ಅನಗತ್ಯ ಟೀಕೆ

7

ಅನಗತ್ಯ ಟೀಕೆ

Published:
Updated:

‘ಕಮ್ಯುನಿಸ್ಟರ ಹಳೆಯ ಚಾಳಿ’ ಎಂಬ ನನ್ನ ಬರಹದಲ್ಲಿ (ವಾ.ವಾ., ಮಾರ್ಚ್‌ 27) ರಾಮಾಯಣ ಕುರಿತಾದ ಪ್ರಸನ್ನ ಅವರ ವ್ಯಾಖ್ಯಾನವನ್ನು ತುಂಬ ಸುಂದರವಾದದ್ದೆಂದು ನಾನು ಮೆಚ್ಚಿದ್ದನ್ನು ಲಕ್ಷಿಸದೆ, ‘ವಾಲ್ಮೀಕಿ ರಾಮಾಯಣವನ್ನು ಬದ್ಧ ಕಲಾಕೃತಿ ಎಂದು ಕರೆದು, ರಾಮನನ್ನು– ಪರೋಕ್ಷವಾಗಿ ರಾಮಾಯಣವನ್ನು ಎಡಪಂಥೀಯ ಎಂದು ಬ್ರ್ಯಾಂಡ್ ಮಾಡಿದ ಪ್ರಸನ್ನ ಅವರ ಈ ರೀತಿಯ ದೃಷ್ಟಿಕೋನ ಹೊಸದೇನಲ್ಲ. ಅಂಥ ಪ್ರವೃತ್ತಿಗೆ ಇನ್ನೊಂದೆರಡು ನಿದರ್ಶನಗಳಿವೆ’ ಎಂದು ಹೇಳಿದ್ದಷ್ಟನ್ನೇ ಲಕ್ಷಿಸಿ ಡಾ. ಭಾಸ್ಕರ ಹೇರ್ಳೆಯವರು ಮಾಡಿದ ‘ಪೂರ್ವಗ್ರಹಪೀಡಿತ’ ಎಂಬ ಟೀಕೆ (ವಾ.ವಾ., ಏ. 2) ಅನಗತ್ಯ ಅಷ್ಟೇ ಅಲ್ಲ ಅರ್ಥರಹಿತ ಕೂಡ.

ಅಲ್ಲಿ ಬಂದಿರುವ ಕಮ್ಯುನಿಸಂ ಕುರಿತ ಮಾತು ನನ್ನದಲ್ಲ. ಹಿಂದೆ ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಪ್ರಕಟವಾಗಿದ್ದ ಬರಹದಲ್ಲಿದ್ದ ಈಜಿಪ್ಟ್‌ನ ಅಧ್ಯಕ್ಷರ ಮಾತು. ಹೇರ್ಳೆ ಹೇಳಿರುವಂತೆ ಅದು ‘ವಾಟ್ಸ್‌ ಆ್ಯಪ್‌ ಮಾಹಿತಿ ಥರದ ಆಧಾರರಹಿತವಾದ ಉದಾಹರಣೆ’ ಅಲ್ಲ.

‘ವೈಜ್ಞಾನಿಕ ತತ್ತ್ವಗಳನ್ನಾಧರಿಸಿದ ಕಮ್ಯುನಿಸ್ಟ್ ಸಿದ್ಧಾಂತಗಳು’ ಯಾರಿಗೆ ತಾನೆ ಪ್ರಿಯವಲ್ಲ? ಅದರಲ್ಲೂ ನಾನಾ ಅಸಮಾನತೆಗಳಿಂದ ಹಾಗೂ ಹಲವು ಬಗೆಯ ಶೋಷಣೆಗಳಿಂದ ತುಂಬಿ ತುಳುಕುತ್ತಿರುವ ನಮ್ಮ ದೇಶದಲ್ಲಿನ ಯಾವ ವಿಚಾರವಂತರಿಗೆ ತಾನೆ ಅವು ಆಪ್ಯಾಯಮಾನವೆನಿಸುವುದಿಲ್ಲ?

ಆದರೆ ಅವನ್ನು ಕೃತಿಗೆ ಇಳಿಸುವ ಭರದಲ್ಲಿ ಸರ್ಕಾರ, ಪಕ್ಷ, ಪಂಗಡಗಳ ದಾರಿ ಜಗತ್ತಿನ ಯಾವ ಭಾಗದಲ್ಲೂ ಹಿಂಸೆಯಿಂದ ಮುಕ್ತವಾಗಿಲ್ಲದಿರುವುದೇ ಅದರ ನ್ಯೂನತೆಯೆನಿಸುತ್ತದೆ. ಪೌಗಂಡ ವಯಸ್ಸಿನಲ್ಲಿ ಆಪ್ಯಾಯಮಾನವೆನಿಸಿದ ಕಮ್ಯುನಿಸ್ಟ್ ಸಿದ್ಧಾಂತ, ನೀತಿಗಳು ಆನಂತರದಲ್ಲೂ ಹಾಗನಿಸದೆ ಇರಲು ಕಾರಣ, ಬಹುಶಃ ಮನುಷ್ಯಪ್ರಾಣಿ ಎನ್ನುವವನು ಕೇವಲ ಹೊಟ್ಟೆಬಟ್ಟೆಗಳಿಗಾಗಿಯಷ್ಟೇ ಇರುವವನಾಗಿರದೆ ಅವನದೇ ಆದ ಹೃದಯ ಹಾಗೂ ಮನಸ್ಸುಗಳಿರುವವನೂ ಹೌದು ಎಂಬುದನ್ನು ಬಹುವೇಳೆ ಅದು ಮರೆತುಬಿಡುವುದೇ ಆಗಿದೆಯೆನಿಸುತ್ತದೆ.

ಹಿಂದೆ ಸಿದ್ಧಾಂತ ಮಾಡಲಾಗಿದ್ದ ಹಲವು ವೈಜ್ಞಾನಿಕ ಸಂಶೋಧನೆಗಳು ಮರುವಿಮರ್ಶೆಗೆ ಒಳಪಟ್ಟು ತಿದ್ದುಪಡಿಗೆ ಒಳಗಾಗುತ್ತಿರುವಾಗ, ಕಮ್ಯುನಿಸ್ಟ್ ಸಿದ್ಧಾಂತ ಎಷ್ಟರಮಟ್ಟಿಗೆ ಅಜರಾಮರ ಎಂಬುದನ್ನು ಕಾಲವೇ ನಿರ್ಧರಿಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry