ಬಾದಾಮಿ: ಸಿಎಂ ಸ್ಪರ್ಧೆ ಕನವರಿಕೆ!

7
ತ್ರಿಕೋನ ಸ್ಪರ್ಧೆಯೇ ಇಲ್ಲಿ ಸದಾ ಕಾಂಗ್ರೆಸ್‌ನ ಗೆಲುವಿನ ಗುಟ್ಟು; ಗುಳೇ ಹೋಗುವವರ ಶ್ರೇಯವೂ ಕ್ಷೇತ್ರಕ್ಕಿದೆ!

ಬಾದಾಮಿ: ಸಿಎಂ ಸ್ಪರ್ಧೆ ಕನವರಿಕೆ!

Published:
Updated:

ಬಾಗಲಕೋಟೆ: ಚಾಲುಕ್ಯರ ರಾಜಧಾನಿ ಬಾದಾಮಿ ತನ್ನ ಗತ ದಿನಗಳ ಕನವರಿಕೆಯಲ್ಲಿಯೇ ಹಿಂದಿನ 14 ಚುನಾವಣೆಗಳನ್ನು ಕಂಡಿದೆ. ಇದೀಗ 15ನೇ ಬಾರಿಗೆ ಚುನಾವಣೆಗೆ ಸಜ್ಜಾಗಿದೆ. ಮಲಪ್ರಭಾ ತಟದಲ್ಲಿದ್ದರೂ ಒಣ ಬೇಸಾಯವೇ ಪ್ರಧಾನವಾಗಿರುವ ಕ್ಷೇತ್ರದಲ್ಲಿ ಸಂಪೂರ್ಣ ನೀರಾವರಿ ಇನ್ನೂ ರೈತಾಪಿ ವರ್ಗದ ಕನವರಿಕೆ ಹಂತದಲ್ಲಿಯೇ ಇದೆ. ಜಿಲ್ಲೆಯಿಂದ ಬದುಕು ಅರಸಿ ಕರಾವಳಿ, ಬೆಂಗಳೂರು, ಪುಣೆಗೆ ಗುಳೇ ಹೊರಡುವವರ ದೊಡ್ಡ ಸಂಖ್ಯೆ ಹೊಂದಿದ ಶ್ರೇಯವೂ ಕ್ಷೇತ್ರಕ್ಕೆ ಸಲ್ಲುತ್ತದೆ.

ಕರ್ನಾಟಕ ಏಕೀಕರಣಗೊಂಡ ನಂತರ 1957ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕೈನಕಟ್ಟಿಯ ಗೌಡರ ಮಗ ವಿ.ಎಚ್.ಪಾಟೀಲ ಕಾಂಗ್ರೆಸ್‌ನಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಶಾಸಕರಾದಾಗ ಅವರಿಗೆ ಆಗಿನ್ನೂ 25ರ ಹರೆಯ. 1962ರಲ್ಲೂ ಗೆಲುವಿನ ಓಟ ಮುಂದುವರೆಸುವ ವಿ.ಎಚ್.ಪಾಟೀಲ, 1967ರಲ್ಲಿ ಸ್ವತಂತ್ರ ಅಭ್ಯರ್ಥಿ ಬಾದಾಮಿಯ ಸಾಹುಕಾರ ಕೆ.ಎಂ.ಪಟ್ಟಣಶೆಟ್ಟಿ ವಿರುದ್ಧ ಸೋಲನ್ನಪ್ಪುತ್ತಾರೆ. ಆಗಿನಿಂದಲೂ ಪಟ್ಟಣಶೆಟ್ಟಿ ಕುಟುಂಬ ಬಾದಾಮಿ ಕ್ಷೇತ್ರದಲ್ಲಿ ರಾಜಕೀಯ ನೆಲೆ ಕಂಡುಕೊಳ್ಳುತ್ತದೆ. 1972ರ ಚುನಾವಣೆಯಲ್ಲಿ ನೀರಬೂದಿಹಾಳದ ಆರ್.ಟಿ.ದೇಸಾಯಿ ಗೆಲ್ಲುವ ಮೂಲಕ ಮತ್ತೆ ಕಾಂಗ್ರೆಸ್ಸನ್ನು ಗೆಲುವಿನ ಹಳಿಗೆ ತರುತ್ತಾರೆ.

