ಭಾನುವಾರ, ಡಿಸೆಂಬರ್ 15, 2019
19 °C
ರಾಜ್ಯಕ್ಕೆ 8ರಿಂದ 10 ಬಾರಿ ಭೇಟಿ ಸಾಧ್ಯತೆ

‘ಮೋದಿ ಹವಾ’ ಸೃಷ್ಟಿಗೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೋದಿ ಹವಾ’ ಸೃಷ್ಟಿಗೆ ಸಿದ್ಧತೆ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ‘ಮೋದಿ ಹವಾ’ ಎಬ್ಬಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಅತಿ ಹೆಚ್ಚು ಸಲ ಕರೆಸಲು ರಾಜ್ಯ ಬಿಜೆಪಿ ಉದ್ದೇಶಿಸಿದೆ.

ಚುನಾವಣಾ ಪ್ರಚಾರಕ್ಕಾಗಿ 12ರಿಂದ 15 ಸಲ ಭೇಟಿ ನೀಡುವಂತೆ ಪಕ್ಷದ ರಾಜ್ಯ ಘಟಕ ಮನವಿ ಮಾಡಿದೆ. ಆದರೆ, ಆರರಿಂದ ಎಂಟು ಬಾರಿ ರಾಜ್ಯಕ್ಕೆ ಬರಲು ಅವರು ಒಪ್ಪಿಗೆ ನೀಡಿದ್ದಾರೆ. ಕೊನೇ ಗಳಿಗೆಯಲ್ಲಿ ಇದನ್ನು 10ಕ್ಕೆ ಹೆಚ್ಚಿಸಿದರೂ ಅಚ್ಚರಿ ಇಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಗುಜರಾತ್‌ ಚುನಾವಣೆಯಲ್ಲಿ ಸೋಲಿನ ದವಡೆಗೆ ಸಿಲುಕಿದ್ದ ಪಕ್ಷವನ್ನು ಗೆಲುವಿನ ದಡ ದಾಟಿಸುವಲ್ಲಿ ಮೋದಿ ಬೆವರು ಹರಿಸಿದ್ದರು. ಕರ್ನಾಟಕದಲ್ಲಿ ಅದೇ ಮೋಡಿ ಮಾಡಲು ಮೋದಿಯವರಿಂದ ಮಾತ್ರ ಸಾಧ್ಯ. ಅವರನ್ನು ಹೆಚ್ಚು ಸಲ ರಾಜ್ಯಕ್ಕೆ ಕರೆಸುವುದರಿಂದ ಪಕ್ಷಕ್ಕೆ ಅನುಕೂಲವಾಗಲಿದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.

ರಾಜ್ಯದ 224 ಕ್ಷೇತ್ರಗಳ ನಾಡಿಮಿಡಿತ ಅರಿತುಕೊಂಡು ದೆಹಲಿಗೆ ವಾಪಸಾಗಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅದಕ್ಕೆ ತಕ್ಕಂತೆ ತಂತ್ರಗಳನ್ನು ಹೆಣೆದಿದ್ದಾರೆ. ಯಾವ ಪ್ರದೇಶದಲ್ಲಿ ಯಾವ ವಿಷಯವನ್ನು ಪ್ರಸ್ತಾಪಿಸಬೇಕು ಎಂಬುದನ್ನು ಅರಿತರೆ, ಅದರಿಂದ ಮತದಾರರ ಒಲವು ನಿಲುವು ಬದಲಿಸುವುದಕ್ಕೆ ಸಾಧ್ಯವಿದೆ. ಇದಕ್ಕೆ ಪೂರಕವಾಗಿ ಮೋದಿ ಪ್ರಚಾರ ಭಾಷಣ ಮಾಡಲಿದ್ದಾರೆ. ಪ್ರತಿ ಭೇಟಿಯಲ್ಲೂ ಮೂರರಿಂದ ನಾಲ್ಕು ಕಡೆಗಳಲ್ಲಿ ಸಮಾವೇಶಗಳನ್ನು ನಿಗದಿ ಮಾಡಲಾಗುತ್ತದೆ ಎಂದರು.

ಇದೇ 15ರ ಬಳಿಕ ಪ್ರಧಾನಿ ಚುನಾವಣಾ ಪ್ರಚಾರಕ್ಕೆ ಬರಲಿದ್ದಾರೆ. ಅಂತಿಮವಾಗಿ, ಎಷ್ಟು ರ‍್ಯಾಲಿಗಳಲ್ಲಿ ಭಾಗವಹಿಸಬೇಕು ಎಂಬುದನ್ನು ಅವರೇ ನಿರ್ಧರಿಸಲಿದ್ದಾರೆ ಎಂದು ಹೇಳಿದರು.

ಅಭಿವೃದ್ಧಿ, ಹಿಂದುತ್ವಕ್ಕೆ ಒತ್ತು

ಮೋದಿಯವರ ಚುನಾವಣಾ ಪ್ರಚಾರದ ವೇಳೆ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಭ್ರಷ್ಟಾಚಾರ, ಬಿಜೆಪಿ ಅಭಿವೃದ್ಧಿಯ ಮುನ್ನೋಟ ಮತ್ತು ಹಿಂದೂ ಧರ್ಮವನ್ನು ಒಡೆಯುತ್ತಿರುವ ವಿಷಯಗಳೇ ಪ್ರಧಾನವಾಗಿರುತ್ತವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಬೇರೆ ಬೇರೆ ಪ್ರದೇಶಗಳಲ್ಲಿ ರ‍್ಯಾಲಿ ನಡೆಸಿದಾಗ ಸ್ಥಳೀಯ ವಿಷಯಗಳನ್ನೇ ಪ್ರಧಾನವಾಗಿ ಕೈಗೆತ್ತಿಕೊಳ್ಳಲಿದ್ದಾರೆ. ಕರಾವಳಿಯಲ್ಲಿ ಹಿಂದುತ್ವದ ವಿಚಾರ ಕೈಗೆತ್ತಿಕೊಂಡರೆ, ಉತ್ತರ ಕರ್ನಾಟಕದಲ್ಲಿ ಆ ಭಾಗದ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿರುವ ವಿಷಯಗಳನ್ನು ಪ್ರಸ್ತಾಪಿಸುತ್ತಾರೆ. ಬೆಂಗಳೂರು, ಮೈಸೂರು ಪ್ರದೇಶದಲ್ಲಿ ಅಭಿವೃದ್ಧಿ ವಿಚಾರಗಳಿಗೆ ಒತ್ತು ನೀಡಲಿದ್ದಾರೆ. ಹಿಂದೂ ಸಮಾಜವನ್ನು ಜಾತಿ, ಧರ್ಮದ ಹೆಸರಿನಲ್ಲಿ ಕಾಂಗ್ರೆಸ್‌ ಒಡೆದಾಳುವ ನೀತಿ ಅನುಸರಿಸುತ್ತಿದೆ ಎಂಬ ವಿಚಾರವನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಪ್ರತಿಕ್ರಿಯಿಸಿ (+)