ಶುಕ್ರವಾರ, ಡಿಸೆಂಬರ್ 6, 2019
25 °C
ನಗರದ ಅತಿಥಿ

ಉಣ್ಣೆ ಬಟ್ಟೆಗೆ ರೆಜಿನಾ ಶಿಫಾರಸು!

Published:
Updated:
ಉಣ್ಣೆ ಬಟ್ಟೆಗೆ ರೆಜಿನಾ ಶಿಫಾರಸು!

ಈಗ ಕೈಲಿರುವುದು ಬಾಲಿವುಡ್‌ನ ‘ಏಕ್‌ ಲಡ್ಕಿ ಕೋ ದೇಖಾ ತೊ’. ನಗರದಲ್ಲಿ ಮೊನ್ನೆ ಇಂಡಿಯಾ ಫ್ಯಾಷನ್ ಫೋರಂನಲ್ಲಿ ವಸ್ತ್ರ ವಿನ್ಯಾಸಕ ಧ್ರುವ ಕಪೂರ್‌ ವಿನ್ಯಾಸದ ಮೆರಿನೊ ವೂಲ್‌ ಉಡುಗೆ ಧರಿಸಿ ಮಿಂಚಿದರು.

* ಈ ಬೇಸಿಗೆಗೆ ನಿಮ್ಮ ಸ್ಟೈಲ್?

ನಾನು ಯಾವಾಗಲೂ ಆರಾಮದಾಯಕ ಉಡುಪುಗಳನ್ನು ತೊಡಲು ಇಷ್ಟಪಡುತ್ತೇನೆ. ಸೀರೆ ಉಟ್ಟರೂ ಕಂಫರ್ಟ್ ಆಗಿರಬೇಕು. ಬೇಸಿಗೆಯಲ್ಲಿ ನಾನು ಹತ್ತಿ ಬಟ್ಟೆಗಳನ್ನು ತೊಡಲು ಇಷ್ಟಪಡುತ್ತೇನೆ. ಇತ್ತೀಚೆಗೆ ಉಣ್ಣೆ ಬಟ್ಟೆಗಳನ್ನೂ ಬೇಸಿಗೆಯಲ್ಲಿ ತೊಡಬಹುದು ಎಂದು ಗೊತ್ತಾಯಿತು. ಉಣ್ಣೆ ಬಟ್ಟೆಗಳ ಬಗ್ಗೆ ಅನೇಕ ತಪ್ಪು ಕಲ್ಪನೆಗಳಿವೆ. ಇವುಗಳು ಬೇಸಿಗೆ ಮತ್ತು ಚಳಿಗಾಲಕ್ಕೆ ಎರಡಕ್ಕೂ ಸೂಕ್ತವಾಗುತ್ತವೆ. ನಿಮ್ಮ ವಾರ್ಡ್‌ರೋಬ್‌ನಲ್ಲಿ ಬೇಸಿಗೆಯಲ್ಲಿ ಉಣ್ಣೆ ಬಟ್ಟೆಗಳ ಸಂಗ್ರಹಕ್ಕೂ ಜಾಗ ನೀಡಿ. ಬೇಸಿಗೆಯಲ್ಲಿ ಈ ಬಟ್ಟೆಗಳು ಬೆವರನ್ನು ಹೀರಿಕೊಂಡು ದೇಹವನ್ನು ತಂಪಾಗಿಡುತ್ತವೆ.

* ಇಂಡಿಯಾ ಫ್ಯಾಷನ್ ಫೋರಂ ಮತ್ತು ವಿನ್ಯಾಸಕ ಧ್ರುವ ಕಪೂರ್‌ ಅವರ ಸಂಗ್ರಹದ ಬಗ್ಗೆ ಹೇಳಿ.

ಧ್ರುವ ಕಪೂರ್‌ ಸೆಲೆಬ್ರಿಟಿ ಡಿಸೈನರ್‌. ನಾನು ಮೊದಲ ಬಾರಿ ಅವರ ಷೋದಲ್ಲಿ ಷೋ ಸ್ಟಾಪರ್‌ ಆಗಿ ಭಾಗವಹಿಸುತ್ತಿದ್ದೇನೆ. ಆದರೆ ಅವರ ವಿನ್ಯಾಸದ ಎಲ್ಲಾ ಉಡುಪುಗಳು ನನಗಿಷ್ಟ. ಅವರ ಸಂಗ್ರಹದಲ್ಲಿ ವಿಭಿನ್ನ ವಿನ್ಯಾಸಗಳಿವೆ. ನಾನು ಈ ಷೋದಲ್ಲಿ ತೊಟ್ಟ ಉಡುಪು ಬಗ್ಗೆ ಹೇಳಬೇಕೆಂದರೆ ಮೊದಲ ಬಾರಿಗೆ ಆ ಉಡುಪು ನೋಡಿದಾಗ ಆಶ್ಚರ್ಯ ಆಯಿತು. ಉಣ್ಣೆಯ ಉಡುಪು ಬೇಸಿಗೆ ಸೂಕ್ತ ಎಂಬುದು ಗೊತ್ತಾಯಿತು. ಈ ಬಟ್ಟೆಗಳಿಗೆ ಜೋಡಿಸಿದ್ದ ಹರಳುಗಳು ಉಡುಪಿನ ಮೆರುಗನ್ನು ಹೆಚ್ಚಿಸಿವೆ.

* ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದೀರಿ.

ಹೌದು. ‘ಏಕ್‌ ಲಡ್ಕಿ ಕೋ ದೇಖಾ ತೊ’ ಮೂಲಕ ಬಾಲಿವುಡ್‌ ಪ್ರವೇಶದ ಕನಸು ನನಸಾಗಿದೆ. ಚಿತ್ರದ ಬಗ್ಗೆ ಮಾತಾಡೋಕೆ ತುಂಬಾ ಇದೆ. ನನ್ನ ಪಾತ್ರದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಇದರಲ್ಲಿ ನನ್ನದು ವಿಭಿನ್ನವಾದ ಪಾತ್ರ. ಇಂತಹ ಒಂದು ಪಾತ್ರದ ಮೂಲಕ, ಚಿತ್ರದ ಮೂಲಕ ನಾನು ಬಾಲಿವುಡ್‌ ಪ್ರವೇಶಿಸುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಚಿತ್ರದ ಕತೆಯೊಂದಿಗೆ ನನ್ನ ಪಾತ್ರ ಸಾಗುತ್ತದೆ. ಇದರಲ್ಲಿ ಸೋನಂ ಕಪೂರ್‌, ರಾಜ್‌ಕುಮಾರ್‌ ಮೊದಲಾದವರು ಇದ್ದಾರೆ. ಮೊದಲ ಬಾರಿ ಸೆಟ್‌ನಲ್ಲಿ ಸೋನಂ ಕಪೂರ್‌ ಅವರನ್ನು ಭೇಟಿ ಮಾಡಿದಾಗ ಅವರು ಪಟಿಯಾಲ ಪ್ಯಾಂಟ್‌ ಮತ್ತು ಟಾಪ್‌ ಹಾಕಿಕೊಂಡಿದ್ದರು. ರೆಡ್‌ ಕಾರ್ಪೆಟ್‌ನಲ್ಲಿ ಸ್ಟೈಲಿಷ್‌ ಆಗಿ ಹೆಜ್ಜೆ ಹಾಕುವವರು ಅವರೇನಾ ಎಂದು ನನಗೆ ಆಶ್ಚರ್ಯ. ಅವರ ಹಾಗೆ ಒಬ್ಬ ನಟಿಯಾಗಿ ಪ್ರಯೋಗಗಳಿಗೆ ನಾವು ಯಾವಾಗಲೂ ಒಡ್ಡಿಕೊಳ್ಳಬೇಕು.

* ‘ಸೂರ್ಯಕಾಂತಿ’ಯಲ್ಲಿ ನಟಿಸಿದ್ದೀರಿ. ಹೇಗಿತ್ತು ಅನುಭವ?

ಅದ್ಭುತ ಅನುಭವ. ಇಲ್ಲಿಂದ ಅನೇಕ ನೆನಪುಗಳನ್ನು ಜೋಪಾನವಾಗಿ ಇಟ್ಟುಕೊಂಡಿದ್ದೇನೆ. ಆ ಚಿತ್ರದಲ್ಲಿ ಕೆಲಸ ಮಾಡಿದ್ದಕ್ಕೆ ನನಗೆ ತುಂಬಾ ಖುಷಿಯಿದೆ. ಬಳ್ಳಾರಿ, ಗೋವಾ ಸುತ್ತಮುತ್ತ ಚಿತ್ರೀಕರಣ ನಡೆದಿತ್ತು. ಕನ್ನಡದ ಸಂಭಾಷಣೆಗಳನ್ನು ಇಂಗ್ಲಿಷ್‌ನಲ್ಲಿ ಬರೆದು ಮಾತನಾಡುತ್ತಿದ್ದೆ. ಆಗ ನಾನು ಕಾಲೇಜಿಗೆ ಹೋಗುತ್ತಿದ್ದೆ. ಚಿತ್ರೀಕರಣಕ್ಕಾಗಿ ಸ್ವಲ್ಪ ಸಮಯ ಕಾಲೇಜಿನಿಂದ ಅನುಮತಿ ಪಡೆದಿದ್ದೆ. ಬಳಿಕ ಕೆಲ ತಿಂಗಳ ಕಾಲ ನಾನು ಕಾಲೇಜಿಗೇ ಹೋಗಿರಲಿಲ್ಲ. ಇಂತಹ ಅನೇಕ ನೆನಪುಗಳಿವೆ.

