ಸೈಕಲ್‌ ಮೇಲೆ ಮತದಾನ ಜಾಗೃತಿ

7
ಧಾರವಾಡದ ಪ್ರಮುಖ ಬೀದಿಗಳಲ್ಲಿ ಸೈಕಲ್‌ನಲ್ಲಿ ಸಂಚರಿಸಿದ ಜಿ.ಪಂ. ಸಿಇಒ ಸ್ನೇಹಲ್

ಸೈಕಲ್‌ ಮೇಲೆ ಮತದಾನ ಜಾಗೃತಿ

Published:
Updated:

ಧಾರವಾಡ: ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಸ್ವೀಪ್ ಸಮಿತಿ ಇಲ್ಲಿನ ಸಕ್ಷಮ ಪ್ರತಿಷ್ಠಾನ ಹಾಗೂ ತೇಜಸ್ ಚಾರಿಟಬಲ್ ಹೆಲ್ತ್‌ ಟ್ರಸ್ಟ್‌ ಸಹಯೋಗದಲ್ಲಿ ಭಾನುವಾರ ಸೈಕಲ್ ಜಾಥಾ ಆಯೋಜಿಸಿತ್ತು.

ಯುವಕರು, ಮಕ್ಕಳು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಈ ಸೈಕಲ್ ಜಾಥಾದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್ ರಾಯಮಾನೆ ಸ್ವತಃ ಹೆಲ್ಮೆಟ್ ಧರಿಸಿ ಸೈಕಲ್ ತುಳಿಯುವ ಮೂಲಕ ಗಮನ ಸೆಳೆದರು. ಜಾಥಾದುದ್ದಕ್ಕೂ ಭಾಗವಹಿಸಿದ ಅವರು ಮತದಾನದ ಮಹತ್ವ ಸಾರಿದರು. ಆ ಕುರಿತು ಭಿತ್ತಿ ಪತ್ರವನ್ನು ಸಾರ್ವಜನಿಕರಿಗೆ ಹಂಚಿದರು.

ಕರ್ನಾಟಕ ಕಾಲೇಜಿನ ಮುಖ್ಯದ್ವಾರದ ಬಳಿ ಭಾನುವಾರ ಬೆಳಿಗ್ಗೆ ಜಾಥಾಕ್ಕೆ ಚಾಲನೆ ನೀಡಿದ ಸ್ನೇಹಲ್ ಮಾತನಾಡಿ, ‘ಸಾರ್ವಜನಿಕರಲ್ಲಿ ಸೈಕಲ್ ಬಳಕೆಯ ಅಗತ್ಯದ ಅರಿವು ಮೂಡಿಸುವದು, ಸ್ವಚ್ಛ ಮತ್ತು ಹಸಿರು ಧಾರವಾಡ ನಿರ್ಮಾಣದ ಆಶಯದ ಜತೆಯಲ್ಲಿ ಮತದಾನದ ಜಾಗೃತಿಯನ್ನೂ ಮೂಡಿಸುವುದು ಜಾಥಾದ ಮುಖ್ಯ ಉದ್ದೇಶ’ ಎಂದರು.

‘ಬರಲಿರುವ ಮೇ 12ರಂದು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಹೆಮ್ಮೆಯಿಂದ ಭಾಗವಹಿಸಿ ತಮ್ಮ ಮತ ಚಲಾಯಿಸಬೇಕು. ಈವರೆಗೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳದಿದ್ದರೆ ಅವರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮತದಾರರ ಪಟ್ಟಿಗೆ ಸೇರಲು ಏ. 14ರವರೆಗೂ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಾದ್ಯಂತ ಮತದಾರ ನೋಂದಣಿ ಕಾರ್ಯ ಆಯಾ ಮತಗಟ್ಟೆ ಅಧಿಕಾರಿಯ ವ್ಯಾಪ್ತಿಯಲ್ಲಿ ನಡೆಯುತ್ತಿದೆ’ ಎಂದರು.

‘ಸೈಕಲ್ ಜಾಥಾ ಮೂಲಕ ಸಾರ್ವಜನಿಕರ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಈ ಬಾರಿ ಇವಿಎಂ ಮತಯಂತ್ರ, ಮತಯಂತ್ರಗಳೊಂದಿಗೆ ವಿವಿಪ್ಯಾಟ್‌ ಯಂತ್ರಗಳ ಬಳಕೆಯನ್ನೂ ಸಹ ಮಾಡಲಾಗುತ್ತಿದೆ. ಯುವ ಮತದಾರರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು’ ಎಂದರು.

ಸೈಕಲ್ ಜಾಥಾ ಕೆಸಿಡಿಯಿಂದ ಆರಂಭವಾಗಿ, ಸಪ್ತಾಪುರ, ಶ್ರೀನಗರ ವೃತ್ತ, ಜಯನಗರ ವೃತ್ತ, ದಾಸನಕೊಪ್ಪ ವೃತ್ತ, ದಾಸನಕೊಪ್ಪ ವೃತ್ತ, ಜರ್ಮನ್ ಆಸ್ಪತ್ರೆ, ಉಪನಗರ ಪೊಲೀಸ್ ಠಾಣೆ, ಪಾಲಿಕೆ ಕಚೇರಿ, ಸುಭಾಸ ರಸ್ತೆ, ಗಾಂಧಿ ಚೌಕ, ವಿವೇಕಾನಂದ ವೃತ್ತದ ಮೂಲಕ ಹಾದು ಡಾ. ಮಲ್ಲಿಕಾರ್ಜುನ ಮನಸೂರು ಕಲಭಾವನ ತಲುಪಿತು.

ಕಾರ್ಯಕ್ರಮ ಆಯೋಜಕಿ ಡಾ.ಸಂಧ್ಯಾ ಕುಲಕರ್ಣಿ, ಸಂಚಾರ ಠಾಣೆ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಮುರುಗೇಶ ಚನ್ನಣ್ಣವರ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry