ಮಂಗಳವಾರ, ಜುಲೈ 14, 2020
24 °C
ಸದ್ಯಕ್ಕೆ ಅಂತ್ಯಕಂಡ ಮೂರು ವರ್ಷಗಳ ಕಾನೂನು ಹೋರಾಟ; ಕರ್ತವ್ಯಲೋಪ ಆಗಿಲ್ಲ– ನಗರಸಭೆ ಆಯುಕ್ತ

ಕಾಟನ್‌ ಮಾರ್ಕೆಟ್‌ಗೆ ಮತ್ತೆ ಜೀವಕಳೆ?

ವೆಂಕಟೇಶ್ ಜಿ.ಎಚ್. Updated:

ಅಕ್ಷರ ಗಾತ್ರ : | |

ಕಾಟನ್‌ ಮಾರ್ಕೆಟ್‌ಗೆ ಮತ್ತೆ ಜೀವಕಳೆ?

ಬಾಗಲಕೋಟೆ: ಇಲ್ಲಿನ ಕಾಟನ್‌ ಮಾರ್ಕೆಟ್ ವಿಚಾರದಲ್ಲಿ ನಗರಸಭೆ ಆಯುಕ್ತರು ಹಾಗೂ ಲೀಸ್‌ದಾರರ ನಡುವಿನ ಮೂರು ವರ್ಷಗಳ ಸುದೀರ್ಘ ಕಾನೂನು ಹೋರಾಟ ಸದ್ಯಕ್ಕೆ ಅಂತ್ಯಕಂಡಿದೆ.

ಧಾರವಾಡ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ನಗರಸಭೆ ಅಧ್ಯಕ್ಷ ದ್ಯಾವಪ್ಪ ರಾಕುಂಪಿ ಹಾಗೂ ಆಯುಕ್ತ ಗಣಪತಿ ಪಾಟೀಲ ಕಳೆದ ಶುಕ್ರವಾರ ಮಾರುಕಟ್ಟೆಯ 139 ಅಂಗಡಿಗಳ ಬೀಗ ತೆರೆದು ಅಲ್ಲಿ ವಹಿವಾಟಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಸತತ 37 ತಿಂಗಳ ಕಾಲ ಬಿಕೊ ಎನ್ನುತ್ತಿದ್ದ ಮಾರುಕಟ್ಟೆ ಪ್ರಾಂಗಣದಲ್ಲಿ ನಿಧಾನವಾಗಿ ಜೀವ ಕಳೆ ನೆಲೆಗೊಳ್ಳುತ್ತಿದೆ.

ಕಾಟನ್‌ ಮಾರುಕಟ್ಟೆಯ ಮಳಿಗೆಗಳ ಲೀಜ್ ಕರಾರು ನವೀಕರಣ ವೇಳೆ ಬಾಡಿಗೆ ಮೊತ್ತ ಹೆಚ್ಚಳದ ವಿಚಾರದಲ್ಲಿ ನಗರಸಭೆ ಆಡಳಿತ ಹಾಗೂ ಲೀಜ್‌ದಾರರ ಉಂಟಾದ ಜಟಾಪಟಿ, ಈ ವಿಚಾರದಲ್ಲಿ ನಗರಸಭೆ ಆಡಳಿತ ಕೈಗೊಂಡ ನಿರ್ಣಯ ವಿವಾದದ ಸ್ವರೂಪ ಪಡೆದಿತ್ತು. ಕೊನೆಗೆ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಮೊದಲಿಗೆ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರ ನ್ಯಾಯಾಲಯದ ಅಂಗಳ ನಂತರ ಧಾರವಾಡ ಹೈಕೋರ್ಟ್ ಪೀಠದವರೆಗೂ ಮನವಿ, ಮೇಲ್ಮನವಿ ಸಲ್ಲಿಸಲಾಗಿತ್ತು. ನಂತರ ಈ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲೂ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿತ್ತು. ಹೀಗೆ ಸುದೀರ್ಘ ಅವಧಿಯ ಕಾನೂನು ಹೋರಾಟದ ಪರಿಣಾಮ 2015ರ ಫೆಬ್ರುವರಿ 19ರಿಂದ ಅಲ್ಲಿ ವಹಿವಾಟು ಸಂಪೂರ್ಣ ಬಂದ್ ಆಗಿತ್ತು. ಮಾರುಕಟ್ಟೆ ಸಂಕೀರ್ಣಕ್ಕೆ ಜೀವ ಕಳೆ ಇಲ್ಲವಾಗಿತ್ತು.

ಬೃಹತ್ ಮಾರುಕಟ್ಟೆ ಸಂಕೀರ್ಣ: ನಗರದ ಬಸವೇಶ್ವರ ವೃತ್ತದಿಂದ ರೈಲ್ವೆ ಸ್ಟೇಶನ್ ರಸ್ತೆಯ ಹಳೆಯ ಡಿ.ಸಿ.ಸಿ ಬ್ಯಾಂಕ್ ಆವರಣದ ಸುತ್ತಲೂ 20 ಎಕರೆ ವ್ಯಾಪ್ತಿಯಲ್ಲಿ ಕಾಟನ್ ಮಾರ್ಕೆಟ್ ನೆಲೆಗೊಂಡಿದೆ. ಮುಳುಗಡೆಗೂ ಮುನ್ನ ನಗರದ ವಾಣಿಜ್ಯ ವಹಿವಾಟಿನ ಕೇಂದ್ರ ಸ್ಥಾನವಾಗಿ ಗುರುತಿಸಿಕೊಂಡಿದ್ದ ಕಾಟನ್‌ ಮಾರ್ಕೆಟ್‌ನಲ್ಲಿ ನಿತ್ಯ ಕೋಟ್ಯಂತರ ರೂಪಾಯಿ ಮೊತ್ತದ ವಹಿವಾಟು ನಡೆಯುತ್ತಿತ್ತು. ಬೀಜ–ಗೊಬ್ಬರ, ವಾಹನಗಳು, ಸಿದ್ಧ ಉಡುಪು ಶೋರೂಮ್‌ಗಳು, ಕಿರಾಣಿ, ಪ್ಲಾಸ್ಟಿಕ್ ಮಾರಾಟದ ಅಂಗಡಿಗಳು, ಪ್ರಿಂಟಿಂಗ್ ಪ್ರೆಸ್‌ಗಳು, ಬಾರ್ ಸೇರಿದಂತೆ ವೈವಿಧ್ಯಮಯ ವಸ್ತುಗಳ ವಹಿವಾಟಿಗೆ ಮಾರ್ಕೆಟ್ ನೆಲೆ ಒದಗಿಸಿತ್ತು.

ಸ್ವತ್ತುಗಳ ಕಳವು?: ‘ಕಾಟನ್‌ ಮಾರ್ಕೆಟ್ ಇಷ್ಟು ದಿನ ನಗರಸಭೆ ಆಡಳಿತದ ಸುಪರ್ದಿಯಲ್ಲಿತ್ತು. ಈ ವೇಳೆ ಕೆಲವು ಮಳಿಗೆಗಳಲ್ಲಿ

ಸ್ವತ್ತುಗಳಿಗೆ ಹಾನಿಯಾಗಿದೆ. ಇನ್ನೂ ಕೆಲವು ಕಡೆ ಕಳವು ನಡೆದಿದೆ. ಇದರಿಂದ ವ್ಯಾಪಾರಸ್ಥರಿಗೆ ಲಕ್ಷಾಂತರ ರೂಪಾಯಿ ಮೊತ್ತದ ನಷ್ಟ

ಉಂಟಾಗಿದೆ. ಬೀಗ ಹಾಕಿದ್ದ ಅವಧಿಯಲ್ಲಿ ಮಾರ್ಕೆಟ್‌ನ ಸುಪರ್ದಿ ಹೊಂದಿದ್ದ ನಗರಸಭೆಗೆ ಅಲ್ಲಿನ ವಸ್ತುಗಳ ರಕ್ಷಣೆಯ ಹೊಣೆ ಇರುತ್ತದೆ. ಹಾಗಾಗಿ ನಷ್ಟ ಭರ್ತಿ ಮಾಡಿಕೊಡುವಂತೆ ಅವರಿಗೆ ಒತ್ತಾಯಿಸಲಿದ್ದೇವೆ. ಅಗತ್ಯ ಬಿದ್ದರೆ ಕಾನೂನು ಹೋರಾಟ ಕೈಗೆತ್ತಿಕೊಳ್ಳಲಿದ್ದೇವೆ’ ಎಂದು ಅಲ್ಲಿನ ವ್ಯಾಪಾರಸ್ಥರು ಹೇಳುತ್ತಾರೆ.

‘ಈ ಹಿಂದೆ ನ್ಯಾಯಾಲಯದ ಆದೇಶದಂತೆ ಕಾಟನ್‌ ಮಾರ್ಕೆಟ್‌ನ ಮಳಿಗೆಗಳಲ್ಲಿ ಇದ್ದ ಬೆಲೆಬಾಳುವ ವಸ್ತುಗಳನ್ನು ಹಿಂದಕ್ಕೆ ಪಡೆಯಲು ಮಾಲೀಕರಿಗೆ ಅವಕಾಶ ಮಾಡಿಕೊಡಲಾಗಿದೆ. ಅಲ್ಲಿಂದ ತೆಗೆದುಕೊಂಡು ಹೋದ ಹಾಗೂ ಉಳಿದಿರುವ ವಸ್ತುಗಳ ಬಗ್ಗೆ ಅವರೇ ಲಿಖಿತವಾಗಿ ಬರೆದುಕೊಟ್ಟಿದ್ದಾರೆ. ಹಾಗಾಗಿ ಇಲ್ಲಿ ನಗರಸಭೆಯಿಂದ ಕರ್ತವ್ಯಚ್ಯುತಿ ಆಗಿರುವ ಪ್ರಶ್ನೆಯೇ ಇಲ್ಲ’ ಎಂದು ನಗರಸಭೆ ಆಯುಕ್ತ ಗಣಪತಿ ಪಾಟೀಲ ಹೇಳುತ್ತಾರೆ. ‘ಹೈಕೋರ್ಟ್ ಏಕಸದಸ್ಯ ಆಯೋಗದ ಆದೇಶ ಪ್ರಶ್ನಿಸಿ ದ್ವಿಸದಸ್ಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ’ ಎನ್ನುತ್ತಾರೆ.

**

ಕೋರ್ಟ್ ಆದೇಶದಂತೆ ಮಳಿಗೆಗಳಲ್ಲಿ ಇದ್ದ ಬೆಲೆಬಾಳುವ ವಸ್ತುಗಳನ್ನು ಹಿಂದಕ್ಕೆ ಪಡೆಯಲಾಗಿದೆ. ನಗರಸಭೆಯಿಂದ ಕರ್ತವ್ಯಲೋಪ ಆಗಿಲ್ಲ – ಗಣಪತಿ ಪಾಟೀಲ, ನಗರಸಭೆ ಆಯುಕ್ತ.

**

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.