ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಗಂಧದಂಗಡಿಯಲ್ಲಿ ವಿಷದ ವಾಸನೆ

Last Updated 9 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಖದೀಜಾ, ಅತ್ತರಿನ ಅಂಗಡಿಯಾಕೆ. ಮನುಷ್ಯರ ಬೆವರ ವಾಸನೆಯನ್ನು ಘ್ರಾಣಿಸಿಯೇ ಅವರ ವರ್ತನೆಯನ್ನು ಅರಿಯಬಲ್ಲಷ್ಟು ಚಾಣಾಕ್ಷೆ. ಅದಕ್ಕೆ ತಕ್ಕ ಹಾಗೆ ಸುಗಂಧ ದೃವ್ಯಗಳನ್ನು ಕೊಡುವ ಕಾರಣಕ್ಕೂ ಅವಳು ಊರಲ್ಲಿ ಎಲ್ಲರಿಗೂ ಬೇಕಾದವಳು. ಅವಳ ಗಂಡ ಕವಿ. ಕಾವ್ಯದ ಬಲೆ ಬೀಸಿಯೇ ಅವಳನ್ನು ಮದುವೆಯಾದವನು. ಈಗ ಹೆಂಡತಿ, ಮಕ್ಕಳನ್ನು ಬಿಟ್ಟು ಅರಮನೆ ಸೇರಿಕೊಂಡಿದ್ದಾನೆ. ಖದೀಜಾಳ ಮೂವರು ಮಕ್ಕಳಲ್ಲಿ ಎರಡನೆಯವನು ತಾಹಿರ್.

ತಾಹಿರ್‌ ‘ಸುಗಂಧದ ಸೀಮೆಯಾಚೆ’ ನಾಟಕದ ನಾಯಕನೂ ಹೌದು, ನಿರೂಪಕನೂ ಹೌದು. ಅವನ ಬದುಕಿನ ಕಥೆಯ ನಿರೂಪಣೆಯ ಮೂಲಕವೇ ‘ಸುಗಂಧದ ಸೀಮೆಯಾಚೆ’ ನಾಟಕ ತೆರೆದುಕೊಳ್ಳುತ್ತ ಹೋಗುತ್ತದೆ.

ಧಾರ್ಮಿಕ ಮೂಲಭೂತವಾದಿಗಳ ಜತೆ ಕೈಜೋಡಿಸಿಕೊಂಡು ಜನರ ಬದುಕಿನ ಸ್ವಾತಂತ್ರ್ಯವನ್ನೂ ಕಿತ್ತುಕೊಳ್ಳುತ್ತಿರುವ ಪ್ರಭುತ್ವದ ವಿರುದ್ಧ ಬಂಡೆದ್ದ ಕಾರಣಕ್ಕೆ ಒಂದಿಷ್ಟು ಜನರನ್ನು ಸೆರೆಹಿಡಿದು ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಅದರಲ್ಲಿ ತಾಹಿರ್‌ ಕೂಡ ಒಬ್ಬ. ಆ ಕತ್ತಲ ಕೋಣೆಯಲ್ಲಿ ನರಳುತ್ತಲೇ ಅವನ ಸಹಕೈದಿಗಳೆಲ್ಲ ಸತ್ತುಹೋಗಿದ್ದಾರೆ.

ತಾಹಿರ್‌ನ ಪ್ರಸ್ತುತ ಮತ್ತು ಭೂತಕಾಲದ ಬದುಕಿನ ಎರಡು ಎಳೆಗಳನ್ನು ಒಟ್ಟೊಟ್ಟಿಗೇ ಹೆಣೆಯುತ್ತ ಬಿ.ಎಂ. ಗಿರಿರಾಜ್‌ ಈ ನಾಟಕನ್ನು ಕಟ್ಟಿದ್ದಾರೆ. ಈ ತಂತ್ರದಿಂದ ಸೂತಕ ಮತ್ತು ಸಂಭ್ರಮ ಎರಡನ್ನೂ ಅಕ್ಕ– ಪಕ್ಕ ಇಟ್ಟು, ಸಮೃದ್ಧಿಯ ಬದುಕು ಹೇಗೆ ಸ್ಮಶಾನಸದೃಶವಾಗಿಬಿಟ್ಟಿತು ಎಂಬುದನ್ನು ಸಶಕ್ತವಾಗಿ ಹೇಳುತ್ತ ಹೋಗಲು ಸಾಧ್ಯವಾಗಿದೆ. ನಿರೂಪಣೆಯಲ್ಲಿನ ಏಕತಾನತೆಯನ್ನು ಮುರಿಯಲೂ ಇದು ಸಹಕಾರಿಯಾಗಿದೆ.

ಸೌಖ್ಯವಾಗಿದ್ದ ಸಮುದಾಯವೊಂದರಲ್ಲಿ ಹೇಗೆ ಗೊತ್ತಿಲ್ಲದೇ ವಿಷದ ಬೀಜಗಳು ಚಿಗುರೊಡೆಯುತ್ತವೆ, ಅವು ಹೇಗೆ ಬದುಕಿನ ಸಹಜ ಸುಗಂಧವನ್ನು ಹತ್ತಿಕ್ಕಿ ಮೂಲಭೂತವಾದದ ಕಮಟನ್ನು ಹರಡುತ್ತವೆ ಎನ್ನುವುದನ್ನು ಈ ನಾಟಕ ವಾಚ್ಯವಾಗಿಯೂ, ರೂಪಕಾತ್ಮಕವಾಗಿಯೂ ಹೇಳುತ್ತದೆ.

ಸುಗಂಧ ದ್ರವ್ಯವನ್ನು ಕೊಡಲು ಹೋದಾಗ ತಾಹಿರ್‌ ಮತ್ತು ಮೆಹರುನಿಸಾ ನಡುವೆ ಪ್ರೇಮ ಹುಟ್ಟುತ್ತದೆ. ಅದು ಬೆಳೆದು ಅವರ ಬದುಕನ್ನು ಬೆಸೆಯುವ ಮೊದಲೇ ಪ್ರಭುತ್ವಗಳು ಬದಲಾಗಿ, ಮೂಲಭೂತವಾದದ ವಿಷ ಎಲ್ಲೆಡೆ ಹರಡಿ, ಸಹಜವಾಗಿ ಬದುಕಲು ಸಾಧ್ಯವಾಗಷ್ಟು ಧಾರ್ಮಿಕ ನಿಯಮಗಳನ್ನು ಜನರ ಮೇಲೆ ಹೇರಲಾಗುತ್ತದೆ. ಧರ್ಮದ ಮುಖವಾಡದಡಿಯಲ್ಲಿ ನಡೆಯುವ ಕ್ರೌರ್ಯಗಳು ಹೆಚ್ಚಾಗುತ್ತಿದ್ದಂತೆಯೇ ಖದಿಜಾಗೆ ಅತ್ತರನ್ನು ಘ್ರಾಣಿಸುವ ಶಕ್ತಿ ಹೊರಟುಹೋಗುತ್ತದೆ.

‘ಅಲ್ಲಾನ ಹೆಸರಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ನೋಡಿಯೂ ಸುಮ್ಮನಿರುವುದಕ್ಕಾಗಿಯೇ ತನಗೆ ಈ ಗತಿ ಬಂದಿದೆ’ ಎಂಬುದು ಅವಳ ಎಣಿಕೆ. ಕೊನೆಗೆ ಅವಳೂ ಮೂಲಭೂತವಾದಿಗಳ ಗುಂಡಿಗೆ ಬಲಿಯಾದಾಗ ತಾಹಿರ್‌ ಪ್ರಭುತ್ವದ ವಿರುದ್ಧದ ಬಂಡುಕೋರರನ್ನು ಸೇರಿ, ಪ್ರಭುತ್ವದ ಕೈಲಿ ಸೆರೆಯಾಳಾಗಿ ಜೈಲು ಸೇರುತ್ತಾನೆ. ಅವನ ಪ್ರೇಮ ಕಮರಿಹೋಗುತ್ತದೆ. ಹದಿನೆಂಟು ವರ್ಷಗಳ ನಂತರ ಆ ಪ್ರೇಮಿಗಳಿಬ್ಬರೂ ಭೇಟಿಯಾದರೂ ಒಟ್ಟಿಗೆ ಬದುಕಲಾರದಷ್ಟು ಬದುಕು ಬದಲಾಗಿಹೋಗಿರುತ್ತದೆ.

ಈ ಇಡೀ ನಾಟಕದ ಸನ್ನಿವೇಶಗಳು ನಡೆಯುವುದು ಮೊರೆಕ್ಕೊದಲ್ಲಿ. 1970ರಲ್ಲಿ ಆ ದೇಶದಲ್ಲಿ ನಡೆದ ಕೆಲವು ಘಟನೆಗಳಿಂದ ಪ್ರೇರಣೆ ಪಡೆದುಕೊಂಡು ಅವುಗಳನ್ನು ಇಂದಿನ ಕಾಲಕ್ಕೆ ಹೊಂದಿಸಿ ನಾಟಕ ಹೆಣೆದಿದ್ದಾರೆ ಗಿರಿರಾಜ್‌. ಮೊರೆಕ್ಕೊ ದೇಶದಲ್ಲಿನ ಮುಸ್ಲಿಂ ಮೂಲಭೂತವಾದದಿಂದ ಅಲ್ಲಿನ ಜನರ ಬದುಕಿನಲ್ಲಾದ ದುರಂತಗಳು, ಒಟ್ಟಾರೆ ಸಮಾಜದ ವಿಕಾಸಕ್ಕಾದ ಹಿನ್ನಡೆಯನ್ನು ಈ ನಾಟಕ ಹೇಳುತ್ತದೆ.

ಇದು ಅಷ್ಟೇ, ಅಂದುಕೊಂಡರೆ ಯಾವುದೋ ಕಂಡರಿಯದ ದೇಶದ ಕಥೆಯನ್ನು ಇಲ್ಲಿ ನಾಟಕವಾಗಿಸುವ ತುರ್ತು ಏನು ಎಂಬ ಪ್ರಶ್ನೆ ಹುಟ್ಟಬಹುದು. ಆದರೆ ಈ ನಾಟಕ ‘ಎಲ್ಲಿಯದೋ’ ಕಥೆಯನ್ನು ಹೇಳುತ್ತಲೇ ನಮ್ಮ ‘ಇಲ್ಲಿಯ’ ಹಲವು ಸಾಮಾಜಿಕ ಸಂದರ್ಭ– ಸನ್ನಿವೇಶಗಳನ್ನು ನೆನಪಿಸುತ್ತದೆ. ಕೆಲವು ಕಡೆಗಳಲ್ಲಿ ವೇಷಭೂಷಣ ಬದಲಿಸಿದರೆ ನಮ್ಮ ನೆಲದ ಧಾರ್ಮಿಕ ಮೂಲಭೂತವಾದದ ಕಥೆಯೇ ಆಗಿಬಿಡಬಹುದು ಎನ್ನಿಸಿದರೆ, ಇನ್ನು ಕೆಲವು ಕಡೆಗಳಲ್ಲಿ ನಮ್ಮ ನಾಳಿನ ಪರಿಸ್ಥಿತಿಗಳ ಮುಂಗಾಣ್ಕೆಯಂತೆಯೂ ಕಾಣಿಸುತ್ತದೆ. ಈ ನಾಟಕದ ಪ್ರಸ್ತುತತೆ ಇರುವುದೇ ಇಲ್ಲಿ.

ಯಾವುದೋ ದೇಶದ ಅಭಿವ್ಯಕ್ತಿ ಸ್ವಾತಂತ್ರದ ಮೇಲಿನ ಹಲ್ಲೆಗಳ ಕಥೆಯನ್ನು ಹೇಳುವ ಮೂಲಕ ನಿರ್ದೇಶಕರು ನಮ್ಮ ಕಥೆಯನ್ನೇ ಹೇಳುತ್ತಿದ್ದಾರೆ ಎನ್ನುವುದು ಮನಸ್ಸಿಗೆ ಹೊಳೆಯದೇ ಹೋದರೆ ಇದು ಬರೀ ಮೊರೆಕ್ಕೊ ದೇಶದ ಮುಸ್ಲಿಂ ಮೂಲಭೂತವಾದದ ಕಥೆಯಾಗಿಯಷ್ಟೇ ಕಾಣುತ್ತದೆ. ಆದರೆ ಯಾವುದೇ ಧರ್ಮಗಳ ಮೂಲಭೂತವಾದಗಳ ನಡುವೆ ಹೆಚ್ಚಿನ ವ್ಯತ್ಯಾಸವಿರುವುದಿಲ್ಲ. ಮತ್ತು ಅವೆಲ್ಲವೂ ಅಷ್ಟೇ ಅಪಾಯಕಾರಿ. ಆದ್ದರಿಂದ ‘ಸುಗಂಧದ ಸೀಮೆಯಾಚೆ’ಯಲ್ಲಿನ ಖಾಕಿ ವಸ್ತ್ರಧಾರಿಗಳು, ಕಪ್ಪು ವಸ್ತ್ರ, ಶಸ್ತ್ರಾಸ್ತ್ರಧಾರಿಗಳನ್ನು ಹಾಗ್ಹಾಗೆಯೇ ಅಲ್ಲಿಂದ ಇಲ್ಲಿಗೆ ಬದಲಾಯಿಸಿಕೊಳ್ಳಬಹುದು.

ನಮ್ಮಲ್ಲಿ ಇಂದು ಕಾಣಿಸಿಕೊಳ್ಳುತ್ತಿರುವ ಮೂಲಭೂತವಾದದ ರೋಗವು ಮುಂದಿನ ದಿನಗಳಲ್ಲಿ ಯಾವ ಬಗೆಯಲ್ಲಿ ಉಲ್ಬಣಿಸಬಹುದು ಎಂಬುದರ ಸೂಚನೆಯನ್ನೂ ಪಡೆದುಕೊಳ್ಳಬಹುದು. ಬಹುಶಃ ಈ ಸಾಧ್ಯತೆಗಳ ಕಾರಣಕ್ಕಾಗಿಯೇ ನಿರ್ದೇಶಕರು ನಮ್ಮ ದೇಶದ ಕಥೆಯನ್ನೇ ಹೇಳಬಹುದಾದ ಸಾಧ್ಯತೆಯನ್ನು ಬಿಟ್ಟು, ಯಾವುದೋ ದೇಶದ ಕಥೆಯ ಮೂಲಕ ‘ಮುಂಗಾಣ್ಕೆ’ಯ ಶೋಧನೆಗಿಳಿದಿರಬೇಕು. ಸಿಕಂದರ್‌ ಎಂಬ ಹೆಣ್ಣಾಗಬಯಸುವ ಪಾತ್ರವನ್ನು ತುಂಬ ಘನತೆಯಿಂದ ಚಿತ್ರಿಸಿರುವುದು ನಿರ್ದೇಶಕರ ಸೂಕ್ಷ್ಮ ಸಂವೇದನಾಶೀಲತೆಗೆ ಸಾಕ್ಷಿಯಾಗಿದೆ.

ಈ ಎಲ್ಲ ಕಾರಣಗಳಿಂದ ಗಮನಸೆಳೆದರೂ ಈ ನಾಟಕದಲ್ಲಿ ಹಲವು ಕೊರತೆಗಳೂ ಇವೆ. ಅತಿಯಾದ ಮಾತು ಅಂಥ ಕೊರತೆಗಳಲ್ಲಿ ಮೊದಲನೆಯದು. ಮೌನದಲ್ಲಿಯೇ ಪರಿಣಾಮಕಾರಿಯಾಗಿ ಸಂಭಾಷಿಸಬಹುದಾಗಿದ್ದ ಭಾವತೀವ್ರತೆಯ ಸೂಕ್ಷ್ಮಗಳನ್ನು ಹಲವೆಡೆ ಮಾತು ನುಂಗಿಹಾಕಿದೆ ಅನಿಸುತ್ತದೆ. ‘ಮೇಕಿಂಗ್‌’ನಲ್ಲಿರುವ ‘ಸಿನಿಮ್ಯಾಟಿಕ್‌’ ಗುಣ ಈ ನಾಟಕದ ಶಕ್ತಿಯೋ ಮಿತಿಯೋ ಎಂಬ ಕುರಿತಾಗಿ ವಿವರವಾದ ವಿಶ್ಲೇಷಣೆಗಿಳಿದರೆ ಅದು ಮತ್ತೊಂದೇ ಚರ್ಚೆಯಾದೀತು. ಆರೋಗ್ಯಕರ ಸಮುದಾಯದಲ್ಲಿ ಏಳುವ ಮೂಲಭೂತವಾದದ ವಿಷವೃಕ್ಷಗಳನ್ನು ಗುರ್ತಿಸುವ ನಾಟಕ, ಅದಕ್ಕೆ ಕಾರಣವಾದ ಸಂಗತಿಗಳನ್ನು ಕುರಿತು ಗಮನವನ್ನೇ ಹರಿಸದಿರುವುದೂ ದೋಷವಾಗಿಯೇ ಕಾಣುತ್ತದೆ. ನಮ್ಮ ನಿಮ್ಮಂತೆಯೇ ಸಾಮಾನ್ಯ ಬದುಕನ್ನು ಬದುಕುತ್ತಿರುವ ವ್ಯಕ್ತಿಯೊಬ್ಬ ಕೈಯಲ್ಲಿ ಗನ್‌ ಹಿಡಿದು ತನ್ನಂಥದೇ ಮನುಷ್ಯನನ್ನು ಕೊಲ್ಲುವ, ಅದನ್ನು ಪವಿತ್ರಕಾರ್ಯ ಎಂದು ಪರಿಗಣಿಸುವಂಥ ಮನಸ್ಥಿತಿ ಬೆಳೆಸಿಕೊಳ್ಳಲು ಕಾರಣ ಏನು ಎಂಬುದನ್ನು ಗುರ್ತಿಸುವುದೂ ಮುಖ್ಯವೇ ಅಲ್ಲವೇ?

ರವೀಂದ್ರ ಕಲಾಕ್ಷೇತ್ರದ ಪ್ರದರ್ಶನದಲ್ಲಿ ಬೆಳಕಿನ ವಿನ್ಯಾಸವೂ ನಾಟಕಕ್ಕೆ ಪೂರ್ತಿಯಾಗಿ ಪೂರಕವಾಗಿರಲಿಲ್ಲ. ಇದರಿಂದ ವೇದಿಕೆಯ ಸಮತೋಲನ ತಪ್ಪಿದಂತೆ ಕಾಣುತ್ತಿತ್ತು. ಧ್ವನಿವ್ಯವಸ್ಥೆಯೂ ಅಷ್ಟೊಂದು ಸಮರ್ಪಕವಾಗಿರದೆ ಹಲವು ಸಂಭಾಷಣೆಗಳು ಸರಿಯಾಗಿ ಕೇಳುತ್ತಿರಲಿಲ್ಲ.

ಇಂಥ ಹಲವು ಕೊರತೆಗಳನ್ನು ಇಟ್ಟುಕೊಂಡೂ ‘ಸುಗಂಧದ ಸೀಮೆಯಾಚೆ’ ನಾಟಕ ನಮ್ಮ ಇಂದಿನ ಬಿಕ್ಕಟ್ಟಿಗೆ ರೂಪಕಾತ್ಮಕವಾಗಿ ಸ್ಪಂದಿಸುವ ಕಾರಣಕ್ಕೆ ನೋಡಲೇಬೇಕಾದ ನಾಟಕ ಎನ್ನಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT