ಮಂಗಳವಾರ, ಡಿಸೆಂಬರ್ 10, 2019
26 °C
ಕಾಂಗ್ರೆಸ್‌ನ ಸದ್ಭಾವನಾ ಉಪವಾಸ ಸತ್ಯಾಗ್ರಹಕ್ಕೆ ವಿವಾದದ ಕರಿನೆರಳು

ಮೋದಿ ಜಾತಿವಾದಿ, ದಲಿತ ವಿರೋಧಿ: ರಾಹುಲ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮೋದಿ ಜಾತಿವಾದಿ, ದಲಿತ ವಿರೋಧಿ: ರಾಹುಲ್‌

ನವದೆಹಲಿ: ನರೇಂದ್ರ ಮೋದಿ ಅವರೊಬ್ಬ ‘ಜಾತಿವಾದಿ’ ಮತ್ತು ‘ದಲಿತ ವಿರೋಧಿ’ ಪ್ರಧಾನಿ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

‘ಮೋದಿ ದಲಿತ ವಿರೋಧಿ ಮತ್ತು ಅವರ ಹೃದಯದಲ್ಲಿ ದಲಿತರಿಗೆ ಜಾಗವಿಲ್ಲ ಎನ್ನುವ ಸತ್ಯ ಇಡೀ ದೇಶಕ್ಕೆ ಗೊತ್ತಿದೆ. ಇದರಲ್ಲಿ ರಹಸ್ಯವೇನೂ ಇಲ್ಲ. ಸ್ವತಃ ಬಿಜೆಪಿಯ ದಲಿತ ಸಂಸದರೇ ಈ ಸತ್ಯವನ್ನು ಬಿಚ್ಚಿಟ್ಟಿದ್ದಾರೆ’ ಎಂದರು.

‘ದಲಿತರು, ಬುಡಕಟ್ಟು ಜನಾಂಗ, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರ ವಿರುದ್ಧ ಬಿಜೆಪಿ ದಬ್ಬಾಳಿಕೆ ಮಾಡುತ್ತಿದೆ’ ಎಂದು ಅವರು ದೂರಿದರು.

ಬಿಜೆಪಿಯ ಈ ದಬ್ಬಾಳಿಕೆ ಸಿದ್ಧಾಂತದ ವಿರುದ್ಧ ಕಾಂಗ್ರೆಸ್‌ ನಿರಂತರ ಹೋರಾಟ ನಡೆಸಲಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಹೋರಾಟದ ಫಲಿತಾಂಶ ಹೊರಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೋಮುವಾದ, ಜಾತಿ ಹಿಂಸಾಚಾರ, ದಲಿತರ ಮೇಲಿನ ಹಲ್ಲೆ ಖಂಡಿಸಿ ಕಾಂಗ್ರೆಸ್‌ ಸೋಮವಾರ ದೇಶದಾದ್ಯಂತ ಹಮ್ಮಿಕೊಂಡಿದ್ದ ಒಂದು ದಿನದ ಸಾಂಕೇತಿಕ ‘ಸದ್ಭಾವನಾ ಉಪವಾಸ ಸತ್ಯಾಗ್ರಹ’ಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.

‘ಬಜೆಟ್‌ ಅಧಿವೇಶನದ ಕಲಾಪಗಳು ಸುಸೂತ್ರವಾಗಿ ನಡೆಯದಿರಲು ಬಿಜೆಪಿಯೇ’ ಕಾರಣ ಎಂದು ರಾಹುಲ್‌ ಆರೋಪಿಸಿದರು.

ಉಪವಾಸ ಸತ್ಯಾಗ್ರಹ ಬೆಳಿಗ್ಗೆ 10.30ಕ್ಕೆ ಆರಂಭವಾಯಿತು. ರಾಹುಲ್‌ ಗಾಂಧಿ ಮಧ್ಯಾಹ್ನ 1 ಗಂಟೆಗೆ ಸ್ಥಳಕ್ಕೆ ಬಂದರು.

**

ವೇದಿಕೆ ಏರದಂತೆ ಸಜ್ಜನ್‌, ಟೈಟ್ಲರ್‌ಗೆ ತಡೆ!

ಉಪವಾಸ ಸತ್ಯಾಗ್ರಹದ ವೇದಿಕೆಯಲ್ಲಿ ಕುಳಿತುಕೊಳ್ಳದಂತೆ ಪಕ್ಷದ ಮುಖಂಡರಾದ ಜಗದೀಶ್‌ ಟೈಟ್ಲರ್‌ ಮತ್ತು ಸಜ್ಜನ್‌ ಕುಮಾರ್‌ ಅವರಿಗೆ ಸೂಚಿಸಿದ ಘಟನೆ ನಡೆದಿದೆ.

ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಈ ಇಬ್ಬರೂ ನಾಯಕರು ಅಲ್ಲಿಗೆ ಬಂದಿದ್ದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಗೆ ಪ್ರತೀಕಾರವಾಗಿ 1984ರಲ್ಲಿ ನಡೆದ ಸಿಖ್‌ ನರಮೇಧದ ಆರೋಪಿಗಳಾದ ಟೈಟ್ಲರ್‌ ಮತ್ತು ಕುಮಾರ್‌ ಅವರನ್ನು ವೇದಿಕೆಯಲ್ಲಿ ಕುಳಿತುಕೊಳ್ಳದಂತೆ ತಾಕೀತು ಮಾಡಲಾಯಿತು.

ಸತ್ಯಾಗ್ರಹದಿಂದ ದೂರ ಉಳಿಯುವಂತೆ ಕೂಡ ಈ ಇಬ್ಬರಿಗೂ ಸೂಚನೆ ನೀಡಲಾಗಿತ್ತು ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

ವರಿಷ್ಠರ ಸೂಚನೆ ದೊರೆಯುತ್ತಿದ್ದಂತೆಯೇ ಸಜ್ಜನ್‌ ಕುಮಾರ್‌ ಸ್ಥಳದಿಂದ ತೆರಳಿದರು. ಟೈಟ್ಲರ್‌ ವೇದಿಕೆ ಬಳಿ ನೆಲಹಾಸಿನ ಮೇಲೆ ಕಾರ್ಯಕರ್ತರ ಜತೆ ಕುಳಿತಿದ್ದರು.

‘ವೇದಿಕೆಯಲ್ಲಿ ಕುಳಿತುಕೊಳ್ಳದಂತೆ ಅಥವಾ ಸತ್ಯಾಗ್ರಹ ಸ್ಥಳವನ್ನು ತೊರೆಯುವಂತೆ ನನಗೆ ಯಾರೂ ಸೂಚನೆ ನೀಡಿಲ್ಲ’ ಎಂದು ಟೈಟ್ಲರ್‌ ಸ್ಪಷ್ಟಪಡಿಸಿದರು.

**

ರಾಹುಲ್‌ ಗಾಂಧಿ ರಾಜಕೀಯ ಭವಿಷ್ಯ ರೂಪಿಸುವ ಪ್ರಹಸನ: ಬಿಜೆಪಿ

‘ರಾಹುಲ್‌ ಗಾಂಧಿ ಅವರಿಗೆ ತ್ವರಿತವಾಗಿ ರಾಜಕೀಯ ಭವಿಷ್ಯ ರೂಪಿಸುವ ಪ್ರಹಸನ’ ಎಂದು ಕಾಂಗ್ರೆಸ್‌ ಉಪವಾಸ ಸತ್ಯಾಗ್ರಹವನ್ನು ಬಿಜೆಪಿ ಲೇವಡಿ ಮಾಡಿದೆ.

‘ಜಗದೀಶ್‌ ಟೈಟ್ಲರ್‌ ಮತ್ತು ಸಜ್ಜನ್‌ ಕುಮಾರ್‌ ಅವರಂತಹ ಕ್ರೂರಿಗಳನ್ನು ಮುಂದಿಟ್ಟುಕೊಂಡು ಕೋಮು ಸಂಘರ್ಷದ ವಿರುದ್ಧ ಕಾಂಗ್ರೆಸ್‌ ಹೋರಾಟ ಮಾಡುತ್ತಿರುವುದು ಹಾಸ್ಯಾಸ್ಪದ. ಇದು ಕಾಂಗ್ರೆಸ್‌ನ ನೈಜ ಮುಖ’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಟೀಕಿಸಿದ್ದಾರೆ.

ಉಪವಾಸಕ್ಕೂ ಮುನ್ನ ಉಪಾಹಾರ: ‘ಸೋಮವಾರ ಬೆಳಿಗ್ಗೆ 10.30ಕ್ಕೆ ಉಪವಾಸ ಸತ್ಯಾಗ್ರಹ ಆರಂಭಿಸುವ ಮುನ್ನ ಕಾಂಗ್ರೆಸ್‌ ನಾಯಕರು ಹೋಟೆಲ್‌ನಲ್ಲಿ ಹೊಟ್ಟೆ ತುಂಬಾ ಉಪಾಹಾರ ಸೇವಿಸಿದ್ದಾರೆ’ ಎಂದು ದೆಹಲಿ ಬಿಜೆಪಿ ಘಟಕ ಆರೋಪಿಸಿದೆ.

ದೆಹಲಿ ಕಾಂಗ್ರೆಸ್‌ ಅಧ್ಯಕ್ಷ ಅಜಯ್‌ ಮಾಕನ್‌, ಆನಂದ್‌ ಸಿಂಗ್‌ ಲೌವ್ಲಿ ಮತ್ತು ಇತರ ಕಾಂಗ್ರೆಸ್‌ ಮುಖಂಡರು ಉಪಾಹಾರ ಸೇವಿಸುತ್ತಿರುವ ಫೋಟೊವನ್ನೂ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ.

ರಾಹುಲ್‌ ಬೆಳಿಗ್ಗೆ ಬೇಗ ಏಳಲ್ಲ: ‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಅವರಿಗೆ ಬೆಳಿಗ್ಗೆ ಬೇಗ ಎದ್ದು ಗೊತ್ತಿಲ್ಲ. ಒಂದು ಹೊತ್ತಿನ ಊಟವನ್ನು ಕೂಡ ತಪ್ಪಿಸಲಾರದವರು ದೇಶದಲ್ಲಿ ಬದಲಾವಣೆ ತರುವ ಬಗ್ಗೆ ಮಾತನಾಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ’ ಎಂದು ಪಾತ್ರಾ ಅಣಕವಾಡಿದ್ದಾರೆ.

**

ಕಾಂಗ್ರೆಸ್‌ ಸತ್ಯಾಗ್ರಹ ದಲಿತರ ಹೆಸರಲ್ಲಿ ನಡೆದ ಒಂದು ಪ್ರಹಸನ. ಕಾಂಗ್ರೆಸ್‌ ತಾನು ಬೀಸಿದ ಬಲೆಯಲ್ಲಿ ತಾನೇ ಬೀಳಲಿದೆ. ದಲಿತರು ಅವರನ್ನು ಸುಮ್ಮನೆ ಬಿಡುವುದಿಲ್ಲ.

-ಜಿ.ವಿ.ಎಲ್‌. ನರಸಿಂಹರಾವ್‌, ಬಿಜೆಪಿ ವಕ್ತಾರ

*

ಮುಂಬರುವ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಪತನವಾಗಲಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ.

-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಪ್ರತಿಕ್ರಿಯಿಸಿ (+)