ಗುರುವಾರ , ಡಿಸೆಂಬರ್ 12, 2019
25 °C

ಕಾಂಗ್ರೆಸ್‌ ಟಿಕೆಟ್‌: ಮುಗಿಯದ ಕಸರತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಂಗ್ರೆಸ್‌ ಟಿಕೆಟ್‌: ಮುಗಿಯದ ಕಸರತ್ತು

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಪರಿಶೀಲನಾ ಸಮಿತಿ ಮುಖಂಡರು ಪಕ್ಷದ ರಾಜ್ಯ ಮುಖಂಡರೊಂದಿಗೆ ಇಲ್ಲಿ ಸೋಮವಾರ ತಡರಾತ್ರಿಯವರೆಗೆ ಸುದೀರ್ಘ ಚರ್ಚೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌, ಕಾರ್ಯಾಧ್ಯಕ್ಷರಾದ ಎಸ್‌.ಆರ್‌. ಪಾಟೀಲ, ದಿನೇಶ್‌ ಗುಂಡೂರಾವ್‌, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ, ಮುಖಂಡರಾದ ಡಿ.ಕೆ. ಶಿವಕುಮಾರ್‌, ಆರ್‌.ವಿ.ದೇಶಪಾಂಡೆ, ಕೆ.ಎಚ್‌. ಮುನಿಯಪ್ಪ, ಎನ್‌.ಚಂದ್ರಪ್ಪ, ಬಿ.ಕೆ. ಹರಿಪ್ರಸಾದ್‌ ಮತ್ತಿತರರೊಂದಿಗೆ ಪರಿಶೀಲನಾ ಸಮಿತಿ ಮುಖ್ಯಸ್ಥ ಮಧುಸೂದನ ಮಿಸ್ತ್ರಿ ಎರಡು ಸುತ್ತಿನ ಸಭೆ ನಡೆಸಿದರು.

ಸಂಜೆ 7ರಿಂದ ರಾತ್ರಿ 8ರವರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿ.ಪರಮೇಶ್ವರ್‌ ಅವರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಸ್ಥಿತಿಗತಿ ಕುರಿತು ಚರ್ಚಿಸಿದ ವರಿಷ್ಠರು, ರಾತ್ರಿ 8ಕ್ಕೆ ಬಂದ ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ವೀರಪ್ಪ ಮೊಯಿಲಿ ಅವರ ಉಪಸ್ಥಿತಿಯಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿದರು.

ಮಂಗಳವಾರ ಪಕ್ಷದ ಕೇಂದ್ರ ಚುನಾವಣೆ ಸಮಿತಿ ಸಭೆ ನಡೆಯಲಿದ್ದು, 125ರಿಂದ 140 ಅಭ್ಯರ್ಥಿಗಳ ಹೆಸರನ್ನು ಒಳಗೊಂಡ ಮೊದಲ ಪಟ್ಟಿಯನ್ನು ಅಂತಿಮಗೊಳಿಸಿ ಇದೇ 12ರಂದು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಟಿಕೆಟ್‌ಗಾಗಿ ಭಾರಿ ಸ್ಪರ್ಧೆ ಇರುವ ಕ್ಷೇತ್ರಗಳಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ, ಒಬ್ಬರ ಹೆಸರನ್ನೇ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಅನುಮೋದನೆಗೆ ನೀಡಬೇಕು. ಬಂಡಾಯಕ್ಕೆ ಅವಕಾಶ ಆಗದಂತೆ ತಡೆಯಲು ಮುಖಂಡರು ಪ್ರಯತ್ನಿಸಬೇಕು ಎಂಬ ದೃಷ್ಟಿಯಿಂದ ಬಹುತೇಕ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಯಿತು.

ಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಅಗತ್ಯವಾಗಿ ಅನುಸರಿಸಬೇಕಾದ ತಂತ್ರಗಳು, ಅಭ್ಯರ್ಥಿಗಳ ಆಯ್ಕೆಯ ಮಾನದಂಡ, ಜಿಲ್ಲಾವಾರು ಇರುವ ಸಮುದಾಯಗಳ ಲೆಕ್ಕಾಚಾರ, ಅಭ್ಯರ್ಥಿಗಳ ಜಾತಿ, ಗೆಲ್ಲಬಹುದಾದ ಸಾಧ್ಯತೆಗಳ ಕುರಿತು ಪಕ್ಷದ ರಾಜ್ಯ ಮುಖಂಡರೊಂದಿಗೆ ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ಚರ್ಚೆ ನಡೆಸಿದ ಮಿಸ್ತ್ರಿ, ಪಕ್ಷ ನಂಬಿರುವ ಸಾಮಾಜಿಕ ನ್ಯಾಯ ತತ್ವದ ಆಧಾರದಲ್ಲಿಯೇ ಟಿಕೆಟ್‌ ಹಂಚುವತ್ತ ಒಲವು ತೋರಿದರು ಎಂದು ತಿಳಿದುಬಂದಿದೆ.

ನೀತಿ ಸಂಹಿತೆ: ಕರ್ನಾಟಕ ಭವನಕ್ಕಿಲ್ಲ ಪ್ರವೇಶ!

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣಾ ನೀತಿ ಸಂಹಿತೆಯು ಇಲ್ಲಿನ ಕೌಟಿಲ್ಯ ಮಾರ್ಗದಲ್ಲಿರುವ ಕರ್ನಾಟಕ ಭವನ–1ಕ್ಕೆ ಸೋಮವಾರ ಬಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿಗೆ ಬಿಸಿ ಮುಟ್ಟಿಸಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ ಸೇರಿದಂತೆ ಪಕ್ಷದ ಹಿರಿಯ ಮುಖಂಡರನ್ನು ಕಂಡು ಟಿಕೆಟ್‌ಗೆ ಮನವಿ ಸಲ್ಲಿಸಬೇಕು, ಅವರ ಗಮನ ಸೆಳೆಯಬೇಕು ಎಂಬ ಉದ್ದೇಶದಿಂದ ರಾಷ್ಟ್ರ ರಾಜಧಾನಿಗೆ ದೌಡಾಯಿಸಿರುವ ಆಕಾಂಕ್ಷಿಗಳಿಗೆ ಮಾತ್ರವಲ್ಲದೆ, ಟಿಕೆಟ್‌ ಹಂಚಿಕೆ ಕುರಿತ ಬೆಳವಣಿಗೆಗಳನ್ನು ವರದಿ ಮಾಡಬೇಕೆಂಬ ಮಾಧ್ಯಮ ಸಿಬ್ಬಂದಿಗೂ ಭವನದೊಳಗೆ ಪ್ರವೇಶ ನಿರಾಕರಿಸಲಾಯಿತು.

ಮಧ್ಯಾಹ್ನ 2.30ರವರೆಗೆ ಭವನಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾತ್ರ ಪ್ರವೇಶ ದೊರೆಯಿತು. ಮಿಕ್ಕೆಲ್ಲ ಮುಖಂಡರು ಕರ್ನಾಟಕ ಭವನದತ್ತ ಬರಲಿಲ್ಲ. ಆದರೂ ರಾಜ್ಯದ ವಿವಿಧ ಕ್ಷೇತ್ರಗಳಿಂದ ಬಂದಿದ್ದ ಆಕಾಂಕ್ಷಿಗಳು, ಅವರ ಬೆಂಬಲಿಗರು ಭವನದೆದುರು ಸಂಜೆಯವರೆಗೆ ಸುಳಿದಾಡುತ್ತಿದ್ದುದು ಕಂಡುಬಂತು.

ಆದರೆ, ಸರ್ದಾರ್‌ ಪಟೇಲ್‌ ಮಾರ್ಗದಲ್ಲಿರುವ ಕರ್ನಾಟಕ ಭವನ–2ರಲ್ಲಿ ಮಾತ್ರ ‘ನೀತಿ ಸಂಹಿತೆ’ ಜಾರಿಯಾಗಿರಲಿಲ್ಲ. ಅಲ್ಲಿ ದಿನವಿಡೀ ರಾಜಕೀಯ ಪಕ್ಷಗಳ ಮುಖಂಡರು, ಶಾಸಕರು, ಆಕಾಂಕ್ಷಿಗಳು, ಅವರ ಬೆಂಬಲಿಗರು ಬೀಡು ಬಿಟ್ಟಿರುವುದು ಕಂಡುಬಂತು.

ಪ್ರತಿಕ್ರಿಯಿಸಿ (+)