ರಾಮ ಜಗದೇಕ ರಾಮನಾಗುವ ತುರ್ತು

7

ರಾಮ ಜಗದೇಕ ರಾಮನಾಗುವ ತುರ್ತು

Published:
Updated:

ಡಿ. ಉಮಾಪತಿ (ಪ್ರ.ವಾ., ಏ. 2 ಹಾಗೂ ಏ. 9) ತಮ್ಮ ಲೇಖನಗಳಲ್ಲಿ ಕೆಲವು ಸೂಕ್ಷ್ಮ ವಿಚಾರಗಳನ್ನು ಎತ್ತಿದ್ದಾರೆ. ಅಂಬೇಡ್ಕರ್ ಪತ್ನಿ ರಮಾಬಾಯಿ ಸಾಯುವ ಮುನ್ನ ವಿಠಲನ ದರ್ಶನಕ್ಕೆ ಹಾತೊರೆದು ನಿರಾಶರಾಗಿ ಪ್ರಾಣಬಿಟ್ಟಿದ್ದು ಹಾಗೂ ಅಂಬೇಡ್ಕರ್ ಎರಡನೇ ಪತ್ನಿ ಬ್ರಾಹ್ಮಣಿತಿ ಸವಿತಾ, ಆರು ಲಕ್ಷ ಅನುಯಾಯಿಗಳೊಡನೆ ಬೌದ್ಧ ಧರ್ಮ ಸೇರಿದ್ದು...

ಈ ದೇಶದಲ್ಲಿ ರಾಮಾಯಣ ಕುಲಕ್ಕೊಂದು ನೀತಿ ಹೇಳುವ ಪುರಾಣ. ಈ ಸತ್ಯ ಹೇಳುವ ಪಠ್ಯವೇ ದ್ರಾವಿಡ ಬ್ರಾಹ್ಮಣ ಲೇಖಕ ಎ.ಕೆ. ರಾಮಾನುಜಂ ನಿರೂಪಿಸಿರುವ ‘ಮುನ್ನೂರು ರಾಮಾಯಣ’. ಇದು ಪಥ್ಯವಾಗದ ಕಾರಣ ದಿಲ್ಲಿ ವಿಶ್ವವಿದ್ಯಾಲಯ ಇದನ್ನು ಕೈಬಿಟ್ಟಿತು. ಜೈನ, ಬೌದ್ಧ, ಕ್ರೈಸ್ತ, ಆದಿವಾಸಿ ಹಿಂದೂ... ಹೀಗೆ ಸಾವಿರಾರು ರಾಮಾಯಣಗಳುಂಟು. ಶೂದ್ರ ವಾಲ್ಮೀಕಿ ಎಲ್ಲೂ ಶ್ರೀರಾಮನನ್ನು, ಸೀತೆಯನ್ನು, ಲಕ್ಷ್ಮಣನನ್ನು ಬ್ರಾಹ್ಮಣೀಕರಿಸಿಲ್ಲ. ಏಕಸೂತ್ರಕ್ಕೂ ಪಳಗಿಸಿಲ್ಲ. ಗುಣಾವಗುಣಗಳನ್ನು ಮುಚ್ಚುಮರೆ ಮಾಡಿಲ್ಲ. ಹಾಗಾಗಿ ಶ್ರೀರಾಮನ ಪುರಾಣವು ಜನಮಾನಸದ ಪುರಾಣ.

ಶ್ರೀರಾಮನ ದಂಡಯಾತ್ರೆ, ದೇಶಕ್ಕೆ ಸ್ವರಾಜ್ಯ ತರಲು ಗಾಂಧೀಜಿಗೆ ಬೇಕಾಗಿತ್ತು. ಗಾಂಧೀಜಿಯ ಶ್ರೀರಾಮನಲ್ಲಿ ಜಾತಿ–ಮತ ಮೇಲು–ಕೀಳುಗಳಿಗೆ ಎಡೆಯಿಲ್ಲ. ಹೀಗಾಗಿ ಗಾಂಧೀಜಿಯಿಂದ ಶ್ರೀರಾಮನನ್ನು ಕುವೆಂಪು ಪುನಃ ದತ್ತು ಪಡೆದುಕೊಂಡು ದರ್ಶನಕ್ಕೇರಿಸಿದರು. ಹಾಗಾಗಿ ಶ್ರೀರಾಮಪಟ್ಟಾಭಿಷೇಕವು ಓಂಕಾರವೆಂಬ ಭಾರತದ ದಾರ್ಶನಿಕ ಶಕ್ತಿಗೆ ಅರ್ಪಿತವಾಯ್ತು. ಕೆಂಪು ಕೋಟೆಯ ಮೇಲೆ ದೇಶಿ ಬಾವುಟ ಏರಿದಾಗ ಅಲ್ಲಿ ಗಾಂಧೀಜಿ ಇರಲಿಲ್ಲ. ಕುವೆಂಪು ಶ್ರೀರಾಮ ಸಿಂಹಾಸನ ಏರಲಿಲ್ಲ. ಇದು ಪ್ರಜಾರಾಜ್ಯದಲ್ಲಿ ದುಃಖ ನಿವಾರಿಸುವ ಬುದ್ಧನ ಪರಿ.