ತುರ್ತುಪರಿಸ್ಥಿತಿಯ ನಂತರ 1978ರಲ್ಲಿ ನಡೆದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿ.ಬಿ.ಚಿಮ್ಮನಕಟ್ಟಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಆಗಿನ್ನೂ ಎಲ್‌ಎಲ್‌ಬಿ ಪೂರ್ಣಗೊಳಿಸಿರದ ಚಿಮ್ಮನಕಟ್ಟಿ, 26 ವರ್ಷಕ್ಕೆ ಶಾಸಕರಾಗಿ ಆಯ್ಕೆಯಾಗುತ್ತಾರೆ. ವಿಶೇಷವೆಂದರೆ ಆ ಚುನಾವಣೆಯಲ್ಲಿ ಪ್ರಚಾರಕ್ಕೆ ಸ್ವತಃ ಇಂದಿರಾಗಾಂಧಿ ಜಿಲ್ಲೆಗೆ ಬಂದಿರುತ್ತಾರೆ. ನಂತರದ ಚುನಾವಣೆಯಲ್ಲೂ ಯಶಸ್ಸಿನ ಕಥನ ಮುಂದುವರೆಸುವ ಚಿಮ್ಮನಕಟ್ಟಿ, 1985ರಲ್ಲಿ ಜನತಾಪಕ್ಷದಿಂದ ಸ್ಪರ್ಧಿಸಿದ್ದ ಆರ್.ಟಿ.ದೇಸಾಯಿ ಎದುರು ಪರಾಭವಗೊಳ್ಳುತ್ತಾರೆ. 1989ರಲ್ಲಿ ಎಂ.ಕೆ.ಪಟ್ಟಣಶೆಟ್ಟಿ ಜನತಾದಳದಿಂದ ಗೆಲುವು ಸಾಧಿಸುವ ಮೂಲಕ ರಾಜಕೀಯ ಚೈತ್ರಯಾತ್ರೆ ಆರಂಭಿಸುತ್ತಾರೆ. 1994 ಹಾಗೂ 1999ರಲ್ಲಿ ಎರಡು ಬಾರಿ ಗೆಲ್ಲುವ ಚಿಮ್ಮನಕಟ್ಟಿ ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿಯೂ ಕೆಲಸ ಮಾಡುತ್ತಾರೆ. ನಂತರ ಎರಡು ಅವಧಿಗೆ ಎಂ.ಕೆ.ಪಟ್ಟಣಶೆಟ್ಟಿ ಮೂಲಕ ಬಿಜೆಪಿ ಕ್ಷೇತ್ರದಲ್ಲಿ ತನ್ನ ನೆಲೆ ಭದ್ರಗೊಳಿಸಿಕೊಳ್ಳುತ್ತದೆ. ಕಳೆದ ಚುನಾವಣೆಯಲ್ಲಿ ಪಟ್ಟಣಶೆಟ್ಟಿ ಅವರ ಅಳಿಯ ಮಹಾಂತೇಶ ಮಮದಾಪುರ ಜೆಡಿಎಸ್‌ನ ತೆನೆಹೊತ್ತ ಕಾರಣ ಬಿ.ಬಿ.ಚಿಮ್ಮನಕಟ್ಟಿ ಸುಲಭವಾಗಿ ಗೆಲುವು ಸಾಧಿಸಿದ್ದರು. ಇದೀಗ ಮತ್ತೊಂದು ಚುನಾವಣೆಗೆ ಕ್ಷೇತ್ರ ಸಜ್ಜಾಗಿದೆ.

ಕ್ಷೇತ್ರದಲ್ಲಿ ಜೆಡಿಎಸ್‌ನ ಪ್ರಚಾರ ಯಾತ್ರೆ ಮಾತ್ರ ಅಬಾಧಿತವಾಗಿ ಮುಂದುವರೆದಿದೆ. ಆರು ತಿಂಗಳ ಹಿಂದೆಯೇ ಹನುಮಂತ ಮಾವಿನಮರದ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ ಕಾರಣ ಅವರು ತಳಹಂತದಿಂದಲೇ ಸಿದ್ಧತೆ ಆರಂಭಿಸಿದ್ದಾರೆ. ಈಗಾಗಲೇ ಎರಡು ಬಾರಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬಂದು ಹೋಗಿದ್ದಾರೆ. ಕಳೆದ ಬಾರಿ ಮಮದಾಪುರ ಮೂಲಕ ಪಕ್ಷಕ್ಕೆ ದೊರೆತಿದ್ದ ಬೆಂಬಲ ಈ ಬಾರಿ ಜಯದ ರೂಪು ಪಡೆಯಬಹುದು ಎಂಬುದು ಜೆಡಿಎಸ್‌ ವರಿಷ್ಠರ ಲೆಕ್ಕಾಚಾರ.

ಬಿಜೆಪಿಯಲ್ಲಿ ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತರ, ಮಹಾಂತೇಶ ಮಮದಾಪುರ ಟಿಕೆಟ್ ಆಕಾಂಕ್ಷಿಗಳು. ಹಿಂದಿನ ಬಾರಿಯ ಒಳಜಗಳದಿಂದ ಆಗಿರುವ ನಷ್ಟ ಅರಿತಿರುವ ಬಿಜೆಪಿ ಹೈಕಮಾಂಡ್, ಈ ಬಾರಿ ಒಮ್ಮತದ ಅಭ್ಯರ್ಥಿ ಆಯ್ಕೆಗೆ ನಿರ್ಧರಿಸಿದೆ.

ಆಕಾಂಕ್ಷಿಗಳ ದಂಡು: ಶಾಸಕ ಬಿ.ಬಿ.ಚಿಮ್ಮನಕಟ್ಟಿ ಸೇರಿದಂತೆ ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳ ದಂಡೇ ಇದೆ. ಕಳೆದ ಬಾರಿ ಕೈಯಲ್ಲಿದ್ದ ಬಿ ಫಾರಂ ಕೊನೆಯ ಗಳಿಗೆಯಲ್ಲಿ ತ್ಯಾಗ ಮಾಡಿದ್ದ ಡಾ.ದೇವರಾಜ ಪಾಟೀಲ, ಮಹೇಶ ಹೊಸಗೌಡ್ರ, ಎಸ್.ಡಿ.ಜೋಗಿನ, ಎಸ್.ವೈ.ಕುಳಗೇರಿ ಕೂಡ ಪೈಪೋಟಿ ನಡೆಸಿದ್ದಾರೆ.

ಸಿದ್ದರಾಮಯ್ಯ ಸ್ಪರ್ಧೆ?: ಬಾದಾಮಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರ ಕೆಲ ದಿನಗಳಿಂದ ಜೀವ ಪಡೆದಿದೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು, ಕುರುಬ ಸಮುದಾಯದ ಬಲ ಸಿದ್ದರಾಮಯ್ಯಗೆ ಸುರಕ್ಷಿತ ಎಂಬ ಕಾರಣದಿಂದ ನಾವೇ ಆಹ್ವಾನಿಸಿದ್ದೇವೆ ಎಂದು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಹೇಳುತ್ತಾರೆ.

ತ್ರಿಕೋನ ಸ್ಪರ್ಧೆಯ ಲಾಭ

ಬಾದಾಮಿಯ ಚುನಾವಣೆ ಇತಿಹಾಸ ಗಮನಿಸಿದಾಗ ಪ್ರತಿ ಬಾರಿಯೂ ತ್ರಿಕೋನ ಸ್ಪರ್ಧೆಯೇ ಕಾಂಗ್ರೆಸ್‌ಗೆ ಗೆಲುವಿಗೆ ಪೂರಕವಾಗಿದೆ.

1978ರಲ್ಲಿ ಬಿ.ಬಿ.ಚಿಮ್ಮನಕಟ್ಟಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಕೆ.ಎಂ.ಪಟ್ಟಣಶೆಟ್ಟಿ ಜನತಾಪಕ್ಷದ ಅಭ್ಯರ್ಥಿ. ಆಗ ಜಾಲಿಹಾಳದ ಗಾಣಿಗ ಸಮಾಜದ ಹೂವಪ್ಪ ಲಗಳಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇಬ್ಬರು ಸಾಹುಕಾರರ ನಡುವೆ ಅವರ ಅಂಗಡಿ ಖಾತೆದಾರ ನಿಂತಿದ್ದಾನೆ ಎಂದು ಚಿಮ್ಮನಕಟ್ಟಿಗೆ ಆಗ ಸ್ನೇಹಿತರು ತಮಾಷೆ ಮಾಡುತ್ತಿದ್ದರು.1983ರಲ್ಲೂ ಅದೇ ಫಲಿತಾಂಶ ಪುನರಾವರ್ತನೆ. ಆಗ ಆರ್‌.ಟಿ.ದೇಸಾಯಿ ಜನತಾ ಪಕ್ಷದಿಂದ, ಯಲ್ಲಪ್ಪ ಬಿ.ಪಯ್ಯಣ್ಣವರ ಪಕ್ಷೇತರರಾಗಿ ಸ್ಪರ್ಧಿಸಿದ್ದರು. 1994ರಲ್ಲಿ ಪಿ.ಸಿ.ಗದ್ದಿಗೌಡರು ಪಕ್ಷೇತರರಾಗಿ ಸ್ಪರ್ಧಿಸಿದ ಕಾರಣ ಎಂ.ಕೆ.ಪಟ್ಟಣಶೆಟ್ಟಿ ಪರಾಭವಗೊಂಡು ಚಿಮ್ಮನಕಟ್ಟಿ ಗೆಲುವಿನ ನಗೆ ಬೀರಿದ್ದರು. 2013ರಲ್ಲೂ ತ್ರಿಕೋನ ಸ್ಪರ್ಧೆಯ ಲಾಭ ಕಾಂಗ್ರೆಸ್‌ಗೆ ದೊರೆತಿದೆ.

397 ಮತಗಳ ಅಂತರ: 1999ರಲ್ಲಿ ಜೆಡಿಯುನಿಂದ ಸ್ಪರ್ಧಿಸಿದ್ದ ಎಂ.ಕೆ.ಪಟ್ಟಣಶೆಟ್ಟಿ ಎದುರಾಳಿ ಬಿ.ಬಿ.ಚಿಮ್ಮಕನಟ್ಟಿ ವಿರುದ್ಧ ಕೇವಲ 397 ಮತಗಳ ಅಂತರದಿಂದ ಸೋಲನ್ನಪ್ಪಿದ್ದರು. ಫಲಿತಾಂಶವನ್ನು ಪಟ್ಟಣಶೆಟ್ಟಿ ಆಗ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಇಂದಿರಾಗೆ ಕೊಠಡಿ ನಿರಾಕರಣೆ

1978ರಲ್ಲಿ ಇಂದಿರಾಗಾಂಧಿ ಪ್ರಚಾರಕ್ಕೆಂದು ಬಾದಾಮಿಗೆ ಬಂದಾಗ ಮುಂಗಡ ಕಾಯ್ದಿರಿಸಿಲ್ಲ ಎಂಬ ಕಾರಣ ನೀಡಿ ಪ್ರವಾಸಿ ಮಂದಿರದಲ್ಲಿ ಗಣ್ಯರಿಗೆ ಮೀಸಲಿಟ್ಟ ಕೊಠಡಿ ನೀಡಲು ನಿರಾಕರಿಸಲಾಗಿತ್ತು. ಕೊನೆಗೆ ಸಾಮಾನ್ಯ ದರ್ಜೆ ಕೊಠಡಿಯಲ್ಲಿಯೇ ಅವರು ಉಳಿದಿದ್ದರು. ಆವರೊಂದಿಗೆ ಮಾರ್ಗದರ್ಶಕರಾಗಿ ಬಂದಿದ್ದ ದೇವರಾಜ ಅರಸು ಸಹೋದರ ಕೆಂಪರಾಜ ಅರಸು ಅಂದು ಕಾರಿನಲ್ಲಿಯೇ ರಾತ್ರಿ ಕಳೆಯಬೇಕಾಯಿತು.ಅಂದು ನಸುಕಿನಲ್ಲಿ 5.30ಕ್ಕೆ ಹೊರಟ ಇಂದಿರಾಗಾಂಧಿ 6.30ಕ್ಕೆ ಗುಳೇದಗುಡ್ಡದಲ್ಲಿ ಸಾರ್ವಜನಿಕ ಸಭೆ ನಡೆಸಿದ್ದರು. ಅಷ್ಟು ಹೊತ್ತಿನಲ್ಲಿಯೇ ಸಾವಿರಾರು ಮಂದಿ ಸೇರಿದ್ದರು ಎಂದು ಪಕ್ಷದ ಹಿರಿಯರು ಸ್ಮರಿಸುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry