ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ನೇಪಾಳ ರೈಲು ಮಾರ್ಗಕ್ಕೆ ಸಮ್ಮತಿ

ಎರಡು ಯೋಜನೆಗಳ ಅನುಷ್ಠಾನಕ್ಕೆ ನೆರೆಯ ದೇಶಕ್ಕೆ ಹಣಕಾಸು ನೆರವು
Last Updated 8 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮತ್ತು ನೇಪಾಳದ ಮಧ್ಯೆ ರೈಲು ಮಾರ್ಗ ನಿರ್ಮಿಸಲು ಮತ್ತು ಭಾರತದಲ್ಲಿನ ಒಳನಾಡು ಜಲಸಾರಿಗೆ ಮೂಲಕ ನೇಪಾಳದಿಂದ ಸಮುದ್ರಕ್ಕೆ ನೇರ ಜಲಸಂಪರ್ಕ ಕಲ್ಪಿಸಲು ಎರಡೂ ದೇಶಗಳು ಒಪ್ಪಿಗೆ ಸೂಚಿಸಿವೆ.

ಭಾರತದ ಪ್ರವಾಸದಲ್ಲಿರುವ ನೇಪಾಳ ಪ್ರಧಾನಿ ಕೆ.ಪಿ.ಒಲಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಇಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ನೇಪಾಳ ರಾಜಧಾನಿ ಕಠ್ಮಂಡು ಮತ್ತು ಆ ದೇಶದ ಜತೆಗೆ ಗಡಿ ಹಂಚಿಕೊಂಡಿರುವ ಬಿಹಾರದ ರಕ್ಸೌಲ್ ಮಧ್ಯೆ ರೈಲು ಮಾರ್ಗ ನಿರ್ಮಿಸಲಾಗುತ್ತದೆ. ಈ ಕಾಮಗಾರಿಗೆ ಆರ್ಥಿಕ ನೆರವು ಒದಗಿಸಲು ಭಾರತ ಒಪ್ಪಿಕೊಂಡಿದೆ. ಈ ಯೋಜನೆಯ ಕಾರ್ಯಸಾಧ್ಯತಾ ವರದಿ ಮತ್ತು ಭೂ ಸಮೀಕ್ಷೆಯನ್ನೂ ಭಾರತವೇ ನಡೆಸಲಿದೆ ಎಂದು ಮೂಲಗಳು ಹೇಳಿವೆ.

ಭಾರತದ ಬಂದರುಗಳೊಂದಿಗೆ ನೇಪಾಳಕ್ಕೆ ಸಂಪರ್ಕ ಸಾಧ್ಯವಾಗಬೇಕು. ಹೀಗಾಗಿ ನಮ್ಮ ಒಳನಾಡು ಜಲಮಾರ್ಗಗಳನ್ನು ಬಳಸಲು ಅವರಿಗೆ ಅನುವು ಮಾಡಿಕೊಡಲಾಗುತ್ತದೆ. ನೇಪಾಳದಲ್ಲಿ ಜಲಮಾರ್ಗ ಅಭಿವೃದ್ಧಿಪಡಿಸಲೂ ಭಾರತ ಹಣಕಾಸು ನೆರವು ನೀಡಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

‘ಮೂಲಸೌಕರ್ಯ ಮತ್ತು ಸಾರಿಗೆ ಸಂಪರ್ಕವು ನಮ್ಮ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಭಾರತದ ಈ ನೆರವಿನಿಂದ ನೇಪಾಳದಲ್ಲಿ ಉದ್ಯಮ ಮತ್ತು ವಾಣಿಜ್ಯ ವಲಯ ಪ್ರಗತಿ ಸಾಧಿಸಲಿದೆ’ ಎಂದು ಒಲಿ ಹೇಳಿದರು.

ಭಾರತ ಮತ್ತು ನೇಪಾಳ ನಡುವಣ ತೈಲ ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿಗೆ ಇಬ್ಬರೂ ನಾಯಕರು ರಿಮೋಟ್ ಮೂಲಕ ಚಾಲನೆ ನೀಡಿದರು.

**

ಚೀನಾ ಪ್ರಭಾವ ತಗ್ಗಿಸಲು ಕ್ರಮ

ನೇಪಾಳದ ಮೇಲೆ ಹೆಚ್ಚುತ್ತಿರುವ ಚೀನಾದ ಪ್ರಭಾವವನ್ನು ತಗ್ಗಿಸುವ ಸಲುವಾಗಿ ಭಾರತ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ಹೇಳಿವೆ.

2015ರಲ್ಲಿ ಮಾದೇಸಿಗಳ ಸಂಘರ್ಷದ ನಂತರ ಭಾರತ ಮತ್ತು ನೇಪಾಳದ ನಡುವಣ ಸಂಬಂಧಕ್ಕೆ ಧಕ್ಕೆಯಾಗಿತ್ತು. ಭಾರತದಿಂದ ನೇಪಾಳಕ್ಕೆ ಅತ್ಯಗತ್ಯ ಸರಕುಗಳ ಸರಬರಾಜು ಕಡಿಮೆಯಾಗಿತ್ತು. ಚೀನಾವು ತನ್ನ ಮಹತ್ವಾಕಾಂಕ್ಷೆಯ ‘ಒಂದು ವಲಯ–ಒಂದು ರಸ್ತೆ’ ಯೋಜನೆಯಲ್ಲಿ ನೇಪಾಳವನ್ನೂ ಸೇರಿಸಿಕೊಂಡು ಅದಕ್ಕೆ ಹತ್ತಿರವಾಗಲು ಪ್ರಯತ್ನಿಸಿತ್ತು. ಆದರೆ ಈ ಹೊಸ ಒಪ್ಪಂದಗಳಿಂದ ನೇಪಾಳದೊಂದಿಗೆ ಭಾರತದ ಸಂಬಂಧ ಸುಧಾರಿಸಲಿದೆ ಎಂದು ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.

**

ಪರ್ವತಕ್ಕೂ ಸಮುದ್ರಕ್ಕೂ ನೇರ ಸಂಪರ್ಕ ಕಲ್ಪಿಸಲು ನಾವು ಮುಂದಡಿ ಇಟ್ಟಿದ್ದೇವೆ. ಎರಡೂ ದೇಶಗಳ ಸಂಬಂಧ ಸುಧಾರಣೆಯಲ್ಲಿ ಇದೊಂದು ಉತ್ತಮ ಆರಂಭ.

-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT