ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿ ಘೋಷಣೆಯತ್ತ ಜನತೆಯ ಚಿತ್ತ

ಕುಂದಾಪುರ ಕ್ಷೇತ್ರ: ಏರುತ್ತಿದೆ ಚುನಾವಣಾ ಕಾವು
Last Updated 9 ಏಪ್ರಿಲ್ 2018, 12:19 IST
ಅಕ್ಷರ ಗಾತ್ರ

ಕುಂದಾಪುರ: ಪಕ್ಷೇತರ ಶಾಸಕರರಾಗಿದ್ದ ಶಾಸಕರಿಂದ ಬಿಜೆಪಿ ಸೇರ್ಪಡೆ, ರಾಜ್ಯ ಸಂಘಟನೆ ನೇತಾರರೊಬ್ಬರ  ಸ್ಪರ್ಧೆ. ಹೊಸ ತಾಲ್ಲೂಕು ರಚನೆಯ ಪರಿಣಾಮವನ್ನು ಎದುರಿಸಬೇಕಾದ ಅನಿವಾರ್ಯತೆ, ನಕ್ಸಲ್‌ ಚಟುವಟಿಕೆಯ ಮತಗಟ್ಟೆಗಳು. ಹೆಚ್ಚು ಅತಿ ಸೂಕ್ಷ್ಮ ಮತಗಟ್ಟೆಗಳು. ನೂತನ ಪೊಲೀಸ್‌ ಠಾಣೆಯ ರಚನೆ... ಕುಂದಾಪುರ ವಿಧಾನಸಭಾ ಕ್ಷೇತ್ರ ಗಮನ ಸೆಳೆಯುವುದು ಇದಕ್ಕಾಗಿ.

ಉಡುಪಿ ಜಿಲ್ಲೆಯ ಏಕೈಕ ಕಂದಾಯ ಹಾಗೂ ಅರಣ್ಯ ಉಪವಿಭಾಗೀಯ ಕೇಂದ್ರ ಎನ್ನುವ ಹೆಗ್ಗಳಿಕೆಗೆ ಕುಂದಾಪುರ ಪಾತ್ರವಾಗಿತ್ತು. ಈ ತಾಲ್ಲೂಕು ವ್ಯಾಪ್ತಿಗೆ ಕುಂದಾಪುರ ಹಾಗೂ ಬೈಂದೂರು 2 ವಿಧಾನಸಭಾ ಕ್ಷೇತ್ರಗಳಿದ್ದವು. ಕಳೆದ ಬಾರಿ ಕ್ಷೇತ್ರ ಪುನರ್‌ ವಿಂಗಡನೆಯಲ್ಲಿ ಹಿಂದಿನ ಕುಂದಾಪುರ ವಿಧಾನಸಭಾ ಕ್ಷೇತ್ರದ ಸಿದ್ದಾಪುರ ಭಾಗದ ಪ್ರದೇಶಗಳು ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದರೆ. ಪುನರ್‌ ವಿಂಗಡಣೆಯಲ್ಲಿ ಮರೆಯಾಗಿದ್ದ ಬ್ರಹ್ಮಾವರ ಭಾಗದ ಕೋಟ ಹಾಗೂ ಮಂದಾರ್ತಿ ಪ್ರದೇಶದ ಭಾಗಗಳು ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರ್ಪಡೆಯಾಗಿತ್ತು.

ರಾಜ್ಯ ಸರ್ಕಾರದ ಆಡಳಿತಾತ್ಮಕ ನಿರ್ಧಾರದಿಂದಾಗಿ ರಚನೆಯಾಗಿರುವ ಹೊಸ ತಾಲ್ಲೂಕುಗಳಾದ ಬ್ರಹ್ಮಾವರ ಹಾಗೂ ಹೆಬ್ರಿ ತಾಲ್ಲೂಕಿನ ನಕಾಶೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಂದಷ್ಟು ಗ್ರಾಮಗಳು ಸೇರ್ಪಡೆಯಾಗಿರುವುದರಿಂದ ಜನ ಹೊಸ ತಾಲ್ಲೂಕು ಸೇರ್ಪಡೆಯ ಸಂಭ್ರಮದಲ್ಲಿ ಈ ಬಾರಿಯ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಈ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕರಿಗೂ ಜಿಲ್ಲೆಯ ಹೆಚ್ಚಿನ ತಾಲ್ಲೂಕಿನಲ್ಲಿ ಶಿಷ್ಟಾಚಾರ ಗೌರವವನ್ನು ಕಾಣುವ ಭಾಗ್ಯವೂ ಬಂದೊದಗಿದೆ.

ಹಿಂದೆ ಪಕ್ಷೇತರರಾಗಿ ಸ್ಪರ್ಧಿಸಿ ಅಭೂತಪೂರ್ವ ಗೆಲುವನ್ನು ದಾಖಲಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತೆ ಬಿಜೆಪಿ ಸೇರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಕಳೆದ 4 ಅವಧಿಯಲ್ಲಿ ಹಾಲಾಡಿ ಅವರ ಎದುರು ಪರಾಜಯವನ್ನು ಅನುಭವಿಸಿದ್ದ ಕಾಂಗ್ರೆಸ್‌ ಪಕ್ಷ ಈ ಬಾರಿಯ ಚುನಾವಣೆಗಾಗಿ ಭಾರಿ ತಾಲೀಮು ಆರಂಭಿಸಿದೆ. ಇಂಟಕ್‌ ಅಧ್ಯಕ್ಷ ರಾಕೇಶ್‌ ಮಲ್ಲಿ ಅವರ ನೇತೃತ್ವದಲ್ಲಿ ಪಕ್ಷ ಕಟ್ಟುವ ಗಂಭೀರ ಪ್ರಯತ್ನ ನಡೆಯುತ್ತಿದೆ. ಮನೆ ಮನೆಗೆ ಕಾಂಗ್ರೆಸ್‌ ಅಭಿಯಾನದ ಮೂಲಕ ಕ್ಷೇತ್ರದ ಜನರೊಂದಿಗೆ ನಿಕಟತೆಯನ್ನು ಸಾಧಿಸುವ ಪ್ರಯತ್ನವನ್ನು ಮಾಡಿರುವ ರಾಕೇಶ್‌ ಮಲ್ಲಿ ಗ್ರಾಮೀಣ ಭಾಗದಲ್ಲಿ ಕ್ರೀಡಾ ಪಂದ್ಯಾಟವನ್ನು ಆಯೋಜಿಸುವ ಮೂಲಕ ಸುದ್ದಿಯಾಗುತ್ತಿದ್ದಾರೆ.

ಕಾಲೇಜು ದಿನಗಳಲ್ಲಿ ಹೆಸರನ್ನು ಮಾಡಿದ್ದ ಬಿಲ್ಲವ ಸಮುದಾಯದ ಮುಖಂಡ ರಾಜೀವ್‌ ಕೋಟ್ಯಾನ್‌ ಈ ಬಾರಿ ಸಂಯುಕ್ತ ಜನತಾದಳದಿಂದ ವಿಧಾನಸಭಾ ಸ್ಪರ್ಧಾ ಕಣಕ್ಕೆ ಇಳಿಯುವ ಮುನ್ಸೂಚನೆಯನ್ನು ನೀಡಿದ್ದಾರೆ. ಪುರಸಭೆಯ ಉಪಾಧ್ಯಕ್ಷರಾಗಿ ರಾಜಕಾರಣದ ಅಂಗಳದಲ್ಲಿ ಛಾಪು ಮೂಡಿಸಿದ್ದ ಕೋಟ್ಯಾನ್‌ ಅವರಿಗೆ ಇದು ಚೊಚ್ಚಲ ವಿಧಾನಸಭಾ ಚುನಾವಣೆಯಾಗಲಿದೆ. ವಾಟ್ಸ್‌ಆ್ಯಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲ ತಾಣಗಳ ಮೂಲಕ ಮತದಾರರ ಮನಮುಟ್ಟುವ ಪ್ರಯತ್ನವನ್ನು ಮಾಡಿದ್ದ ಅವರಿಗೆ ಪ್ರಬಲ ಎದುರಾಳಿಯನ್ನು ಎದುರಿಸಬೇಕಾದ ಅನಿವಾರ್ಯತೆ ಇದೆ.

ಜೆಡಿಎಸ್‌ನ ಹುರಿಯಾಳು ತೆಕ್ಕಟ್ಟೆಯ ಪ್ರಕಾಶ್‌ ಶೆಟ್ಟಿ ಈಗಾಗಲೇ ಪ್ರಚಾರ ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತೆಕ್ಕಟ್ಟೆ ಫ್ರೆಂಡ್ಸ್‌ ಸಂಘಟನೆಯ ಮೂಲಕ ಮಾನವೀಯ ಮೌಲ್ಯದ ಜನಪರ ಕಾರ್ಯಗಳ ಮೂಲಕ ಸುದ್ದಿಯಾಗಿದ್ದ ಅವರು ಪ್ರಸ್ತುತ ಪ್ರಚಾರದಲ್ಲಿ ಇರುವ ಅಭ್ಯರ್ಥಿಗಳ ಯಾದಿಯಲ್ಲಿ ಯುವ ಅಭ್ಯರ್ಥಿ.

ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಆಗಾಗ್ಗೆ ವರದಿಯಾಗುತ್ತಿದ್ದ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳಿಗೆ ಶಾಶ್ವತ ಕಡಿವಾಣ ಹಾಕಲು ಮುಂದಾದ ರಾಜ್ಯದ ಗೃಹ ಇಲಾಖೆಯ ತೀರ್ಮಾನದಂತೆ ಕುಂದಾಪುರ ಪೊಲೀಸ್‌ ಠಾಣೆ, ನಗರ ಹಾಗೂ ಗ್ರಾಮಾಂತರ ಎನ್ನುವ ಹೆಸರಿನಲ್ಲಿ ವಿಂಗಡಣೆಯಾಗಿ ಕುಂದಾಪುರ ಹಾಗೂ ಕಂಡ್ಲೂರಿನಲ್ಲಿ ಕಾರ್ಯಾಚರಿಸುತ್ತಿದೆ. ಮಲೆನಾಡ ಭಾಗದ ಪ್ರಕೃತಿಯ ರಮಣೀಯತೆಯ ನಡುವೆ ಅಮಾಸೆಬೈಲು, ಶೇಡಿಮನೆ, ರಟ್ಟಾಡಿ, ಮಡಾಮಕ್ಕಿ ಮುಂತಾದೆಡೆ ನಕ್ಸಲ್‌ ಚಟುವಟಿಕೆ ಇದ್ದ ಕಾರಣಕ್ಕೆ ಸೂಕ್ಷ್ಮ ಮತಗಟ್ಟೆಗಳು ಎನಿಸಿಕೊಂಡಿವೆ.

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಜ್ವರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಪಕ್ಷಗಳು ಪ್ರಕಟಿಸುವ ಅಭ್ಯರ್ಥಿಗಳ ಪಟ್ಟಿಯತ್ತ ಕ್ಷೇತ್ರದ ಜನರು ದೃಷ್ಟಿ ನೆಟ್ಟಿದ್ದಾರೆ.

ರಾಜೇಶ್‌ ಕೆ.ಸಿ ಕುಂದಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT