7

ರಾಜಧಾನಿಯಲ್ಲಿ ಐಪಿಎಲ್‌ ಜ್ವರ

Published:
Updated:
ರಾಜಧಾನಿಯಲ್ಲಿ ಐಪಿಎಲ್‌ ಜ್ವರ

ಒಂದೆಡೆ ಬಿಸಿಲಿನ ತಾಪಮಾನ ಏರುತ್ತಿದ್ದರೆ, ರಾಜಧಾನಿಯ ಕ್ರಿಕೆಟ್‌ ಪ್ರಿಯರಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಜ್ವರದ ಕಾವು ಏರತೊಡಗಿದೆ. ಐಪಿಎಲ್‌ ಟ್ವೆಂಟಿ–20 ಮಾದರಿಯ ಲೀಗ್‌ನ 11ನೇ ಆವೃತ್ತಿಗೆ ಈಗಾಗಲೇ ಚಾಲನೆ ದೊರೆತಿದ್ದು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ತವರು ಉದ್ಯಾನನಗರಿಯಲ್ಲಿ ಇದೇ 13ರಿಂದ ಪಂದ್ಯಗಳು ಆರಂಭವಾಗಲಿವೆ.

ಐಪಿಎಲ್‌ ಪಂದ್ಯಗಳನ್ನು ನಡೆಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿದ್ಧತಾ ಕಾರ್ಯವೂ ಪೂರ್ಣಗೊಂಡಿದೆ. ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೋಹ್ಲಿ ಸೇರಿದಂತೆ ಇತರ ಆಟಗಾರರು ಕಳೆದ ವಾರ ಇಲ್ಲಿ ಅಭ್ಯಾಸದ ತಾಲೀಮು ನಡೆಸಿದ್ದಾರೆ.

ಭಾರಿ ಹೊಡೆತಗಳ ಆಟಗಾರ ಕ್ರಿಸ್‌ಗೇಲ್‌ ಆರ್‌ಸಿಬಿ ತಂಡದಲ್ಲಿ ಇಲ್ಲದಿರುವುದು ಬೆಂಗಳೂರಿನ ಕ್ರಿಕೆಟ್‌ ಪ್ರಿಯರಲ್ಲಿ ಕೊಂಚ ಬೇಸರ ಮೂಡಿಸಿದೆಯಾದರೂ, ವಿರಾಟ್‌ ಕೊಹ್ಲಿ, ಎಬಿ ಡಿವಿಲಿಯರ್ಸ್‌, ಬ್ರೆಂಡನ್‌ ಮೆಕ್ಲಮ್‌ ತಮ್ಮ ವಿಭಿನ್ನ ಶೈಲಿಯ ಹೊಡೆತಗಳ ಮೂಲಕ ಜನರನ್ನು ರಂಜಿಸಲಿದ್ದಾರೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿದೆ.

ಈ ಸಲ ಭಾರಿ ಹೊಡೆತಗಳಿಗೆ ಅನುಕೂಲವಾಗುವಂತೆ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ಸಿದ್ಧಪಡಿಸಿರುವ ಮಾಹಿತಿ ದೊರೆತಿರುವುದರಿಂದ ಟಿಕೆಟ್‌ ಖರೀದಿಸಲು ಕ್ರಿಕೆಟ್‌ ಪ್ರೇಮಿಗಳು ಈಗಾಗಲೇ ಆನ್‌ಲೈನ್‌ ಮತ್ತು ಆಫ್‌ಲೈನ್‌ ಮೊರೆ ಹೋಗಿದ್ದಾರೆ. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳ ಪರೀಕ್ಷೆಗಳೂ ಮುಗಿದಿರುವುದರಿಂದ ಐಪಿಎಲ್‌ ವೀಕ್ಷಿಸುವವರಲ್ಲಿ ಮಕ್ಕಳು ಮತ್ತು ವಿದ್ಯಾರ್ಥಿ ಸಮುದಾಯವೂ ಹೆಚ್ಚಾಗಲಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಕೌಂಟರ್‌ನಲ್ಲಿ ಏಪ್ರಿಲ್‌ 7ರಿಂದ ಟಿಕೆಟ್‌ ಮಾರಾಟ ಮಾಡಲಾಗುತ್ತಿದ್ದು, ಕ್ರಿಕೆಟ್‌ ಪ್ರಿಯರು ಮುಗಿಬಿದ್ದು ಟಿಕೆಟ್‌ ಖರೀದಿಸುತ್ತಿದ್ದಾರೆ.

ಮೊದಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಂಟು ಪಂದ್ಯಗಳನ್ನು ನಡೆಸಲು ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಆದರೆ ರಾಜ್ಯದ ವಿಧಾನಸಭೆಗೆ ಮೇ 12ರಂದು ಸಾರ್ವತ್ರಿಕ ಚುನಾವಣೆ ನಡೆಯುವುದರಿಂದ ಅಂದಿನ ಪಂದ್ಯವನ್ನು ದೆಹಲಿಗೆ ಸ್ಥಳಾಂತರಿಸಲಾಗಿದೆ.

ದುಬಾರಿ ಟಿಕೆಟ್‌ ದರ: ಐಪಿಎಲ್‌ ನಡೆಯುವ ಕ್ರೀಡಾಂಗಣಗಳ ಪೈಕಿ ದೇಶದಲ್ಲಿಯೇ ಅತಿ ದುಬಾರಿ ಟಿಕೆಟ್‌ ದರವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಪಡಿಸಲಾಗಿದೆ. ಇಲ್ಲಿ ಟಿಕೆಟ್‌ ದರ ಕನಿಷ್ಠ ₹ 800ರಿಂದ ಆರಂಭವಾಗಿ ಗರಿಷ್ಠ ₹ 35,000ದವರೆಗೆ ಇದೆ. ಒಟ್ಟಾರೆ 36,500 ಸೀಟುಗಳ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣದಲ್ಲಿ 12 ಬಗೆಯ ಆಸನ ವ್ಯವಸ್ಥೆ ಮಾಡಲಾಗಿದ್ದು, ಇವುಗಳಿಗೆ ಪ್ರತ್ಯೇಕ ದರಗಳನ್ನು ನಿಗದಿ ಮಾಡಲಾಗಿದೆ.

ಕ್ರಿಕೆಟ್‌ ನಡೆಯುವ ಸಂದರ್ಭದಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶದಿಂದ ಸಂಚಾರ ಪೊಲೀಸರು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅಲ್ಲದೆ ಪಂದ್ಯ ಮುಗಿದ ನಂತರ ಪ್ರೇಕ್ಷಕರು ಹಿಂದಿರುಗಲು ಬಿಎಂಟಿಸಿ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆಯನ್ನು ಮಾಡಲಿದೆ.

‘ಪಂದ್ಯ ನಡೆಯುವ ದಿನಗಳಂದು ಮೆಟ್ರೊ ರೈಲು ಸಂಚಾರದ ಅವಧಿಯನ್ನು ಕಳೆದ ವರ್ಷದಂತೆ ಈ ವರ್ಷವೂ ಮಧ್ಯರಾತ್ರಿವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ’ ಎಂದು ಬಿಎಂಆರ್‌ಸಿಎಲ್‌ ವಕ್ತಾರ ಯು.ಎ.ವಸಂತರಾವ್‌ ತಿಳಿಸಿದ್ದಾರೆ.

ಬಿಗಿ ಪೊಲೀಸ್‌ ಭದ್ರತೆ: ಕ್ರೀಡಾಂಗಣ ಹಾಗೂ ಸುತ್ತಮುತ್ತ ಭದ್ರತೆ ಉಸ್ತುವಾರಿ ನೋಡಿಕೊಳ್ಳಲು 1000 ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸಿಬ್ಬಂದಿ ಆರು ತಂಡಗಳಾಗಿ ಬೆಳಿಗ್ಗೆಯಿಂದಲೇ ಗಸ್ತು ನಡೆಸಲಿದ್ದಾರೆ. ಕೆಎಸ್‌ಆರ್‌ಪಿ 8 ತುಕಡಿಗಳು, ಪುರುಷ ಕಮಾಂಡೊ ಪಡೆಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಕ್ರೀಡಾಂಗಣದ ಒಳಗೆ ಹಾಗೂ ಹೊರಗೆ ಸೇರಿ 130 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ.

‘ಹ್ಯಾಂಡ್‌ ಬ್ಯಾಗ್‌, ನೀರಿನ ಬಾಟಲಿ, ಆಹಾರ ಪೊಟ್ಟಣಗಳು, ಸಂಗೀತ ಪರಿಕರ, ಚಾಕು ಹಾಗೂ ಇತರೆ ಆಯುಧಗಳನ್ನು ಕ್ರೀಡಾಂಗಣದಲ್ಲಿ ತೆಗೆದುಕೊಂಡು ಹೋಗುವುದನ್ನು ನಿರ್ಬಂಧಿಸಲಾಗಿದೆ. ಕ್ರೀಡಾಂಗಣದೊಳಗೆ ಹೋಗುವವರನ್ನು  ತಪಾಸಣೆ ನಡೆಸಲು ಪರಿಣಿತ ಸಿಬ್ಬಂದಿ ನಿಯೋಜಿಸಲಾಗಿದ್ದು, ಮೆಟಲ್‌ ಡಿಟೆಕ್ಟರ್‌ ಯಂತ್ರಗಳನ್ನು ಬಳಸಲಾಗುವುದು.  ಪ್ರೇಕ್ಷಕರು ಒಂದು ಗಂಟೆ ಮುಂಚಿತವಾಗಿ ಕ್ರೀಡಾಂಗಣಕ್ಕೆ ಬರಬೇಕು' ಎಂದು ಅವರು ಮಾಹಿತಿ ನೀಡಿದ್ದಾರೆ.

ಬೆಳಿಗ್ಗೆ 5ರಿಂದಲೇ ಸರತಿ!

ಚಿನ್ನಸ್ವಾಮಿ ಕ್ರೀಡಾಂಗಣದ ಕೌಂಟರ್‌ನಲ್ಲಿ ಟಿಕೆಟ್‌ ಪಡೆಯಲು ಜನರು ಮುಗಿಬೀಳುತ್ತಿದ್ದಾರೆ. ಮುಂಜಾನೆ 5 ಗಂಟೆಯಿಂದಲೇ ಸರತಿಯಲ್ಲಿ ನಿಂತು ಟಿಕೆಟ್‌ಗಳನ್ನು ಖರೀದಿಸುತ್ತಿದ್ದಾರೆ. ಯುವಕರು, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್‌ ಖರೀದಿಯಲ್ಲಿ ತೊಡಗಿರುವ ದೃಶ್ಯಗಳು ಕಂಡು ಬಂದಿವೆ. ಒಬ್ಬರಿಗೆ ಒಂದು ಟಿಕೆಟ್‌ ಮಾತ್ರ ನೀಡಲಾಗುತ್ತಿದೆ. ಇದೇ 13 ಮತ್ತು 15ರ ಪಂದ್ಯಗಳಿಗೆ ಸಂಬಂಧಿಸಿದಂತೆ ₹ 800ರ ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ ಎಂಬ ಮಾಹಿತಿ ದೊರೆತಿದೆ.

ಟಿಕೆಟ್‌ ಬೇಕಾದರೆ...

ಆನ್‌ಲೈನ್‌ ಮೂಲಕ, ಸದಾಶಿವನಗರದ ಇಂಡಿಯನ್‌ ಬ್ಯಾಂಕ್‌ ಶಾಖೆಯಲ್ಲಿ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕೆಎಸ್‌ಸಿಎ ಕ್ಲಬ್‌ ಹೌಸ್‌ನ ಕೌಂಟರ್‌ನಲ್ಲಿ ಟಿಕೆಟ್‌ಗಳ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ಟಿಕೆಟ್‌ ಖರೀದಿಸುವವರು ಆಧಾರ್‌ ಕಾರ್ಡ್‌ನ ನಕಲು ಪ್ರತಿ ಮತ್ತು ಬೆರಳಚ್ಚು ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಆನ್‌ಲೈನ್‌ ಮೂಲಕ ಟಿಕೆಟ್‌ ಖರೀದಿಸುವವರು ಕ್ರೀಡಾಂಗಣ ಪ್ರವೇಶದ ಸಂದರ್ಭದಲ್ಲಿ ಆಧಾರ್‌ ಪ್ರತಿ ಮತ್ತು ಬೆರಳಚ್ಚಿನ ಗುರುತು ನೀಡಬೇಕು. ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಈ ನಿಯಮವನ್ನು ಜಾರಿಗೊಳಿಸಲಾಗಿದೆ. ಇದೇ 13ರಂದು ಆರ್‌ಸಿಬಿ ಮತ್ತು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡಗಳ ಪಂದ್ಯ ನಡೆಯಲಿದ್ದು, ಟಿಕೆಟ್‌ಗಳು ಬಿಕರಿಯಾಗುತ್ತಿವೆ.ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry