ಶುಕ್ರವಾರ, ಡಿಸೆಂಬರ್ 6, 2019
24 °C

ಕಲ್ಲು ಕಟ್ಟಿ, ಮಣಭಾರ ಹೊರುವ ಜಟ್ಟಿ

Published:
Updated:
ಕಲ್ಲು ಕಟ್ಟಿ, ಮಣಭಾರ ಹೊರುವ ಜಟ್ಟಿ

ಈ ಬಿರುಬಿಸಿಲಲ್ಲಿ ಎರಡೂ ಕಾಲುಗಳಿಗೆ ತಲಾ 32 ಕೆ.ಜಿ. ತೂಕದ ಸಂಗ್ರಾಣಿ ಕಲ್ಲುಗಳನ್ನು ಕಟ್ಟಿಕೊಂಡು ಹೆಗಲ ಮೇಲೆ 237 ಕೆ.ಜಿ. ಒಜ್ಜೆ ಇರುವ ಗೋಧಿ ಚೀಲ ಗಳನ್ನು ಹೊತ್ತುಕೊಂಡು ಒಂದಷ್ಟು ದೂರ ನಡೆಯಬೇಕೆಂದರೆ ಹೇಗಾಗಿರಬೇಡ?

ಅದು ಹೋಗಲಿ, 12 ಸಂಗ್ರಾಣಿ ಕಲ್ಲುಗಳ ಮೇಲೆ ಭೀಮಕಾಯದ ಪೈಲ್ವಾನ ನಿಂತು ಸುಮಾರು 40ರಿಂದ 50 ಕೆ.ಜಿ. ತೂಕದ ಕಬ್ಬಿಣದ ಸಲಾಕೆಯನ್ನು ಎತ್ತಿಕೊಳ್ಳುವುದು ಸಾಮಾನ್ಯ ಮಾತೇ? ಸ್ವಲ್ಪ ಆಯತಪ್ಪಿದರೂ ಕಲ್ಲುಗಳಿಂದ ಜಾರಿ ಕಬ್ಬಿಣದ ಸಲಾಕೆ ಸಮೇತ ಕೆಳಗೆ ಬಿದ್ದರೆ ಗತಿ ಏನಾದೀತು?

ಇಂತಹ ಹಲವಾರು ಸಾಹಸ ಪ್ರದರ್ಶನಗಳು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ. ಸುಮಾರು 250ರಿಂದ 300 ಕೆ.ಜಿ. ತೂಕದ ಕಲ್ಲನ್ನೋ, ಉಸುಕು ತುಂಬಿದ ಕೊಡವನ್ನೋ ಹೊತ್ತುಕೊಳ್ಳುವುದು ಒಂದೇ ದಿನದಲ್ಲಿ ಆಗುವಂಥದಲ್ಲ. ಇದಕ್ಕಾಗಿ ಜಗಜಟ್ಟಿಗಳು ವರ್ಷಾನುಗಟ್ಟಲೆ ತಾಲೀಮು ಮಾಡಿರುತ್ತಾರೆ. ಸಾಕಷ್ಟು ಕೊಡ ಬೆವರು ಹರಿಸಿರುತ್ತಾರೆ!

ಜಾಹೀರ ನೋಟಿಸ್‌: ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಭಾರ ಎತ್ತುವುದು ಹಾಗೂ ಕುಸ್ತಿ ಆಡುವುದು ಇಂದಿಗೂ ಅನೂಚಾನವಾಗಿ ನಡೆದುಕೊಂಡು ಬಂದಿದೆ. ‘ಮೊಬೈಲ್‌ ಫೋನ್‌, ಟಿ.ವಿ.ಗಳು ಬಂದ ಮೇಲೆ ಯುವಕರು ಹಾಳಾದರು’ ಎಂಬ ಅಪಸ್ವರಗಳ ಮಧ್ಯೆಯೇ ಮಜಬೂತಾಗಿ ದೇಹಸಿರಿಯನ್ನೂ, ಶಕ್ತಿಯನ್ನೂ ಕಾಯ್ದುಕೊಂಡು ಬಂದಿರುವ ಪೈಲ್ವಾನರು ಇಂದಿಗೂ ಕಾಣಸಿಗುತ್ತಾರೆ. ಅಷ್ಟೇ ಅಲ್ಲ. ಭಾರಿ ಶಕ್ತಿ ಪ್ರದರ್ಶನಗಳೂ ನಡೆಯುತ್ತವೆ.

ತಿಂಗಳ ಮುಂಚೆಯೇ ಈ ಸಂಬಂಧ ಸಾರ್ವಜನಿಕವಾಗಿ ಜಟ್ಟಿಯೊಬ್ಬರು ಜಾಹೀರ ನೋಟಿಸ್‌ ಹೊರಡಿಸುತ್ತಾರೆ. ಯಾವ ಬಗೆಯ ಕಸರತ್ತು ಮಾಡುತ್ತಾರೋ ಆ ಬಗ್ಗೆ ಸಂಪೂರ್ಣ ವಿವರಣೆ ಇರುತ್ತದೆ. ವಿವಿಧ ಗ್ರಾಮಗಳಲ್ಲಿ ಡಂಗೂರ ಸಾರುತ್ತಾರೆ. ಮೈಕ್‌ಗಳ ಮೂಲಕವೂ ಕೂಗಿ ಹೇಳುತ್ತಾರೆ. ಶಕ್ತಿ ಪ್ರದರ್ಶನದ ದಿನ ಇಡೀ ಊರಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಊರ ಹೊರಗಿನ ನಾಲ್ಕೈದು ಎಕರೆ ಬಯಲು ಜಾಗ ಇಲ್ಲವೇ ಶಾಲಾ ಮೈದಾನವನ್ನು ನಾಲ್ಕೈದು ದಿನಗಳ ಸತತ ಪರಿಶ್ರಮದಿಂದ ಸಜ್ಜುಗೊಳಿಸಲಾಗಿರುತ್ತದೆ.

ಸಾಮರ್ಥ್ಯ ಪರೀಕ್ಷೆ ನಡೆಯುವ ಸ್ಥಳವನ್ನು ಕಣ ಎಂದು ಕರೆಯಲಾಗುತ್ತದೆ. ಈ ಕಣವನ್ನು ಮಣ್ಣು, ಉಸುಕು ಹಾಕಿ ಮೆದು ಮಾಡಲಾಗಿರುತ್ತದೆ. ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕ ಲಾಗುತ್ತದೆ. ಸಾಲದೆಂಬಂತೆ ಬರುವ ಜನರಿಗೆ ಪ್ರದರ್ಶನ ನೋಡಲು ಅನುಕೂಲವಾಗುವಂತೆ ಎಲ್‌ಇಡಿ ಪರದೆಗಳನ್ನೂ ಅಳವಡಿಸ ಲಾಗಿರುತ್ತದೆ. ರಂಗೋಲಿ ಯಿಂದ ಓಂ, ವೀರಾಂಜನೇಯ ಭಾವಚಿತ್ರವನ್ನು ಕಣದ ತುಂಬ ಚಿತ್ರಿಸಲಾಗಿರುತ್ತದೆ. ಸಂಘಟಕರು ಹೇಳುತ್ತಿದ್ದಂತೆಯೇ ಪೈಲ್ವಾನ ಒಂದೊಂದೇ ಕಲ್ಲನ್ನು ಎತ್ತಿ ಪ್ರದರ್ಶನ ಮಾಡಬೇಕು.

ಹಲವು ಸಾಹಸಗಳು: ಶಕ್ತಿ ಪ್ರದರ್ಶನ ಬರೀ ಸಂಗ್ರಾಣಿ ಕಲ್ಲುಗಳನ್ನು ಎತ್ತುವುದಕ್ಕಷ್ಟೇ ಸೀಮಿತವಾಗಿಲ್ಲ. 18ರಿಂದ 20 ಕೆ.ಜಿ. ತೂಕದ ತಾಮ್ರದ ಕೊಡದಲ್ಲಿ ಉಸುಕನ್ನು ತುಂಬಿ ಎತ್ತಿಕೊಂಡು ಇಡೀ ಕಣ ಸುತ್ತಾಡುವುದು, ಹತ್ತಾರು ಸಂಗ್ರಾಣಿ ಕಲ್ಲುಗಳ ಮೇಲೆ ಆಯ ತಪ್ಪದಂತೆ ನಿಂತುಕೊಂಡು ಕಬ್ಬಿಣದ ಅಚ್ಚು ಅಥವಾ ಕಲ್ಲನ್ನು ಎತ್ತಿಕೊಂಡು ನೆಲಕ್ಕೆ ಒಗೆಯುವುದು, 75ರಿಂದ 95 ಕೆ.ಜಿ.ವರೆಗಿನ ಜೋಡ ಹಿಡಿಕಿ (ಎರಡೂ ಕೈಗಳಲ್ಲಿ ಎತ್ತಿಕೊಳ್ಳುವ) ಕಲ್ಲುಗಳನ್ನು ಎತ್ತಿಕೊಳ್ಳುವುದು, 100 ಕೆ.ಜಿ.ಯಿಂದ 140 ಕೆ.ಜಿ. ಭಾರವುಳ್ಳ ಕಲ್ಲಿನ ದುಂಡಿಯನ್ನು ಹೆಗಲ ಮೇಲೆ ಹೊತ್ತು ಒಗೆಯುವುದು, ಒಂದೂವರೆ ಕ್ವಿಂಟಲ್‌ (150 ಕೆ.ಜಿ.) ಭಾರದ ಕಬ್ಬಿಣದ ಅಚ್ಚನ್ನು ಯಾರ ಸಹಾಯ ಇಲ್ಲದೆಯೇ ಹೆಗಲ ಮೇಲೆ ಹೊತ್ತುಕೊಂಡು ಮುಂದೆ ಸಾಗುವುದು. ವಿವಿಧ ತೂಕದ 25 ಸಂಗ್ರಾಣಿ ಕಲ್ಲುಗಳನ್ನು ಕೇವಲ ಒಂದು ನಿಮಿಷದಲ್ಲಿ ಎತ್ತಿ ಹಿಂದೆ ಎಸೆಯುವುದು ಹಾಗೂ ಅಂತಿಮವಾಗಿ 290 ಕೆ.ಜಿ. ತೂಕದ ಕಲ್ಲಿನ ರೂಲನ್ನು ಬೆನ್ನ ಮೇಲೆ ಹೊತ್ತುಕೊಂಡು ಕಣವನ್ನು ಸುತ್ತು ಹಾಕುವುದು– ಹೀಗೆ ಹಲವು ಕಸರತ್ತುಗಳನ್ನು ಪೈಲ್ವಾನರು ಮಾಡಬೇಕಾಗುತ್ತದೆ.

ಒಂದು ಶಕ್ತಿ ಪ್ರದರ್ಶನಕ್ಕೆ ಕನಿಷ್ಠ ಆರು ತಿಂಗಳಿಂದ ಒಂದು ವರ್ಷದವರೆಗೆ ತಾಲೀಮು ಮಾಡಬೇಕು. ನಿತ್ಯ ಬೆಳಿಗ್ಗೆ ಸಂಜೆ ಜಿಮ್‌ನಲ್ಲಿ, ಇಲ್ಲವೇ ಗರಡಿ ಮನೆಯಲ್ಲಿ ಸಾಮು ಹೊಡೆಯಬೇಕು. ಹಾಲು, ತುಪ್ಪ, ಖರ್ಜೂರದಂತಹ ಪೌಷ್ಟಿಕ ಆಹಾರವನ್ನು ಸೇವಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಅತ್ಯಂತ ಶಾಂತ ಮನಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎನ್ನುತ್ತಾರೆ ಜಟ್ಟಿಗಳು.

ಇತ್ತೀಚೆಗೆ ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಧಾರವಾಡ ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಶಿವಾನಂದ ಕರಿಗಾರ ಅಂತಹ ಶಕ್ತಿ ಪ್ರದರ್ಶನವನ್ನು ಮಾಡಿದರು. 1999ರಲ್ಲಿ ಇಂಥದೇ ಪ್ರದರ್ಶನ ಮಾಡಿದ್ದ ಕರಿಗಾರ, 2000ನೇ ಇಸ್ವಿಯಲ್ಲಿ ಮೈಸೂರು ದಸರಾದಲ್ಲಿ ಶಕ್ತಿ ಪ್ರದರ್ಶನ ಮಾಡಿ ‘ಮೈಸೂರು ಕೇಸರಿ’ ಬಿರುದು ಪಡೆದಿದ್ದರು.

ಧಾರವಾಡ, ಬೆಳಗಾವಿ, ವಿಜಯಪುರ ಸೀಮೆಯಲ್ಲಿ ಗರಡಿ ಮನೆಗಳ ನಿರ್ಮಾಣಕ್ಕೆಂದೇ ಆಯಾ ಜಿಲ್ಲಾ ಪಂಚಾಯ್ತಿಗಳು ಪ್ರತಿ ವರ್ಷ ಲಕ್ಷಾಂತರ ರೂಪಾಯಿಗಳನ್ನು ಮೀಸಲಿಟ್ಟಿರುತ್ತವೆ. ಆಗಾಗ ನಡೆಯುವ ಕುಸ್ತಿ, ಶಕ್ತಿ ಪ್ರದರ್ಶನಗಳು ಪೈಲ್ವಾನರಲ್ಲಿ ಹೊಸ ಹುಮ್ಮಸ್ಸು ಮೂಡಿಸುತ್ತವೆ.

ಗದೆ, ಚಿನ್ನದ ಉಂಗುರ ಆಹೇರಿ

ಒಂದೊಂದು ಶಕ್ತಿ ಪ್ರದರ್ಶನ ಮುಗಿದಾಗಲೂ ಅಭಿಮಾನಿಗಳು ಗದೆ, ಚಿನ್ನದ ಉಂಗುರ, ಶಾಲು ಹಾಕಿ ಸನ್ಮಾನ ಮಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ. ಮಧ್ಯೆ ಮಧ್ಯೆ ಸನ್ಮಾನಗಳು ನಡೆದರೆ ಜಟ್ಟಿಗಳ ಮೈ ಆರುತ್ತದೆ ಎಂದು ಸಂಘಟಕರು ಪದೇ ಪದೇ ಮನವಿ ಮಾಡಿಕೊಂಡರೂ, ನೆಹರೂ ಅಂಗಿ, ಧೋತರ, ಹೆಗಲ ಮೇಲೊಂದು ಟವೆಲ್‌ ಹಾಕಿಕೊಂಡ ಹಿರಿಯ ಅಭಿಮಾನಿಗಳು ಕಣದತ್ತ ದೌಡಾಯಿಸಿ ಸನ್ಮಾನ ಮಾಡುತ್ತಲೇ ಇರುತ್ತಾರೆ!

ಜಾಂಜ್ ಮೇಳದ ಅಬ್ಬರ

ಪ್ರತಿ ಬಾರಿ ಪೈಲ್ವಾನ ಒಂದೊಂದು ಸಾಹಸ ಮೆರೆದಾಗಲೂ ಜಾಂಜ್‌ ಮೇಳದವರು ಜೋರಾಗಿ ವಾದ್ಯ ಬಾರಿಸಿ ಹುರಿದುಂಬಿಸುತ್ತಾರೆ. ಪೈಲ್ವಾನನ ಸುತ್ತಲೂ ಇರುವ ಕಿರಿ ಜಟ್ಟಿಗಳೂ ಅಷ್ಟೇ, ಸಂಗ್ರಾಣಿ ಕಲ್ಲು ಎತ್ತುವವರೆಗೂ ಕುತೂಹಲದಿಂದ ಕಾಯ್ದು ಕಲ್ಲನ್ನೆತ್ತಿ ನೆಲಕ್ಕೆ ಅಪ್ಪಳಿಸಿದ ಕೂಡಲೇ ಓಹೋ ಎಂದು ಕೇಕೆ ಹಾಕುತ್ತಾರೆ. ‘ಬಾಹುಬಲಿ’ ‘ಬಾಹುಬಲಿ’ ಎಂಬ ಧ್ವನಿಗಳು ಕಣದ ಸುತ್ತಲೂ ಅನುರಣನಗೊಳ್ಳುತ್ತವೆ. ಭಾರ ಎತ್ತುವ ಸಾಹಸಿಗೆ ನೀರು ಕೊಡಲು, ಬೆವರು ಒರೆಸಲು ಹತ್ತಾರು ಸಹಾಯಕರು ಸಿದ್ಧರಾಗಿರುತ್ತಾರೆ.

ಪ್ರತಿಕ್ರಿಯಿಸಿ (+)