ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಜತೆ ಕೈಜೋಡಿಸಲು ದೇವೇಗೌಡರಿಗೆ ಮನವಿ

Last Updated 9 ಏಪ್ರಿಲ್ 2018, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ಮಗನನ್ನು (ಎಚ್‌.ಡಿ.ಕುಮಾರಸ್ವಾಮಿ) ಮುಖ್ಯಮಂತ್ರಿ ಮಾಡುವ ಉದ್ದೇಶದಿಂದ ಚೌಕಾಸಿ ಮಾಡಬೇಡಿ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯಿಂದ ಪರಾಭವಗೊಳಿಸುವ ಉದ್ದೇಶದಿಂದ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಕೈಜೋಡಿಸಿ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಗೆ ಮನವಿ ಮಾಡಿದ್ದೇವೆ’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.ದೊರೆಸ್ವಾಮಿ ಹೇಳಿದರು.

ಎಚ್.ಎಸ್.ದೊರೆಸ್ವಾಮಿ ಶತಮಾನೋತ್ಸವ ಆಚರಣಾ ಸಮಿತಿ ವತಿಯಿಂದ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಎಚ್.ಎಸ್.ದೊರೆಸ್ವಾಮಿ ಶತಮಾನೋತ್ಸವ ಸಂಭ್ರಮ’ದಲ್ಲಿ ಮಾತನಾಡಿದರು.

‘ಮಗನನ್ನು ಮುಖ್ಯಮಂತ್ರಿ ಮಾಡಲು ಬಿಜೆಪಿ ಜತೆ ಕೈಜೋಡಿಸಿದ್ದು ಜನತೆಗೆ ಗೊತ್ತಿದೆ. ಮಡಿಕೆ ಗಂಜಿಗಾಗಿ ನಿಮ್ಮ ಆತ್ಮವನ್ನು ಮಾರಿಕೊಳ್ಳಬೇಡಿ. ಮಗನ ಅಧಿಕಾರಕ್ಕಿಂತ ದೇಶದ ಹಿತ ಕಾಯುವಂತೆ ಕೋರಿದ್ದೇವೆ. ಅವರು ಸಕಾರಾತ್ಮಕ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸವಿದೆ’ ಎಂದು ಹೇಳಿದರು.

‘ಈ ಚುನಾವಣೆಯು ಕರ್ನಾಟಕ ವರ್ಸಸ್‌ ನರೇಂದ್ರ ಮೋದಿ. ಅವರ ವಿರುದ್ಧ ಹೋರಾಟ ನಡೆಸಲು ಎಲ್ಲ ಸಂಘಟನೆಗಳೊಂದಿಗೆ ಚರ್ಚಿಸಿದ್ದೇವೆ. ಶಿವಮೊಗ್ಗ, ಬಳ್ಳಾರಿಯಲ್ಲಿ ಈಗಾಗಲೇ ಹೋರಾಟ ನಡೆಸಲಾಗಿದೆ’ ಎಂದು ಹೇಳಿದರು.

‘ನನಗೆ ಉಸಿರಾಟದ ತೊಂದರೆ ಉಂಟಾಗಿ ಆಸ್ಪತ್ರೆಗೆ ಸೇರಿದ್ದೆ. ಆಗ ಈ ದೇಶ ಏನಾಗಬಹುದು ಎಂಬ ಚಿಂತೆ ಕಾಡಿತ್ತು. ಮೋದಿ ಸರ್ವಾಧಿಕಾರಿ ಆಗುತ್ತಾರೆ. ಗುಪ್ತ ಕಾರ್ಯಸೂಚಿ ತರುತ್ತಾರೆ ಎಂಬ ಆತಂಕ ಮೂಡಿತ್ತು. ಅದಕ್ಕಾಗಿಯೇ ಕೇಂದ್ರದ ನಾಲ್ವರು ಮಂತ್ರಿಗಳಿಂದ ಆಟದ ಗೊಂಬೆಗಳಂತೆ ಆಡಿಸುತ್ತಿದ್ದಾರೆ. ಹುಚ್ಚಾಸ್ಪತ್ರೆಯಲ್ಲಿ ಇರಬೇಕಾದವರ ಬಾಯಿಂದ ಬೇಕಾದ್ದನ್ನು ಹೇಳಿಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲೇಬೇಕು ಎಂದು ನಿರ್ಧರಿಸಿದೆ’ ಎಂದು ವಿವರಿಸಿದರು.

‘ಬಿ.ಎಸ್‌.ಯಡಿಯೂರಪ್ಪ ಅವರು ಬಡವರ ಮನೆಯಲ್ಲಿ ಮಲಗುವುದು, ದಲಿತರ ಮನೆಯಲ್ಲಿ ಊಟ ಮಾಡುತ್ತಾರೆ. ಚುನಾವಣೆ ಸಂದರ್ಭ
ದಲ್ಲಿ ಬಡವರ ನೆನಪಾಗಿದೆ. ಅವರು ಮುಖ್ಯಮಂತ್ರಿ ಆಗಿದ್ದಾಗ ಏಕೆ ಬಡವರ ನೆನಪು ಆಗಲಿಲ್ಲ’ ಎಂದು ಪ್ರಶ್ನಿಸಿದರು.

ನಟ ಪ್ರಕಾಶ ರೈ, ‘ಕೋಮುವಾದಿಗಳು ಸರ್ವಾಧಿಕಾರಿಗಳಾಗುತ್ತೇವೆ ಎಂದು ಓಡುತ್ತಿದ್ದಾರೆ. ಅದಕ್ಕೆ ಕಡಿವಾಣ ಹಾಕುವ ಮೂಲಕ ಭಾರತವನ್ನು ಸೌಹಾರ್ದಯುತ, ಪ್ರೀತಿಯುತ ದೇಶವನ್ನಾಗಿ ಮಾಡಬೇಕು’ ಎಂದು ಹೇಳಿದರು.

ಬಂಡೀಪುರಕ್ಕೆ ಹೋಗಿದ್ದಾಗ ದೊಡ್ಡ ಸಂಪಿಗೆ ಮರ ನೋಡಿದ್ದೆ. ಆ ಮರ ತನ್ನ ಬದುಕಿನಲ್ಲಿ ಎಷ್ಟೆಲ್ಲಾ ವಸಂತ, ಮಳೆಯನ್ನು ನೋಡಿದೆ. ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡಿರುತ್ತದೆ ಎಂಬ ಯೋಚನಾ ಲಹರಿಗೆ ಜಾರಿದ್ದೆ. ಮರದ ಕೆಳಗೆ ಹೋದರೆ ತಾಯಿಯ ಮಡಿಲಿನಂತಹ ಸಾಂತ್ವನ ಸಿಗುತ್ತದೆ. ನಂಬಿಕೆ, ವಿಶ್ವಾಸ ಸಿಗುತ್ತದೆ. ಅದೇ ರೀತಿ ದೊರೆಸ್ವಾಮಿ ಎಂದು ಬಣ್ಣಿಸಿದರು.

ದೊರೆಸ್ವಾಮಿ ಅವರ ಜೀವನದ ಕುರಿತು ಸಾಮಾಜಿಕ ಹೋರಾಟಗಾರ ರವಿಕೃಷ್ಣಾರೆಡ್ಡಿ ಮಾತನಾಡಿದರು.

ಎಚ್.ಎಸ್.ದೊರೆಸ್ವಾಮಿ ದಂಪತಿಯನ್ನು ಅಭಿನಂದಿಸಲಾಯಿತು.

ಇದೇ ವೇಳೆ, ‘ನಾನು ಗೌರಿ’ ಪತ್ರಿಕೆಯನ್ನು (ಖಾಸಗಿ ಪ್ರಸರಣಕ್ಕಾಗಿ) ಬಿಡುಗಡೆ ಮಾಡಲಾಯಿತು. ವೆಬ್‌ ಆವೃತ್ತಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಪತ್ರಕರ್ತ ನರಸಿಂಹಮೂರ್ತಿ ತಿಳಿಸಿದರು.

‘ಹಣ ಮಾಡುವ ಕಲೆಯಲ್ಲಿ ನಿಷ್ಣಾತರು’

‘ಜನರ ಬಡತನ ನಿವಾರಣೆ ಮಾಡುವ ಬದಲಿಗೆ ರಾಜಕಾರಣಿಗಳು ತಮ್ಮ ಬಡತನವನ್ನು ನಿವಾರಣೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲ ಪಕ್ಷಗಳ ನಾಯಕರು ಹಣ ಮಾಡುವ ಕಲೆಯಲ್ಲಿ ನಿಷ್ಣಾತರಾಗಿದ್ದಾರೆ. ಅಂತಹ ಕೊಳ್ಳೆ ಹೊಡೆಯುವವರನ್ನು ನಿರ್ಮೂಲನೆ ಮಾಡದಿದ್ದರೆ ಈ ದೇಶ ಉದ್ಧಾರವಾಗುವುದಿಲ್ಲ’ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಹೇಳಿದರು.

* ನಕ್ಸಲ್‌ ಚಳವಳಿಯಿಂದ ವಿಮುಕ್ತಿ ಪಡೆದು ಮುಖ್ಯವಾಹಿನಿಗೆ ಬರಲು ಎಚ್‌.ಎಸ್‌.ದೊರೆಸ್ವಾಮಿ ಕಾರಣ. ಎಲ್ಲ ರೀತಿಯ ಚಳವಳಿಗಳಲ್ಲೂ ಭಾಗಿಯಾದ ಅವರು ನಮ್ಮ ಕಾಲದ ಆದರ್ಶವ್ಯಕ್ತಿ

–ನೂರ್‌ ಶ್ರೀಧರ್‌, ಹೋರಾಟಗಾರ

* ಸಮಾಜದಲ್ಲಿ ಈಗ ಆತಂಕದ ಕ್ಷಣಗಳು ಎದುರಾಗಿವೆ. ಅವುಗಳನ್ನು ದಿಟ್ಟವಾಗಿ ಎದುರಿಸಲು ದೊರೆಸ್ವಾಮಿ ದಾರಿದೀಪವಾಗುತ್ತಾರೆ.

–ಇಂದೂಧರ ಹೊನ್ನಾಪುರ, ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT