ಹಂಪಿ ವಿ.ವಿ ನೇಮಕಾತಿ: ಆದೇಶ ಹಿಂಪಡೆದ ಕ್ರಮಕ್ಕೆ ಮಧ್ಯಂತರ ತಡೆ

7

ಹಂಪಿ ವಿ.ವಿ ನೇಮಕಾತಿ: ಆದೇಶ ಹಿಂಪಡೆದ ಕ್ರಮಕ್ಕೆ ಮಧ್ಯಂತರ ತಡೆ

Published:
Updated:

ಧಾರವಾಡ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕಾತಿ ಆದೇಶ ಹಿಂಪಡೆದ ವಿಶ್ವವಿದ್ಯಾಲಯದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.

ವಿಶ್ವವಿದ್ಯಾಲಯ, ಒಂಬತ್ತು ಜನ ಬೋಧಕ ಮತ್ತು ಆರು ಜನ ಬೋಧಕೇತರ ಸಿಬ್ಬಂದಿ ನೇಮಕಾತಿಗೆ ಸಂಬಂಧಿಸಿದಂತೆ ಸೆ.27 ರಂದು ಅಧಿಸೂಚನೆ ಹೊರಡಿಸಿತ್ತು. ಮಾರ್ಚ್‌ 25 ರಂದು ಪರೀಕ್ಷೆ ನಡೆಸಿ ಮರುದಿನ ಸಂದರ್ಶನ ಪ್ರಕ್ರಿಯೆ ನಡೆಸಲಾಗಿತ್ತು. ಮಾರ್ಚ್‌ 27 ರಂದು ಬೆಳಿಗ್ಗೆ ಸಿಂಡಿಕೇಟ್‌ ತುರ್ತು ಸಭೆ ಕರೆದು ಎಲ್ಲ 15 ಜನರಿಗೂ ನೇಮಕಾತಿ ಆದೇಶ ಪತ್ರ ನೀಡಲಾಗಿತ್ತು.

ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ದಿನವೇ ನೇಮಕಾತಿ ಆದೇಶ ನೀಡಲಾಗಿದೆ ಎಂದು ಕೆಲವು ಅಭ್ಯರ್ಥಿಗಳು ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ನಂತರ ವಿಶ್ವವಿದ್ಯಾಲಯವು ಆದೇಶ ಹಿಂಪಡೆದಿತ್ತು.

ವಿಶ್ವವಿದ್ಯಾಲಯದ ಈ ಕ್ರಮ ಪ್ರಶ್ನಿಸಿ ಡಾ.ವೆಂಕಟಗಿರಿ ದಳವಾಯಿ ಮತ್ತು ಇತರ 13 ಜನರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಪ್ರಾಥಮಿಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ ಅವರಿದ್ದ ನ್ಯಾಯಪೀಠ, ವಿಶ್ವವಿದ್ಯಾಲಯಕ್ಕೆ ನೋಟಿಸ್‌ ಜಾರಿ ಮಾಡಿ  ವಿಚಾರಣೆ ಮುಂದೂಡಿದೆ.

ಅರ್ಜಿದಾರರ ಪರ ಗಂಗಾಧರ ಹೊಸಕೇರಿ ವಕಾಲತ್ತು ವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry