ಬೆಂಬಿಡದ ಕುಟುಂಬ ರಾಜಕಾರಣ

7
ಹನೂರು ಕ್ಷೇತ್ರದಲ್ಲಿ ಎರಡು ಕುಟುಂಬಗಳ ನಡುವೆಯೇ ಜಿದ್ದಾಜಿದ್ದಿನ ಸ್ಪರ್ಧೆ

ಬೆಂಬಿಡದ ಕುಟುಂಬ ರಾಜಕಾರಣ

Published:
Updated:

ಚಾಮರಾಜನಗರ: ಕುಟುಂಬ ರಾಜಕಾರಣಕ್ಕೆ ಹನೂರು ವಿಧಾನಸಭಾ ಕ್ಷೇತ್ರ ಅತಿ ದೊಡ್ಡ ಉದಾಹರಣೆ ಎನಿಸಿದೆ. ಆರಂಭದಿಂದ ಇಲ್ಲಿವರೆಗೆ ಇಬ್ಬರು ಶಾಸಕರನ್ನು ಹೊರತುಪಡಿಸಿದರೆ ಉಳಿದೆಲ್ಲ ಶಾಸಕರು ಎರಡು ಕುಟುಂಬಗಳಿಗೆ ಸಂಬಂಧಪಟ್ಟವರು ಎಂಬುದು ವಿಶೇಷ.

ಆರಂಭದಲ್ಲಿ ಕೊಯಮತ್ತೂರು ಕ್ಷೇತ್ರದೊಂದಿಗೆ ಇದ್ದ ಹನೂರು ನಂತರ ಕೊಳ್ಳೇಗಾಲ ಕ್ಷೇತ್ರಕ್ಕೆ ಸೇರಿತು. ಕ್ಷೇತ್ರ ಪುನರ್ವಿಂಗಡನೆಯಾದ ನಂತರ ನಡೆದ ಚುನಾವಣೆಗಳಲ್ಲಿ ಕುಟುಂಬ ರಾಜಕಾರಣ ಢಾಳಾಗಿ ಗೋಚರಿಸಿದೆ.

1972ರಲ್ಲಿ ಆಯ್ಕೆಯಾದ ಆರ್.ರಾಚೇಗೌಡ ಹಾಗೂ 1983ರಲ್ಲಿ ಶಾಸಕರಾದ ಕೆ.ಪಿ.ಶಾಂತಮೂರ್ತಿ ಅವರನ್ನು ಹೊರತುಪಡಿಸಿದರೆ ಉಳಿದೆಲ್ಲ ಚುನಾವಣೆಗಳಲ್ಲಿ ಎರಡು ಕುಟುಂಬಕ್ಕೆ ಸೇರಿದ ವ್ಯಕ್ತಿಗಳನ್ನೇ ಜನರು ಆಯ್ಕೆ ಮಾಡಿದ್ದಾರೆ. ಆ ಮೂಲಕ ಕ್ಷೇತ್ರದ ರಾಜಕಾರಣ ಎರಡು ಕುಟುಂಬಗಳ ಮೇಲೆಯೇ ಅವಲಂಬಿತವಾಗುವಂತಹ ವಾತಾವರಣ ಸೃಷ್ಟಿಸಲಾಗಿದೆ.

1967ರ ಚುನಾವಣೆಯಲ್ಲಿ ಎಚ್.ನಾಗಪ್ಪ 1,823 ಮತಗಳಿಂದ ಆಯ್ಕೆಯಾಗುವ ಮೂಲಕ ಕುಟುಂಬ ರಾಜಕಾರಣಕ್ಕೆ ನಾಂದಿ ಹಾಡಿದರು. 1978ರ ಚುನಾವಣೆಯಲ್ಲಿ 8,083 ಮತಗಳಿಂದ ಅವರನ್ನು ಜಿ.ರಾಜೂಗೌಡ ಸೋಲಿಸುವ ಮೂಲಕ ಮತ್ತೊಂದು ಕುಟುಂಬ ರಾಜಕಾರಣ ಆರಂಭಿಸಿದರು.

ಅಂದಿನಿಂದ ಇಂದಿನವರೆಗೂ ಕೆ.ಪಿ.ಶಾಂತಮೂರ್ತಿ ಅವರನ್ನು ಹೊರತುಪಡಿಸಿದರೆ ಆಯ್ಕೆಯಾದ ಎಲ್ಲ ಶಾಸಕರೂ ಈ ಎರಡು ಕುಟುಂಬಗಳಿಂದ ಬಂದವರೇ ಆಗಿದ್ದಾರೆ.

ನಾಗಪ್ಪ ಕುಟುಂಬ: ಎಚ್.ನಾಗಪ್ಪ ಅವರ ಕುಟುಂಬ 1967ರಿಂದಲೂ ಕ್ಷೇತ್ರದ ರಾಜಕೀಯದ ಮೇಲೆ ಬಲವಾದ ಹಿಡಿತ ಸಾಧಿಸಿದೆ. ಸ್ವಲ್ಪಕಾಲ ಬದಿಗೆ ಸರಿದಿದ್ದ ಇವರು 1994ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾದರು. ನಂತರ, ವೀರಪ್ಪನ್ ಅಪಹರಣಕ್ಕೆ ಒಳಗಾಗಿ ದೇಶಾದ್ಯಂತ ಸುದ್ದಿಯಾದ ಇವರು, ಕೊನೆಗೆ ವೀರಪ್ಪನ್‌ ಹಾಗೂ ಆತನ ಸಹಚರರಿಂದಲೇ ಮೃತಪಟ್ಟರು. ನಂತರ ಅವರ ಪತ್ನಿ ಪರಿಮಳಾ ನಾಗಪ್ಪ 2004ರಲ್ಲಿ ಶಾಸಕರಾದರು. ಈಗ ಅವರ ಪುತ್ರ ಡಾ.ಪ್ರೀತನ್ ನಾಗಪ್ಪ ಬಿಜೆಪಿ ಟಿಕೆಟ್‌ ಪಡೆಯಲು ಕಸರತ್ತು ನಡೆಸಿದ್ದಾರೆ. ಈಗಾಗಲೇ ಚುನಾವಣಾ ಪ್ರಚಾರ ಆರಂಭಿಸಿದ್ದು, ಸ್ಪರ್ಧಿಸುವುದು ಬಹುತೇಕ ಖಚಿತ ಎನಿಸಿದೆ.

ರಾಜೂಗೌಡ ಕುಟುಂಬ: 1978ರಲ್ಲಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶಿಸಿದ ಜಿ.ರಾಜೂಗೌಡ ಬರೋಬರಿ 4 ಬಾರಿ ಶಾಸಕರಾಗಿ ಆಯ್ಕೆಯಾಗಿ ತಮ್ಮದೇ ಛಾಪನ್ನು ಕ್ಷೇತ್ರದಲ್ಲಿ ಮೂಡಿಸಿದ್ದರು.

1985ರಿಂದ ಈಚೆಗೆ ಹನೂರು ಕ್ಷೇತ್ರ ಎಂದರೆ ಅದು ರಾಜೂಗೌಡ ಮತ್ತು ನಾಗಪ್ಪ ಅವರ ನಡುವಿನ ಜಿದ್ದಾಜಿದ್ದಿನ ಕಣ ಎಂದೇ ಹೆಸರಾಗಿತ್ತು. ಅವರು ನಿಧನ ಹೊಂದಿದ ಬಳಿಕ ಅವರ ಪುತ್ರ ಆರ್.ನರೇಂದ್ರ ಅವರು 2008 ಮತ್ತು 2013ರ ಸತತ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಹ್ಯಾಟ್ರಿಕ್ ಹೊಸ್ತಿಲಲ್ಲಿದ್ದಾರೆ.

ಕೆ.ಎಸ್. ಗಿರೀಶ / ಎಸ್. ಪ್ರತಾಪ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry