‘ಸಿದ್ಧಾಂತ ಸಾಹಿತ್ಯ ರೂಪಿಸುವುದಿಲ್ಲ’

7
ಕೊಪ್ಪಳ: ಸಂಗಾತ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯ ಸಂವಾದ ಕಾರ್ಯಕ್ರಮ

‘ಸಿದ್ಧಾಂತ ಸಾಹಿತ್ಯ ರೂಪಿಸುವುದಿಲ್ಲ’

Published:
Updated:

ಕೊಪ್ಪಳ: ‘ಸಿದ್ಧಾಂತಗಳು ಸಾಹಿತ್ಯವನ್ನು ರೂಪಿಸುವುದಿಲ್ಲ. ಸಿದ್ಧಾಂತಕ್ಕಿಂತಲೂ ಮಹತ್ವವಾದ ಒಂದು ಶಕ್ತಿ ಇದೆ. ಅದು ಜೀವನ ಹಾಗೂ ಸಾಹಿತ್ಯ ಎರಡನ್ನೂ ರೂಪಿಸುತ್ತದೆ’ ಎಂದು ಹಿರಿಯ ಸಾಹಿತಿ ಎ.ಎಂ.ಮದರಿ ಹೇಳಿದರು.

ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಸಂಗಾತ ತ್ರೈಮಾಸಿಕ ಸಾಹಿತ್ಯ ಪತ್ರಿಕೆಯ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ವಾಂಸರು, ಬರಹಗಾರರಿಗೆ ಪ್ರಶಸ್ತಿ ಬಂದ ತಕ್ಷಣ ಅವರ ವ್ಯಕ್ತಿತ್ವ ಬದಲಾಗುತ್ತದೆ. ಬೇರೆಯವರು ಯಾವುದೇ ಪ್ರಶಸ್ತಿ ಪಡೆದಿರಲಿ ತನಗಿಂತ ಶ್ರೇಷ್ಠರಲ್ಲ ಎಂದುಕೊಳ್ಳುತ್ತಾರೆ. ಮನುಷ್ಯ ಮನುಷ್ಯನನ್ನು ಪ್ರೀತಿಸುವುದಿಲ್ಲ. ಮನುಷ್ಯತ್ವವನ್ನು ಮರೆಯುತ್ತಾರೆ. ಹಾಗಾಗಿ ಮನುಷ್ಯತ್ವವನ್ನು ರೂಪಿಸುವ ಕೃತಿ ಶ್ರೇಷ್ಠವಾದದ್ದು’ ಎಂದರು.

‘ಜಾತ್ಯತೀತರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಈವರೆಗೆ ನಾನು ಜಾತ್ಯತೀತವಾದಿಗಳನ್ನು ನೋಡಿಲ್ಲ. ಜಾತಿ ಅಭಿಮಾನ ಕಡಿಮೆ ಇರಬಹುದು. ಕೆಲವರಲ್ಲಿ ಮಾತ್ರ ಜಾತ್ಯತೀತ ಭಾವನೆ ಹುಟ್ಟುತ್ತದೆ. ಹಾಗಾಗಿ ಜಾತಿ ಮತ್ತು ಪ್ರಾದೇಶಿಕ ಅಭಿಮಾನ ಎಲ್ಲರಲ್ಲಿಯೂ ಇರುತ್ತದೆ’ ಎಂದರು.

‘ಇಂದಿನ ಯುವ ಕವಿಗಳು ಹಳೆಯ ಸಾಹಿತ್ಯವನ್ನು ಅಲ್ಲಗಳೆದಿಲ್ಲ. ಹಳೆ ಸಾಹಿತ್ಯ ಮುಂದುವರಿಸಿದ್ದಾರೆ. ಮೌಲ್ಯಯುತವಾದ ಲೇಖನಗಳನ್ನು ಪತ್ರಿಕೆ ಒಳಗೊಂಡಿದೆ. ಪತ್ರಿಕೆ ಸಾಹಿತ್ಯದ ವಿಚಾರದಲ್ಲಿ ಬಲಶಾಲಿಯಾಗಿದೆ. ಅದು ಆರ್ಥಿಕವಾಗಿ ಸಬಲವಾಗಬೇಕು’ ಎಂದರು.

ಯುವ ಬರಹಗಾರ ಮಹೇಶ ಬಳ್ಳಾರಿ ಮಾತನಾಡಿ, ‘ಪತ್ರಿಕೆ ಬದ್ಧತೆ ಮತ್ತು ನಿಲುವುಗಳನ್ನು ಆಧರಿಸಿರುತ್ತದೆ. ಇದರಿಂದ ಪತ್ರಿಕೆ ಯಶಸ್ಸು ಸಾಧಿಸಲು ಸಾಧ್ಯ. ಸುದ್ದಿ ಪತ್ರಿಕೆಗಳಿಗೆ ಹೋಲಿಸಿದಾಗ ಇವು ಅದ್ಭುತವಾದ ವರ್ಗವನ್ನು ಹುಟ್ಟು ಹಾಕುತ್ತವೆ’ ಎಂದರು.

‘ಹಲವು ಸಾಹಿತ್ಯಿಕ ಪತ್ರಿಕೆಗಳಲ್ಲಿ ಸ್ವಜನ ಪಕ್ಷಪಾತ ಇದೆ. ಅಂತಹ ಅಪವಾದಗಳಿಂದ ಪತ್ರಿಕೆ ಮುಕ್ತವಾಗಬೇಕು. ಸಂಗಾತ ಪತ್ರಿಕೆ ಹೊಸ ಸೈದ್ಧಾಂತಿಕತೆ ಹುಟ್ಟುಹಾಕುತ್ತದೆ. ಶ್ರಮ ಸಂಸ್ಕೃತಿಯ ಇಕ್ಕಟ್ಟು, ಬಿಕ್ಕಟ್ಟುಗಳನ್ನು ತಿಳಿಸುತ್ತದೆ. ಹೋರಾಟದ ವಿವಿಧ ಮಜಲುಗಳನ್ನು ವ್ಯಕ್ತಪಡಿಸುತ್ತದೆ. ಜಾಗತೀಕರಣದ ಬಗ್ಗೆ ಅರಿವು ಮೂಡಿಸುತ್ತದೆ. ಬೌದ್ಧಿಕ ಚಳವಳಿಯ ಆಯಾಮಗಳನ್ನು ಹುಟ್ಟುಹಾಕುತ್ತದೆ. ಅಂತರಂಗದ ಧ್ವನಿಯಾಗಿ ಗಂಭೀರ ಚಿಂತನೆಗೆ ದಾರಿಯಾಗುತ್ತದೆ. ಪ್ರತಿಭೆ ಮತ್ತು ಭಿನ್ನತೆಯನ್ನು ಪತ್ರಿಕೆ ಹೊಂದಿಕೊಂಡಿದೆ’ ಎಂದರು.

ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ದರು.ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ, ಸಾಹಿತಿಗಳಾದ ಎಚ್‌.ಎಸ್‌.ಪಾಟೀಲ, ಶಿವಲೀಲಾ ಮಲ್ಲಿಕಾರ್ಜುನಪ್ಪ, ಸಹಾಯಕ ಪ್ರಾಧ್ಯಾಪಕ ಶಂಕರಯ್ಯ ಅಬ್ಬಿಗೇರಿಮಠ, ಪತ್ರಿಕೆ ಸಂಪಾದಕ ಟಿ.ಎಸ್‌.ಗೊರವರ, ಕಳಕೇಶ ಗುಡ್ಲಾನೂರು ಇದ್ದರು.

**

ಸಾಹಿತ್ಯ ಪತ್ರಿಕೆಗಳು ಸಾಹಿತ್ಯದ ಜತೆಗೆ ಜನರನ್ನು ಎಚ್ಚರಿಸುತ್ತಾ ಬಂದಿವೆ. ಕೊಪ್ಪಳ ಸಾಂಸ್ಕೃತಿಕ ನಗರವಾಗಿ ಬೆಳೆಯುತ್ತಿದೆ. ಯುವ ಕವಿಗಳು ಕ್ರಿಯಾಶೀಲರಾಗಿದ್ದಾರೆ – ಎಚ್‌.ಎಸ್‌.ಪಾಟೀಲ,ಸಾಹಿತಿ.

**

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry