5

ಸಿಎಸ್‌ಆರ್‌ ಹಣದಲ್ಲಿ ವಾಬಸಂದ್ರ ಕೆರೆ ಅಭಿವೃದ್ಧಿ

Published:
Updated:
ಸಿಎಸ್‌ಆರ್‌ ಹಣದಲ್ಲಿ ವಾಬಸಂದ್ರ ಕೆರೆ ಅಭಿವೃದ್ಧಿ

ಬೆಂಗಳೂರು: ಆನೇಕಲ್‌ ತಾಲ್ಲೂಕಿನ ಕೆರೆಗಳಿಗೆ ಕಾಯಕಲ್ಪ ನೀಡಲು ಬದ್ಧವಾಗಿರುವ ‘ಸನ್‌ಸೆರಾ ಪ್ರತಿಷ್ಠಾನ’ವು ‘ಎಚ್‌ಪಿ ಐಎನ್‌ಸಿ ಇಂಡಿಯಾ’ ಕಂಪನಿಯ ಸಹಯೋಗದಲ್ಲಿ ವಾಬಸಂದ್ರ ಕೆರೆಯ ಪುನಶ್ಚೇತನ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.

ಶರವೇಗದಲ್ಲಿ ಬೆಳೆಯುತ್ತಿರುವ ನಗರವು ಈ ಗ್ರಾಮದವರೆಗೂ ವಿಸ್ತರಿಸಿದೆ. ಗ್ರಾಮದ ಸುತ್ತಮುತ್ತ ಅಪಾರ್ಟ್‌ಮೆಂಟ್‌ ಸಮುಚ್ಚಯಗಳು ಹಾಗೂ ಕೆಲ ಕಾರ್ಖಾನೆಗಳು ತಲೆಎತ್ತಿವೆ. ಆದರೆ, ಇಲ್ಲಿ ಇನ್ನೂ ಹಳ್ಳಿ ಸಂಸ್ಕೃತಿ ಜೀವಂತವಾಗಿದೆ. ರೈತರು ಕೃಷಿಯನ್ನು ಮುಖ್ಯ ಕಸಬನ್ನಾಗಿಸಿಕೊಂಡಿದ್ದಾರೆ.

ಇಲ್ಲಿನ ಕೆರೆಗೆ ಯಾವುದೇ ಕೊಳಚೆ ನೀರು ಸೇರುತ್ತಿಲ್ಲ. ಆದರೆ, ಹೂಳು ತುಂಬಿದ್ದು, ಗಿಡಗಳು ಬೆಳೆದುಕೊಂಡಿವೆ. ಜಲಮೂಲದ ಸುತ್ತಲೂ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಜಾಗದಲ್ಲಿ ನೀಲಗಿರಿ ಗಿಡಗಳನ್ನು ಹಾಕಿದ್ದರೆ, ಕೆಲವರು ಟೊಮೆಟೊ ಬೆಳೆದಿದ್ದಾರೆ.

ಕಳೆದ ಸೆಪ್ಟೆಂಬರ್‌ನಿಂದ ನವೆಂಬರ್‌ವರೆಗೆ ಬಿದ್ದ ಬಾರಿ ಮಳೆಯಿಂದಾಗಿ ಜಲಮೂಲ ತುಂಬಿ ಕೋಡಿ ಹೋಗಿತ್ತು. ಆದರೆ, ಅಷ್ಟೇ ವೇಗವಾಗಿ ನೀರು ಖಾಲಿಯಾಗಿದೆ. ಸದ್ಯ ಸ್ವಲ್ಪ ಪ್ರಮಾಣದ ನೀರಿದೆ.

ಕೆರೆ ಪುನಶ್ಚೇತನ ಕಾಮಗಾರಿಗೆ ಏಪ್ರಿಲ್‌ 5ರಂದು ಭೂಮಿಪೂಜೆ ನೆರವೇರಿಸಲಾಗಿದೆ. ಕಾಮಗಾರಿಗೆ ತಗಲುವ ವೆಚ್ಚವನ್ನು ಎಚ್‌ಪಿ ಐಎನ್‌ಸಿ ಇಂಡಿಯಾ ಕಂಪನಿಯು ಕಾರ್ಪೊರೇಟ್ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ಭರಿಸುತ್ತಿದೆ. ಹಣದ ಮೇಲುಸ್ತುವಾರಿಯನ್ನು ಸೇಟ್ರೀಸ್‌ ಎಂಬ ಸರ್ಕಾರೇತರ ಸಂಸ್ಥೆಗೆ ವಹಿಸಲಾಗಿದೆ. ಪುನರುಜ್ಜೀವನಕ್ಕೆ ಅಗತ್ಯವಿರುವ ತಾಂತ್ರಿಕ ನಿರ್ವಹಣೆಯನ್ನು ಸನ್‌ಸೆರಾ ಪ್ರತಿಷ್ಠಾನ ನೋಡಿಕೊಳ್ಳುತ್ತದೆ.

‘ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಒಂದು ತಿಂಗಳಲ್ಲಿ ಪೂರ್ಣಗೊಳಿಸಲು ತೀರ್ಮಾನಿಸಿದ್ದೇವೆ. ಪುನಶ್ಚೇತನಕ್ಕಾಗಿ ಯಾವುದೇ ಸಂಸ್ಥೆಯಿಂದ ಸಮಗ್ರ ಯೋಜನಾ ವರದಿ (ಡಿಪಿಆರ್‌) ಪಡೆದಿಲ್ಲ. ಈ ವರದಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು. ವೆಚ್ಚವನ್ನು ತಗ್ಗಿಸುವ ಉದ್ದೇಶದಿಂದ ಜಲಮೂಲದ ಅಭಿವೃದ್ಧಿಯ ವಿನ್ಯಾಸ ಹಾಗೂ ಯೋಜನಾ ವರದಿಯನ್ನು ನಾವೇ ಸಿದ್ಧಪಡಿಸಿದ್ದೇವೆ. ಕಾಮಗಾರಿ ಗುತ್ತಿಗೆಯನ್ನು ಯಾವುದೇ ಸಂಸ್ಥೆಗೆ ನೀಡದೆ, ಸ್ವತಃ ಮಾಡುತ್ತಿದ್ದೇವೆ’ ಎಂದು ಸನ್‌ಸೆರಾ ಪ್ರತಿಷ್ಠಾನದ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ ಆನಂದ ಮಲ್ಲಿಗವಾಡ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆರೆ ಹೂಳು ತೆಗೆದು, ಅದೇ ಮಣ್ಣನ್ನು ಬಳಸಿಕೊಂಡು ಸುತ್ತಲೂ ಕಟ್ಟೆ ಕಟ್ಟಲಾಗುತ್ತದೆ. ಇದರ ಮೇಲೆ 40 ಅಡಿ ಮಣ್ಣಿನ ರಸ್ತೆ ನಿರ್ಮಿಸಲಾಗುತ್ತದೆ. ನೀರು ಕಟ್ಟೆಗೆ ಬಡಿದು ಮಣ್ಣಿನ ಕೊರೆತ ಉಂಟಾಗುವುದನ್ನು ತಪ್ಪಿಸಲು ಕಲ್ಲುಗಳಿಂದ ತಡೆಗೋಡೆ ಕಟ್ಟಲಾಗುತ್ತದೆ. ಕೃಷಿ ಭೂಮಿಯಿಂದ ನೀರು ಹರಿದು ಬರಲು ಪ್ರತಿ 20 ಮೀಟರ್‌ಗೆ ಒಂದು ಕಾಂಕ್ರೀಟ್‌ ಕೊಳವೆ ಹಾಕಲಾಗುತ್ತದೆ. ಇಲ್ಲಿ ‘ಸಿಲ್ಟ್‌ಟ್ರ್ಯಾಪ್‌’ಗಳನ್ನು ನಿರ್ಮಿಸಲಾಗುತ್ತದೆ. ಇದರಲ್ಲಿ ಹೂಳು ತುಂಬಿಕೊಳ್ಳುವುದರಿಂದ ಕೆರೆಗೆ ಹೋಗುವುದು ತಪ್ಪುತ್ತದೆ. ಇದರ ಜತೆಗೆ, ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ವಿವರಿಸಿದರು.

ಹಸಿರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಕಟ್ಟೆಯ ಎರಡೂ ಬದಿಗಳಲ್ಲಿ ಗಿಡಗಳನ್ನು ನೆಡಲಾಗುತ್ತದೆ. ಒಳಭಾಗದಲ್ಲಿ ಹಗುರವಾದ ಗಿಡಗಳನ್ನು, ಹೊರಭಾಗದಲ್ಲಿ ವಿವಿಧ ತಳಿಯ ಗಿಡಗಳನ್ನು ಬೆಳೆಸಲಾಗುತ್ತದೆ ಎಂದರು.

ಸನ್‌ಸೆರಾ ಪ್ರತಿಷ್ಠಾನದ ಜತೆಗೂಡಿ ಕೆರೆ ಪುನಶ್ಚೇತನ ಯೋಜನೆ ಕೈಗೊಂಡಿದ್ದೇವೆ. ಎಲ್ಲ ಕಡೆಗಳಲ್ಲಿ ಕೆರೆಗಳು ಮಲಿನಗೊಳ್ಳುತ್ತಿವೆ. ಇದನ್ನು ತಡೆಗಟ್ಟಬೇಕಿದೆ ಎಂದು ಸೇಟ್ರೀಸ್‌ ಸಹಭಾಗಿತ್ವ ಮತ್ತು ಯೋಜನೆ ವಿಭಾಗದ ಮುಖ್ಯಸ್ಥ ದುರ್ಗೇಶ್‌ ಅಗ್ರಹಾರಿ ತಿಳಿಸಿದರು.

ಪಕ್ಷಿ ಸಂಕುಲ ರಕ್ಷಣೆಗೆ ನಡುಗಡ್ಡೆ

‘ಇದು ಚಿಕ್ಕ ಕೆರೆ ಆಗಿರುವುದರಿಂದ ಮಧ್ಯದಲ್ಲಿ ಒಂದು ನಡುಗಡ್ಡೆಯನ್ನು ಮಾತ್ರ ನಿರ್ಮಿಸಲಾಗುತ್ತದೆ. ಇದರ ಮಧ್ಯದಲ್ಲಿ ಆಲದ ಗಿಡ ಅಥವಾ ಅತ್ತಿ ಗಿಡಗಳನ್ನು ನೆಡಲಾಗುತ್ತದೆ. ಅದರ ಸುತ್ತಲೂ ಹಣ್ಣಿನ ಗಿಡಗಳು ಹಾಗೂ ಹೂವಿನ ಗಿಡಗಳನ್ನು ಬೆಳೆಸಲಾಗುತ್ತದೆ. ಆಹಾರ, ನೀರು, ರಕ್ಷಣೆ ಇರುವ ಕಡೆಗಳಲ್ಲಿ ಪಕ್ಷಿಗಳು ವಾಸ ಮಾಡುತ್ತವೆ. ಹೀಗಾಗಿ, ಆಲ ಅಥವಾ ಅತ್ತಿ ಮರವು ದೊಡ್ಡದಾಗಿ ಬೆಳೆಯುವುದರಿಂದ ಪಕ್ಷಿಗಳು ಗೂಡು ಕಟ್ಟಲು ಅನುಕೂಲವಾಗುತ್ತದೆ. ಪಕ್ಷಿಗಳು ಹಣ್ಣುಗಳು ಹಾಗೂ ಹೂವಿನ ಗಿಡಗಳಲ್ಲಿ ಮಕರಂದ ಹೀರಲು ಬರುವ ಪಾತರಗಿತ್ತಿ ಮತ್ತು ಜೇನುಹುಳಗಳನ್ನು ತಿಂದು ಬದುಕುತ್ತವೆ’ ಎಂದು ಆನಂದ ಮಲ್ಲಿಗವಾಡ ವಿವರಿಸಿದರು.

ಅಂಕಿ–ಅಂಶ

16 ಎಕರೆ

ಕೆರೆಯ ವಿಸ್ತೀರ್ಣ

4 ಎಕರೆ

ಒತ್ತುವರಿಯಾಗಿರುವ ಪ್ರದೇಶ

12 ಅಡಿ

ಆಳದವರೆಗೆ ಹೂಳು ಎತ್ತಲಾಗುತ್ತದೆ

5,000

ಗಿಡಗಳನ್ನು ಕೆರೆ ಸುತ್ತಲೂ ನೆಡಲಾಗುತ್ತದೆ

* ಮೂರು ವರ್ಷಗಳವರೆಗೆ ಕೆರೆಯನ್ನು ನಿರ್ವಹಣೆ ಮಾಡಲಾಗುತ್ತದೆ. ಇದಕ್ಕಾಗಿ ಗ್ರಾಮಸ್ಥರನ್ನೊಳಗೊಂಡ ಸಮಿತಿ ರಚಿಸಿ, ಕೆಲ ಜವಾಬ್ದಾರಿಗಳನ್ನು ವಹಿಸಲಾಗುತ್ತದೆ.

–ಆನಂದ ಮಲ್ಲಿಗವಾಡ, ಸನ್‌ಸೆರಾ ಪ್ರತಿಷ್ಠಾನದ ಸಿಎಸ್‌ಆರ್ ವಿಭಾಗದ ಮುಖ್ಯಸ್ಥ

* ಕೆರೆ 5–6 ವರ್ಷಗಳಿಂದ ಬತ್ತಿಹೋಗಿತ್ತು. ಹೂಳು ತುಂಬಿಕೊಂಡಿದೆ. ಈಗ ಇದನ್ನು ಅಭಿವೃದ್ಧಿ ಮಾಡುತ್ತಿರುವುದು ಸಂತಸ ಮೂಡಿಸಿದೆ.

– ಅಶೋಕ್‌ ಕುಮಾರ್‌, ವಾಬಸಂದ್ರ ಗ್ರಾಮಸ್ಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry