ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಸ ನಗರಿಯಾದ ಗುಮ್ಮಟ ನಗರಿ..!’

ಪಾಲಿಕೆ ಮೇಯರ್‌–ಸದಸ್ಯರು ಚುನಾವಣಾ ರಾಜಕಾರಣದಲ್ಲಿ ತಲ್ಲೀನ; ಅವ್ಯವಸ್ಥೆಯ ಆಗರವಾದ ವಿಜಯಪುರ
Last Updated 9 ಏಪ್ರಿಲ್ 2018, 12:26 IST
ಅಕ್ಷರ ಗಾತ್ರ

ವಿಜಯಪುರ:ಸ್ವಚ್ಛ ವಿಜಯಪುರದ ಕನಸು ಮೂರಾಬಟ್ಟೆಯಾಗಿದೆ. ವಿಜಯಪುರ ಮಹಾನಗರ ಪಾಲಿಕೆ ಆಡಳಿತದ ವೈಫಲ್ಯದಿಂದ, ವಾರದ ಅವಧಿಯಿಂದ ನಗರದ ಎಲ್ಲೆಡೆ ತ್ಯಾಜ್ಯದ ರಾಶಿ ಗೋಚರಿಸುತ್ತಿದೆ.

ಶನಿವಾರ ರಾತ್ರಿ ನಗರದ ಕೆಲ ಭಾಗದಲ್ಲಿ ಮಳೆ ಸುರಿದಿದ್ದು, ತ್ಯಾಜ್ಯ ವಿಲೇವಾರಿಯಾಗದ ಪ್ರದೇಶಗಳಲ್ಲಿ ದುರ್ವಾಸನೆ ಹೆಚ್ಚಿದೆ. ಮೂಗು ಮುಚ್ಚಿಕೊಂಡೇ ನಡೆದಾಡಬೇಕಿದೆ ಎಂಬ ಅಸಮಾಧಾನ ಹಲವರದ್ದಾಗಿದೆ.

ಚಾರಿತ್ರಿಕ ಹಿನ್ನೆಲೆ ಹೊಂದಿರುವ ವಿಜಯಪುರ ನಗರ ಹಲವು ವಿಶೇಷಣಗಳಿಂದ ಗುರುತಿಸಿಕೊಂಡಿದೆ. ಇದರಲ್ಲಿ ಕುಖ್ಯಾತಿಯೂ ಒಳಗೊಂಡಿದ್ದು, ಇದೀಗ ಈ ಪಟ್ಟಿಗೆ ‘ಕಸ ನಗರಿ’ ಎಂಬುದು ಸೇರ್ಪಡೆಯಾಗಿದೆ ಎಂದು ಅನಿಲ ಮುಧೋಳ ಆಕ್ರೋಶ ವ್ಯಕ್ತಪಡಿಸಿದರು.

‘ಪಾಲಿಕೆ ಆಡಳಿತ ಗುತ್ತಿಗೆ ಪೌರ ಕಾರ್ಮಿಕರಿಗೆ ಪಗಾರ ನೀಡಿಲ್ಲ. ಇದರಿಂದ ಕಾರ್ಮಿಕರು ಒಂದು ವಾರದಿಂದ ತಮ್ಮ ಕೆಲಸ ಸ್ಥಗಿತಗೊಳಿಸಿದ್ದಾರೆ. ಇದರ ಪರಿಣಾಮ ಐತಿಹಾಸಿಕ ನಗರಿ, ಗುಮ್ಮಟ ನಗರಿ, ಆದಿಲ್‌ಶಾಹಿ ಸುಲ್ತಾನರ ರಾಜಧಾನಿ ಇದೀಗ ಕಸದ ನಗರಿಯಾಗಿದೆ.

ರಾಜ್ಯ ಪ್ರವಾಸೋದ್ಯಮದ ಪ್ರಮುಖ ಜನಾಕರ್ಷಣೆಯ ತಾಣಗಳಲ್ಲಿ ವಿಜಯಪುರವೂ ಒಂದಾಗಿದೆ. ಇಲ್ಲಿಗೆ ವರ್ಷದ ಎಲ್ಲ ಅವಧಿಯಲ್ಲೂ ಪ್ರವಾಸಿಗರು ಭೇಟಿ ನೀಡಲಿದ್ದಾರೆ. ವಾರದಿಂದ ಆದಿಲ್‌ಶಾಹಿ ಅರಸರ ಸ್ಮಾರಕ ವೈಭವ ಕಣ್ತುಂಬಿಕೊಳ್ಳಲು ಬಂದವರೆಲ್ಲರಿಗೂ ಕಸದ ಸ್ವಾಗತ ದೊರೆತಿದೆ.

ಅವರೆಲ್ಲರೂ ಬೇರೆಡೆ ಹೋದ ಸಂದರ್ಭ ಇಲ್ಲಿನ ಅವ್ಯವಸ್ಥೆ ಬಗ್ಗೆ ಹೇಳುತ್ತಾರೆ. ಇದರಿಂದ ವಿಜಯಪುರಿಗರು ಸೇರಿದಂತೆ ಮಹಾನಗರ ಪಾಲಿಕೆ ಆಡಳಿತ, ಊರಿನ ಮರ್ಯಾದೆಯೂ ಮೂರು ಕಾಸಿಗೆ ಹರಾಜಾಗುತ್ತದೆ. ಈ ಸಣ್ಣ ಅರಿವು ಆಡಳಿತ ನಡೆಸುವ ಅಧಿಕಾರಿ ವರ್ಗ, ಚುನಾಯಿತ ಜನಪ್ರತಿನಿಧಿಗಳಿಗಿಲ್ಲದಿರುವುದು ನಮ್ಮ ದೌರ್ಭಾಗ್ಯ’ ಎಂದು ಅನಿಲ ಅಸಮಾಧಾನ ವ್ಯಕ್ತಪಡಿಸಿದರು.

‘ಮಹಾನಗರ ಪಾಲಿಕೆಯ ಮೇಯರ್‌ ಅವರಿಂದ ಹಿಡಿದು ಬಹುತೇಕ ಸದಸ್ಯರು, ಕೆಲ ಅಧಿಕಾರಿ ವರ್ಗ ಸಹ ವಿಧಾನಸಭಾ ಚುನಾವಣೆಯ ತಯಾರಿಯಲ್ಲಿ ತಲ್ಲೀನರಾಗಿದ್ದಾರೆ. ತಮ್ಮ ನಾಯಕರಿಗೆ ನಿಷ್ಠೆ ತೋರಲು ಬೆಂಗಳೂರು, ನವದೆಹಲಿ ಮಟ್ಟದಲ್ಲಿ ಲಾಬಿ ಮಾಡಲಾರಂಭಿಸಿದ್ದಾರೆ. ಇಲ್ಲಿ ಹೇಳೋರು ಇಲ್ಲಾ ? ಕೇಳೋರು ಇಲ್ಲಾ... ಇದರ ಪರಿಣಾಮ ನಾವು ಅನುಭವಿಸಬೇಕಿದೆ’ ಎಂದು ಎನ್‌.ಎ.ಮಮದಾಪುರ ಆಕ್ರೋಶ ವ್ಯಕ್ತಪಡಿಸಿದರು.

‘ವಿಜಯಪುರ ಹಂದಿಗಳ ಸ್ವರ್ಗವಾಗಿದೆ. ಎಲ್ಲೆಂದೆರಲ್ಲಿ ಕಸ ಬಿದ್ದಿರುವುದರಿಂದ ವರಾಹ ಸೇನೆ ಸಂತಸದಿಂದ ಅಲೆದಾಡುತ್ತಿದೆ. ಇದೇ ಸನ್ನಿವೇಶ ಮುಂದುವರೆದರೆ ಕೆಲ ದಿನಗಳಲ್ಲೇ ನಗರದ ನಾಗರಿಕರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವುದು ದೂರ ಉಳಿದಿಲ್ಲ’ ಎನ್ನುತ್ತಾರೆ ಕೆ.ಎ.ಪಟೇಲ.

ಮುಷ್ಕರ ಅನಿವಾರ್ಯ

‘ವಿಜಯಪುರ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ವಚ್ಛತೆಗಾಗಿ 818 ಗುತ್ತಿಗೆ ಪೌರ ಕಾರ್ಮಿಕರಿದ್ದಾರೆ. ನಾಲ್ಕು ತಿಂಗಳಿಂದ ಇವರಿಗೆ ವೇತನ ಆಗಿಲ್ಲ. ಬದುಕು ಸಾಗಿಸುವುದು ಹೇಗೆ ? ಜನ ಸಾಮಾನ್ಯರು ಸಹ ಇವರ ಬಗ್ಗೆ ಒಮ್ಮೆ ಧ್ವನಿ ಎತ್ತಲ್ಲ.

ಚುನಾಯಿತ ಪಾಲಿಕೆ ಸದಸ್ಯರು ಸಹ ತಮ್ಮ ಮನೆ ಸುತ್ತಮುತ್ತ, ಆಪ್ತರ ಮನೆ ಬಳಿ ಇವರಿಂದ ಸ್ವಚ್ಛತೆ ಕಾರ್ಯ ಮಾಡಿಸಿಕೊಳ್ಳಲು ಮುಂದಾಗುತ್ತಾರೆ ವಿನಾಃ ಇವರ ಸಮಸ್ಯೆ ಬಗ್ಗೆ ಒಂದು ದಿನವೂ ಪಾಲಿಕೆ ಸಭೆಗಳಲ್ಲಿ ಚರ್ಚಿಸಲ್ಲ. ಸಮಸ್ಯೆ ಪರಿಹಾರಕ್ಕೆ ಯತ್ನಿಸಲ್ಲ. ಇಂತಹ ಸಂದರ್ಭ ಉಳಿದಿರೋದು ಮುಷ್ಕರವೊಂದೇ. ಅನಿವಾರ್ಯವಾಗಿ ನಡೆಸುತ್ತಿದ್ದೇವೆ’ ಎನ್ನುತ್ತಾರೆ ರಾಜ್ಯ ಮುನ್ಸಿಪಲ್‌ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ ಹಂದ್ರಾಳ.

‘ಕಾರ್ಮಿಕರ ಖಾತೆಗೆ ಸಂಬಳ ಜಮೆಯಾದ ಸಂದೇಶ ಮೊಬೈಲ್‌ಗೆ ಬರುವ ತನಕವೂ ಮುಷ್ಕರ ನಡೆಯುತ್ತದೆ. ಇದೇ ಸಂದರ್ಭ ಪಿಎಫ್‌, ಇಎಸ್‌ಐ ಮೊತ್ತದಲ್ಲಿ ನಡೆದಿರುವ ಅನ್ಯಾಯ ಸರಿಪಡಿಸುವಂತೆಯೂ ಆಗ್ರಹಿಸುತ್ತಿದ್ದೇವೆ’ ಎಂದು ಅವರು ಹೇಳಿದರು.

818 ಗುತ್ತಿಗೆ ಪೌರ ಕಾರ್ಮಿಕರು ಕೆಲಸಕ್ಕೆ ಗೈರು

80 ಕಾಯಂ ಪೌರ ಕಾರ್ಮಿಕರಿಂದಷ್ಟೇ ಸ್ವಚ್ಛತೆ

4 ತಿಂಗಳ ವೇತನ ಪಾವತಿಗೆ ಆಗ್ರಹ

7 ದಿನದಿಂದ ಕೆಲಸ ಸ್ಥಗಿತಗೊಳಿಸಿ ಮುಷ್ಕರ

**

ವಾರದಿಂದ ಕಸ ವಿಲೇವಾರಿಯಾಗಿಲ್ಲ. ಶನಿವಾರ ರಾತ್ರಿ ಸುರಿದ ಮಳೆ ಮತ್ತಷ್ಟು ಅಸಹನೀಯ ಪರಿಸ್ಥಿತಿ ನಿರ್ಮಿಸಿದೆ. ನಮ್ಮ ಗೋಳು ಕೇಳೋರೇ ಇಲ್ಲ – 
ಗೂಡುಸಾಬ್‌ ಹಂಜಗಿ, ವಿಜಯಪುರ ನಿವಾಸಿ.

**

ಮಂಗಳವಾರ ಸಮಸ್ಯೆ ಬಗೆಹರಿಯಲಿದೆ. ಭಾನುವಾರ ಮೂರು ತಿಂಗಳ ವೇತನ ಪಾವತಿಸಿದ್ದೇವೆ. ಸೋಮವಾರ ಖಾತೆಗೆ ಜಮೆಯಾಗಲಿದೆ. ಇನ್ನೊಂದು ತಿಂಗಳ ವೇತನ ಶೀಘ್ರದಲ್ಲೇ ಕೊಡುತ್ತೇವೆ – ಶ್ರೀಹರ್ಷಾಶೆಟ್ಟಿ, ಪಾಲಿಕೆ ಆಯುಕ್ತ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT