ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಟಿಫಲ ಈ ಪಾಟಿ...

Last Updated 9 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ತಾಳೆ ಜಾತಿಗೆ ಸೇರಿದ ತಾಟಿಮರ ಮಲೇಷ್ಯಾ, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಮಾರಿಷಸ್, ಥಾಯ್ಲೆಂಡ್ ಹೀಗೆ ಹಲವು ರಾಷ್ಟ್ರಗಳಲ್ಲಿ ಬೆಳೆಯುವ ವೃಕ್ಷ. ಭಾರತದಲ್ಲಿ, ತಮಿಳುನಾಡಿನಲ್ಲಿ ಹೆಚ್ಚಾಗಿ ಇದನ್ನು ಬೆಳೆಯಲಾಗುತ್ತದೆ. ಸಸ್ಯಶಾಸ್ತ್ರದಲ್ಲಿ Borassus akeassii ಎಂದು ಕರೆಯಲಾಗುವ ತಾಟಿಮರದಲ್ಲಿ 34 ಪ್ರಭೇದಗಳಿವೆ. ತಮಿಳುನಾಡಿನಲ್ಲಿ ಇದನ್ನು ‘ಪನೆಮರ’ ಎಂದು ಕರೆಯಲಾಗಿದ್ದು, ‘ರಾಜ್ಯವೃಕ್ಷ’ ಎಂದೇ ಘೋಷಿಸಲಾಗಿದೆ. ಅಲ್ಲಿ ರಾಜ್ಯಾದ್ಯಂತ ಐದು ಕೋಟಿ ಮರಗಳಿದ್ದು, ಲಕ್ಷಾಂತರ ಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಿಕೊಟ್ಟಿದೆ.

ಬೀಜ ಹಾಕಿದರೆ ಸಾಕು, ಇನ್ಯಾವುದೇ ಆರೈಕೆ ಬೇಡದ ಏಕೈಕ ಮರ ಇದು. ನೀರುಣಿಸುವುದೇ ಬೇಕಿಲ್ಲ. ಎಲ್ಲ ಬಗೆಯ ಮಣ್ಣಿನಲ್ಲೂ ಬೆಳೆಯುವ ತಾಟಿಮರ, ಇತರ ಮರಗಳಂತೆ ಅಂತರ್ಜಲವನ್ನು ಹೀರಿ ಬದುಕುವುದಿಲ್ಲ. ಬದಲಿಗೆ, ಮಳೆ ನೀರು ಮತ್ತು ಗಾಳಿಯಲ್ಲಿರುವ ತೇವಾಂಶವನ್ನೇ ಕಾಂಡದ ಭಾಗದಲ್ಲಿ ಸಂಗ್ರಹಿಸಿಟ್ಟುಕೊಂಡು ಬರಗಾಲದಲ್ಲೂ ಬದುಕುವ ಸಾಮರ್ಥ್ಯ ಹೊಂದಿದೆ.

ಅಲ್ಲದೇ ಮಳೆ ನೀರನ್ನು ಅಂತರ್ಜಲಕ್ಕೆ ಸೇರಿಸುವುದರೊಂದಿಗೆ, ಮಣ್ಣಿನ ಸವೆತವನ್ನು ತಡೆಯುತ್ತದೆಯಂತೆ. ತಾಟಿಮರವನ್ನು ಹೊಲದ ಬದುಗಳಲ್ಲಿ ಬೆಳೆಸಬಹುದು. ಬೀಜವನ್ನು 2 ಅಡಿ ಆಳದ ಗುಂಡಿ ತೋಡಿ ತುಸು ಮರಳು ಮಿಶ್ರಣಮಾಡಿ ಮುಚ್ಚಬೇಕು. 30-40 ದಿನಗಳಲ್ಲಿ ಬೀಜ ಮೊಳಕೆಯೊಡೆಯುತ್ತದೆ. ಪ್ರಾರಂಭದಲ್ಲಿ ಬೆಳವಣಿಗೆ ನಿಧಾನ. ಕಾಯಿ ಬಿಡಲು ಸುಮಾರು 15 ವರ್ಷಗಳೇ ಬೇಕು. ಅದುವರೆಗೂ ಗರಿಗಳಿಂದ ಲಾಭ ಪಡೆಯ ಬಹುದು. ತಾಟಿಮರದಲ್ಲಿ ಪ್ರಮುಖವಾಗಿ ಗಂಡು-ಹೆಣ್ಣು ಎಂದು ಎರಡು ಜಾತಿಗಳಿವೆ. ಹೆಣ್ಣುಮರ ಮಾತ್ರ ಕಾಯಿಬಿಡುತ್ತದೆ. ಗಂಡುಮರದಿಂದ ಕಾಯಿ ಹೊರತುಪಡಿಸಿ ಬೇರೆಲ್ಲಾ ಪ್ರಯೋಜನಗಳನ್ನೂ ಪಡೆಯಬಹುದು.

ಸುಮಾರು 30 ಮೀಟರ್ ಎತ್ತರ ಬೆಳೆಯುವ ತಾಟಿಮರ 80 ರಿಂದ 100 ವರ್ಷಗಳವರೆಗೆ ಬದುಕಿ ಫಲಕೊಡುತ್ತದೆ. ಮೊಳಕೆ ಬಿಟ್ಟಾಗಿನಿಂದ ಕಡಿಯುವವರೆಗೂ ಅದರಿಂದ ಪ್ರಯೋಜನವಿದೆ. ಬೇರು (ಗೆಣಸು), ಕಾಂಡ, ಕಾಯಿ, ಹಣ್ಣು ಹೀಗೆ ವೃಕ್ಷದ ಒಂದೊಂದು ಭಾಗವೂ ಉಪಯುಕ್ತವಾಗಿದ್ದು, ಅವುಗಳಿಂದ ಅನೇಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಬೀಸಣಿಕೆ ಮಾದರಿಯ ಅದರ ಎಲೆಗಳು 2-3 ಮೀಟರ್ ಉದ್ದವಿರುತ್ತವೆ. ಅದನ್ನು ಬೀಸಣಿಕೆ ತಯಾರಿಸಲು ಬಳಸುತ್ತಾರೆ.

ಕಾಯಿಗಳನ್ನು ‘ತಾಟಿನಿಂಗು’ ಎಂದು ಕರೆಯುತ್ತಾರೆ. ಅದನ್ನು ಅಡ್ಡ ಕೊಯ್ದರೆ ಮೂರು ಗುಳಿ ಗಳಲ್ಲಿ ಮೃದುವಾದ ಶ್ವೇತವರ್ಣದ ತಿರುಳು ಸಿಗುತ್ತದೆ. ಇದನ್ನು ತಿಂದರೆ ಬಾಯಾರಿಕೆ ನೀಗಿ ದೇಹ ತಂಪಾಗುತ್ತದೆ. ಹೊಂಬಾಳೆಗೆ ಮಡಕೆ ಕಟ್ಟಿ ಸಂಗ್ರಹಿಸುವ ‘ನೀರಾ’ ತೆಂಗಿನ ಮರದ ನೀರಾಗಿಂತಲೂ ರುಚಿಕರ. ಇದನ್ನು ನೇರ ಸೇವಿಸುವುದಲ್ಲದೆ, ಅನ್ನ ಮತ್ತು ಕಡುಬು ತಯಾರಿಸಲು ಬಳಸುತ್ತಾರೆ. ತಾಟಿನೀರಾ ಹೊಟ್ಟೆ ಹುಣ್ಣನ್ನು ನಿವಾರಿಸುತ್ತದೆ.

ತಾಟಿನೀರಾವನ್ನು ಕೊಪ್ಪರಿಗೆಯಲ್ಲಿ ಕಾಯಿಸಿ ಬೆಲ್ಲ ತಯಾರಿಸುತ್ತಾರೆ. ಬೆಲ್ಲವನ್ನು ಸಂಸ್ಕರಿಸಿ ಕಲ್ಲುಸಕ್ಕರೆ ಮಾಡಲಾಗುತ್ತದೆ. ತಾಟಿಬೆಲ್ಲ ಅನೇಕ ಔಷಧೀಯ ಗುಣ ಹೊಂದಿದ್ದು, ಮನೆ ಔಷಧಿ ಹಾಗೂ ಆಯುರ್ವೇದದಲ್ಲಿ ಹೆಚ್ಚಾಗಿ ಬಳಸುತ್ತಾರೆ.

ಬೆಲ್ಲವು ವಾತ-ಪಿತ್ತ ನಿವಾರಕವಾಗಿದ್ದು, ಅದರಲ್ಲಿನ ಕಬ್ಬಿಣದ ಅಂಶ ಕಣ್ಣುಬೇನೆ, ಜಲದೋಷ, ಕ್ಷಯ, ಉಬ್ಬಸ ಮತ್ತು ಚರ್ಮದ ವ್ಯಾಧಿಗಳನ್ನು ಶಮನಮಾಡುತ್ತದೆ. 30 ಲೀಟರ್ ನೀರಾದಿಂದ 7 ಕೆ.ಜಿ. ಬೆಲ್ಲ ಪಡೆಯ ಬಹುದು. ಪ್ರತಿ ಮರದಿಂದ ವರ್ಷಕ್ಕೆ 150 ಲೀಟರ್ ನೀರಾ, 24 ಕೆ.ಜಿ. ಬೆಲ್ಲ, 16 ಕೆ.ಜಿ. ಕಲ್ಲುಸಕ್ಕರೆ, 10 ಕೆ.ಜಿ. ಸೌದೆ, 20 ಕೆ.ಜಿ. ನಾರು ಹಾಗೂ ಇನ್ನಿತರ ಉತ್ಪನ್ನಗಳನ್ನು ಪಡೆಯಬಹುದು.

ತಾಟಿ ಹಣ್ಣಿನಿಂದ ತಯಾರಿಸುವ ಎಣ್ಣೆಯನ್ನು ಅಡುಗೆ ಹಾಗೂ ವಾಹನಕ್ಕೆ ಇಂಧನವನ್ನಾಗಿ ಬಳಸಲಾಗುತ್ತದೆ. ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ ತಾಟಿಮರದ ಉತ್ಪನ್ನಗಳ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತದೆ. ನೀರಿನ ಬವಣೆ ಹಾಗೂ ಕೃಷಿ ವೆಚ್ಚಗಳು ದಿನೇದಿನೇ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ರೈತರು ತಾಟಿ ಮರ ಬೆಳೆದು ಲಾಭ ಪಡೆಯಬಹುದು. 


 –ಬಲುರುಚಿಕರ ತಾಟಿ ಬೆಲ್ಲ

*


ಹೊಲದ ಬದುಗಳಲ್ಲಿ ಬೆಳೆಯುವ ತಾಟಿ ಗಿಡಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT