4

ಕೊರಗದೇ ಬೆಳೆಯಿರಿ ಕೊರಲೆ

Published:
Updated:
ಕೊರಗದೇ ಬೆಳೆಯಿರಿ ಕೊರಲೆ

ನಮ್ಮ ರಾಜ್ಯದ ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಸಾಮಾನ್ಯ ವೆಂಬಂತೆ ಬೆಳೆಯಲಾಗುತ್ತಿದ್ದ ಕೊರಲೆ, ಅಳಿಯುವ ಹಂತಕ್ಕೆ ತಲುಪಿತ್ತು. ಆದರೆ, ಈಗ ಅದರ ಅದೃಷ್ಟ ಖುಲಾಯಿಸಿದೆ. ಸಿರಿಧಾನ್ಯಗಳ ಪಟ್ಟಿಯಲ್ಲಿಯೇ ಸ್ಥಾನ ಪಡೆಯದಿದ್ದ ಕೊರಲೆಗೀಗ ರಾಜ ಮರ್ಯಾದೆ ಸಿಗುತ್ತಿದೆ.

ಕೆಲವೇ ವರ್ಷಗಳ ಹಿಂದೆ ಅಪರಿಚಿತವಾಗಿದ್ದ ಕೊರಲೆ‌ಯನ್ನು ಮುಂಚೂಣಿಗೆ ತಂದವರಲ್ಲಿ ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ಹೆಂದೂರು ಗ್ರಾಮದ ಎಚ್. ಕೆ. ರಘು ಅವರೂ ಒಬ್ಬರು. ತಾವು ಬೆಳೆಯುವುದಲ್ಲದೇ ನೂರಾರು ರೈತರಿಗೆ ಕೊರಲೆ ಬೆಳೆ ಬೆಳೆಯಲು ಪ್ರೋತ್ಸಾಹ ನೀಡುತ್ತಿದ್ದಾರೆ.

ಈ ಬಾರಿಯ ಮುಂಗಾರಿನಲ್ಲಿ ರಘು ಅವರ ಗ್ರಾಮದ ಸುತ್ತಮುತ್ತ ಐವತ್ತಕ್ಕೂ ಅಧಿಕ ರೈತರು, ಅವರ ಮಾರ್ಗ ದರ್ಶನದಲ್ಲಿ ನೂರಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ಕೊರಲೆ ಬೆಳೆದು ಗೆದ್ದಿದ್ದಾರೆ. ಅಲ್ಲೆಲ್ಲ ಇವರು ‘ಕೊರಲೆ ರಘು’ ಎಂತಲೇ ಪ್ರಸಿದ್ಧಿ.

ಕೊರಲೆಯೆಡೆಗೆ ಮನಸ್ಸು ಹರಿದ ಪರಿ: 2011ರ ವೇಳೆಗೆ ಹಲವು ಸಂಘಸಂಸ್ಥೆಗಳು ಸಿರಿಧಾನ್ಯಗಳನ್ನು ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿದ್ದವು. ಅವುಗಳು ಪ್ರಚುರಪಡಿಸುತ್ತಿದ್ದ ಸಿರಿಧಾನ್ಯಗಳ ಸಾಲಿನಲ್ಲಿ ಕೊರಲೆ ಕಂಡುಬರುತ್ತಿರಲಿಲ್ಲ. ಇದನ್ನು ಗಮನಿಸುತ್ತಿದ್ದ ರಘು, ಪೌಷ್ಟಿಕಾಂಶಗಳಲ್ಲಿ ಯಾವ ಧಾನ್ಯಗಳಿಗೂ ಕಡಿಮೆಯಿಲ್ಲದಿರುವ, ತುಮಕೂರು ಭಾಗಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದ್ದ ಕೊರಲೆಯನ್ನು ತಾವೇಕೆ ಪ್ರಚಾರ ಮಾಡಬಾರದು ಎಂದು ಯೋಚಿಸಿದರು. ಸಹಜಸಮೃದ್ಧ ಸಂಸ್ಥೆಯ ಜಿ. ಕೃಷ್ಣಪ್ರಸಾದ್ ಅವರ ಸಹಕಾರದಿಂದ ಕೊರಲೆ ಧಾನ್ಯವನ್ನು ಪರಿಚಯಿಸತೊಡಗಿದರು.

ಕೊರಲೆ ಅಕ್ಕಿ ಹಾಗೂ ಅದರಿಂದ ತಯಾರಿಸಬಹುದಾದ ವೈವಿಧ್ಯಮಯ ಆಹಾರ ಪದಾರ್ಥಗಳ ಬಗ್ಗೆ ಪ್ರಾತ್ಯಕ್ಷಿಕವಾಗಿ ಮಾಹಿತಿ ನೀಡತೊಡಗಿದರು. ಉಳಿದೆಲ್ಲಾ ಧಾನ್ಯಗಳಿಗಿಂತ ಭಿನ್ನವಾಗಿರುವ ಕೊರಲೆ ನಿಧಾನವಾಗಿ ಆರೋಗ್ಯಾಸಕ್ತರನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಹಾಗೆಯೇ ಕೊರಲೆ ಬೆಳೆಯಲ್ಲಿರುವ ಪೋಷಕಾಂಶಗಳ ಬಗ್ಗೆಯೂ ಅಧ್ಯಯನಗಳು ನಡೆದವು. ಪರಿಣಾಮ, ಸಿರಿಧಾನ್ಯಗಳ ಸಾಲಿಗೆ ಕೊರಲೆ 2017 ರ ಸಾಲಿನಲ್ಲಿ ಸೇರ್ಪಡೆಗೊಂಡಿತು.

ಕಡಿಮೆ ನೀರಲ್ಲಿ ಅರಳುವ ಕೊರಲೆ: ಕೊರಲೆ ಕೃಷಿಗೆ ಕಡಿಮೆ ನೀರು ಸಾಕು. ಬರ ನಿರೋಧಕ ಗುಣ ಹೊಂದಿರುವ ಈ ಧಾನ್ಯ, ಒಣ ಪ್ರದೇಶದಲ್ಲಿಯೂ ಇಬ್ಬನಿಯ ತೇವದಲ್ಲಿಯೇ ಹಸಿರು ಹೊದ್ದು ನಿಲ್ಲುವ ತಾಕತ್ತು ಹೊಂದಿದೆ. ಸಿರಿಧಾನ್ಯಗಳ ಬಿತ್ತನೆ ಬೀಜಗಳನ್ನು ಕೂರಿಗೆಯಲ್ಲಿ ಬಿತ್ತಲು ಸಾಂಪ್ರದಾಯಿಕ ಮಾದರಿ ಅನುಸರಿಸುವುದು ರೂಢಿ. ಆದರೆ ರಘು ಅವರು, ಬಿತ್ತನೆಗೆ ಸುಧಾರಿತ ಮಾದರಿಯೊಂದನ್ನು ಅನುಸರಿಸುತ್ತಿದ್ದಾರೆ.

ಇವರದು ಹದಿನೇಳು ಎಕರೆ ಜಮೀನು. ಸಂಪೂರ್ಣ ಜಮೀನನ್ನು ಸಿರಿಧಾನ್ಯ ಕೃಷಿಗೆ ಮೀಸಲಿಟ್ಟಿದ್ದಾರೆ. ಕಳೆದ ಐದು ವರ್ಷಗಳಿಂದ ಸಿರಿಧಾನ್ಯಗಳನ್ನು ಬಿಟ್ಟು ಬೇರೆ ಬೆಳೆ ಬೆಳೆದ ಉದಾಹರಣೆಯಿಲ್ಲ. ಕೊರಲೆ ಬಿತ್ತುವ ಗದ್ದೆಗಳಲ್ಲಿ ಮುಂಗಾರು ಹಂಗಾಮಿಗೂ ಮುಂಚಿತವಾಗಿಯೇ ಭರಣಿ ಹಾಗೂ ರೋಹಿಣಿ ಮಳೆಯಲ್ಲಿ ಹೆಸರು ಬಿತ್ತುತ್ತಾರೆ. ಜೂನ್ ಕೊನೆ ವೇಳೆಗೆ ಹೆಸರು ಕೊಯ್ಲಿಗೆ ಸಿಗುತ್ತದೆ. ಅದರ ಕಾಳುಗಳನ್ನು ಮಾತ್ರ ಕಟಾವು ಮಾಡಿ ಹೆಸರು ಬಳ್ಳಿಗಳನ್ನು ಅಲ್ಲಿಯೇ ಬಿಟ್ಟಿರುತ್ತಾರೆ.

ರೋಟೋವೇಟರ್ ಸಹಾಯದಿಂದ ಭೂಮಿ ಉಳುಮೆ ಮಾಡಿಸಿ ಹೆಸರಿನ ಬಳ್ಳಿಗಳು ಮಣ್ಣಿನಲ್ಲಿ ಒಂದಾಗುವಂತೆ ನೋಡಿಕೊಳ್ಳುತ್ತಾರೆ. ವಾತಾವರಣದಲ್ಲಿರುವ ನೈಟ್ರೋಜನ್ ಅಂಶವನ್ನು ಗಂಟುಗಳಲ್ಲಿ ಸಂಗ್ರಹಿಸಿಕೊಂಡಿರುವ ಹೆಸರು ಬಳ್ಳಿಯ ಬೇರುಗಳು ಮಣ್ಣಿನಲ್ಲಿ ಕಲೆತು ಹೋಗುತ್ತವೆ. ರೋಟೋವೇಟರ್ ಉಳುಮೆಯಿಂದ ಹಸನಾದ ಭೂಮಿ ಯಲ್ಲಿ ಮೂರು ತಾಳಿನ ಕೂರಿಗೆಯಿಂದ ಬಿತ್ತನೆ ಮಾಡುತ್ತಾರೆ. 

‘ಒಂದು ಎಕರೆಗೆ 4-5 ಕೆಜಿ ಬಿತ್ತನೆ ಬೀಜ ಸಾಕು. ಬಿತ್ತನೆ ಮಾಡುವಾಗ ಬೀಜಗಳು ಎರಡು ಇಂಚುಗಳಿಗೂ ಹೆಚ್ಚು ಆಳವಾಗಿ ಬಿತ್ತನೆ ಮಾಡಬಾರದು. ಆಳ ಬಿತ್ತನೆಯಾದಲ್ಲಿ ಬೀಜದ ಮೇಲೆ ದಪ್ಪನಾಗಿ ಮಣ್ಣಿನ ಹೊದಿಕೆಯಾಗಿ ಸಣ್ಣ ಸಣ್ಣ ಬೀಜಗಳು ಮೊಳಕೆಯೊಡೆದು ಎದ್ದೇಳಲು ಏಗುತ್ತವೆ. ಬೀಜ ಬಿತ್ತುವಾಗ ಜಾಣ್ಮೆ ವಹಿಸಿದರೆ ಕೊಯ್ಲಿನ ಸಂದರ್ಭ ಕಾಳು ಜಾಸ್ತಿ ಸಿಗುತ್ತದೆ. ಸಾಲಿನಲ್ಲಿ ಬಿತ್ತುವಾಗ ತೆಳುವಾಗಿ ಬೀಜ ಬಿತ್ತುವುದು ಒಳ್ಳೆಯದು. ಬಿತ್ತನೆಯಲ್ಲಿ ಅಜಾಗ್ರತೆ ವಹಿಸಿದರೆ ಒಂದು ಕಡೆ ತೆಳು, ಇನ್ನೊಂದೆಡೆ ದಪ್ಪನಾಗಿ ಬೀಜ ಬೀಳುತ್ತದೆ. ಬಿತ್ತನೆ ತೆಳುವಾಗಿದ್ದರೆ ಬುಡ ದಪ್ಪನಾಗಿ ತೆಂಡೆಗಳ ಸಂಖ್ಯೆ ವೃದ್ಧಿಗೊಳ್ಳುತ್ತದೆ. ಚೆನ್ನಾಗಿ ಬಲಿತ ಗಿಡಗಳಲ್ಲಿ ಹುಲುಸಾದ ಫಸಲು ಮೇಳೈಸುತ್ತದೆ’ ಎಂದು ಸಲಹೆ ನೀಡುತ್ತಾರೆ ಅವರು.

ಗೊಬ್ಬರ ಉಳಿಸುವ ತಂತ್ರ: ಹುಡಿಯಾದ ಕೊಟ್ಟಿಗೆಯ ತಿಪ್ಪೆಗೊಬ್ಬರ, ಹಸುವಿನ ಗಂಜಲ ಹಾಗೂ ಸುಣ್ಣ ಈ ಮೂರನ್ನು ಮಿಶ್ರಗೊಳಿಸಿ ನೆರಳಿನಲ್ಲಿ ಒಣಗಿಸುತ್ತಾರೆ. ತೇವ ಆರಿ ಹುಡಿಹುಡಿಯಾದ ಹುಲುಸಾದ ಗೊಬ್ಬರ ಸಿಗುತ್ತದೆ. ಒಂದು ಕೆ.ಜಿ. ಬೀಜಕ್ಕೆ ಮೂರು ಕೆ.ಜಿ. ಸುಣ್ಣ ಮಿಶ್ರಿತ ಹುಡಿಗೊಬ್ಬರ ಬೆರಕೆ ಮಾಡಿ ಕೂರಿಗೆಯಿಂದ ಬಿತ್ತುತ್ತಾರೆ. ಇದರಿಂದ, ಎಲ್ಲಾ ಕಡೆಗಳಲ್ಲಿ ತೆಳುವಾಗಿ ಒಂದೇ ರೀತಿಯಲ್ಲಿ ಹದವಾಗಿ ಬೀಜ ಬಿತ್ತನೆಯ ಕಾರ್ಯ ನೆರವೇರುತ್ತದೆ.

ಈ ಬಿತ್ತನೆ ಕ್ರಮದಿಂದ ಇನ್ನೊಂದು ಲಾಭವಿದೆ. ಸಾಮಾನ್ಯವಾಗಿ ರೈತರು ಎಕರೆಯೊಂದಕ್ಕೆ 2-3 ಟ್ರಾಕ್ಟರ್ ಲೋಡ್ ತಿಪ್ಪೆಗೊಬ್ಬರ ಹೇರುತ್ತಾರೆ. ರಸಗೊಬ್ಬರವಾದರೆ 50 ಕೆ.ಜಿ.ವರೆಗೆ ಬಳಸುವುದಿದೆ. ಆದರೆ ಸುಣ್ಣ ಮಿಶ್ರಿತ ಹುಡಿಗೊಬ್ಬರ ಸಾಲಿನಲ್ಲಿ ಬಿಡಲು ಎಕರೆಗೆ 10-12 ಕೆ.ಜಿ ಸಾಕಾಗುತ್ತದೆ. ಉತ್ಕೃಷ್ಟ ಗೊಬ್ಬರ ಬೀಜದೊಂದಿಗೆ ಬಿದ್ದಿರುವುದರಿಂದ ಮೊಳೆತ ಗಿಡಗಳು ವೇಗವಾಗಿ ಪೋಷಕಾಂಶಗಳನ್ನು ಹೀರಿಕೊಳ್ಳಲು ಅನುಕೂಲವಾಗುತ್ತದೆ. ಲೋಡ್‌ಗಟ್ಟಲೆ ಗೊಬ್ಬರ ಸಾಗಾಟದ ಶ್ರಮ, ಸಮಯ ಹಾಗೂ ಹಣ ಉಳಿಕೆ ಸಾಧ್ಯ.

‘ಇದರಲ್ಲಿ ಬಳಸುವ ಸುಣ್ಣ, ರೋಗ ತಡೆಗಟ್ಟುವ ಸಾಮರ್ಥ್ಯ ಹೊಂದಿರುತ್ತದೆ. ಮಣ್ಣಿನಿಂದ ಹರಡಬಹುದಾದ ರೋಗ, ಹುಳುಗಳ ಬಾಧೆ ನಿಯಂತ್ರಣಗೊಳ್ಳುತ್ತದೆ. ಹುಡಿಯಲ್ಲಿ ಬಳಸಿದ ಗಂಜಲ, ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಸ್ಥಳೀಯ ವಾಗಿಯೇ ಸಿಗುವ ಹೊಂಗೆ, ಬೇವು ಮತ್ತಿತರ ಸೊಪ್ಪುಗಳನ್ನು ಕೊಟ್ಟಿಗೆಯ ತಿಪ್ಪೆಗೊಬ್ಬರದಲ್ಲಿ ಸಂಗ್ರಹಿಸಿ ಅದರ ಮೇಲೆ ಟ್ರೈಕೋಡರ್ಮಾ ಪುಡಿ ಹಾಕಿದರೆ ಯಥೇಚ್ಚ ಹುಳುಗಳು ಉತ್ಪಾದನೆಯಾಗಿ ಸೊಪ್ಪು ಕಳಿತು ಮೃದುವಾದ ಹುಡಿಗೊಬ್ಬರ ಸಿಗುತ್ತದೆ. ಇದನ್ನೇ ಆರಿಸಿ ಗಂಜಲ, ಸುಣ್ಣ ಬೆರೆಸಿ ಬೀಜ ಬಿತ್ತನೆಗೆ ಬಳಸಿದರೆ ಹೆಚ್ಚು ಪರಿಣಾಮಕಾರಿ’ ಎನ್ನುತ್ತಾರೆ ರಘು.

ಬೀಜ ಬಿತ್ತಿದ 4–5ದಿನಕ್ಕೆ ಮೊಳಕೆ ಬರುತ್ತದೆ. ಮಣ್ಣಿನಲ್ಲಿರುವ ತೇವ ಹೀರಿಕೊಂಡು ಬೆಳೆಯತೊಡಗುತ್ತದೆ. ಒಂದೆರಡು ಮಳೆಯಾದರೂ ಸಾಕು ಕೊರಲೆಯ ಬೆಳವಣಿಗೆ ಸರಾಗ. ಕಳೆ ನಿಯಂತ್ರಣೆಗೆ ಬಿತ್ತನೆ ಮಾಡಿದ 25ನೇ ದಿನಕ್ಕೆ ಎಡೆಕುಂಟೆ ಹೊಡೆಯುತ್ತಾರೆ. ಹೆಚ್ಚಿನ ಪ್ರಮಾಣದ ಗೊಬ್ಬರ ಬಳಸುವುದರಿಂದ ಗಿಡಗಳು ಜಾಸ್ತಿ ಎತ್ತರಕ್ಕೆ ಬೆಳೆದು ನಿಲ್ಲುತ್ತದೆ. ಎತ್ತರ ಬೆಳೆದಂತೆ ತೆಳುವಾಗಿರುವ ಗಿಡಗಳು ತೆನೆಗಳ ಭಾರಕ್ಕೆ ಸಣ್ಣ ಗಾಳಿ ತಡವಿದರೂ ಮಲಗಿಬಿಡುತ್ತವೆ. ತೆನೆಗಳು ಅಡಿಯಲ್ಲಿ ಸೇರಿಕೊಂಡಾಗ ಕಾಳುಗಳಿಗೆ ಸೂರ್ಯನ ಕಿರಣಗಳು ದೊರಕದೇ ಬೆಳವಣಿಗೆ ಕುಂಠಿತವಾಗುತ್ತದೆ. ಕಾಳುಗಳು ಜೊಳ್ಳಾಗಿ ಪರಿವರ್ತನೆಯಾಗುತ್ತದೆ. ಹಾಗಾಗಿ ಹೆಚ್ಚಿನ ಗೊಬ್ಬರ ಬಳಸದೇ ಬೆಳೆಯಬೇಕು ಎನ್ನುವುದು ಅವರ ಸಲಹೆ.

ಕಟಾವಿನ ಸಮಯ ನಿರ್ಲಕ್ಷ ಸಲ್ಲದು: ಗರಿಗಳ ತೆನೆ ಹಳದಿ ಬಣ್ಣಕ್ಕೆ ತಿರುಗಿದರೆ ಫಸಲು ಮಾಗಿದೆ ಎಂದರ್ಥ. 75-80 ದಿನಕ್ಕೆ ಕೊರಲೆ ಕಟಾವಿಗೆ ಸಿಗುತ್ತದೆ. ಕಟಾವು ಸಮಯಕ್ಕೆ ಸರಿಯಾಗಿ ಆಗಲೇಬೇಕು. ಕೊರಲೆಯ ಗೊನೆಗಳು ಬಹಳ ಮೃದು. ಸಮಯಕ್ಕೆ ಕತ್ತರಿಸದಿದ್ದಲ್ಲಿ ಗದ್ದೆಯಲ್ಲಿಯೇ ಉದುರಿ ಹೋಗುತ್ತದೆ. ಹೀಗಾದರೆ ಆರಿಸುವುದು ಅಸಾಧ್ಯ.

ಎಕರೆಗೆ 6-7 ಕ್ವಿಂಟಾಲ್ ಇಳುವರಿ ಸಿಗುತ್ತದೆ. ನೀರಾವರಿ ಕೃಷಿಯಾದಲ್ಲಿ 10-12 ಕ್ವಿಂಟಾಲ್ ಇಳುವರಿ ಸಿಗುತ್ತದೆ. ಒಂದು ಕ್ವಿಂಟಾಲ್ ಕೊರಲೆ ಕಾಳಿನ ಸಂಸ್ಕರಣೆಯಿಂದ 50 ಕೆ.ಜಿ. ಅಕ್ಕಿ ಸಿಗುತ್ತದೆ. ಐದು ಕಿ.ಗ್ರಾಂ ನುಚ್ಚು ಸಿಗುತ್ತದೆ. 45 ಕೆ.ಜಿ. ತೌಡು ಸಿಗುತ್ತದೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಕೊರಲೆ ಅಕ್ಕಿಗೆ 160 ರೂಪಾಯಿ ದರವಿದೆ. ಬೆಳೆದ ಧಾನ್ಯಗಳನ್ನು ಅಕ್ಕಿ ತಯಾರಿಸಿ ಮಾರುತ್ತಾರೆ.

ಸಿರಿಧಾನ್ಯಗಳ ಬಗ್ಗೆ ಆಸಕ್ತರ ಪ್ರಶ್ನೆಗಳಿಗೆ ಪ್ರಾತ್ಯಕ್ಷಿಕೆ ಮೂಲಕವೇ ಉತ್ತರ ನೀಡಬೇಕೆಂದು ತಮ್ಮ ಹೊಲದಲ್ಲಿ ತಲಾ ಅರ್ಧ ಎಕರೆಯಂತೆ ಸಾಮೆ, ಬರಗು, ಊದಲು, ನವಣೆ, ರಾಗಿ, ಹಾರಕ, ಸಜ್ಜೆ, ಜೋಳ ಬೆಳೆಗಳಿಗೆ ಸ್ಥಳ ಮೀಸಲಿಡುತ್ತಾರೆ. ಪ್ರತೀ ವರ್ಷ ನವಧಾನ್ಯಗಳ ಸಿರಿ ಇವರ ಹೊಲದಲ್ಲಿ ಮೈದಳೆದಿರುತ್ತದೆ. ನೋಡುಗರ ಕಣ್ಣುಗಳಿಗೆ ಮುದ ನೀಡುತ್ತದೆ. ಕೊರಲೆ ಬೆಳೆಗೆ ಸಿರಿಧಾನ್ಯಗಳ ಸಾಲಿನಲ್ಲಿ ಸ್ಥಾನ ಒದಗಿಸಿಕೊಡಲು ತಮ್ಮದೇ ಕೊಡುಗೆ ನೀಡಿದ ರಘು ಅವರ ಕಾರ್ಯ ಮಾದರಿಯಾಗಿದೆ. ಸಂಪರ್ಕಕ್ಕೆ: 9964519119.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry