ಹುಲಿ ಸೆರೆ; ಕಾರ್ಯಾಚರಣೆ ಮುಂದೂಡಿಕೆ

7
ಕೊಟ್ಟಗೇರಿ: ನಿತ್ಯವೂ ಸ್ಥಳ ಬದಲಾಯಿಸುತ್ತಿರುವ ವ್ಯಾಘ್ರ; ಐದಾರು ತಿಂಗಳಿಂದ ಜಾನುವಾರುಗಳ ಮೇಲೆ ದಾಳಿ

ಹುಲಿ ಸೆರೆ; ಕಾರ್ಯಾಚರಣೆ ಮುಂದೂಡಿಕೆ

Published:
Updated:

ಗೋಣಿಕೊಪ್ಪಲು: ‘ಸುಳಿವು ದೊರೆತ ಸ್ಥಳದಿಂದ ಹುಲಿ ಬೇರೆಡೆಗೆ ಸಾಗಿರುವ ಶಂಕೆಯಿದೆ. ಹೀಗಾಗಿ, ಹುಲಿ ಸೆರೆ ಕಾರ್ಯಾಚರಣೆಯನ್ನು ಮುಂದೂಡಲಾಗಿದೆ’ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಬಾಳೆಲೆ ಸಮೀಪದ ಕೊಟ್ಟಗೇರಿ ವ್ಯಾಪ್ತಿಯ ಕಾಫಿ ತೋಟದಲ್ಲಿ ಹಲವು ದಿನಗಳಿಂದ ಸುಳಿದಾಡುತ್ತಿದ್ದ ಹುಲಿಯ ಜಾಡು ಹಿಡಿದು ಶನಿವಾರ ನಸುಕಿನಲ್ಲಿಯೇ ಸೆರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ, ಅದು ಅಲ್ಲಿಂದಲೂ ತಪ್ಪಿಸಿಕೊಂಡು ಬೇರೆ ಕಡೆಗೆ ಹೊರಟು ಹೋಗಿತ್ತು. ಅರಣ್ಯ ಸಿಬ್ಬಂದಿ ಹಾಗೂ ತಜ್ಞರು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದೊರೆತ ಸುಳಿವಿನ ಮೇರೆಗೆ ನಿಗದಿತ ಸ್ಥಳದಿಂದ ಶನಿವಾರ ಕಾರ್ಯಾಚರಣೆ ಕೈಗೊಂಡಿದ್ದರು. 40 ಮಂದಿಯ ತಂಡ ಸುಮಾರು 5 ಗಂಟೆ ತೋಟವನ್ನೆಲ್ಲ ಜಾಲಾಡಿದರೂ ಹುಲಿ ಸುಳಿವು ಲಭಿಸಲಿಲ್ಲ.

ಇದರ ಬೆನ್ನಲ್ಲೆ ಕಾರ್ಯಾಚರಣೆ ನಡೆದ ಸ್ಥಳದಿಂದ 5 ಕಿ.ಮೀ ದೂರದ ಬೆಕ್ಕೆಸೊಡ್ಲೂರು ಗ್ರಾಮದಲ್ಲಿ ಹುಲಿ ದಾಳಿ ನಡೆಸಿ ಕರುವೊಂದನ್ನು ಕೊಂದು ಹಾಕಿತ್ತು. ಹೀಗಾಗಿ, ಹುಲಿ ಜಾಗ ಖಾಲಿ ಮಾಡಿರುವುದು ಖಚಿತವಾಗಿ ಕಾರ್ಯಾಚರಣೆಯನ್ನು ಶನಿವಾರ ಬೆಳಿಗ್ಗೆ 11 ಗಂಟೆಯ ಬಳಿಕ ಸ್ಥಗಿತ ಗೊಳಿಸಲು ತೀರ್ಮಾನಿಸಲಾಯಿತು.

ಬೆಕ್ಕೆಸೊಡ್ಲೂರು ಭಾಗದಲ್ಲಿಯೂ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿ ಬೋನಿಟ್ಟು ಅದರೊಳಗೆ ಸತ್ತ ಕರುವಿನ ಮಾಂಸ ಇಡಲಾಗಿದೆ. ಆದರೆ ಹುಲಿ ಶನಿವಾರ ರಾತ್ರಿ ಅತ್ತ ಸುಳಿದಿಲ್ಲ. ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ಕೊಟ್ಟಗೇರಿ ವ್ಯಾಪ್ತಿಯ ಕಾಫಿ ತೋಟದಲ್ಲಿ 19 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಐದಾರು ತಿಂಗಳಿನಿಂದ ನಿರಂತರವಾಗಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದರೂ ಸೆರೆಗೆ ಮಾತ್ರ ಸಿಗುತ್ತಿಲ್ಲ. ಎಲ್ಲೆಲ್ಲಿ ದಾಳಿ ನಡೆಸುತ್ತಿದೆಯೋ ಅಲ್ಲೆಲ್ಲ ಅರಣ್ಯಾಧಿಕಾರಿಗಳು ಬೋನಿಟ್ಟು ಕ್ಯಾಮೆರಾ ಅಳವಡಿಸಿ ಸೆರೆಗೆ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಚಾಣಾಕ್ಷ ಹುಲಿ ಒಂದೆಡೆ ನಿಲ್ಲದೆ ಪ್ರತಿದಿನವೂ ತನ್ನ ವ್ಯಾಪ್ತಿ ಬದಲಾಯಿಸುತ್ತಿದೆ. ಜಾನುವಾರುಗಳನ್ನು ಕಳೆದುಕೊಂಡ ರೈತರು ಹುಲಿಸೆರೆಗೆ ಒತ್ತಾಯಿಸಿ ಅರಣ್ಯಾಧಿಕಾರಿಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

‘ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿರುವ ಹುಲಿ ಅವುಗಳ ಮಾಂಸ ತಿನ್ನುತ್ತಿಲ್ಲ. ಸಾಮಾನ್ಯವಾಗಿ ಹುಲಿ ಜಾನುವಾರುಗಳ ಕುತ್ತಿಗೆ ಕಚ್ಚಿ ಸಾಯಿಸುತ್ತವೆ. ಈ ಹುಲಿ ಹಾಗೆ ಮಾಡುತ್ತಿಲ್ಲ. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಕಂಡು ಬಂದಿರುವ ಪ್ರಕಾರ ಅಂದಾಜು 6ರಿಂದ 8 ವರ್ಷ ಪ್ರಾಯದ ಕಟ್ಟುಮಸ್ತಾದ ಗಂಡು ಹುಲಿಯಾಗಿದೆ. ಅದು ಮಾಂಸ ತಿನ್ನದಿರುವುದನ್ನು ನೋಡಿದರೆ ಅದರ ಹಲ್ಲಿನಲ್ಲಿ ಏನಾದರೂ ಸಮಸ್ಯೆ ಇರಬಹುದೇ ಎಂಬ ಸಂಶಯ ಕಾಡುತ್ತಿದೆ. ಹುಲಿ ಚಲನೆ ಇರುವುದೇ ರಾತ್ರಿ ವೇಳೆ. ಹೀಗಾಗಿ, ಕಾರ್ಯಾಚರಣೆಗೂ ತೊಂದರೆಯಾಗಿದೆ’ ಎಂದು ಪೊನ್ನಂಪೇಟೆ ಆರ್‌ಎಪ್‌ಒ ಗಂಗಾಧರ್ ಪತ್ರಿಕೆಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry