ಸೂಚನಾ ಫಲಕಗಳಲ್ಲಿ ಶುಲ್ಕ ಮಾಹಿತಿ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚನೆ

7

ಸೂಚನಾ ಫಲಕಗಳಲ್ಲಿ ಶುಲ್ಕ ಮಾಹಿತಿ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚನೆ

Published:
Updated:

ಬೆಂಗಳೂರು: ಎಲ್ಲಾ ಖಾಸಗಿ ಶಾಲೆಗಳು, ಸೂಚನಾ ಫಲಕಗಳಲ್ಲಿ ಶುಲ್ಕಗಳ ವಿವರವನ್ನು ಪ್ರಕಟಿಸಿದ್ದಾರೆಯೇ ಎಂಬ ಮಾಹಿತಿಯನ್ನು ಪರಿಶೀಲಿಸುವಂತೆ ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರು ಹಾಗೂ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.

ಅಧಿಕಾರಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯ ಶಾಲೆಗಳಲ್ಲಿ ಪರಿಶೀಲನೆ ನಡೆಸಿ ನಿಯಮ ಪಾಲಿಸದ ಶಾಲೆಗಳ ಮಾಹಿತಿ ಹಾಗೂ ಅವುಗಳ ವಿರುದ್ಧ ಕೈಗೊಂಡಿರುವ ಕ್ರಮದ ವಿವರಣೆ ನೀಡಲು ತಿಳಿಸಿದೆ.

ಕರ್ನಾಟಕ ಶೈಕ್ಷಣಿಕ ಸಂಸ್ಥೆಗಳ ಕಾಯ್ದೆ 1995ರ ಪ್ರಕಾರ ಎಲ್ಲಾ ಖಾಸಗಿ ಸಂಸ್ಥೆಗಳು ತಮ್ಮ ಶಾಲಾ ಪ್ರಕಟಣೆಯಲ್ಲಿ ಶುಲ್ಕ ಹಾಗೂ ಅವುಗಳ ಮೊತ್ತದ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಿರಬೇಕು. ಶಾಲಾ ಸೂಚನಾ ಫಲಕದಲ್ಲಿಯೂ ಮಾಹಿತಿಯನ್ನು ಸ್ಪಷ್ಟವಾಗಿ ಹಾಕಿರಬೇಕು.

ಶುಲ್ಕ ಹಾಗೂ ಮಕ್ಕಳ ಸುರಕ್ಷತೆ ನಿಟ್ಟಿನಲ್ಲಿ ಕಳೆದ ವರ್ಷ ತಿದ್ದುಪಡಿಯಾದ ಶೈಕ್ಷಣಿಕ ಕಾಯ್ದೆ ಅಡಿಯಲ್ಲಿ ಐಸಿಎಸ್‌ಇ ಹಾಗೂ ಸಿಬಿಎಸ್‌ಇ ಶಾಲೆಗಳನ್ನು ಇಲಾಖೆಯ ಅಧಿಕಾರ ವ್ಯಾಪ್ತಿಗೆ ತರಲಾಗಿದ್ದು, ಈ ಶಾಲೆಗಳಲ್ಲೂ ಪರಿಶೀಲನೆ ನಡೆಸುವಂತೆ ಇಲಾಖೆ ಸೂಚನೆ ನೀಡಿದೆ.

ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪಠ್ಯಕ್ರಮ ಹೊಂದಿರುವ ಖಾಸಗಿ ಶಾಲೆಗಳಲ್ಲಿನ ಮೂಲಸೌಕರ್ಯಗಳ ಬಗೆಗೂ ಪರಿಶೀಲನೆ ನಡೆಸಲು ಸೂಚಿಸಿರುವ ಇಲಾಖೆಯು 2009ರ ಶಿಕ್ಷಣ ಹಕ್ಕು ಕಾಯ್ದೆಯ ನಿಯಮಗಳನ್ನು ಶಾಲೆಗಳು ಎಷ್ಟರ ಮಟ್ಟಿಗೆ ಅಳವಡಿಸಿಕೊಂಡಿವೆ ಎಂದು ಪರಿಶೀಲಿಸಲು ತಿಳಿಸಿದೆ.

ನಿಯಮವನ್ನು ನಿರ್ಲಕ್ಷಿಸಿದ ಶಾಲೆಯ ಆಡಳಿತ ಮಂಡಳಿಯಿಂದ ಉಪ ನಿರ್ದೇಶಕರು ಸ್ಪಷ್ಟನೆ ಕೇಳಿ, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ಹೇಳಿದೆ.

ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ಹೇಳಿರುವಂತೆ ಅರ್ಹ ಶಿಕ್ಷಕರನ್ನು ಶಾಲೆಗಳು ನೇಮಿಸಿಕೊಂಡಿದ್ದಾವೆಯೇ ಎನ್ನುವ ಬಗ್ಗೆಯೂ ಮುಂದಿನ ದಿನಗಳಲ್ಲಿ ಇಲಾಖೆ ಪರಿಶೀಲನೆ ನಡೆಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry