ಶುಕ್ರವಾರ, ಡಿಸೆಂಬರ್ 6, 2019
25 °C
ನಗರದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ತಾಪಮಾನ; ತಂಪುಪಾನೀಯಕ್ಕೆ ಭಾರಿ ಬೇಡಿಕೆ

ಬಾಯಾರಿದವರಿಗೆ ನೀರು, ಉಚಿತ ಮಜ್ಜಿಗೆ..!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಯಾರಿದವರಿಗೆ ನೀರು, ಉಚಿತ ಮಜ್ಜಿಗೆ..!

ಗದಗ: ಬೆಳಿಗ್ಗೆ 9ರಿಂದಲೇ ನೆತ್ತಿ ಸುಡುವ ಬಿಸಿಲು, ಬಿಸಿಗಾಳಿ. ಕಳೆದೊಂದು ವಾರದಿಂದ ಸರಾಸರಿ 37 ಡಿಗ್ರಿ ಸೆಲ್ಸಿಯಸ್‌ ದಾಟಿರುವ ಉಷ್ಣಾಂಶ. ಬಿಸಿಲ ಬೇಗೆಗೆ ಬೆಚ್ಚಿದ ಜನತೆ. ಇದು ಮುದ್ರಣಕಾಶಿಯ ಸದ್ಯದ ಸ್ಥಿತಿ. ಬಿಸಿಲ ಬೇಗೆಯ ಜತೆಗೆ ನಗರದಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ.

ಬಿಸಿಲಿಗೆ ಬಾಯಾರಿದವರಿಗೆ ಆಸರೆಯಾಗಲು ನಗರದ ವಿವಿಧೆಡೆ ಅರವಟಿಗೆ ಪ್ರಾರಂಭವಾಗಿವೆ. ಹಳೆ ಡಿ.ಸಿ. ಕಚೇರಿ, ಹಳೆ ಬಸ್‌ ನಿಲ್ದಾಣ, ಮುಳಗುಂದ ನಾಕಾ, ಮಹಾತ್ಮ ಗಾಂಧಿ ವೃತ್ತದ ಬಳಿಯಿರುವ ಸಂಗೊಳ್ಳಿ ರಾಯಣ್ಣ ವೃತ್ತ, ಕೆ.ಸಿ.ರಾಣಿ ರಸ್ತೆ, ಬೆಟಗೇರಿ ಬಸ್‌ ನಿಲ್ದಾಣದ ಬಳಿ ಸೇರಿದಂತೆ ಕೆಲವು ಕಡೆಗಳಲ್ಲಿ ಕೆಲವರು ಅರವಟಿಗೆಗಳನ್ನು ಆರಂಭಿಸಿ, ಸಾರ್ವಜನಿಕರಿಗೆ ಉಚಿತವಾಗಿ ಶುದ್ಧ ಕುಡಿಯುವ ನೀರು ಪೂರೈಸುತ್ತಿದ್ದಾರೆ. ಅನ್ಯ ಕೆಲಸಗಳ ನಿಮಿತ್ತ ನಗರಕ್ಕೆ ಬರುವ ಗ್ರಾಮೀಣ ಪ್ರದೇಶದ ಜನರು ಅರವಟಿಗೆ ನೀರು ಕುಡಿದು ದಣಿವಾರಿಸಿಕೊಳ್ಳುತ್ತಿದ್ದಾರೆ.

‘ನಗರದಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ದೂರದ ಊರಿನಿಂದ ಬರುವವರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಅರವಟಿಗೆ ಆರಂಭಿಸಲಾಗಿದೆ. ದಿನಕ್ಕೆ ನೂರಾರು ಜನರು ಅರವಟಿಗೆ ನೀರು ಕುಡಿದು ದಣಿವಾರಿಸಿಕೊಂಡು ಹೋಗುತ್ತಾರೆ’ ಎಂದು ಗದುಗಿನ ನಿವಾಸಿ ಪಿ.ಕೆ.ಬಲೂಚಿಗಿ, ರವಿಶಂಕರ ಚಿಂಚಲಿ, ಗಂಗಣ್ಣ ಕೋಟಿ ಹೇಳಿದರು.

ತಂಪು ಪಾನೀಯಕ್ಕೆ ಬೇಡಿಕೆ: ನಗರದಲ್ಲಿ ತಂಪು ಪಾನೀಯ ಅಂಗಡಿ ಗಳಲ್ಲಿ ವ್ಯಾಪಾರ ಭರ್ಜರಿಯಾಗಿದೆ. ಎಳನೀರು, ಕಬ್ಬಿನಹಾಲು, ಹಾಗೂ ಹಣ್ಣಿನ ಜ್ಯೂಸ್‌ಗೆ ಬೇಡಿಕೆ ಹೆಚ್ಚಾಗಿದೆ. ತಮಿಳುನಾಡು, ಉತ್ತರ ಪ್ರದೇಶ ಹಾಗೂ ವಿವಿಧ ಕಡೆಗಳಿಂದ ಬಂದಿರುವ ಜ್ಯೂಸ್‌ವಾಲಾಗಳು ನಗರದ ಹಲವು ಕಡೆ ತಳ್ಳುವ ಗಾಡಿಗಳಲ್ಲಿ ಹಣ್ಣಿನ ರಸ ವ್ಯಾಪಾರ ಮಾಡುತ್ತಿದ್ದಾರೆ. ಎಳನೀರಿಗೂ ಭಾರಿ ಡಿಮ್ಯಾಂಡ್‌ ಸೃಷ್ಟಿಯಾಗಿದೆ.ಗದಗ ನಗರದಲ್ಲಿ ಒಂದು ಎಳನೀರಿಗೆ ₹25ರಿಂದ ₹30. ವಿವಿಧ ಹಣ್ಣಿನ ರಸಕ್ಕೆ ₹20–₹30ಕ್ಕೆ ಮಾರಾಟ ಮಾಡಲಾಗುತ್ತಿದೆ.

‘ಈ ಬಾರಿ ಬೇಸಿಗೆಯಲ್ಲಿ ಬೆಳಿಗ್ಗೆಯಿಂದಲೇ ಉರಿ ಬಿಸಿಲು ಕಾಣಿಸಿಕೊಳ್ಳುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಲ ವ್ಯಾಪಾರ ಚೆನ್ನಾಗಿದೆ. ಒಂದು ಗ್ಲಾಸ್‌ ಹಣ್ಣಿನ ರಸಕ್ಕೆ ₹20–₹30 ದರ ನಿಗದಿಪಡಿಸಲಾಗಿದೆ. ಬೇಸಿಗೆ ಮುಗಿದ ಬಳಿಕ ಹಣ್ಣಿನ ರಸಕ್ಕೆ ಬೇಡಿಕೆ ಇರುವುದಿಲ್ಲ’ ಎಂದು ಜ್ಯೂಸ್‌ ವ್ಯಾಪಾರಿ ಮೊಹಮ್ಮದಸಾಬ್ ಹೇಳಿದರು.

ಇಲ್ಲಿದೆ ಮಜ್ಜಿಗೆ ಅರವಟಿಗೆ

ಗದಗ: ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಎಲೆಕ್ಟ್ರಿಕಲ್ಸ್ ಮಳಿಗೆ ಹೊಂದಿರುವ ಎ.ಜಿ.ಮುದಖಾನ್ ಅವರು ಉಚಿತ ಮಜ್ಜಿಗೆ ಅರವಟಿಗೆ ಪ್ರಾರಂಭಿಸಿದ್ದಾರೆ. ಭಾನುವಾರ ಹೊರತುಪಡಿಸಿ, ವಾರದ ಉಳಿದೆಲ್ ದಿನಗಳಲ್ಲಿ ಅವರು ತಮ್ಮ ಅಂಗಡಿ ಎದುರು ಪ್ರತಿನಿತ್ಯ ಮಧ್ಯಾಹ್ನ 12ರಿಂದ 2.30ರವರೆಗೆ ಮಜ್ಜಿಗೆ ವಿತರಿಸುತ್ತಿದ್ದಾರೆ. ಬನ್ನಿ, ಬನ್ನಿ ಮಜ್ಜಿಗೆ ಕುಡಿದು ಹೋಗಿ ಎಂದು ಅವರೇ ಸಾರ್ವಜನಿಕರನ್ನು ಕರೆದು,ಮಜ್ಜಿಗೆ ಕೊಟ್ಟು ಉಪಚರಿಸುತ್ತಾರೆ. ಬಿಸಿಲ ತಾಪದಿಂದ ತತ್ತರಿಸಿದ ಜನತೆ ಮಜ್ಜಿಗೆ ಕುಡಿದು ಮುದಖಾನ್‌ ಅವರಿಗೆ ಧನ್ಯವಾದ ಸಲ್ಲಿಸಿ ಮುಂದಕ್ಕೆ ಹೋಗುವ ದೃಶ್ಯ ಸಾಮಾನ್ಯವಾಗಿದೆ.

‘ಪ್ರತಿನಿತ್ಯ 30 ಲೀಟರ್‌ನಷ್ಟು ಮಜ್ಜಿಗೆ ತಯಾರಿಸುತ್ತೇನೆ. ಅದಕ್ಕೆ ಸ್ವಲ್ಪ ಕೊತ್ತಂಬರಿ, ಮಸಾಲೆ, ಉಪ್ಪು ಸೇರಿಸುತ್ತೇನೆ. ಡೆಂಕದ್ ಅವರು ತಮ್ಮ ಐಸ್‌ಕ್ರೀಂ ಫ್ಯಾಕ್ಟರಿಯಿಂದ ಉಚಿತ ಐಸ್‌ ನೀಡುತ್ತಾರೆ. ಅದನ್ನು ಬೆರಸುತ್ತೇನೆ. ತಂಪಾದ, ಸ್ವಾದಿಷ್ಟ ಮಜ್ಜಿಗೆ ಸವಿಯಲು ಸಿದ್ಧ ಎನ್ನುತ್ತಾರೆ’ ಮುದಖಾನ್.

‘ಕಳೆದ ಎರಡು ವರ್ಷಗಳಿಂದ ಬೇಸಿಗೆಯಲ್ಲಿ ಉಚಿತ ಮಜ್ಜಿಗೆ ವಿತರಿಸುತ್ತಿದ್ದೇನೆ. ಇದು ಜನಸೇವೆ ಮಾತ್ರ. ಇದರ ಹಿಂದೆ ಬೇರೆ ಯಾವುದೇ ಉದ್ದೇಶವಿಲ್ಲ’ ಎಂದೂ ಸ್ಪಷ್ಟಡಿಸುತ್ತಾರೆ ಖಾನ್‌.

**

ನಮ್ಮದು ಹೊಟ್ಟೆ ಪಕ್ಷ. ಉಚಿತ ಮಜ್ಜಿಗೆ ವಿತರಣೆಯ ಹಿಂದೆ ಯಾವುದೇ ರಾಜಕೀಯವಿಲ್ಲ. ಜನರು ನಮಗೆ ಕೆಲಸ ಕೊಟ್ಟು, ಕುಟುಂಬಕ್ಕೆ ಆಸರೆಯಾಗಿದ್ದಾರೆ. ಇದಕ್ಕೆ ಪ್ರತಿಯಾಗಿ ಈ ಅಳಿಲು ಸೇವೆ ಮಾಡುತ್ತೇನೆ - ಎ.ಜಿ.ಮುದಖಾನ್, ಮಜ್ಜಿಗೆ ವಿತರಕ

**

ಹುಚ್ಚೇಶ್ವರ ಅಣ್ಣಿಗೇರಿ

ಪ್ರತಿಕ್ರಿಯಿಸಿ (+)