ಸೋಮವಾರ, ಡಿಸೆಂಬರ್ 9, 2019
22 °C

ಒಂದೇ ಕ್ಷೇತ್ರದಿಂದ ಗೆದ್ದಿದ್ದ ಸಹೋದರರು!

Published:
Updated:
ಒಂದೇ ಕ್ಷೇತ್ರದಿಂದ ಗೆದ್ದಿದ್ದ ಸಹೋದರರು!

ಹುಬ್ಬಳ್ಳಿ: ಒಂದೇ ಕ್ಷೇತ್ರದಿಂದ ಮೂವರು ಸಹೋದರರು ಸತತವಾಗಿ ಶಾಸಕರಾದ ‌ವೈಶಿಷ್ಟ್ಯ ಧಾರವಾಡ ಗ್ರಾಮೀಣ ಕ್ಷೇತ್ರದ್ದು.

1994ರ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀಕಾಂತ ಅಂಬಡಗಟ್ಟಿ, 1998ರಲ್ಲಿ ಶಶಿಧರ ಅಂಬಡಗಟ್ಟಿ ಹಾಗೂ 1999ರ ಚುನಾವಣೆಯಲ್ಲಿ ಶಿವಾನಂದ ಅಂಬಡಗಟ್ಟಿ ಸತತವಾಗಿ ಆಯ್ಕೆಯಾದ ಸಹೋದರರು.

1994ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಶ್ರೀಕಾಂತ ಅಂಬಡಗಟ್ಟಿ, ಜನತಾ ದಳದ ಎ.ಬಿ. ದೇಸಾಯಿ ಅವರ ವಿರುದ್ಧ ಗೆಲುವು ಸಾಧಿಸಿದರು. ಮೂರು ವರ್ಷದ ನಂತರ ರಸ್ತೆ ಅಪಘಾತವೊಂದರಲ್ಲಿ ಅವರು ಮೃತಪಟ್ಟರು. ಅವರ ನಿಧನದಿಂದ ತೆರವಾದ ಕ್ಷೇತ್ರಕ್ಕೆ 1998ರಲ್ಲಿ ಉಪಚುನಾವಣೆ ನಡೆಯಿತು. ಆಗ ಅವರ ಕಿರಿಯ ಸಹೋದರ ಶಶಿಧರ ಅಂಬಡಗಟ್ಟಿ ಸ್ಪರ್ಧಿಸಿದರು. ಸಹೋದರನ ಸಾವಿನ ಅನುಕಂಪದ ಅಲೆಯಿಂದಾಗಿ ಗೆಲುವು ಸಾಧಿಸಿದರು. ಇವರಿಗೂ ಪ್ರತಿಸ್ಪರ್ಧಿಯಾಗಿದ್ದವರು ಎ.ಬಿ. ದೇಸಾಯಿ ಅವರೇ.

1999ರ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಲು ಕೆಲವು ದಿನಗಳಷ್ಟೇ ಬಾಕಿ ಇತ್ತು. ಶಶಿಧರ ಅವರೇ ಅಭ್ಯರ್ಥಿ ಎಂಬುದು ಹೆಚ್ಚೂ ಕಡಿಮೆ ಖಚಿತವಾಗಿತ್ತು. ಮುಖಂಡರೊಬ್ಬರ ಮನೆಗೆ ಹೋಗಿದ್ದ ಅವರು, ಹೃದಯಾಘಾತದಿಂದ ಕೊನೆಯುಸಿರೆಳೆದರು.

ಇಬ್ಬರು ಕಿರಿಯ ಸಹೋದರರು ನಿಧನರಾದ ನಂತರ ಚುನಾವಣೆಗೆ ಸ್ಪರ್ಧಿಸುವ ಸರದಿ ಶಿವಾನಂದ ಅಂಬಡಗಟ್ಟಿ ಅವರದ್ದು. ಆದರೆ, ಅವರು ರಾಜಕೀಯಕ್ಕೂ ತಮ್ಮ ಕುಟುಂಬಕ್ಕೂ ಆಗಿ ಬರುವುದಿಲ್ಲ ಎಂದು ಹೇಳಿ ಚುನಾವಣಾ ಕಣದಿಂದ ದೂರ ಉಳಿಯುವುದಾಗಿ ಘೋಷಿಸಿದರು.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ: ‘ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದರೂ ಕೆಲವು ಕಾಂಗ್ರೆಸ್‌ ಮುಖಂಡರು ಟಿಕೆಟ್‌ ಕೊಡಿಸುವುದಾಗಿ ಹೇಳಿ ನನ್ನನ್ನು ಬೆಂಗಳೂರಿಗೆ ಕರೆದುಕೊಂಡು ಹೋದರು. ಕೊನೇ ಕ್ಷಣದಲ್ಲಿ ಪಕ್ಷದ ಹೈಕಮಾಂಡ್‌ ನನಗೆ ಟಿಕೆಟ್‌ ತಪ್ಪಿಸಿ, ಲೋಹಿತ ನಾಯ್ಕರ್‌ ಅವರಿಗೆ ಕೊಟ್ಟಿತು. ಬರಿಗೈಯಲ್ಲಿ ಊರಿಗೆ ಮರಳಿದೆ’ ಎಂದು ಶಿವಾನಂದ ಸ್ಮರಿಸಿದ್ದಾರೆ.

‘ಇದು ಕಾಂಗ್ರೆಸ್‌ನ ಹಲವು ಮುಖಂಡರು ಹಾಗೂ ಹಿತೈಷಿಗಳಿಗೆ ಬೇಸರ ತರಿಸಿತು. ನಂತರ, ಪಕ್ಷೇತರನಾಗಿ ಕಣಕ್ಕೆ ಇಳಿಯುವಂತೆ ಒತ್ತಡ ಹೇರಿದರು. ಗೆಲ್ಲಿಸುವ ಜವಾಬ್ದಾರಿಯನ್ನೂ ಹೊತ್ತರು. ಗೆದ್ದ ಮೇಲೆ ಕಾಂಗ್ರೆಸ್‌ ಸೇರಬೇಕು ಎನ್ನುವ ಷರತ್ತು ಹಾಕಿದರು. ಆ ಪ್ರಕಾರ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದೆ. ಹಿತೈಷಿಗಳ ಆಶಯದಂತೆ ಕಾಂಗ್ರೆಸ್‌ ಪಕ್ಷ ಸೇರಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘2004ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತೆ. ನಂತರ, ಪಕ್ಷದಲ್ಲಿನ ಬೆಳವಣಿಗೆಗಳಿಂದ ಬೇಸತ್ತು ಬಿಜೆಪಿ ಸೇರಿದೆ‌’ ಎಂದು ನೆನಪಿಸಿಕೊಂಡಿರುವ ಶಿವಾನಂದ, ಇತ್ತೀಚೆಗೆ ಜೆಡಿಎಸ್‌ಗೆ ಸೇರ್ಪಡೆಗೊಂಡಿದ್ದಾರೆ.

1994ರಲ್ಲಿ ಶ್ರೀಕಾಂತ ಅಂಬಡಗಟ್ಟಿ

1998ರಲ್ಲಿ ಶಶಿಧರ ಅಂಬಡಗಟ್ಟಿ

1999ರಲ್ಲಿ ಶಿವಾನಂದ ಅಂಬಡಗಟ್ಟಿ

ಪ್ರತಿಕ್ರಿಯಿಸಿ (+)