ಏರಿದ ತಾಪಮಾನ, ದೂಳಿನ ಪ್ರಮಾಣ

ಮಂಗಳವಾರ, ಮಾರ್ಚ್ 26, 2019
33 °C
ತಂಪು ಪಾನೀಯಗಳು, ಕಬ್ಬಿನ ಹಾಲಿಗೆ ಹೆಚ್ಚಿದ ಬೇಡಿಕೆ: ಉಸಿರಾಟ ಸಮಸ್ಯೆ

ಏರಿದ ತಾಪಮಾನ, ದೂಳಿನ ಪ್ರಮಾಣ

Published:
Updated:
ಏರಿದ ತಾಪಮಾನ, ದೂಳಿನ ಪ್ರಮಾಣ

ಕೊಪ್ಪಳ: ನಗರದಲ್ಲಿ ಬೇಸಿಗೆಯ ಕಾವು ಏರಿದೆ. ಉರಿ ಬಿಸಿಲಿನ ಜತೆಗೆ ದೂಳಿನ ಪ್ರಮಾಣವೂ ಪ್ರತಿದಿನ ಹೆಚ್ಚುತ್ತಿದೆ. ರಸ್ತೆ ಕಾಮಗಾರಿ ನಡೆದಿರುವುದು, ವಾಹನಗಳ ಓಡಾಟ ಇತ್ಯಾದಿ ದೂಳು ಹೆಚ್ಚಾಗಲು ಕಾರಣ.

ಮಾರ್ಚ್‌ ಅಂತ್ಯದಲ್ಲಿ ಮಳೆ ಸುರಿದಿರುವುದು, ಜಿಲ್ಲೆಯ ಹಲವೆಡೆ ಅಲ್ಪ ಪ್ರಮಾಣದ ಮಳೆಯಾಗಿರುವುದು, ಅಕ್ಕಪಕ್ಕದ ಜಿಲ್ಲೆಗಳಲ್ಲೂ ಮಳೆಯ ಸಿಂಚನ ಆಗಿರುವುದರಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ತಾಪಮಾನ ಕೊಂಚ ನಿಯಂತ್ರಣದಲ್ಲಿದೆ. 39ರಿಂದ 40 ಡಿಗ್ರಿವರೆಗೆ ಏರುತ್ತಿದ್ದ ತಾಪಮಾನ ಈ ಬಾರಿ 36 ಡಿಗ್ರಿ ಸೆಲ್ಷಿಯಸ್‌ನಷ್ಟು ಇದೆ. ಹೀಗಾಗಿ ಬಿಸಿಲಿನ ತೀವ್ರತೆ ಸಹಿಸಿಕೊಳ್ಳುವ ಮಟ್ಟದಲ್ಲಿ ಇದೆ ಎನ್ನುತ್ತಾರೆ ನಾಗರಿಕರು.

ನಗರದಲ್ಲಿ ನೀರು ಪೂರೈಕೆ ಸಂಬಂಧಿಸಿದಂತೆ ಗಂಭೀರ ಸಮಸ್ಯೆಗಳು ಕಂಡುಬಂದಿಲ್ಲ. ಶುದ್ಧೀಕೃತ ನೀರಿಗೆ ಬೇಡಿಕೆ ಹೆಚ್ಚಿದೆ. ಶುದ್ಧೀಕರಣ ಘಟಕಗಳು ಅವಿರತವಾಗಿ ಕೆಲಸ ಮಾಡುತ್ತಿವೆ. ಇದೇ ವೇಳೆ ಬಾಟಲಿ ನೀರಿಗೂ ಬೇಡಿಕೆ ಹೆಚ್ಚಿದೆ.

ನಗರದ ಮುಖ್ಯರಸ್ತೆ, ಜವಾಹರ ರಸ್ತೆ, ಸಾರ್ವಜನಿಕ ಮೈದಾನ ಪ್ರದೇಶಗಳಲ್ಲಿ ಕೆಲವು ಸಂಘಟನೆಯವರು ಮಣ್ಣಿನ ಗಡಿಗೆಗಳಲ್ಲಿ ನೀರಿಟ್ಟು ಜನರ ದಾಹ ಇಂಗಿಸಲು ನೆರವಾಗಿದ್ದಾರೆ. ಕಲ್ಲಂಗಡಿ, ಅನನಾಸು ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ಸಹಜವಾಗಿ ದರವೂ ಅಲ್ಪ ಪ್ರಮಾಣದಲ್ಲಿ ಏರಿದೆ. ಕಬ್ಬಿನ ಹಾಲು, ಮಜ್ಜಿಗೆ ಮಾರಾಟವೂ ಏರಿಕೆ ಕಂಡಿದೆ. ಹಲವರಿಗೆ ಈ ಬೇಸಿಗೆ ಬದುಕು ಕಟ್ಟಿಕೊಟ್ಟಿದೆ.

ದೂಳಿನ ಕಾರಣಕ್ಕೆ ಕೆಲವರಿಗೆ ಉಸಿರಾಟದ ಸಮಸ್ಯೆ, ಕಣ್ಣುರಿ, ತಲೆನೋವಿನ ಸಮಸ್ಯೆಗಳು ಕಾಣಿಸಿಕೊಂಡಿವೆ ಎನ್ನುತ್ತಾರೆ ನಗರದ ವಿವಿಧ ವೈದ್ಯರು. ಆದರೆ, ಗಂಭೀರ ಸಮಸ್ಯೆಗಳು ಇದುವರೆಗೆ ವರದಿಯಾಗಿಲ್ಲ. ತಾಪಮಾನ ಹೆಚ್ಚು ಇರುವುದರಿಂದ ಸಹಜವಾಗಿ ಹೆಚ್ಚು ನೀರು ಕುಡಿಯಬೇಕು. ದೇಹದಲ್ಲಿ ಹೆಚ್ಚು ನೀರಿನ ಅಂಶ ಕಾಪಾಡಿಕೊಳ್ಳಬೇಕು ಎಂದು ವೈದ್ಯರು ಸಲಹೆ ಮಾಡುತ್ತಾರೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಈಜುವವರ ಸಂಖ್ಯೆ ಹೆಚ್ಚಿದೆ. ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಈಜು ಪ್ರಯೋಜನಕಾರಿ ಎನ್ನುತ್ತಾರೆ ಯುವಕರು. ಹಲವರು ತುಂಗಭದ್ರಾ ಹಿನ್ನೀರು ಪ್ರದೇಶದತ್ತ ಮುಖಮಾಡಿದ್ದೂ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry