ಶನಿವಾರ, ಡಿಸೆಂಬರ್ 14, 2019
20 °C

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಮುಖ್ಯಮಂತ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ  ಸಿದ್ದರಾಮಯ್ಯ ಮುಖ್ಯಮಂತ್ರಿ

ಬೆಂಗಳೂರು: ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸುಳಿವು ನೀಡಿದ್ದಾರೆ.

ಕಾಂಗ್ರೆಸ್‌ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದಿರುವ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಭಾನುವಾರ ಅನೌಪಚಾರಿಕ ಚರ್ಚೆ ನಡೆಸಿದರು. ಮತ್ತೊಂದು ಹಂತದಲ್ಲಿ, ‘ಮುಂದಿನ ಮುಖ್ಯಮಂತ್ರಿ ಯಾರು ಎನ್ನುವುದು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರವಾಗುತ್ತದೆ’ ಎಂದೂ ಅವರು ಹೇಳಿದರು.

‘ಮುಖ್ಯಮಂತ್ರಿ ಅಭ್ಯರ್ಥಿ ನಾನೇ ಎಂದು ಸಿದ್ದರಾಮಯ್ಯ ಬಿಂಬಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿ ಪಕ್ಷದ ಕೆಲವು ಮುಖಂಡರು ಕೆಲವು ದಿನಗಳ ಹಿಂದೆ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದರು. ‘ಮುಖ್ಯಮಂತ್ರಿ ಅಭ್ಯರ್ಥಿಯನ್ನು ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧರಿಸಲಾಗುತ್ತದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದರು.

ಇಡೀ ರಾಜ್ಯದ ವಿವಿಧ ವಿಭಾಗಗಳಲ್ಲಿ ಕಳೆದ ಒಂದು ತಿಂಗಳಿನಿಂದ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಭಾಗಿಯಾಗಿದ್ದ ರಾಹುಲ್‌, ಸಮಾರೋಪದಲ್ಲಿ ಹೀಗೆ ಹೇಳುವ ಮೂಲಕ ಕಾಂಗ್ರೆಸ್‌ನಲ್ಲಿದ್ದ ನಾಯಕತ್ವದ ಗೊಂದಲಕ್ಕೆ ತೆರೆ ಎಳೆದಿದ್ದಾರೆ. ಆದರೆ, ಈ ಬೆಳವಣಿಗೆಯಿಂದಾಗಿ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳು ಸಿಟ್ಟಿಗೇಳುವ ಸಾಧ್ಯತೆಯೂ ಇದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

ಮಿಷನ್‌ 150 ಗುರಿ ಇಟ್ಟಿರುವ ಬಿಜೆಪಿ, ಲಿಂಗಾಯತ ಸಮುದಾಯದ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಅಭ್ಯರ್ಥಿ ಎಂದು ವರ್ಷದ ಹಿಂದೆಯೇ ಪ್ರಕಟಿಸಿದೆ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದ ಹುರಿಯಾಳು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಘೋಷಿಸಿದ್ದಾರೆ.

‘ರಾಜ್ಯದಲ್ಲಿ ಕಾಂಗ್ರೆಸ್ ಮರಳಿ ಅಧಿಕಾರ ಹಿಡಿಯುವುದರಲ್ಲಿ ಅನುಮಾನ ಬೇಡ. ಸಮರ್ಥ ನಾಯಕತ್ವ ಹಾಗೂ ಸದೃಢ ಸಂಘಟನೆ ಕಾಂಗ್ರೆಸ್‌ನಲ್ಲಿದೆ. ಆಡಳಿತ ವಿರೋಧಿ ಅಲೆ ಇಲ್ಲ ಎನ್ನುವುದು ಜನಾಶೀರ್ವಾದ ಯಾತ್ರೆಯಿಂದ ಸಾಬೀತಾಗಿದೆ’ ಎಂದೂ ಅವರು ಹರ್ಷ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ ಎಂಬ ಸುಳಿವನ್ನೂ ರಾಹುಲ್‌ ನೀಡಿದರು.

‘ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನ ಕೆಲವು ಮುಖಂಡರು ಇಚ್ಛೆ ವ್ಯಕ್ತಪಡಿಸಿರುವ ಮಾಹಿತಿ ಇದೆಯಲ್ಲಾ’ ಎಂದು ಪತ್ರಕರ್ತರು ಗಮನ ಸೆಳೆದಾಗ, ‘ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಯಾರೂ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ಕೇಳಿಲ್ಲ’ ಸ್ಪಷ್ಟಪಡಿಸಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಕರೆದು, ‘ಬೇರೆ ಯಾರಾದರೂ ಎರಡು ಕ್ಷೇತ್ರಗಳಲ್ಲಿ ಟಿಕೆಟ್ ಕೇಳಿದ್ದಾರಾ’ ಎಂದೂ ವಿಚಾರಿಸಿಕೊಂಡರು. ‘ಇಲ್ಲ’ ಎಂದು ವೇಣುಗೋಪಾಲ್ ಉತ್ತರಿಸಿದರು.

