ಭಾನುವಾರ, ಡಿಸೆಂಬರ್ 15, 2019
25 °C
ಕೃಷಿ ಭೂಮಿಯಲ್ಲಿ ತಲೆ ಎತ್ತಿರುವ ಬಡಾವಣೆಯಲ್ಲೀಗ ಕುಡಿಯುವ ನೀರಿನ ಕೊರತೆ

ಬೇಸಿಗೆಯಲ್ಲಿ ನೀರು, ಮಳೆಗಾಲದಲ್ಲಿ ಕೆಸರಿನ ಸಮಸ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೇಸಿಗೆಯಲ್ಲಿ ನೀರು, ಮಳೆಗಾಲದಲ್ಲಿ ಕೆಸರಿನ ಸಮಸ್ಯೆ

ಬೆಳಗಾವಿ: ನಗರ ಪಾಲಿಕೆಯ ದಕ್ಷಿಣದ ಕೊನೆಯ ಹಾಗೂ ಖಾನಾಪುರ ಹೆದ್ದಾರಿಗೆ ಹೊಂದಿಕೊಂಡಿರುವ 2ನೇ ವಾರ್ಡ್‌ ಮೂಲಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿದೆ.

ಕೃಷಿ ಹಾಗೂ ಸಣ್ಣ ಕೈಗಾರಿಕೆಗಳು ಈ ವಾರ್ಡ್ ಜನರ ಮುಖ್ಯ ಉದ್ಯೋಗ. ಉಳುಮೆ, ಬೆಳೆ ಪದ್ಧತಿ, ಜಾನುವಾರುಗಳ ಸಾಕಾಣಿಕೆಯಲ್ಲಿ ಅರ್ಧ ಜನ ತೊಡಗಿದ್ದರೆ, ಇನ್ನರ್ಧ ಜನರಿಗೆ ಕೈಗಾರಿಕೆಗಳಲ್ಲಿ ಕೆಲಸ. ನಗರದಲ್ಲಿದ್ದರೂ ಈ ಭಾಗಕ್ಕೆ ನಾಗರಿಕತೆಯ ಸೌಲಭ್ಯಗಳು ಇನ್ನೂ ತಲುಪಿಲ್ಲ. ಹೊಲ ಗದ್ದೆಗಳಿಗೆ ಸಂಚರಿಸುವ ರಸ್ತೆಗಳೂ ಇಲ್ಲಿ ಇಲ್ಲ.

ಕೃಷಿ ಭೂಮಿಯಲ್ಲಿ ಮನೆಗಳು ಮತ್ತು ಬಡಾವಣೆಗಳು ಮೈದಳೆದಿವೆ. ಬಹುತೇಕರು ಸರ್ಕಾರದ ಅಕ್ರಮ ಸಕ್ರಮ ಯೋಜನೆಗಾಗಿ ಕಾದಿದ್ದಾರೆ. ಇಂತಹ ಬಡಾವಣೆಗಳಿಗೆ ನೀರು, ರಸ್ತೆ, ಬೀದಿದೀಪ, ಸರ್ಕಾರಿ ಶಾಲೆಗಳ ಕೊರತೆ ಕಾಡುತ್ತಿದೆ. ಪಕ್ಕದ ಗಲ್ಲಿಗಳಲ್ಲಿ ನಿರಂತರ ನೀರು ಪೂರೈಕೆ ಯೋಜನೆ ಜಾರಿಯಲ್ಲಿದೆ. ಆದರೆ ಈ ವಾರ್ಡ್‌ದಲ್ಲಿ ಕುಡಿಯುವ ನೀರಿಗೂ ಪರದಾಟ ಇದೆ.

ಖಾನಾಪುರ ಹೆದ್ದಾರಿಯಿಂದ ನೂರು ಅಡಿ ಒಳಗೆ ಪ್ರವೇಶಿಸಿದರೆ ಮೊದಲು ಗೋಚರಿಸುವುದೇ ಕಾಲಿಬಾಗ ಕಾಲೊನಿ. ಇಲ್ಲಿಯ ನಾಲ್ಕು ಗಲ್ಲಿಗಳಲ್ಲಿ ಇಂದಿಗೂ ನಾಗರಿಕ ಸೌಲಭ್ಯಗಳಿಲ್ಲ.

ಬ್ರಹ್ಮನಗರ, ಹನುಮಾನವಾಡಿ, ರಾಜಾರಾಮನಗರ, ಮಹಾವೀರ ನಗರಗಳಲ್ಲಿ ಅಲ್ಲಲ್ಲಿ ಒಂದಿಷ್ಟು ರಸ್ತೆಗಳನ್ನು ನಾಲ್ಕೈದು ವರ್ಷಗಳ ಹಿಂದೆ ಮಾಡಿಸಲಾಗಿದೆ. ಬಹುತೇಕ ರಸ್ತೆಗಳು ಗುಂಡಿಗಳಿಂದ ಕೂಡಿವೆ.

ನೂರಡಿ ಕೊಳವೆಬಾವಿ ತೋಡಿಸಿದರೆ ಸಾಕಷ್ಟು ನೀರು ಲಭಿಸುತ್ತದೆ. ಆದರೆ ಪಾಲಿಕೆ ಸದಸ್ಯರು, ಶಾಸಕರು ಈ ಸೌಲಭ್ಯ ಕಲ್ಪಿಸಿಲ್ಲ, ಲಿಖಿತ ಮನವಿ ಕೊಟ್ಟು, ಸ್ಥಳಕ್ಕೆ ಕರೆಯಿಸಿ ಸಮಸ್ಯೆಗಳ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಕಾಲಿಬಾಗ ಕಾಲೊನಿಯ ನಿವಾಸಿ ಗಜಾನನ ಪಾಟೀಲ ಆರೋಪಿಸಿದರು.

ಇಲ್ಲಿಯೇ ಸರ್ಕಾರಿ ಮಹಿಳಾ ಮತ್ತು ಪುರುಷ ಐಟಿಐ ಕಾಲೇಜುಗಳಿರುವ ಪ್ರದೇಶದ ಸುತ್ತ ಚರಂಡಿ ನಿರ್ಮಿಸದೇ ಇರುವುದರಿಂದ ಕಾಲುವೆ ನೀರು ರಸ್ತೆಯಲ್ಲಿಯೇ ಹರಿಯುತ್ತದೆ.

ಪ್ರಗತಿಯಲ್ಲಿರುವ ಕೆಲಸಗಳು: 2ನೇ ವಾರ್ಡ್‌ದಲ್ಲಿ ಈಗಾಗಲೇ 14 ಕೊಳವೆಬಾವಿಗಳನ್ನು ತೋಡಿಸಿ ಅವುಗಳಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಬಹುತೇಕ ಭಾಗದಲ್ಲಿ ನೀರಿನ ಸಮಸ್ಯೆ ಅಷ್ಟೇನು ಗಂಭೀರವಾಗಿಲ್ಲ ಎಂದು ನಗರಸಭೆ ಸದಸ್ಯೆ ರೂಪಾ ನೇಸರಕರ ತಿಳಿಸಿದರು.ಕಾದರವಾಡಿ, ರಾಜಾರಾಮನಗರ, ಉದ್ಯಮಬಾಗ್‌ ಪೊಲೀಸ್‌ ಠಾಣೆ ಮುಂಭಾಗದಲ್ಲಿ ₹ 45 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ನಡೆದಿದೆ.ಬೀದಿ ದೀಪಗಳ ಸಮಸ್ಯೆ ನಿವಾರಿಸಲು ಈಗಾಗಲೇ ₹ 6 ಲಕ್ಷ ವೆಚ್ಚದ ಕಾಮಗಾರಿಯನ್ನು ಗುತ್ತಿಗೆಗೆ ಕೊಡಲಾಗಿದೆ. ಒಂದೆರಡು ದಿನದಲ್ಲಿ ಕೆಲಸ ಆರಂಭವಾಗಲಿದೆ ಎಂದು ಹೇಳಿದರು.

ರೈತರ ಹಾಗೂ ಕಾರ್ಖಾನೆ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆ ಇದ್ದು, ಅದಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು ಎಂದು ಈಗಾಗಲೇ ಡಿಡಿಪಿಐಗೆ ಮನವಿ ಮಾಡಲಾಗಿದೆ. ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲದ್ದರಿಂದ ಸಮಸ್ಯೆಯಾಗಿದೆ.ಸ್ವಂತ ಕಟ್ಟಡ ಆಗುವವರೆಗೆ ಪರ್ಯಾಯ ವ್ಯವಸ್ಥೆಯಡಿ ಅಂಗನವಾಡಿಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ವಾರ್ಡ್‌ ವ್ಯಾಪ್ತಿ

ಉತ್ತರದಲ್ಲಿ ಕಾಂಗ್ರೆಸ್‌ ರಸ್ತೆಯಿಂದ ಎ.ಎಲ್‌. ಸಾವಂತ ಮನೆಯ ಮೂಲಕ ರಾಣಾ ಪ್ರತಾಪ ರಸ್ತೆ, ದಕ್ಷಿಣದಲ್ಲಿ ಎ.ಆರ್‌. ಬಾಂದುರ್ಗೆ ಮನೆ, 1ನೇ ಸ್ಟೇಜ್‌ ಆರ್‌ಸಿ ನಗರ ಪ್ಲಾಟ್‌ ನಂಬರ್‌ 248 ಕೆ. ಹಣಮಂತಪ್ಪ ಬಸ್‌ ರೂಟ್‌ವರೆಗೆ. ಪೂರ್ವದಲ್ಲಿ ಕಾಂಗ್ರೆಸ್‌ ರಸ್ತೆಯಿಂದ ಎ.ಎಲ್‌. ಸಾವಂತ ಮನೆ ಮೂಲಕ 3ನೇ ರೇಲ್ವೆ ಗೇಟ್‌ ಮಾರ್ಗವಾಗಿ 4ನೇ ರೇಲ್ವೆ ಗೇಟ್‌ಗೆ ಸಮಾಂತರವಾಗಿ ಹರಿಶ್ಚಂದ್ರ ವೈಜು ಪಾಟೀಲ ಅವರ ಮನೆತನಕ, ರೇಲ್ವೆ ಹಳಿ, ಮಜಗಾಂವ–ಅನಗೋಳ ರಸ್ತೆವರೆಗೆ. ದಕ್ಷಿಣದಲ್ಲಿ ಹರಿಶ್ಚಂದ್ರ ವೈಜು ಪಾಟೀಲ ಅವರ ಕಟ್ಟಡದಿಂದ ಪೂರ್ತಿ ಗಜಾನನ ನಗರ, ಐಟಿಐ ಕಾಲೇಜು ಆವರಣ, ರಾವುತ ಬಡಾವಣೆ ನಾಲೆವರೆಗೆ, ರೇಣುಕಾ ಹೋಟೆಲ್‌ ಎದುರು. ಪಶ್ಚಿಮದಲ್ಲಿ ಪ್ಲಾಟ್‌ ನಂಬರ್‌ 248ದಿಂದ ಕೆ. ಹಣಮಂತಪ್ಪ ಕಟ್ಟಡ, ಆರ್‌.ಸಿ. ನಗರ 2ನೇ ಹಂತದಿಂದ ರಾಘವೇಂದ್ರ ಕಾಲೊನಿ, ಶ್ರುತಿ ಮೆಟಲ್‌ ಕೈಗಾರಿಕೆ, ಅಶೋಕ ಫೌಂಡ್ರಿ, ಖಾದರವಾಡಿ ರಸ್ತೆ, ಮಹಾವೀರನಗರ ರಾವುತ ಫಾರ್ಮ್‌ ಹೌಸ್‌ ಬಳಿಯ ನಾಲಾವರೆಗೆ.

**

ರಸ್ತೆ ಮತ್ತು ನೀರಿನ ಸೌಲಭ್ಯ ಒದಗಿಸಿಕೊಡಬೇಕು ಎಂದು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮಳೆಗಾಲದಲ್ಲಿ ಸಂಚರಿಸುವುದೇ ಕಷ್ಟವಾಗುತ್ತದೆ. ಇದು ಹೆಸರಿಗೆ ಮಾತ್ರ ನಗರ. ಸೌಲಭ್ಯ ವಂಚಿತ ಹಳ್ಳಿಯಂತಿದೆ – ಅರ್ಜುನ್‌ ಕಾಲಿಬಾಗ, ಕಾಲಿಬಾಗ ಕಾಲೊನಿ ನಿವಾಸಿ

**

ಐದು ವರ್ಷಗಳಿಂದ ಅಭಿವೃದ್ದಿ ಕೆಲಸ ಆಗಿಲ್ಲ. 2006ರಿಂದ ಮಹಾನಗರ ಪಾಲಿಕೆಗೆ ತೆರಿಗೆ ಕಟ್ಟಿದರೂ ಬ್ರಹ್ಮನಗರ, ಹನುಮಾನವಾಡಿ, ಮಹಾವೀರನಗರ, ಕಾಲಿಬಾಗ ಕಾಲೊನಿ ಪ್ರದೇಶಗಳಲ್ಲಿ ಮೂಲಸೌಲಭ್ಯಗಳಾದ ರಸ್ತೆ, ನೀರು, ಬೀದಿದೀಪ ಒದಗಿಸಿಲ್ಲ – ಅಜಿತ್‌ ಚೌಲಗಾ, ಮಜಗಾಂವ ಬಡಾವಣೆ ನಿವಾಸಿ

**

2ನೇ ವಾರ್ಡ್‌ದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿವೆ. ಸಿಸಿ ರಸ್ತೆ ನಿರ್ಮಾಣವೂ ನಡೆದಿದೆ. ನೀರಿನ ಸಮಸ್ಯೆ ನಿವಾರಿಸಲು ಕೊಳವೆಬಾವಿ ಹಾಕಿಸಿಕೊಡಲಾಗುತ್ತಿದೆ. ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಇಲ್ಲ. ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ – ರೂಪಾ ನೇಸರಕರ, ನಗರ ಸೇವಕರು.

**

ಆರ್‌.ಎಲ್‌. ಚಿಕ್ಕಮಠ

ಪ್ರತಿಕ್ರಿಯಿಸಿ (+)