ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮಾನ ನಿವಾರಿಸಿದ ವಿ.ವಿ ಪ್ಯಾಟ್‌

ಮತದಾನ ಪ್ರಾತ್ಯಕ್ಷಿಕೆಗೆ ಚಾಲನೆ: ಜಿಲ್ಲಾ ನ್ಯಾಯಾಧೀಶ ವಿ.ಎಸ್.ಧಾರವಾಡಕರ್ ಅಭಿಮತ
Last Updated 9 ಏಪ್ರಿಲ್ 2018, 9:53 IST
ಅಕ್ಷರ ಗಾತ್ರ

ಕಾರವಾರ: ‘ವಿದ್ಯುನ್ಮಾನ ಮತ ಯಂತ್ರದ (ಇವಿಎಂ) ಮೇಲೆ ಜನರಿಗಿದ್ದ ಅನುಮಾನಗಳು ಮತ ಖಾತ್ರಿ ಯಂತ್ರದಿಂದ (ವಿವಿ ಪ್ಯಾಟ್‌) ಇದೀಗ ದೂರಾಗಿವೆ’ ಎಂದು ಜಿಲ್ಲಾ ನ್ಯಾಯಾಧೀಶ ವಿ.ಎಸ್.ಧಾರವಾಡಕರ್ ಹೇಳಿದರು.

ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಇಲ್ಲಿನ ನಗರಸಭೆಯ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಇವಿಎಂ ಹಾಗೂ ವಿವಿ ಪ್ಯಾಟ್‌ ಮೂಲಕ ಮತದಾನದ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಮಾತನಾಡಿದರು.

‘ಜನರಿಗೆ ಎಲ್ಲದರ ಮೇಲೂ ಅನುಮಾನ ಹೆಚ್ಚು. ಮತ ಯಂತ್ರದ ಮೇಲೆಯೂ ಇದ್ದ ಸಂಶಯ ಈಗ ದೂರ ಆಗಿದೆ. ಮತದಾನದ ಹಕ್ಕನ್ನು ಹೊಂದಿರುವ ಪ್ರತಿಯೊಬ್ಬರು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಹಕರಿಸಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಲ್.ಚಂದ್ರಶೇಖರ ನಾಯಕ ಮಾತನಾಡಿ, ‘ವಿಧಾನಸಭೆ ಚುನಾವಣೆಯ  ಹಿನ್ನೆಲೆ
ಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ (ಸ್ವೀಪ್) ಕಾರ್ಯಕ್ರಮದ ಅಡಿ ಇದನ್ನು ಹಮ್ಮಿಕೊಳ್ಳಲಾಗುತ್ತಿದೆ. ಆ ಮೂಲಕ ಸಾರ್ವಜನಿಕರಲ್ಲಿ ಮತದಾನದ ಜಾಗೃತಿಯನ್ನೂ ಮೂಡಿಸಲಾಗುತ್ತದೆ. ಇವಿಎಂ ಮತ್ತು ವಿ.ವಿ ಪ್ಯಾಟ್‌ಗಳನ್ನು ಈಗಾಗಲೇ ಹಲವು ಬಾರಿ ತಪಾಸಣೆಗೆ ಒಳಪಡಿಸಲಾಗಿದೆ’ ಎಂದರು.

‘ಇವಿಎಂನಲ್ಲಿ ಹಾಕಿದ ಮತವನ್ನು ಖಾತ್ರಿ ಪಡಿಸುವ ಯಂತ್ರವೇ ವಿವಿ ಪ್ಯಾಟ್ ಆಗಿದೆ. ಮತದಾನದ ನಂತರ ಯಾರಿಗೆ ಮತ ಚಲಾಯಿಸಲಾಗಿದೆ ಎನ್ನುವುದನ್ನು ಮತದಾರ ಈ ಯಂತ್ರದ ಮೂಲಕ ಖಾತ್ರಿ ಪಡಿಸಿಕೊಳ್ಳಬಹುದು. ಮತಪತ್ರವು ಏಳು ಸೆಕೆಂಡ್‌ವರೆಗೆ ಈ ಯಂತ್ರದಲ್ಲಿ ಪ್ರದರ್ಶನಗೊಳ್ಳುತ್ತದೆ. ಬಳಿಕ ಅದು ವಿ.ವಿ ಪ್ಯಾಟ್‌ ಪೆಟ್ಟಿಗೆಯಲ್ಲಿ ತುಂಡರಿಸಿಕೊಂಡು ಬೀಳುತ್ತದೆ’ ಎಂದು ಮಾಹಿತಿ ನೀಡಿದರು.

ಪ್ರಾತ್ಯಕ್ಷಿಕೆ:  ಭಾನುವಾರದ ಸಂತೆಗೆಂದು ಬಂದಿದ್ದ ಜನರಿಗೆ ಸಿಬ್ಬಂದಿ ಮತ ಯಂತ್ರಗಳ ಪ್ರಾತ್ಯಕ್ಷಿಕೆ ನೀಡಿದರು. ಜತೆಗೆ ರವೀಂದ್ರನಾಥ ಟ್ಯಾಗೋರ್ ಕಡಲತೀರದ ಫುಡ್ ಕೋರ್ಟ್ ಬಳಿ ಹಾಗೂ ಮಹಿಳಾ ಠಾಣೆಯಲ್ಲೂ  ಪ್ರಾತ್ಯಕ್ಷಿಕೆಯನ್ನು ಸಾರ್ವಜನಿಕರು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಉಪವಿಭಾಗಾಧಿಕಾರಿ ಅಭಿಜಿನ್ ಬಿ., ಮೋಹನರಾಜು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

**

ಮೇ 12ರಂದು ತಪ್ಪದೇ ಎಲ್ಲರೂ ಮತದಾನ ಮಾಡಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರ ಹಾಗೂ ಮತದಾನಕ್ಕೆ ಗೌರವ ಇದೆ  – ವಿ.ಎಸ್.ಧಾರವಾಡಕರ್,
ಜಿಲ್ಲಾ ನ್ಯಾಯಾಧೀಶ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT