ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಲ್ಲಿ ಪತ್ರ ಬರೆದು ಆಯೋಗಕ್ಕೆ ದೂರು

ಜಿಲ್ಲಾಧಿಕಾರಿ, ಡಿವೈಎಸ್‌ಪಿ ತಾತ್ಕಾಲಿಕ ವರ್ಗಾವಣೆಗೆ ಆಗ್ರಹಿಸಿ ಸಹಿ ಸಂಗ್ರಹ
Last Updated 9 ಏಪ್ರಿಲ್ 2018, 9:05 IST
ಅಕ್ಷರ ಗಾತ್ರ

ಗದಗ: ಗದಗ ವಿಧಾನಸಭಾ ಕ್ಷೇತ್ರದಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಸಲು, ಇಲ್ಲಿನ ಜಿಲ್ಲಾಧಿಕಾರಿ ಮತ್ತು ಡಿವೈಎಸ್‌ಪಿ ಅವರನ್ನು ತಾತ್ಕಾಲಿಕವಾಗಿ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ, ಈ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಅನಿಲ ಮೆಣಸಿನಕಾಯಿ ಅವರ ಅಭಿಮಾನಿ ಬಳಗದ ಸದಸ್ಯರು ಭಾನುವಾರ ಚುನಾವಣಾ ಆಯೋಗಕ್ಕೆ ರಕ್ತದಲ್ಲಿ ಪತ್ರ ಬರೆದು ಆಗ್ರಹಿಸಿದರು.

ಇಲ್ಲಿನ ಭೂಮರೆಡ್ಡಿ ವೃತ್ತದ ಬಳಿ ಇರುವ ಅನಿಲ ಮೆಣಸಿನಕಾಯಿ ಜನಸಂಪರ್ಕ ಕಾರ್ಯಾಲಯದ ಆವರಣದಲ್ಲಿ ಸೇರಿದ ಅವರ ಸ್ನೇಹಿತರ ಬಳಗ, ಶ್ರೀರಾಮುಲು ಅಭಿಮಾನಿ ಬಳಗ ಹಾಗೂ ಗದಗ ಬಿಜೆಪಿ ಘಟಕದ ಕಾರ್ಯಕರ್ತರು, ಮನವಿ ಪತ್ರದಲ್ಲಿ ತಮ್ಮ ರಕ್ತದಿಂದ ಸಹಿ ಮಾಡಿದರು ಬಳಿಕ ಎಲ್ಲ ಪತ್ರಗಳನ್ನು ಸಂಗ್ರಹಿಸಿ, ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ಅಂಚೆ ಮೂಲಕ ರವಾನಿಸಿದರು.

‘ಗದಗ ವಿಧಾನಸಭಾ ಕ್ಷೇತ್ರದಲ್ಲಿ, ಭಯಮುಕ್ತವಾಗಿ ಚುನಾವಣೆ ನಡೆಯಬೇಕು. ಕಾಂಗ್ರೆಸ್‌ ಎಜೆಂಟರಂತೆ ಇಲ್ಲಿನ ಹಿರಿಯ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

‘ಅನಿಲ ಮೆಣಸಿನಕಾಯಿ ಅವರು ಹುಲಕೋಟಿ ಗ್ರಾಮಕ್ಕೆ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ, ಅಲ್ಲಿನ ಕಾಂಗ್ರೆಸ್‌ ಕಾರ್ಯಕರ್ತರು ತಡೆದರು’ ಎಂದು ಅಮರೇಶ ಹಿರೇಮಠ ದೂರಿದರು.

‘ಜಿಮ್ಸ್‌ ಪ್ರಭಾರ ನಿರ್ದೇಶಕ ಡಾ.ಭೂಸರಡ್ಡಿ ಅವರು ಜಿಲ್ಲಾ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನ ಸಿಬ್ಬಂದಿಗೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಬೆಂಬಲಿಸುವಂತೆ ಸೂಚಿಸಿದ್ದಾರೆ. ಇವರನ್ನು ತಕ್ಷಣ ಬೇರೆಡೆ ವರ್ಗಾಯಿಸಬೇಕು’ ಎಂದರು.

‘ಮನವಿಗೆ ಸ್ಪಂದಿಸದಿದ್ದರೆ ಚುನಾವಣಾ ಆಯುಕ್ತರ ಕಾರ್ಯಾಲಯದ ಎದುರು ಅಹೋರಾತ್ರಿ ಧರಣಿ ನಡೆಸಲಾಗುವುದು’ ಎಂದು ರವಿ ಸಿದ್ಲಿಂಗ್ ಹೇಳಿದರು.

ಈಶ್ವರ ಸೋಳಂಕಿ, ವಿಕ್ರಮ್ ಶೇಠ, ರುದ್ರಪ್ಪ ಬನ್ನಿಮರದ, ಸಾದಿಕ್ ಮನಿಯಾರ್, ಪರಶುರಾಮ್ ಕಾಶಪ್ಪನವರ, ಬಸವರಾಜ ಪೂಜಾರ, ವೀರೇಶ ಪುರದ, ನಾಗರಾಜ ಸಿದ್ಲಿಂಗ್, ವಿಠ್ಠಲ ಸಿದ್ಲಿಂಗ್, ವೀರಣ್ಣ ದೇಸಾಯಿ, ಅಶೋಕ ಸಿದ್ಲಿಂಗ್, ಬಸವಣ್ಣೆಯ್ಯ ಹಿರೇಮಠ, ಶರಣಪ್ಪ ಕಮಡೊಳ್ಳಿ, ಕಮಲಾಕ್ಷಿ ಬಳಿಶೆಟ್ಟರ, ಜಯಶ್ರೀ ಅಣ್ಣಿಗೇರಿ, ಆಯಿಷಾ ಜೂಲಕಟ್ಟಿ, ಅಕ್ಕಮ್ಮ ವಸ್ತ್ರದ, ಆಯಿಷಾ ಉಳ್ಳಾಗಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT