ಸೋಮವಾರ, ಜೂಲೈ 13, 2020
22 °C

ವಾಸ್ತವವಾದಿ ದೃಷ್ಟಿಕೋನದ ಬಾಂಧವ್ಯ ವೃದ್ಧಿಗೆ ಸಕಾಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಸ್ತವವಾದಿ ದೃಷ್ಟಿಕೋನದ ಬಾಂಧವ್ಯ ವೃದ್ಧಿಗೆ ಸಕಾಲ

ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಒಲಿ ಅವರು ಭಾರತಕ್ಕೆ ನೀಡಿದ ಮೂರು ದಿನಗಳ ಭೇಟಿ ಮುಖ್ಯವಾದುದು. ಗಡಿ ಜೊತೆಗೆ ಪುರಾತನ ನಾಗರಿಕತೆ, ಸಾಂಸ್ಕೃತಿಕ ಬಾಂಧವ್ಯವನ್ನೂ ಭಾರತದ ಜೊತೆಗೆ ಹಂಚಿಕೊಂಡಿದೆ ನೇಪಾಳ. ನೆರೆಹೊರೆಯ ರಾಷ್ಟ್ರಗಳು ಎಂಬುದಕ್ಕಿಂತ ಹೆಚ್ಚಿನದನ್ನು ಬಿಂಬಿಸುವ ಭಾವನೆ ಉಭಯ ದೇಶಗಳ ನಡುವಿನದು.

ನೇಪಾಳ ಸಂಕಷ್ಟಕ್ಕೆ ಸಿಲುಕಿದಾಗ ಭಾರತ ತೀವ್ರವಾಗಿ ಸ್ಪಂದಿಸಿದೆ. ಆದರೆ ಈ ದೀರ್ಘ ಬಾಂಧವ್ಯದಲ್ಲಿ ಪರಸ್ಪರ ತಪ್ಪು ತಿಳಿವಳಿಕೆ ಹಾಗೂ ಅಭದ್ರತೆಗಳೂ ಕೆಲವು ವಿಚಾರಗಳಿಂದ ಸೃಷ್ಟಿಯಾಗಿವೆ. ಮಾಧೇಸಿ ಆಂದೋಲನಕ್ಕೆ ಭಾರತದ ಬೆಂಬಲ, ಉಭಯ ರಾಷ್ಟ್ರಗಳ ಸಂಬಂಧದಲ್ಲಿ ಇರುಸುಮುರುಸಿಗೆ ಕಾರಣವಾಗಿತ್ತು. ಈಗ ಒಲಿ ಅವರ ಭೇಟಿ ಈ ಇರುಸುಮುರುಸನ್ನು ಹೋಗಲಾಡಿಸುವ ಒಂದು ಪ್ರಯತ್ನವಾಗಿಯೂ ಕಾಣಬಹುದು.

ಜಾಗತಿಕ ಪರಿಸರದ ಹೊಸ ವಾಸ್ತವಗಳ ನೆಲೆಗಟ್ಟಿನಲ್ಲಿ ಬಾಂಧವ್ಯವನ್ನು ಪುನರ್ ವ್ಯಾಖ್ಯಾನಕ್ಕೆ ಒಳಪಡಿಸಬೇಕಿರುವುದು ಸದ್ಯದ ಅಗತ್ಯ. 21ನೇ ಶತಮಾನದ ವಾಸ್ತವಗಳನ್ನು ಗಣನೆಗೆ ತೆಗೆದುಕೊಂಡು ಭಾರತದೊಂದಿಗೆ ಬಾಂಧವ್ಯ ಅಭಿವೃದ್ಧಿಪಡಿಸುವಂತಹ ಮಾತುಗಳನ್ನಾಡಿದ್ದಾರೆ ಒಲಿ. ನೇಪಾಳದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವವನ್ನು ಸದ್ಯದ ವಾಸ್ತವವಾಗಿ ಭಾರತ ಪರಿಗಣಿಸಬೇಕಾಗಿರುವುದು ಇಲ್ಲಿ ಮುಖ್ಯ.

‘ನೇಪಾಳಕ್ಕೆ ಎರಡು ನೆರೆ ರಾಷ್ಟ್ರಗಳಿವೆ’ ಎಂದು ಒಲಿ ಅವರು ಭಾರತ ಪ್ರವಾಸ ಆರಂಭಿಸುವ ಮುಂಚೆ ಹೇಳಿದ್ದಾರೆ. ಹೀಗಾಗಿ ಭಾರತದೊಂದಿಗಿನ ನೇಪಾಳದ ಬಾಂಧವ್ಯದಲ್ಲಿ ವಿಶೇಷವಾದದ್ದು ನಿರೀಕ್ಷಿಸುವುದು ಕಷ್ಟ. ಸಹಜವಾದ ಸ್ನೇಹ ಸಂಬಂಧ ವೃದ್ಧಿ ಇಂದಿನ ಅಗತ್ಯ.

ವ್ಯಾಪಾರ ಹಾಗೂ ಅಭಿವೃದ್ಧಿ ಕುರಿತಂತೆ ಚೀನಾದ ಆಸೆ ತೋರಿಸುವ ಭರವಸೆಗಳಿಂದ ಒಲಿ ಪ್ರಭಾವಿತರಾಗಿರುವಂತೆ ಕಂಡುಬರುತ್ತಿದೆ. ಚೀನಾದ ಮಹತ್ವಾಕಾಂಕ್ಷೆಯ ‘ಒಂದು ಗಡಿ ಒಂದು ರಸ್ತೆ’ (ಒನ್ ಬಾರ್ಡರ್ ಒನ್ ರೋಡ್) ಉಪಕ್ರಮದ ಭಾಗವಾಗಿದೆ ನೇಪಾಳ. ಈ ಬೆಳವಣಿಗೆಯನ್ನು ಭಾರತ ಗಮನಿಸಿದೆ. ಈಗ, ಉಭಯ ರಾಷ್ಟ್ರಗಳ ಬಾಂಧವ್ಯವನ್ನು ಗಟ್ಟಿ ಮಾಡಲು ರಕ್ಷಣೆ, ಸಂಪರ್ಕ, ಕೃಷಿ ಹಾಗೂ ವ್ಯಾಪಾರದಂತಹ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಒಲಿ ಅವರ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತುಕತೆ ನಡೆಸಿದ್ದಾರೆ. ಮೋದಿ ಅವರ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಘೋಷಣೆಯನ್ನು ಈ ನೆರೆ ರಾಷ್ಟ್ರಕ್ಕೂ ವಿಸ್ತರಿಸಲಾಗಿದೆ.

ಒಲಿ ಅವರು ‘ಸಮೃದ್ಧ ನೇಪಾಳ್ ಸುಖಿ ನೇಪಾಳ್’ ಎಂದು ಸ್ಪಂದಿಸಿದ್ದಾರೆ. ನೇಪಾಳದ ರಾಜಧಾನಿ ಕಠ್ಮಂಡು ಮತ್ತು ಆ ದೇಶದ ಜೊತೆಗೆ ಗಡಿ ಹಂಚಿಕೊಂಡಿರುವ ಬಿಹಾರದ ರಕ್ಸೌಲ್ ಮಧ್ಯೆ ರೈಲು ಮಾರ್ಗ ನಿರ್ಮಾಣ ಹಾಗೂ ಭಾರತ-ನೇಪಾಳ ಮಧ್ಯೆ ಒಳನಾಡು ಜಲಸಾರಿಗೆ ಸಂಪರ್ಕದ ಹೊಸ ಮಾರ್ಗಗಳ ಸೃಷ್ಟಿ ವಿಚಾರಗಳಿಗೆ ಒಲಿ ಅವರ ಭಾರತ ಭೇಟಿ ಕಾಲದಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಉಭಯ ರಾಷ್ಟ್ರಗಳ ನಡುವಣ ತೈಲ ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿಗೆ ಹಸಿರು ನಿಶಾನೆ ತೋರಲಾಗಿದೆ.

‘ಭಾರತ- ನೇಪಾಳದ ಬಾಂಧವ್ಯ ಭವಿಷ್ಯದತ್ತ ಮುಖ ಮಾಡಬೇಕು. ಹಿನ್ನೋಟವಲ್ಲ ಮುನ್ನೋಟ ಇಲ್ಲಿ ಮುಖ್ಯ’ ಎಂಬ ಒಲಿ ಮಾತು ಸರಿಯಾದುದು. ಭೌಗೋಳಿಕ ರಾಜಕೀಯ ದೃಷ್ಟಿಯಿಂದ ಆಯಕಟ್ಟಿನ ನೆಲೆಯಾಗಿ  ಭಾರತ ಹಾಗೂ ಚೀನಾ ಎರಡೂ ದೇಶಗಳಿಗೆ ನೇಪಾಳ ಮುಖ್ಯವಾದದ್ದು.

ಬೀಜಿಂಗ್ ಜೊತೆ ಒಲಿ ಅವರ ಬಾಂಧವ್ಯ ಈಗಿನ ತೀವ್ರತೆಯಲ್ಲೇ ಮುಂದುವರಿದರೆ, ಭಾರತಕ್ಕೆ ಚೀನಾದ ಬೆದರಿಕೆ ಹೆಚ್ಚಾಗಲಿದೆ. ಆಗ, ತನ್ನ ನೆರೆ ರಾಷ್ಟ್ರಗಳಿಗೆ ಸಂಬಂಧಿಸಿದ ಆಯಕಟ್ಟಿನ ಕಾರ್ಯಸೂಚಿಗಳನ್ನು ಮರುಹೊಂದಾಣಿಕೆ ಮಾಡಿಕೊಳ್ಳುವುದು ಭಾರತಕ್ಕೆ ಅನಿವಾರ್ಯವಾಗಲಿದೆ. ಚೀನಾದ ಮಿಲಿಟರಿ ಹಾಗೂ ಆರ್ಥಿಕ  ಆಕ್ರಮಣಕಾರಿ ನೀತಿಗಳಿಗೆ ಪ್ರತಿರೋಧ ತೋರಲು ಭಾರತ ಹಾಗೂ ನೆರೆಯ ರಾಷ್ಟ್ರಗಳು ಬದ್ಧತೆ ಪ್ರದರ್ಶಿಸಬೇಕು.

ಬಲವರ್ಧಿತ  ದ್ವಿಪಕ್ಷೀಯ ಬಾಂಧವ್ಯ ‘ಭಾರತದ ಪ್ರಗತಿ ಹಾಗೂ ಸಮೃದ್ಧಿಗೆ ಕಾರಣವಾಗುತ್ತದೆ’ ಎಂದು ಜಂಟಿ ಹೇಳಿಕೆಯಲ್ಲಿ ಹೇಳಲಾಗಿದೆ. ಆದರೆ ನೇಪಾಳ ಸಹ ಇದಕ್ಕೆ  ಸ್ಪಂದಿಸಬೇಕು. ಇದು ತನ್ನದೂ ಯಶಸ್ಸು ಹಾಗೂ ಸಮೃದ್ಧಿಗೆ ಪೂರಕ ಎಂಬುದನ್ನು ನೇಪಾಳ ಮನಗಾಣಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.