ಇಂದು ಏನಾಗಿದೆ? ಅಟ್ಟದ ಮೇಲಿದ್ದ ಪಾತ್ರೆಗಳನ್ನೆಲ್ಲ ಶ್ರೀರಾಮನೆಂಬ ಹುಳಿ ಹಾಕಿ ತೊಳೆದು ಅಯೋಧ್ಯಾ ರಾಮನ ಗುಡಿಯೊಳಗೆ ಪೂಜೆಗೆ ಇಡಲಾಗುತ್ತಿದೆ. ಉತ್ತರ ಭಾರತವಾಯ್ತು. ಈಶಾನ್ಯ ಭಾರತವಾಯ್ತು. ಈಗ ಪುನಃ ಬಂಗಾಳ– ಬಿಹಾರ ಭಾರತಗಳಿಗೆ ಶ್ರೀರಾಮನ ರಥವನ್ನು ಹರಿಬಿಡಲಾಗುತ್ತಿದೆ. ರಾಮನವಮಿ ಹೆಸರಿನಲ್ಲಿ ಪಶ್ಚಿಮ  ಬಂಗಾಳದಲ್ಲಿ ಹಿಂಸಾಚಾರ ನಡೆದಿದೆ. ಅಲ್ಲಿನ ಅಸನ್ಸೋಲ್ ಕ್ಷೇತ್ರ ಸಂಸದ ಹಾಗೂ ಸಚಿವ ‘ಪ್ರತಿಭಟನಾಕಾರರ ಚರ್ಮ ಸುಲಿಸುವುದಾಗಿ’ ಬೆದರಿಕೆ ಒಡ್ಡಿದ್ದಾರೆ.

ಇದು, ‘ಗೋಹತ್ಯೆ ಮಾಡುವವರನ್ನು ಹತ್ಯೆ ಮಾಡಬೇಕಾದ್ದು ಪ್ರತಿಯೊಬ್ಬ ಹಿಂದೂವಿನ ಧಾರ್ಮಿಕ ಕರ್ತವ್ಯ’ ಎಂದು ವಿ.ಎಚ್.ಪಿ ಭಿತ್ತಿಪತ್ರ ಅಂಟಿಸಿದ್ದ ಫೈಜಾಬಾದಿನ ಭಯ ನೆನಪಿಸುತ್ತಿದೆ. ಅಂತೆಯೇ ಮೊನ್ನೆ ಕುದುರೆ ಸವಾರಿ ಮಾಡಿದನೆಂಬ ಕಾರಣಕ್ಕೆ ಗುಜರಾತಿನಲ್ಲಿ ಒಬ್ಬ ದಲಿತ ಯುವಕನನ್ನು ಕೊಲೆ ಮಾಡಿರುವ ಘಟನೆಯು ಕಾಲಮಾನದ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ಈ ನಡುವೆ ಮಂದಿರಗಳ ನಾಡೆಂದು ಹೆಸರಾಗಿರುವ ವಂಗ, ಕಳಿಂಗ ಹಾಗೂ ದ್ರಾವಿಡ ನಾಡುಗಳಲ್ಲಿ ಅಯೋಧ್ಯಾ ಶ್ರೀರಾಮನ ಕ್ಷುಲ್ಲಕ ವಿಚಾರಗಳಿಲ್ಲ ಎಂಬುದು ಬಹುಮುಖ್ಯ. ಇಲ್ಲಿರುವುದು ಜಗದೇಕ ರಾಮನ ತಿಳಿವಳಿಕೆ.

ಎರಡನೇ ವಿಶ್ವಮಹಾ ಸಮರವು ‘ಜಿಯೋನಿಸಂ’ ಉದುರಿಸಿದ ಬೀಜದ ಕಳೆ. ಅದು ಹೆಮ್ಮರವಾಗಿ ಬೆಳೆದು ನಾ ಅದಕ್ಕಿಂತ ಹೆಚ್ಚು ಎಂಬ ರಕ್ತ ಶ್ರೇಷ್ಠೀಕರಣದ ನಶೆಯನ್ನು ಹಿಟ್ಲರ್‌ನಲ್ಲಿ ಸೃಷ್ಟಿಸಿದ್ದು ಚರಿತ್ರೆ.  ಜಿಯೊ ಅಥವಾ ಯಹೂದಿಗಳು ಇಂದು ಸಹಾ ಅಮೆರಿಕೆಯ ಕೇಂದ್ರ ಮಿದುಳು. ಇದರ ಹನುಮಂತನ ಬಾಲವು ನಮ್ಮ ದೇಶದಲ್ಲೂ ಬೆಳೆಯಿತು. ಅತ್ತ ಮೊಗಲರ ಅಂತ್ಯದ ಪ್ಲಾಸಿ ಕದನ, ಇತ್ತ ಪೇಶ್ವೆ ಅಂತ್ಯದ ಮರಾಠಿ ಕದನ ಬ್ರಿಟಿಷ್ ಆಧಿಪತ್ಯವನ್ನು ಭದ್ರಪಡಿಸಿತು. ಪುನಃ ಇಸ್ಲಾಮರು; ಪೇಶ್ವೆ ಮೂಲದ ಚಿತ್ಪಾವನ ಬ್ರಾಹ್ಮಣರು ತಮ್ಮ ಕಳೆದುಹೋದ ಮತೀಯ ಸಾಮ್ರಾಜ್ಯಗಳನ್ನು ಪುನರ್ ಪಡೆಯುವ ಸಾಹಸದಲ್ಲಿ ಮುಸ್ಲಿಂ ಲೀಗ್ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘವಾಗಿ ಬೆಳೆದು ಒಡೆದ ಮಡಕೆಗಳಾಗಿರುವುದು ಇತಿಹಾಸ.

ಭಾರತ ದೇಶವು ಅವಿಭಜಿತವಾಗಿಯೇ ಉಳಿದಿದ್ದರೆ ಜನಸಂಖ್ಯೆ ದೃಷ್ಟಿಯಿಂದ ಇಡೀ ಭಾರತ ರಾಜಕೀಯ ಚಿತ್ರಣವೇ ಬೇರೆಯಾಗುತ್ತಿತ್ತು. ಈಗಿನ ಶ್ರೀರಾಮನ ರಥಕ್ಕೆ ಜಾಗವಿಲ್ಲದಂತಾಗುತ್ತಿತ್ತೇನೋ! ಇವೆರಡರ ನಡುವೆ ಈ ದೇಶದ ಶ್ರೀಸಾಮಾನ್ಯರು ರಾಮ– ರಾವಣರ ನಡುವೆಯ ಆಧುನಿಕ ಮಹಾ ಸಮರದ ರಥದಡಿಯಲ್ಲಿ ನರಳುವ ಜೀವಗಳು. ದುಃಖ ನಿವಾರಣೆಯ ವಿವೇಕಿಗಳಾದ ವಿವೇಕಾನಂದರನ್ನು, ಅಂಬೇಡ್ಕರಾದಿಗಳನ್ನು ‘ಇವ ನಮ್ಮವ’ ಎನ್ನುವ ಈಗಿನ ರಾಜಕೀಯ ತವಕ ಬೂಟಾಟಿಕೆಯದು. ವಿವೇಕಾನಂದರು ಹಿಂದೂ ಧರ್ಮದ ಔನ್ನತ್ಯ ಹೇಳುತ್ತಲೇ ‘ಉಚ್ಚ ವರ್ಣದವರಾದ ನೀವು ಚಲಿಸುವ ಸ್ಮಶಾನಗಳಾಗಿದ್ದೀರಿ’ ಎಂದು ಉಚ್ಚತೆಯನ್ನು ಧಿಕ್ಕರಿಸಿದ್ದರು. ಅಂಬೇಡ್ಕರ್ ಅವರಂತೂ ‘ಹಿಂದೂ ಧರ್ಮವೆಂಬುದು ವಿಷ’ವೆಂದು ಬಿಸಾಕಿದರು. ಒಳಗಿನ ಕೊಳಕನ್ನು ಸ್ವಚ್ಛ ಮಾಡುವುದನ್ನು ಗಾಂಧೀಜಿ ಹೇಳಿಕೊಟ್ಟರು. ಈ ಎಲ್ಲದರ ಅರಿವು ಮತ ನೀಡುವ ಜನರಿಗೆ ಗೊತ್ತಿದೆ.

ಗಾಂಧೀಜಿ ಕಾಲದಲ್ಲೇ ಆರ್.ಎಸ್.ಎಸ್. ಸುಪರ್ದಿನ ಆರ್ಗನೈಸರ್ ಎಂಬ ಪತ್ರಿಕೆಯು ‘ಯಹೂದ್ಯರೇ ಶ್ರೇಷ್ಠ ಮನುಜರು, ಅವರು ದೇವರಿಂದ ಆರಿಸಲ್ಪಟ್ಟವರು’ ಎಂದು ಹೊಗಳಿತ್ತು. ‘ಮುಸ್ಲಿಂ ವಿರುದ್ಧದ ದೌರ್ಜನ್ಯ ಪವಿತ್ರ ಕರ್ತವ್ಯ’ ಎಂದು ಸಹಾ ಹುಕುಂ ನೀಡಿದ ಸಂಗತಿಗಳಾಗಿದ್ದವು. 1949ರ ಡಿ.22ರಂದು ಬಾಬರಿ ಮಸೀದಿಯಂಗಳದಲ್ಲಿ ರಾಮಸೀತೆಯರ ವಿಗ್ರಹವಿಟ್ಟು ಭವಿಷ್ಯದ ಅಂಧಕಾರಕ್ಕೆ ಭಾಷ್ಯ ಬರೆಯಲಾಗಿತ್ತು. ಆಗ ನೆಹರೂ ಎಂಬ ಅಡ್ಡಗೋಡೆಯಿಲ್ಲದಿದ್ದರೆ 1992ರವರೆಗೂ ದೇಶವು ಜಾತ್ಯತೀತವಾಗಿ ಉಳಿಯುತ್ತಿರಲಿಲ್ಲ. ಗಾಂಧೀಜಿ ಕಾಲದಲ್ಲಿಯೇ ಕಾಂಗ್ರೆಸ್‍ನೊಳಗೆ ‘ಏಕಸಂಸ್ಕೃತಿ’ ಹಾಗೂ ‘ರಾಷ್ಟ್ರೀಯತೆ’ ಎಂಬ ವ್ಯಾಧಿಗ್ರಸ್ತರು ಇದ್ದರು. ಆಗ ಪ್ರಮುಖವಾಗಿ ಮದನ ಮೋಹನ ಮಾಳವೀಯ ಕಾಂಗ್ರೆಸ್ ಗದ್ದುಗೆ ಮೇಲೆ ಕುಳಿತಿದ್ದ ವರ್ಣಾಶ್ರಮ ಶ್ರಮಿಕ.

ಅದು ಮುಂದೆ ವಿ.ಪಿ. ಸಿಂಗ್ ಚಿಂತನೆಯ ಮಂಡಲ್ ವರದಿ ವಿರುದ್ಧ ಹೊರಟಿದ್ದುಂಟು. ಬಿಜೆಪಿಯ ಕಲ್ಯಾಣ ಸಿಂಗ್ ನೇತೃತ್ವದ ಸರ್ಕಾರವು ಬಾಬರಿ ಮಸೀದಿ ಬೀಳಿಸಿದ್ದುಂಟು. ಪ್ರಧಾನಿ ನರಸಿಂಹರಾಯರು ಇಲಿ ಬೆಕ್ಕಿನ ಚಿನ್ನಾಟವಾಡಿದ್ದುಂಟು. ಪಕ್ಷಾತೀತವಾಗಿ ಎಲ್ಲರೂ ಒಳಗೆ ಅಯೋಧ್ಯಾ ರಾಮ ಹೊರಗೆ ಜಗದೇಕರಾಮನೆಂದು ಜಪಿಸುವ ಮತಾಂಧರೇ ಹೌದು. ಯಾರೂ ಈ ದೇಶದ ಜನಸಾಮಾನ್ಯರ ಶ್ರೀರಾಮನಾರೆಂದು ಅರಿಯದವರು. ಹಾಗಾಗಿಯೇ ಚರಿತ್ರೆಯನ್ನು ಬಗೆದು ಮೂಳೆಗಳನ್ನು ಹುಡುಕುತ್ತಾ ಹೊರಟಿದ್ದಾರೆ. ಬುದ್ಧ, ಗಾಂಧಿಯರು ಹೃದಯ ಬಗೆದು ಶ್ರೀರಾಮನನ್ನು ತೆರೆದು ತೋರಿಸಬಲ್ಲ ಧಾರ್ಮಿಕ ಪುರುಷರು.  ದುಃಖ ನಿವಾರಣೆ ಎಂದರೆ ಇದು. ಇದೇ ಲಿಂಗಭೇದವಿಲ್ಲದ ಸರ್ವಜನಾಂಗ ಪೋಷಣೆ. ಅದೇ ನಿಜದ ರಾಜಕೀಯ ಧರ್ಮ. ಅದೇ ಶ್ರೀರಾಮ ಸೀತೆಯರನ್ನು ರಥದಿಂದಿಳಿಸಿಕೊಂಡು ಮನೆದುಂಬಿಸಿಕೊಳ್ಳುವ ದಿವ್ಯ ದಿಬ್ಬಣ.

**

ಡಾ. ರಾಜೇಗೌಡ ಹೊಸಹಳ್ಳಿ, 413, ಟೀಚರ್ ಕಾಲನಿ,  ನಾಗರಬಾವಿ, ಬೆಂ-72, ಫೋನ್ : 9980066070

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry