7

ದೇವರ ದರ್ಶನಕ್ಕೆಂದು ಹೊರಟವರ ಮನೆಯಲ್ಲೀಗ ಸೂತಕದ ಛಾಯೆ

Published:
Updated:
ದೇವರ ದರ್ಶನಕ್ಕೆಂದು ಹೊರಟವರ ಮನೆಯಲ್ಲೀಗ ಸೂತಕದ ಛಾಯೆ

ಧಾರವಾಡ: ಆ ಮನೆಯಲ್ಲೀಗ ಸೂತಕದ ಛಾಯೆ, ಮುಗಿಲು ಮುಟ್ಟಿದ ಸಂಬಂಧಿಕರ ಆಕ್ರಂದನ, ದೇವರ ದರ್ಶನಕ್ಕೆಂದು ಹೊರಟವರು ಹೆಣವಾಗಿ ಮರಳಿದ್ದಾರೆ. ಇನ್ನು ಬದುಕುಳಿದವರು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ.

ಪುಟ್ಟ ಪುಟ್ಟ ಮಕ್ಕಳೂ ಸೇರಿದಂತೆ ಕುಟುಂಬದವರೊಂದಿಗೆ ಕಾರವಾರ ಬಳಿಯ ಸದಾಶಿವಗಡದ ಷಾ ಕರಾಮುದ್ದೀನ್‌ ದರ್ಗಾದ ದರ್ಶನಕ್ಕೆ ಹೊರಟಿದ್ದ ಧಾರವಾಡ ಕಂಠಿ ಓಣಿಯ ಇಮ್ರಾನ್‌ ಮಕಾನದಾರ ಮತ್ತು ಜೇಲಾನಿ ಕುಟುಂಬದವರಲ್ಲಿ ಮೂವರು ಇಹಲೋಕ ತ್ಯಜಿಸಿದ್ದಾರೆ. ಉಳಿದವರು ಈಗ ಸಾವು ಬದುಕಿನ ಮಧ್ಯೆ ಸೆಣಸಾಡುತ್ತಿದ್ದಾರೆ. ಲೋಕೂರಿನ ಚಾಲಕ ಸಂತೋಷ ತಳವಾರ ಕುಟುಂಬವೂ ಶೋಕಸಾಗರದಲ್ಲಿ ಮುಳುಗಿದೆ.

ಇಮ್ರಾನ್‌ ಮಕಾನದಾರ ಮೆಕ್ಯಾನಿಕ್‌ ಆಗಿದ್ದರು. ಇಮ್ರಾನ್ ಅವರ ಮಾವ ಆರೂನ್‌ ಜೇಲಾನಿ, ಪತ್ನಿ ಹಾಜಿರ ಜೇಲಾನಿ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್‌ಗಳಾಗಿ ಕೆಲಸ ಮಾಡುತ್ತಿದ್ದರು. ಅವರೂ ಈಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಇಬ್ಬರು ಹೆಣ್ಣುಮಕ್ಕಳಿಗಾಗಿ ಇಮ್ರಾನ್ ಬೆಟ್ಟದಷ್ಟು ಕನಸು ಕಂಡಿದ್ದರು. ಇಬ್ಬರಿಗೂ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕೆಂದು ಮರಾಠಾ ಕಾಲೊನಿಯಲ್ಲಿ ಸ್ವಂತದ್ದೊಂದು ಗ್ಯಾರೇಜ್ ಮಾಡಿಕೊಂಡಿದ್ದರು. ಕಷ್ಟದ ಜೀವನದ ನಡುವೆಯೇ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಅವರ ಬದುಕು ಹಸನಾಗಿಡಬೇಕೆಂಬುದು ಇಮ್ರಾನ್ ಕನಸಿನ ಗೋಪುರ ಕಟ್ಟಿದ್ದರು.

ಇಮ್ರಾನ್‌ ಕುಟುಂಬದ ಅಗಲಿಕೆ ಕುರಿತು ದುಃಖದಿಂದಲೇ ಮಾತನಾಡಿದ ಸೋದರ ಸಮೀರ್, ‘ಹಿರಿಯ ಮಗಳಾದ ಅಲ್ಫಿಯಾ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಅಲ್ಫಿಯಾ ಬದುಕುಳಿದರೆ ತಮ್ಮ ಮಗಳಂತೆ ಸಾಕಿ ಸಲಹುತ್ತೇನೆ’ ಎಂದೆನ್ನುವಾಗ ಅವರ ಕಣ್ಣಾಲಿಗಳು ತೇವಗೊಂಡಿದ್ದವು.

ಅಲ್ಲಿ ಯಾರೂ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸಂತೋಷ ತಂದೆ ಹಾಗೂ ಸೋದರ ದುಃಖದ ಮಡುವಿನಲ್ಲಿದ್ದರು. ಮಕಾನದಾರ ಹಾಗೂ ಜೇಲಾನಿ ಕುಟುಂಬದ ಸದಸ್ಯರ ದೊಡ್ಡ ದಂಡೇ ಶವಾಗಾರದ ಎದುರು ಜಮಾಯಿಸಿತ್ತು. ಯಾರು ಎಷ್ಟೇ ಸಮಾಧಾನ ಮಾಡಿದರೂ ಕುಟುಂಬದವರ ರೋದನ ಮಾತ್ರ ನಿಲ್ಲಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry