ಅಪ್ಪೆಮಿಡಿಗೆ ಭರಪೂರ ಬೇಡಿಕೆ

7
ಸಾಂಪ್ರದಾಯಿಕ ಉಪ್ಪಿನಕಾಯಿ ತಯಾರಿಕೆಗೆ ಉಪಯೋಗ

ಅಪ್ಪೆಮಿಡಿಗೆ ಭರಪೂರ ಬೇಡಿಕೆ

Published:
Updated:

ಸಿದ್ದಾಪುರ: ಈ ಬಾರಿ ತಾಲ್ಲೂಕಿನಲ್ಲಿ ಅಪ್ಪೆಮಿಡಿಯ ಘಮ, ಘಮ ಹೆಚ್ಚಾಗಿದೆ. ಪಟ್ಟಣದ ರಸ್ತೆ ಪಕ್ಕದಲ್ಲಿ ದಿನವೂ ಅಪ್ಪೆಮಿಡಿ ಮಾರಾಟ ಭರದಿಂದ ನಡೆಯುತ್ತಿದೆ. ಮಲೆನಾಡಿನ ಕಾಡುಗಳಲ್ಲಿ ದೊರೆಯುವ ಅಪ್ಪೆಮಿಡಿ, ಸಾಂಪ್ರದಾಯಿಕ ಉಪ್ಪಿನಕಾಯಿ ತಯಾರಿಕೆಗೆ ಉಪಯೋಗವಾಗುತ್ತದೆ. ಅಪ್ಪೆಮಿಡಿ ಮಾವಿನ ತಳಿಯೇ ಆಗಿದ್ದರೂ, ಅದನ್ನು ಮಾವು ಎಂದು ಕರೆಯಲು ಸಾಧ್ಯವಿಲ್ಲ. ಅಪ್ಪೆಮಿಡಿ ಸೋನೆ ಹಾಗೂ ಸುವಾಸನೆ ವಿಶಿಷ್ಟವಾದುದು. ಅದರಿಂದ ತಯಾರಿಸಿದ ಉಪ್ಪಿನಕಾಯಿಯನ್ನು ಎರಡು ವರ್ಷ ಇಟ್ಟರೂ ಕೆಡುವುದಿಲ್ಲ. ಅಪ್ಪೆಮಿಡಿ ಉಪ್ಪಿನಕಾಯಿ ತಯಾರಿಸುವ ಜ್ಞಾನ, ಮಲೆನಾಡಿನ ಮಹಿಳೆಯರಿಗೆ ಅವರ ಹಿರಿಯರಿಂದ ಬಳುವಳಿಯಾಗಿ ಬಂದಿದೆ.

ಉಪ್ಪಿನಕಾಯಿ ತಯಾರಿಕೆಗೆ ಮಲೆನಾಡಿನ ಹೊಳೆ ಪಕ್ಕದ ಮರಗಳ ಅಪ್ಪೆಮಿಡಿಯೇ ಉತ್ತಮ. ಅದರಲ್ಲಿಯೂ ಜೀರಿಗೆ ವಾಸನೆ ಹೊಂದಿದ ಅಪ್ಪೆಮಿಡಿ ಅತ್ಯುತ್ತಮ. ಕಾಡಿನಲ್ಲಿರುವ ಬಹುತೇಕ ಮಾವಿನ ಮರಗಳಲ್ಲಿ ಹಾಗೂ ಅಪ್ಪೆಮರಗಳಲ್ಲಿ ಈ ಬಾರಿ ಹೂವು ತುಂಬಿ ತುಳುಕಿದೆ. ಎಲ್ಲ ಕಡೆ ಮಾವಿನ ಹೂವಿನ ತೇರು ಕಂಡುಬಂದಿದೆ. ಈ ಕಾರಣದಿಂದ ಈಗ ಅಪ್ಪೆಮಿಡಿಗೆ ಬರ ಇಲ್ಲದಂತಾಗಿದೆ. ಆದ್ದರಿಂದ ‘ಅಪ್ಪೆಮಿಡಿ ಬೇಕೆ ?’ ಎಂದು ಮನೆಗೇ ಬಂದು ಕೇಳುವವರು ಕಾಣತೊಡಗಿದ್ದಾರೆ. ಪಟ್ಟಣದಲ್ಲಿಯಂತೂ ವಾರದ ಸಂತೆ (ಬುಧವಾರ) ದಿನದಂದು ಮಾತ್ರ ಕಾಣುತ್ತಿದ್ದ ಅಪ್ಪೆಮಿಡಿ ಮಾರಾಟ, ಈಗ ಪ್ರತಿನಿತ್ಯವೂ ನಡೆಯತೊಡಗಿದೆ.

ಹೊಳೆಯಂಚಿನಲ್ಲಿರುವ ಈ ಅಪ್ಪೆ ಮರಗಳು ಸಹಜವಾಗಿಯೇ ತುಂಬ ಎತ್ತರ ಇರುತ್ತವೆ. ಇಂತಹ ಮರಗಳ ಕೊಂಬೆಗಳ ತುದಿಯಲ್ಲಿ ನೇತಾಡುವ ಅಪ್ಪೆಮಿಡಿಗಳನ್ನು ಕೊಯ್ಯುವುದು ಸುಲಭದ ಕೆಲಸವಂತೂ ಅಲ್ಲ. ಅಪ್ಪೆಮಿಡಿಗಳನ್ನು ತೊಟ್ಟು ಸಹಿತವಾಗಿಯೇ ಕೊಯ್ಯ ಬೇಕಾಗುತ್ತದೆ. ಇಂತಹ ದೈತ್ಯಾಕಾರದ ಮರಗಳನ್ನು ಏರಿ, ಅವುಗಳ ತುದಿಯಲ್ಲಿರುವ ಅಪ್ಪೆ ಮಿಡಿಗಳಿಗೆ ಕೊಂಚವೂ ಪೆಟ್ಟು ಬೀಳದ ಹಾಗೆ ಕೊಯ್ದು, ಚೀಲದಲ್ಲಿ ತುಂಬಿ, ಆ ಚೀಲಕ್ಕೆ ಹಗ್ಗ ಕಟ್ಟಿ ಕೆಳಕ್ಕೆ ಇಳಿಸುವುದು ಕಷ್ಟದ ಕೆಲಸ.

ಅದೂ ಅಲ್ಲದೇ ಅಪ್ಪೆಮಿಡಿಗಳೊಳಗೆ ಓಟೆ ಬೆಳೆದರೆ ಅವುಗಳು ಉಪ್ಪಿನಕಾಯಿ ತಯಾರಿಕೆಗೆ ಬರಲಾರವು. ಆದ್ದರಿಂದ ತುಂಬ ಚಿಕ್ಕದೂ ಅಲ್ಲದ, ಆದರೆ ಪೂರ್ತಿ ಬಲಿಯದ( ಓಟೆ ಬೆಳೆಯದ) ಅಪ್ಪೆಮಿಡಿಗಳನ್ನೆ ಹುಡುಕಬೇಕು.ಹೀಗೆ ಕೊಯ್ದ ಅಪ್ಪೆಮಿಡಿಗಳನ್ನು ಒಂದೆರಡು ದಿನಗಳಲ್ಲಿ ಮಾರದಿದ್ದರೆ ಅವು ಹಾಳಾಗುತ್ತವೆ. ಇಷ್ಟೆಲ್ಲ ತಾಪತ್ರಯ ಇದ್ದರೂ ತಾಲ್ಲೂಕಿನಾದ್ಯಂತ ಅಪ್ಪೆಮಿಡಿ ಕೊಯ್ದು, ಮಾರುವವರು ಸಾಕಷ್ಟು ಜನ ಇದ್ದಾರೆ.

‘ಈ ಅಪ್ಪೆಮಿಡಿ ಎಲ್ಲಿಯದ್ದು ?’ ಎಂದು ಕೇಳಿದರೆ, ‘ಹೊಳೆ ಪಕ್ಕದ್ದು, ಚಂದ್ರಗುತ್ತಿ ಕಡೆಯದ್ದು’ ಎಂಬ ಉತ್ತರ ಮಾರಾಟಗಾರರಿಂದ ಬರುತ್ತದೆ. ‘ ಒಂದೇ ದಿನದಲ್ಲಿ ಇಷ್ಟೆಲ್ಲ ಮಾರುತ್ತೀರಾ ?’ ಎಂಬ ಪ್ರಶ್ನೆಗೆ ‘ನನಗೆ ಪೇಟೆಯಲ್ಲಿ ಎಲ್ಲರ ಪರಿಚಯ ಉಂಟು, ಸಂಜೆಯ ಒಳಗೆ ಎಲ್ಲ ಅಪ್ಪೆಮಿಡಿಗಳನ್ನೂ ಮಾರುತ್ತೇನೆ’ ಎಂಬುದು ಚಂದ್ರಗುತ್ತಿಯ ಹುಚ್ಚಪ್ಪ ಎಂಬುವರ ಉತ್ತರ.

ತಾಲ್ಲೂಕಿನಲ್ಲಿ ಅಪ್ಪೆಮಿಡಿ ಸಾಕಷ್ಟಿದ್ದರೂ ಅದರ ಬೆಲೆ ತೀರಾ ಕಡಿಮೆಯೇನೂ ಇಲ್ಲ. ಸುಮಾರು 100 ಅಪ್ಪೆ ಮಿಡಿಗಳಿಗೆ ₹ 100ರಿಂದ ₹ 150ರವರೆಗೆ ದರ ಇದೆ. ಅದರಲ್ಲಿಯೂ ಜೀರಿಗೆ ವಾಸನೆಯ 100 ಅಪ್ಪೆಮಿಡಿಗಳನ್ನು ₹ 200ರಿಂದ ₹ 300 ರವರೆಗೂ ಮಾರಾಟ ಮಾಡಲಾಗುತ್ತಿದೆ.

ಕಾಡಿನೊಳಗಿನ ಅಪ್ಪೆಮರಗಳನ್ನು ಹೊರತು ಪಡಿಸಿದರೆ, ತಾಲ್ಲೂಕಿನಾದ್ಯಂತ ಹಲವರ ಜಮೀನುಗಳಲ್ಲಿ ಕೂಡ ಅಪ್ಪೆ ಮರಗಳು ಕಾಣಸಿಗುತ್ತವೆ. ಖಾಸಗಿ ಜಮೀನಿಲ್ಲಿರುವ ಈ ಮರಗಳಲ್ಲಿ ಅಪ್ಪೆ ಮಿಡಿಗಳನ್ನು ಕಾಯುವುದು ಕೂಡ ಸವಾಲಿನ ಕೆಲಸವೇ ಆಗಿಬಿಡುತ್ತದೆ. ಈ ಬಗ್ಗೆ ಕೇಳಿದಾಗ, ‘ನನ್ನ ಗದ್ದೆಯಲ್ಲಿರುವ ಅಪ್ಪೆಮರವನ್ನು ಹಗಲು, ರಾತ್ರಿ ಕಾವಲು ಕಾಯ್ದಿದ್ದೇನೆ’ ಎಂದು ರೈತರೊಬ್ಬರು ಕಷ್ಟ ತೋಡಿಕೊಳ್ಳುತ್ತಾರೆ.

ರವೀಂದ್ರ ಭಟ್ ಬಳಗುಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry