ಮಂಗಳವಾರ, ಆಗಸ್ಟ್ 11, 2020
26 °C

ಸಮಸ್ಯೆ ಆಲಿಸಲು ಆಟೊ ಏರಿ ಬಂದ ಬಿಎಸ್‌ವೈ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಮಸ್ಯೆ ಆಲಿಸಲು ಆಟೊ ಏರಿ ಬಂದ ಬಿಎಸ್‌ವೈ!

ಬೆಂಗಳೂರು: ಸದಾ ಐಷಾರಾಮಿ ಕಾರಿನಲ್ಲಿ ಓಡಾಡುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೋಮವಾರ ಆಟೊ ಏರಿ ಹೊರಟಾಗ ಅವರ ಹಿಂದೆ ಹಲವು ಆಟೊಗಳು ಸರತಿಯಲ್ಲಿ ಹೊರಟವು.

ದಾರಿಯುದ್ದಕ್ಕೂ ವಿಜಯದ ‘ವಿ’ ಚಿಹ್ನೆ ತೋರಿಸುತ್ತಾ ಹೊರಟ ಯಡಿಯೂರಪ್ಪ ಅವರನ್ನು ಕಂಡ ಹಾದಿ ಹೋಕರಿಗೆ ಅಚ್ಚರಿ ಮೂಡಿಸಿತ್ತು. ಆದರೆ, ಅವರು ಆಟೊರಿಕ್ಷಾ ಏರಿ ಹೊರಟಿದ್ದು, ಚಾಲಕರ ಕಷ್ಟ– ಸುಖ ವಿಚಾರಿಸಲು.

ಶಿವಾಜಿನಗರದ ಜಸ್ಮಾಭವನದಲ್ಲಿ ಆಟೊ ಚಾಲಕರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ಡಾಲರ್ಸ್‌ ಕಾಲೋನಿಯಲ್ಲಿರುವ ತಮ್ಮ ಮನೆಯಿಂದ ಸಂಸದ ಪಿ.ಸಿ.ಮೋಹನ್‌ ಮತ್ತು ಕಟ್ಟಾ ಸುಬ್ರಹ್ಮಣ್ಯನಾಯ್ಡು ಅವರೊಂದಿಗೆ ಬಾಲಕೃಷ್ಣ ಎಂಬುವರ ರಿಕ್ಷಾ ಹತ್ತಿದರು.

ಯಡಿಯೂರಪ್ಪ ಚಾಲಕನನ್ನು ಮಾತಿಗೆಳೆದು ಅವರ ಸಮಸ್ಯೆ ಆಲಿಸಿದರು.  ತನ್ನ ದೈನಂದಿನ ದುಡಿಮೆ, ಬ್ಯಾಂಕ್‌ನಿಂದ ಪಡೆದ ಸಾಲ ತೀರಿಸುವುದಕ್ಕೆ ಸಂಬಂಧಿಸಿದಂತೆ ಇರುವ ತೊಂದರೆಗಳನ್ನೂ ಬಾಲಕೃಷ್ಣ ವಿವರಿಸಿದರು.

‘ಬೆಂಗಳೂರಿನಲ್ಲಿ ಅನ್ಯ ಭಾಷಿಕರ ಹಾವಳಿ ಹೆಚ್ಚಾಗಿದೆ. ಬೇರೆ ರಾಜ್ಯಗಳಿಂದ ಬರುತ್ತಿರುವ ಆಟೊ ಚಾಲಕರ ಸಂಖ್ಯೆಯೂ ಏರಿಕೆಯಾಗಿದೆ. ಇದರಿಂದ ಕನ್ನಡಿಗ ಚಾಲಕರಿಗೆ ಕಷ್ಟ ಎದುರಾಗಿದೆ’ ಎಂದು ಬಾಲಕೃಷ್ಣ ಹೇಳಿದರು.

ಇದಕ್ಕೆ ಉತ್ತರಿಸಿದ ಯಡಿಯೂರಪ್ಪ, ಆಟೊ ಚಾಲಕರು ಕನ್ನಡ ನಾಡಿನ ರಾಯಭಾರಿಗಳು.  ಬೆಂಗಳೂರಿನಲ್ಲಿ ಕನ್ನಡ ಭಾಷೆ ಉಳಿವಿಗೆ ಆಟೊ ಚಾಲಕರ ಪಾತ್ರ ಮಹತ್ವದ್ದಾಗಿದೆ ಎಂದರು.

ಬಳಿಕ ಜಸ್ಮಾಭವನದಲ್ಲಿ ಚಾಲಕರೊಂದಿಗೆ ಸಂವಾದ ನಡೆಸಿದ ಯಡಿಯೂರಪ್ಪ, ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣವೇ ಆಟೋ ಚಾಲಕರಿಗಾಗಿ ಬಡಾವಣೆ ನಿರ್ಮಿಸಿ, ಎಲ್ಲ ಮೂಲ ಸೌಕರ್ಯಗಳನ್ನು ಒಳಗೊಂಡ ಮನೆಗಳನ್ನು ನಿರ್ಮಿಸಿ ವಿತರಿಸುವುದಾಗಿ ಭರವಸೆ ನೀಡಿದರು.

ಆಟೊ ಚಾಲಕರ ಸರ್ವಾಂಗೀಣ ಅಭಿವೃದ್ಧಿಗಾಗಿ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪಿಸಲಾಗುವುದು. ಕೇಂದ್ರದ ಆಯುಷ್ಮಾನ್‌ ಆರೋಗ್ಯ ವಿಮೆ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗುವುದು. ಚಾಲಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.