7
ನೀತಿ ಇಲ್ಲದ ರಾಜಕಾರಣ; ಮಧು ಬಂಗಾರಪ್ಪ ಆರೋಪ

ಮಹದಾಯಿ ವಿವಾದ ಬಗೆಹರಿಸಿಲ್ಲ

Published:
Updated:

ತುಮಕೂರು: ‘ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಹದಾಯಿ ನದಿ ನೀರಿನ ವಿವಾದ ಬಗೆಹರಿಸುವ ಪ್ರಯತ್ನ ಈವರೆಗೂ ಮಾಡಿಲ್ಲ. ನೀತಿ ಇಲ್ಲದ, ಅಭಿವೃದ್ಧಿ ದೃಷ್ಟಿಕೋನವಿಲ್ಲದ ರಾಜಕಾರಣ ಅವರದು’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಟೀಕಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ಮೋದಿ, ಅಮಿತ್ ಶಾ, ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಿದಾಗ ವೇದಿಕೆಗಳಲ್ಲಿ ಕನ್ನಡದಲ್ಲಿ ಒಂದೆರಡು ಮಾತನಾಡಿ ಚಪ್ಪಾಳೆ ಗಿಟ್ಟಿಸುತ್ತಾರೆ. ಕಿತ್ತೂರು ಚನ್ನಮ್ಮನ ನಾಡು ಎಂದು ಉತ್ತರ ಕರ್ನಾಟಕದಲ್ಲಿ ಹೊಗಳುತ್ತಾರೆ. ಆದರೆ, ಅಲ್ಲಿ ಜನರು ನೀರಿಗಾಗಿ ಪಡುವ ಕಷ್ಟ ಪರಿಹರಿಸುವ ಪ್ರಯತ್ನ ಮಾಡಿಲ್ಲ. ಮಹದಾಯಿ ವಿವಾದ ಬಗೆಹರಿಸುವ ಪ್ರಯತ್ನ ಈವರೆಗೂ ಮಾಡಿಲ್ಲ’ ಎಂದು ಆರೋಪಿಸಿದರು.

‘ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ಈ ಬಾರಿ ರಾಜ್ಯದ ಜನರು ಬೆಂಬಲಿಸಬಾರದು. ಈಗಾಗಲೇ ರಾಜ್ಯದ ಅನೇಕ ಕಡೆ ಪ್ರವಾಸ ಕೈಗೊಂಡಾದ ಜನರು ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಪ್ರಾದೇಶಿಕ ಪಕ್ಷ ಜೆಡಿಎಸ್‌ ಗೆ ಬೆಂಬಲಿಸಿದರೆ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ರಚನೆಯಾಗುತ್ತದೆ. ದೆಹಲಿಯವರ ಮನೆ ಬಾಗಿಲು ಕಾಯುವುದು(ಬಿಜೆಪಿ, ಕಾಂಗ್ರೆಸ್ ಹೈಕಮಾಂಡ್) ತಪ್ಪುತ್ತದೆ’ ಎಂದು ಹೇಳಿದರು.

‘ಈಗಾಗಲೇ ಉತ್ತರ ಪ್ರದೇಶದಲ್ಲಿ ಬಿಜೆಪಿ ತನ್ನ ಶಕ್ತಿ ಕಳೆದುಕೊಂಡಿದೆ. ರಾಜಕೀಯ ತಂತ್ರ ರೂಪಿಸುವಲ್ಲಿ ಚಾಣಕ್ಯ ಎಂದು ಬಿಂಬಿಸಲಾಗಿರುವ ಅಮಿತ್ ಶಾ ಅವರ ತಂತ್ರ ಕರ್ನಾಟಕದಲ್ಲಿ ಏನೂ ನಡೆಯಲ್ಲ. ಅಮಿತ್ ಶಾ ಅವರಂತಹ ಉತ್ತರ ಭಾರತೀಯರಿಂದ ರಾಜ್ಯಕ್ಕೇನೂ ಒಳ್ಳೆಯದಾಗುವುದಿಲ್ಲ’ ಎಂದು ಹೇಳಿದರು.

‘ಬಿಜೆಪಿ ಮತ್ತು ಕಾಂಗ್ರೆಸ್ ಜಾತಿ, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿವೆ. ಅಧಿಕಾರ ಲಾಲಸೆಗೆ ಕೋಮು ಸಂಘರ್ಷ ಘಟನೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ. ಆದರೆ, ಜೆಡಿಎಸ್ ಸೌಹಾರ್ದತೆ ನೆಲೆಸುವಂತೆ ಮಾಡಲು ಪ್ರಯತ್ನಿಸಿದೆ. ಜಾತಿ ರಾಜಕಾರಣವನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಈವರೆಗೂ ಮಾಡಿಲ್ಲ. ಜಾತಿ ಸಮಾವೇಶ ನಡೆಸಿದ್ದು, ಜೆಡಿಎಸ್ ಅಧಿಕಾರಕ್ಕೆ ಬಂದರೆ ನಿರ್ದಿಷ್ಟ ಸಮುದಾಯಕ್ಕೆ ಏನು ಕೊಡುಗೆ ನೀಡಲಿದೆ ಎಂಬುದನ್ನು ತಿಳಿಸಲು ಮಾಡಿರುವಂತಹದ್ದು’ ಎಂದು ತಿಳಿಸಿದರು.

‘ಯೋಗ್ಯವಂತರಿಗೆ ಟಿಕೆಟ್: ಜೆಡಿಎಸ್ ವರಿಷ್ಠರು ಈಗಾಗಲೇ 224 ಕ್ಷೇತ್ರಗಳಲ್ಲಿ 126 ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡಿದ್ದಾರೆ. ಹಣವಂತರಿಗಿಂತ ಯೋಗ್ಯವಂತರಿಗೆ ಜೆಡಿಎಸ್ ಟಿಕೆಟ್ ನೀಡಿದೆ. 7 ಶಾಸಕರು ಬೇರೆ ಪಕ್ಷಕ್ಕೆ ಸೇರ್ಪಡೆಯಾಗಿದ್ದು ಹೆತ್ತ ತಾಯಿಗೆ ಮೋಸ ಮಾಡಿ ಹೋದಂತಾಗಿದೆ. ನೀತಿಗೆಟ್ಟ ರಾಜಕಾರಣದತ್ತ ಅವರು ಹೋಗಿದ್ದಾರೆ’ ಎಂದು ತಿಳಿಸಿದರು.

‘ಜಿಲ್ಲಾ ಮಟ್ಟದಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿ, ಅರಣ್ಯ ಅಭಿವೃದ್ಧಿ ಹೊಣೆಗಾರಿಕೆಯನ್ನು ಗ್ರಾಮೀಣ ಯುವಕರಿಗೆ, ಗ್ರಾಮೀಣ ಪ್ರದೇಶದ ಜನರಿಗೆ ವಹಿಸಿಕೊಡುವುದು, ವೃದ್ಧರಿಗೆ ತಿಂಗಳಿಗೆ ₹ 5 ಸಾವಿರ ಮಾಸಾಶನ, ಪದವೀಧರರು, ತಾಂತ್ರಿಕ ಶಿಕ್ಷಣ ಪಡೆದವರಿಗೆ ನಗರ, ಜಿಲ್ಲಾ ಕೇಂದ್ರಗಳಲ್ಲಿ ಹೆಚ್ಚಿನ ಉದ್ಯೋಗವಕಾಶ ದೊರಕಿಸುವುದು ಸೇರಿ ಅನೇಕ ದೂರದೃಷ್ಟಿ ಯೋಜನೆಗಳನ್ನು ಜೆಡಿಎಸ್ ಹೊಂದಿದೆ. ಈಗಾಗಲೇ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯವ್ಯಾಪಿ ಈ ವಿಷಯಗಳನ್ನು ಜನರಿಗೆ ವಿವರಿಸಿದ್ದಾರೆ’ ಎಂದು ಹೇಳಿದರು.

ಶಾಸಕರಾದ ಸಿ.ಬಿ.ಸುರೇಶ್‌ಬಾಬು, ಶ್ರೀನಿವಾಸ್, ಜಿಲ್ಲಾ ವಕ್ತಾರ ಮಧುಸೂದನ ಗೋಷ್ಠಿಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry