ಶುಕ್ರವಾರ, ಡಿಸೆಂಬರ್ 13, 2019
20 °C

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಬೈಲಹೊಂಗಲ, ಕುಡಚಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಬೈಲಹೊಂಗಲ, ಕುಡಚಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳ ವಿರೋಧ

ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಪ್ರಕಟಿಸಿರುವ ಅಭ್ಯರ್ಥಿಗಳ ಪಟ್ಟಿಗೆ ಬೈಲಹೊಂಗಲ ಕ್ಷೇತ್ರದ ಆಕಾಂಕ್ಷಿ ಜಗದೀಶ ಮೆಟಗುಡ್ಡ ಹಾಗೂ ಕುಡಚಿ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ಸನದಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪಕ್ಷದ ವತಿಯಿಂದ ನಡೆಸಲಾಗಿದ್ದ ಸಮೀಕ್ಷೆಯಲ್ಲಿ ನನ್ನ ಹೆಸರು ಮೊದಲ ಸ್ಥಾನದಲ್ಲಿತ್ತು. ಆದರೆ, ಈಗ ನನ್ನನ್ನು ಬಿಟ್ಟು 3ನೇ ಸ್ಥಾನದಲ್ಲಿದ್ದ ಡಾ.ವಿಶ್ವನಾಥ ಪಾಟೀಲ ಅವರಿಗೆ ಟಿಕೆಟ್‌ ನೀಡಲಾಗಿದೆ. ಇದರ ಬಗ್ಗೆ ಮುಖಂಡರ ಗಮನಕ್ಕೆ ತಂದಿದ್ದೇನೆ. ಆದರೆ, ಅವರ‍್ಯಾರೂ ಮಾತನಾಡುತ್ತಿಲ್ಲ. ಮುಂದೆ ಏನು ಮಾಡಬೇಕು ಎನ್ನುವುದನ್ನು ನನ್ನ ಹಿತೈಷಿಗಳು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿ ಎರಡು ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇನೆ’ ಎಂದು ಜಗದೀಶ ಮೆಟಗುಡ್ಡ ತಿಳಿಸಿದರು.

ರಾಯಬಾಗ ತಾಲ್ಲೂಕಿನ ಕುಡಚಿ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ಸನದಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ‘ಅಧಿಕಾರದ ಆಸೆಗಾಗಿ ಪಕ್ಷ ಸೇರ್ಪಡೆಯಾಗಿರುವವರಿಗೆ (ಪಿ.ರಾಜೀವ್‌) ಟಿಕೆಟ್‌ ನೀಡಲಾಗಿದೆ. ಹೊರತು, ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ದುಡಿದವರಿಗೆ ಅವಕಾಶ ನೀಡದಿರುವುದು ದುರ್ದೈವ. ಮಾಜಿ ಶಾಸಕ ಬಿ.ಸಿ. ಸರಿಕಾರ ಸೇರಿದಂತೆ ಅಶೋಕ ಗುತ್ತೆ, ಗಣೇಶ ರೋಡಕರ, ವೆಂಕಟೇಶ ವಡ್ಡರ ಆಕಾಂಕ್ಷಿಗಳಾಗಿದ್ದರು. ಇವರ‍್ಯಾರನ್ನೂ ಪರಿಗಣಿಸದಿರುವುದು ದುರದೃಷ್ಟಕರ. ಜಿಲ್ಲಾ ಅಧ್ಯಕ್ಷ ಶಶಿಕಾಂತ ನಾಯಿಕ ಅವರ ಗಮನಕ್ಕೆ ತಂದಿದ್ದೇನೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದೆ ಏನು ಮಾಡಬೇಕೆನ್ನುವುದನ್ನು ನಿರ್ಧರಿಸಲಾಗುವುದು’ ಎಂದರು.

ಇದನ್ನೂ ಓದಿ...

ಇನ್ನೂ ಎರಡು-ಮೂರು ದಿನದಲ್ಲಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ‌: ಜಗದೀಶ ಶೆಟ್ಟರ್

ಬಿಜೆಪಿ ಮೊದಲ ಪಟ್ಟಿ ಬಿಡುಗಡೆ

ಪ್ರತಿಕ್ರಿಯಿಸಿ (+)