ವೀರಶೈವ, ಲಿಂಗಾಯತರಿಂದ ಒಟ್ಟಾಗಿ ಜಯಂತಿ ಆಚರಣೆ ನಿರ್ಧಾರ

7
ಬಸವ ಜಯಂತಿ ಸಮನ್ವಯ ಸಮಿತಿ ರಚನೆ

ವೀರಶೈವ, ಲಿಂಗಾಯತರಿಂದ ಒಟ್ಟಾಗಿ ಜಯಂತಿ ಆಚರಣೆ ನಿರ್ಧಾರ

Published:
Updated:

ಕಲಬುರ್ಗಿ: ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಒಟ್ಟಾಗಿ ಬಸವ ಜಯಂತಿ ಆಚರಿಸಲು ನಿರ್ಧರಿಸಿರುವುದರಿಂದ, ಭಾನುವಾರ ಬಸವ ಜಯಂತಿ ಉತ್ಸವ ಸಮಿತಿಯ ಸಮನ್ವಯ ಸಮಿತಿಯನ್ನು ರಚಿಸಲಾಯಿತು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜರುಗಿದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಲಿಂಗಾಯತ ಮಹಾಸಭಾ ಮತ್ತು ವೀರಶೈವ ಮಹಾಸಭಾ ರಚಿಸಿದ್ದ ಬಸವ ಜಯಂತಿ ಉತ್ಸವ ಸಮಿತಿಯ ಪದಾಧಿಕಾರಿಗಳು, ಸಮಾಜದ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸೋಮಣ್ಣ ನಡಕಟ್ಟಿ, ಅರುಣಕುಮಾರ ಪಾಟೀಲ, ರವೀಂದ್ರ ಶಾಬಾದಿ, ಉತ್ಸವ ಸಮಿತಿ ಅಧ್ಯಕ್ಷ ಸುರೇಶ ಪಾಟೀಲ ಜೋಗೂರ, ಮಾರುತಿ ಗೋಖಲೆ, ಮಂಜುರೆಡ್ಡಿ, ಪ್ರಭುಲಿಂಗ ಮಹಾಗಾಂವಕರ್, ಕಲ್ಯಾಣಪ್ಪ ಪಾಟೀಲ ಮಳಖೇಡ, ಆರ್.ಜಿ.ಶೆಟಗಾರ ಮತ್ತು ಶ್ರೀಶೈಲ ಘೂಳಿ ಅವರು ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸುವ ಸಮಿತಿಯಲ್ಲಿ ಕೆಲಸ ನಿರ್ವಹಿಸುವರು.

ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಜಿಲ್ಲಾಡಳಿತವು ಏ.18ರಂದು ನಗರ ಮತ್ತು ಜಿಲ್ಲೆಯಾದ್ಯಂತ ಬಸವ ಜಯಂತಿಯನ್ನು ಸರಳವಾಗಿ ಆಚರಿಸುತ್ತದೆ. ಅಂದು ಬೆಳಿಗ್ಗೆ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ.

ಮಹಾಸಭಾದ ಅಧ್ಯಕ್ಷ ಅರುಣಕುಮಾರ ಪಾಟೀಲ ಮಾತನಾಡಿ, ‘ಪ್ರೊ.ಆರ್.ಕೆ.ಹುಡಗಿ,ಡಾ. ಮೀನಾಕ್ಷಿ ಬಾಳಿ, ಶ್ರೀಶೈಲ ಘೂಳಿ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಿ ಎಲ್ಲ ಹೊಣೆಯನ್ನು ಅವರಿಗೆ ವಹಿಸೋಣ. ಎಲ್ಲರೂ ಅವರಿಗೆ ಕೈಜೋಡಿಸಿ ಕೆಲಸ ಮಾಡೋಣ’ ಎಂದರು.

ಇದಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ವೀರಭದ್ರ ಸಿಂಪಿ, ಎಪಿಎಂಸಿ ಅಧ್ಯಕ್ಷ ಶರಣು ಭೂಸನೂರ, ಬಸವ ಸೇನೆ ಸಂಚಾಲಕ ಸುನೀಲ್ ಹುಡಗಿ, ನೀಲಕಂಠ ಮೂಲಗೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry