ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಪಕ್ಷವನ್ನು ನಂಬದಿರಿ

Last Updated 8 ಏಪ್ರಿಲ್ 2018, 19:43 IST
ಅಕ್ಷರ ಗಾತ್ರ

ವಿಜಯಪುರ: ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಂತೆ ತಡೆಯುವ ಸಾಮರ್ಥ್ಯ ಕಾಂಗ್ರೆಸ್‌ ಪಕ್ಷಕ್ಕೆ ಇಲ್ಲ. ಈ ವಿಷಯದಲ್ಲಿ ಕಾಂಗ್ರೆಸ್ಸಿಗರನ್ನು ನಂಬಬೇಡಿ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಭಾನುವಾರ ಇಲ್ಲಿ ಮುಸ್ಲಿಮರಿಗೆ ಮನವಿ ಮಾಡಿದರು.

ನಗರದಲ್ಲಿ ಆಯೋಜಿಸಿದ್ದ ವಿಕಾಸ ಪರ್ವ ಸಮಾವೇಶದಲ್ಲಿ ಮಾತನಾಡಿದ ಅವರು, ‘ಜೆಡಿಎಸ್‌ಗೆ ಮತ ಹಾಕಿದರೆ, ಬಿಜೆಪಿಗೇ ಮತ ನೀಡಿದಂತೆ ಎಂದು ಕಾಂಗ್ರೆಸ್ಸಿಗರು ಮುಸ್ಲಿಮರಲ್ಲಿ ಭಯದ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಯಾವ ಕಾರಣಕ್ಕೂ ನೀವು ಮಾತ್ರ ಇದನ್ನು ನಂಬದಿರಿ’ ಎಂದರು.

ಕಾಂಗ್ರೆಸ್‌ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಟೀಕಿಸಿದ ಅವರು, ‘ಈ ಎರಡೂ ರಾಷ್ಟ್ರೀಯ ಪಕ್ಷಗಳು ಕರಾವಳಿ ಸೇರಿದಂತೆ ರಾಜ್ಯದ ವಿವಿಧೆಡೆಯ ಜನರ ಬದುಕಿನ ಜತೆ ವೋಟಿಗಾಗಿ ‘ಹಿಂದೂ–ಮುಸ್ಲಿಂ’ ಎಂದು ಚೆಲ್ಲಾಟವಾಡುತ್ತಿವೆ. ಅಮಾಯಕರ ಬಲಿ ಪಡೆಯುತ್ತಿವೆ. ಯಾರೊಬ್ಬರೂ ಇಂತಹದ್ದೇ ಜಾತಿ, ಧರ್ಮದಲ್ಲಿ ಹುಟ್ಟಬೇಕೆಂದು ಅರ್ಜಿ ಹಾಕಿಕೊಂಡು ಜನಿಸುವುದಿಲ್ಲ. ಎಲ್ಲರ ದೇಹದಲ್ಲಿ ಹರಿಯುತ್ತಿರುವ ರಕ್ತದ ಬಣ್ಣ ಒಂದೇ. ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಿದೆ’ ಎಂದರು.

‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಲಕ್ಷ ಲಕ್ಷ ಕೋಟಿ ರೂಪಾಯಿ ಸಾಲ ಮಾಡಿದೆ. ಆದರೆ ಅಭಿವೃದ್ಧಿ ಮಾತ್ರ ಎಲ್ಲೂ ಗೋಚರಿಸುತ್ತಿಲ್ಲ. ಸಾಲದ ಹಣ ಯಾರ ಜೇಬಿಗಿಳಿದಿದೆ ಎಂಬುದೇ ಗೊತ್ತಾಗುತ್ತಿಲ್ಲ. ನೀರಾವರಿಗೆ ₹58,000 ಕೋಟಿ ನೀಡಿದ್ದಾಗಿ ಹೇಳುತ್ತಿದ್ದಾರೆ. ಯಾವ ರೈತರ ಹೊಲಕ್ಕೂ ನೀರು ಹರಿದಿಲ್ಲ. ನೀರಾವರಿ ಹೆಸರಿನಲ್ಲಿ ಲೂಟಿ ಹೊಡೆದಿದ್ದಾರೆ’ ಎಂದು ಕುಮಾರಸ್ವಾಮಿ ದೂರಿದರು.

‘ಇದು ಜಾಹೀರಾತಿನ ಸರ್ಕಾರ. ಇಲ್ಲಿಯವರೆಗೂ ₹ 1000 ಕೋಟಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದಾರೆ. ಇದಕ್ಕಾಗಿಯೇ ನಿತ್ಯ ₹7 ಕೋಟಿ ವ್ಯಯಿಸಿದ್ದಾರೆ ಎಂದು ಅವರು ಟೀಕೆ ಮಾಡಿದರು.

‘ಆತ್ಮಾವಲೋಕನ ಮಾಡಿಕೊಳ್ಳಿ’

‘ಜೆಡಿಎಸ್‌ ಪಕ್ಷವು ಬಿಜೆಪಿಯ ‘ಬಿ’ ಟೀಂ ಎಂದು ಟೀಕಿಸುವ ಕಾಂಗ್ರೆಸ್ಸಿಗರು, ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಜೆಡಿಎಸ್‌ನ ‘ಬಿ’ ಟೀಂ ಹೊರತು, ಕಾಂಗ್ರೆಸ್‌ ಅಲ್ಲ. ನಮ್ಮ ‘ಬಿ’ ತಂಡದವರು ಕಾಂಗ್ರೆಸ್‌ಗೆ ಹೋದ ಬಳಿಕ, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ.ಪರಮೇಶ್ವರ ಅವರಂಥವರನ್ನೇ ಮೂಲೆಗುಂಪು ಮಾಡಿದ್ದಾರೆ’ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು.

‘ಪೆಗ್‌ ಹಾಕಿದವರಂತೆ ಮಾತನಾಡುತ್ತಾರೆ’

ವಿಜಯಪುರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈಚೆಗಿನ ಮಾತಿನ ವೈಖರಿ ಗಮನಿಸಿದರೆ, ಬಾರ್‌ನಲ್ಲಿ ಕುಳಿತು ಎರಡು ಪೆಗ್‌ ಹಾಕಿಕೊಂಡು ಬಂದವರಂತೆ ವರ್ತಿಸಲಾರಂಭಿಸಿದ್ದಾರೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

‘ಸ್ಥಾನದ ಘನತೆಗೆ ತಕ್ಕಂತೆ ಸಿದ್ದರಾಮಯ್ಯ ಮಾತನಾಡುತ್ತಿಲ್ಲ. ಅವರು ಮೊದಲು ತಮ್ಮ ಮಾತಿನ ಶೈಲಿ ಬದಲಿಸಿಕೊಳ್ಳಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT