಂದು ಕೇಳಿ ಹಾಕಿಸಿಕೊಂಡಿದ್ದಿದೆ. ಇದಕ್ಕೆಲ್ಲ ಕಡಿವಾಣ ಹಾಕಲೇಬೇಕಿದೆ. ಒಬ್ಬ ವ್ಯಕ್ತಿ ಕನಿಷ್ಠ ಎರಡು ವರ್ಷ, ಒಂದೇ ಸ್ಥಳದಲ್ಲಿ ಕಾರ್ಯ ನಿರ್ವಹಿಸಬೇಕು ಎನ್ನುವುದು ನಮ್ಮ ಪಕ್ಷದ ನಿಲುವು. ಸಿಬ್ಬಂದಿಯ ಕಾರ್ಯಕ್ಷಮತೆ ಹಾಗೂ ರೋಟಾ ಪದ್ಧತಿಯನ್ನು ಅನುಸರಿಸಿ ವರ್ಗ ಮಾಡುವಂತಹ ವ್ಯವಸ್ಥೆ ರೂಪಿಸಲು ಅಗತ್ಯವಾದರೆ ಕಾನೂನೊಂದನ್ನು ಮಾಡುತ್ತೇವೆ.

–ಪಿಜಿಆರ್‌ ಸಿಂಧ್ಯ, ಜೆಡಿಎಸ್‌ ಮುಖಂಡ

ನಿವೃತ್ತರಾದ ವ್ಯಕ್ತಿಗಳನ್ನು ಸಲಹೆಗಾರರ ಹೆಸರಿನಲ್ಲಿ ಕರೆತಂದು, ಅವರಿಂದ ಪೊಲೀಸ್ ವರ್ಗಾವಣೆ ನಿಯಂತ್ರಿಸುವ ಈಗಿನ ಸರ್ಕಾರದ ಪರಿಪಾಠಕ್ಕೆ ನಾವು ಕೊನೆ ಹಾಡಲಿದ್ದೇವೆ. ಡಿವೈಎಸ್ಪಿ ಮತ್ತು ಅವರಿಗಿಂತ ಕೆಳಹಂತದ ಸಿಬ್ಬಂದಿಯ ವರ್ಗಾವಣೆ ಮಾಡುವುದು ಪೊಲೀಸ್ ಇಲಾಖೆಯ ಆಂತರಿಕ ವಿಚಾರ. ಶಾಸಕರ ಒತ್ತಡಕ್ಕೆ ಒಳಗಾಗಿ ಅದರಲ್ಲಿ ಮೂಗು ತೂರಿಸುವ ಪ್ರಶ್ನೆಯೇ ಇಲ್ಲ. ಒಬ್ಬ ವ್ಯಕ್ತಿ ಒಂದು ಸ್ಥಳದಲ್ಲಿ ಕನಿಷ್ಠ ಎರಡು ವರ್ಷ ಇರುವಂತೆ ನಮ್ಮ ಸರ್ಕಾರ ನೋಡಿಕೊಳ್ಳಲಿದೆ.

ಸೈಬರ್ ಅಪರಾಧ ತಡೆಗಟ್ಟಲು ಬೇಕಾದ ತರಬೇತಿಯನ್ನು ಸಿಬ್ಬಂದಿಗೆ ಕೊಡಿಸುವುದು, ಖಾಲಿ ಇರುವ ಹುದ್ದೆಗಳನ್ನು ತುಂಬುವುದು, ಅಗತ್ಯವಾದ ಆಧುನಿಕ ತಂತ್ರಜ್ಞಾನ ಒದಗಿಸುವುದು- ಇಂತಹ ಕಾರ್ಯಗಳ ಮೂಲಕ ಇಲಾಖೆಗೆ ಬಲ ತುಂಬುವ ಕೆಲಸವನ್ನೂ ಮಾಡಲಿದ್ದೇವೆ.

–ಶೋಭಾ ಕರಂದ್ಲಾಜೆ, ಬಿಜೆಪಿ

25 ಸಾವಿರ ಹುದ್ದೆ ಖಾಲಿ

ದೇಶದಲ್ಲಿ ಅತಿಹೆಚ್ಚು ಪೊಲೀಸ್‌ ಹುದ್ದೆಗಳು ಖಾಲಿಯಿರುವ ಆರು ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು. ಸದ್ಯ 25 ಸಾವಿರ ಹುದ್ದೆಗಳು ಖಾಲಿಯಿವೆ. ಕಾಲಕಾಲಕ್ಕೆ ನೇಮಕಾತಿ ಪ್ರಕ್ರಿಯೆ ನಡೆಸದೆ ಪೊಲೀಸ್‌ ವ್ಯವಸ್ಥೆಯನ್ನು ಬಲಪಡಿಸದಿರುವುದಕ್ಕೆ ರಾಜ್ಯ ಸರ್ಕಾರ ಹಲವು ಬಾರಿ ಸುಪ್ರೀಂ ಕೋರ್ಟ್‌ನ ಆಕ್ರೋಶಕ್ಕೆ ತುತ್ತಾಗಿದೆ.

ಲಭ್ಯವಿರುವ ಸಿಬ್ಬಂದಿಯಲ್ಲೂ ಫಾಲೋಅರ್‌ಗಳು, ಗನ್‌ಮ್ಯಾನ್‌ ಎಂದೆಲ್ಲ ಸಾವಿರಾರು ಮಂದಿಯನ್ನು ಪೊಲೀಸಿಂಗ್‌ಗೆ ಹೊರತಾದ ಕರ್ತವ್ಯಗಳಿಗೆ ನಿಯೋಜನೆ ಮಾಡಲಾಗಿದೆ. ಹೀಗಾಗಿ ಅಪರಾಧಿಗಳ ಪತ್ತೆ, ಬಂದೋಬಸ್ತ್‌, ಗುಪ್ತಚರ ಮಾಹಿತಿ ಸಂಗ್ರಹದಂತಹ ಪೊಲೀಸ್‌ ಇಲಾಖೆಯ ಪ್ರಾಥಮಿಕ ಕೆಲಸಗಳಿಗೆ ಅಗತ್ಯ ಬಲವೇ ಇಲ್ಲದಂತಾಗಿದೆ.

ಮಹಿಳಾ ಸಿಬ್ಬಂದಿ ಸಂಖ್ಯೆ ಒಟ್ಟು ಪೊಲೀಸ್‌ ಬಲದ ಶೇ 10ರಷ್ಟೂ ಇಲ್ಲ. ಈ ಪ್ರಮಾಣವನ್ನು ಶೇ 33ಕ್ಕೆ ಹೆಚ್ಚಿಸಲಾಗುವುದು ಎಂಬ ಭರವಸೆಗೆ ಈಗ ದಶಮಾನೋತ್ಸವ! ಆದರೆ, ಆ ನಿಟ್ಟಿನಲ್ಲಿ ಯಾವ ಪ್ರಯತ್ನಗಳೂ ಆಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.