ಗೊಂದಲ ನಿವಾರಣೆ?: ‘ಕಾಂಗ್ರೆಸ್‌ನ ಮುಂದಿನ ಮುಖ್ಯಮಂತ್ರಿ ಯಾರು’ ಎಂಬ ಪ್ರಶ್ನೆ ಸಂವಾದದಲ್ಲಿ ಎದುರಾದಾಗ ನಗುತ್ತಲೇ ಪ್ರತಿಕ್ರಿಯಿಸಿದ ರಾಹುಲ್‌, ‘ಜನನಾಯಕರಾದವರು ಹಾಗೂ ಜನ ಅಪೇಕ್ಷಿಸಿದವರು ಮುಂದಿನ ಮುಖ್ಯಮಂತ್ರಿ ಆಗುತ್ತಾರೆ’ ಎಂದು ಸಿದ್ದರಾಮಯ್ಯ ಅವರತ್ತ ಕೈತೋರಿಸಿದರು. ರಾಹುಲ್ ಇಷ್ಟು ಹೇಳುವಾಗ ಸಿದ್ದರಾಮಯ್ಯ ಪಕ್ಕದ ಟೇಬಲ್‌ನಲ್ಲಿ ಕೆಲವು ಪತ್ರಕರ್ತರು ಹಾಗೂ ಪಕ್ಷದ ಮುಖಂಡರೊಂದಿಗೆ ಲೋಕಾಭಿರಾಮ ಹರಟೆಯಲ್ಲಿ ತೊಡಗಿದ್ದರು.

ಸೋಲು ಖಚಿತ: ‘2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಮರೆತುಬಿಡಿ. ವಿರೋಧ ಪಕ್ಷಗಳು ಒಗ್ಗೂಡಿದರೆ ವಾರಾಣಸಿ ಕ್ಷೇತ್ರ

ದಲ್ಲಿ ಪ್ರಧಾನಿ ಮೋದಿ ಗೆಲ್ಲುವುದೂ ಕಷ್ಟ’ ಎಂದು ರಾಹುಲ್‌ ಪ್ರತಿಪಾದಿಸಿದರು.

‘ಮೋದಿ ಸೋಲು ಖಚಿತ’

‘2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಮರೆತುಬಿಡಿ. ವಿರೋಧ ಪಕ್ಷಗಳು ಒಗ್ಗೂಡಿದರೆ ವಾರಾಣಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆಲ್ಲುವುದೂ ಕಷ್ಟ’ ಎಂದು ರಾಹುಲ್‌ ಗಾಂಧಿ ಪ್ರತಿಪಾದಿಸಿದರು. ಬಿಜೆಪಿ ಸೋಲಿಗೆ ದಲಿತರ ಸಿಟ್ಟು ಪ್ರಮುಖ ಕಾರಣವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

‘ಜೆಡಿಎಸ್‌ ಎಂದರೆ ಜನತಾ ದಳ ಸ್ವಯಂ ಸೇವಕ ಸಂಘ’ 

‘ಆ ಪಕ್ಷದ ಮೇಲೆ ದಾಳಿ ಏಕೆ ನಡೆಸುತ್ತಿದ್ದೀರಿ’ಎಂದು ಮಾಧ್ಯಮ ಪ್ರತಿನಿಧಿಗಳು ಕೇಳಿದಾಗ, ‘ಯುದ್ಧದಲ್ಲಿ ಜಯಿ ಸಲು ಜಾತ್ಯತೀತ ಶಕ್ತಿಗಳು ಒಂದಾಗಬೇಕು. ಆದರೆ, ಅವರು ಬೇಲಿ ಮೇಲೆ ಕುಳಿತಂತೆ ಆಡುತ್ತಿದ್ದಾರೆ. ಜಾತ್ಯತೀತ ತತ್ವದ ಬಗ್ಗೆ ಅವರ ನಿಲುವೇನು ಎಂಬುದನ್ನು ಹೇಳಿ, ನಿಜ ಬಣ್ಣ  ಬಹಿರಂಗಪಡಿಸಲಿ ಎಂಬ ಕಾರಣಕ್ಕೆ ಪದೇ ಪದೇ ವಾಕ್‌ ಪ್ರಹಾರ ನಡೆಸುತ್ತಿದ್ದೇನೆ. ಅವರು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿರುವುದು ನಿಮಗೂ ಗೊತ್ತಲ್ಲವೇ’ಎಂದು ರಾಹುಲ್ ಪ್ರಶ್ನಿಸಿದರು.

ಪ್ರತಿಕ್ರಿಯಿಸಿ (+)