ಶುಕ್ರವಾರ, ಡಿಸೆಂಬರ್ 13, 2019
19 °C
ಎಸ್‌ಸಿ, ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸಂಬಂಧ ‘ಸುಪ್ರೀಂ’ ಆದೇಶ

ಕೇರಳ: ಹರತಾಳ ಭಾಗಶಃ ಯಶಸ್ವಿ

ಪಿಟಿಐ Updated:

ಅಕ್ಷರ ಗಾತ್ರ : | |

ಕೇರಳ: ಹರತಾಳ ಭಾಗಶಃ ಯಶಸ್ವಿ

ತಿರುವನಂತಪುರ/ಕೊಚ್ಚಿ: ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯನ್ನು ದುರ್ಬಲಗೊಳಿಸಲಾಗುತ್ತಿದೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗಳು ಕರೆ ನೀಡಿದ್ದ ಹರತಾಳವು ಕೇರಳದಲ್ಲಿ ಸೋಮವಾರ ಭಾಗಶಃ ಯಶಸ್ವಿಯಾಗಿದೆ.

ಕೊಲ್ಲಂ ಮತ್ತು ಅಲಪ್ಪುಳದಲ್ಲಿ ಸರ್ಕಾರಿ ಬಸ್‌ಗಳ ಮೇಲೆ ಕಲ್ಲು ತೂರಲಾಗಿದೆ. ಕೆಲವು ಕಡೆಗಳಲ್ಲಿ ಬಲವಂತವಾಗಿ ಅಂಗಡಿಗಳ ಬಾಗಿಲು ಮುಚ್ಚಿಸಲಾಯಿತು. ರಸ್ತೆ ತಡೆ ನಡೆಯಿತು. ಆಟೊ ಮತ್ತು ಟ್ಯಾಕ್ಸಿಗಳ ಸಂಚಾರ ವಿರಳವಾಗಿತ್ತು. ಸೋಮವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಕೇರಳ ವಿಶ್ವವಿದ್ಯಾಲಯವು ಮುಂದೂಡಿತು. ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಹರತಾಳದ ನೇತೃತ್ವ ವಹಿಸಿದ ದಲಿತ ಆ್ಯಕ್ಷನ್ ಕೌನ್ಸಿಲ್‌ನ ಸಂಚಾಲಕ ಎಂ.ಗೀತಾನಂದನ್ ಹಾಗೂ ಕೆಲವು ಕಾರ್ಯಕರ್ತರನ್ನು ಬಂಧಿಸಲಾಗಿದೆ. ‘ಪೂರ್ವಗ್ರಹದಿಂದಾಗಿ ನನ್ನನ್ನು ಬಂಧಿಸಲಾಗಿದೆ’ ಎಂದು ಗೀತಾನಂದನ್‌ ಹೇಳಿದ್ದಾರೆ.

ರಾಜ್ಯದಾದ್ಯಂತ 30ಕ್ಕೂ ಅಧಿಕ ದಲಿತ ಸಂಘಟನೆಗಳು ಹರತಾಳದಲ್ಲಿ ಭಾಗಿಯಾಗಿದ್ದವು. ವಿರೋಧ ಪಕ್ಷಗಳ ಒಕ್ಕೂಟ ಯುಡಿಎಫ್, ಬಂದ್‌ಗೆ ಬೆಂಬಲ ಸೂಚಿಸಿದೆ.

‘ಸುಪ್ರೀಂ’ ಆದೇಶ ಏನು?: ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ದೂರು ಸಲ್ಲಿಕೆಯಾದರೆ ತಕ್ಷಣವೇ ಎಫ್‌ಐಆರ್‌ ದಾಖಲಿಸಬಾರದು ಮತ್ತು ಆರೋಪಿಗಳನ್ನು ಬಂಧಿಸಬಾರದು. ತನಿಖೆ ನಡೆಸಿದ ಬಳಿಕವೇ ಕ್ರಮ ಕೈಗೊಳ್ಳಬೇಕು. ಡಿವೈಎಸ್‌ಪಿ ದರ್ಜೆಯ ಅಧಿಕಾರಿಯೇ ತನಿಖೆ ನಡೆಸಬೇಕು’ ಎಂದು ಸುಪ್ರೀಂ ಕೋರ್ಟ್‌ ಮಾರ್ಚ್‌ 20ರಂದು ಆದೇಶ ನೀಡಿತ್ತು.

ಆದೇಶವನ್ನು ವಿರೋಧಿಸಿ, ದಲಿತ ಸಂಘಟನೆಗಳು ಇದೇ 2ರಂದು ‘ಭಾರತ್ ಬಂದ್’ ನಡೆಸಿದ್ದವು.

ಪ್ರತಿಕ್ರಿಯಿಸಿ (+)