* ಮುಂದೆ ಕನ್ನಡದಲ್ಲಿ ನಟಿಸುತ್ತೀರಾ?

ನನಗೆ ತುಂಬಾ ಆಫರ್‌ಗಳು ಬರುತ್ತಿವೆ. ಇತ್ತೀಚೆಗೆ ಪ್ರಸಿದ್ಧ ನಟರ ಐತಿಹಾಸಿಕ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಬಂತು. ಆದರೆ ಸಮಯದ ಹೊಂದಾಣಿಕೆ ಆಗದ ಕಾರಣ ಒಪ್ಪಿಕೊಂಡಿಲ್ಲ.

* ನಿಮ್ಮ ತಾಯಿ ಕರ್ನಾಟಕದವರು. ನಿಮಗೆ ಕನ್ನಡ ಗೊತ್ತಿದೆಯಾ?

‘ಕನ್ನಡ ಗೊತ್ತಿಲ್ಲ’, ‘ಬೇಗ ಬೇಗ ಬನ್ನಿ’, ‘ಹೇಗಿದ್ದೀರಾ?’ ‘ಚೆನ್ನಾಗಿದ್ದೀನಿ’, ‘ಸ್ವಲ್ಪ ಸ್ವಲ್ಪ ಬರುತ್ತದೆ’...ಇಷ್ಟು ಕನ್ನಡ ಪದಗಳು ಬರುತ್ತವೆ. ನನ್ನ ತಾಯಿಯ ಊರು ರಾಯಚೂರು. ಅವರು ಅಲ್ಲಿಯೇ ಹುಟ್ಟಿ ಬೆಳೆದಿದ್ದು, ಬಳ್ಳಾರಿಯಲ್ಲಿ ಓದಿದ್ದು, ಅವರಿಗೆ ಕನ್ನಡ ಬರುತ್ತದೆ. ಆದರೆ ನಾನು ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ಹೀಗಾಗಿ ನನಗೆ ಕನ್ನಡ ಜ್ಞಾನ ಅಷ್ಟಕ್ಕಷ್ಟೇ.

* ನಿಮ್ಮ ಫಿಟ್‌ನೆಸ್‌ ಬಗ್ಗೆ ಹೇಳಿ?

ನಾನು ಯಾವಾಗಲೂ ವಾತಾವರಣಕ್ಕೆ ತಕ್ಕಂತೆ ನನ್ನ ಡಯಟ್‌ ಮತ್ತು ಫಿಟ್‌ನೆಸ್‌ ಕ್ರಮವನ್ನು ಬದಲಾಯಿಸಿಕೊಳ್ಳುತ್ತೇನೆ. ಆಹಾರಕ್ರಮವೂ ಕಟ್ಟುನಿಟ್ಟು. ಬೆಳಿಗ್ಗೆ ಒಂದು ಗ್ಲಾಸ್‌ ಬಿಸಿನೀರಿನೊಂದಿಗೆ ದಿನ ಆರಂಭವಾಗುತ್ತದೆ. ಬಳಿಕ ಮಸಾಲಾ ಟೀ ಅಥವಾ ಕಾಫಿ ಕುಡಿದು ಬೆಳಗ್ಗಿನ ತಿಂಡಿ ತಿನ್ನುತ್ತೇನೆ. ಆಗಾಗ ಒಣಹಣ್ಣುಗಳು ಹಾಗೂ ಎಳನೀರನ್ನು ಕುಡಿಯುತ್ತಿರುತ್ತೇನೆ. ಊಟದ ವೇಳೆ ತುಂಬ ತರಕಾರಿಗಳನ್ನು ತಿನ್ನುತ್ತೇನೆ. ಬೀಟ್‌ರೂಟ್‌, ಸೌತೆಕಾಯಿ ನಂಗಿಷ್ಟ. ನಾನು ಆಗಾಗ ಡಯಟ್‌ ಬದಲಾಯಿಸುತ್ತಲೇ ಇರುತ್ತೇನೆ. ಹಾಗಾಗಿ ನಾನು ಫಿಟ್‌ನೆಸ್‌ ಬಗ್ಗೆ ಯಾರಿಗೂ ಸಲಹೆ ಕೊಡಲ್ಲ. 

ಪ್ರತಿಕ್ರಿಯಿಸಿ (+)