ಶುಕ್ರವಾರ, ಡಿಸೆಂಬರ್ 6, 2019
26 °C

ಬಾಕ್ಸಿಂಗ್‌: ಕ್ವಾರ್ಟರ್‌ ಫೈನಲ್‌ಗೆ ಗೌರವ್‌ ಸೋಳಂಕಿ, ಮನೀಷ್‌

Published:
Updated:
ಬಾಕ್ಸಿಂಗ್‌: ಕ್ವಾರ್ಟರ್‌ ಫೈನಲ್‌ಗೆ ಗೌರವ್‌ ಸೋಳಂಕಿ, ಮನೀಷ್‌

ಗೋಲ್ಡ್‌ ಕೋಸ್ಟ್‌: ಭಾರತದ ಗೌರವ್‌ ಸೋಳಂಕಿ, ಕಾಮನ್‌ವೆಲ್ತ್‌ ಕ್ರೀಡಾಕೂಟದ ಪುರುಷರ ಬಾಕ್ಸಿಂಗ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಸೋಮವಾರ ನಡೆದ 52 ಕೆ.ಜಿ ವಿಭಾಗದ ಪ್ರೀ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಗೌರವ್‌ 5–0 ಯಿಂದ ಘಾನಾ ದೇಶದ ಅಕಿಮೊಸ್‌ ಅನ್ನಾಗ್‌ ಅಮಪಿಹಾ ಅವರನ್ನು ಸೋಲಿಸಿದರು.

ಮೊದಲ ಸುತ್ತಿನ ಶುರುವಿನಿಂದಲೇ ಎದುರಾಳಿಯ ಮೇಲೆ ಪ್ರಹಾರ ನಡೆಸಿದ ಗೌರವ್‌ಗೆ ಪಂದ್ಯದ ಐದು ಮಂದಿ ನಿರ್ಣಾಯಕರು ತಲಾ 10 ಪಾಯಿಂಟ್ಸ್‌ ನೀಡಿದರು.

ಎರಡು ಮತ್ತು ಮೂರನೆ ಸುತ್ತು ಗಳಲ್ಲೂ ಎದುರಾಳಿಯ ತಲೆ ಮತ್ತು ಮುಖಕ್ಕೆ ಬಲವಾದ ಪಂಚ್‌ಗಳನ್ನು ಮಾಡಿ ಪಾಯಿಂಟ್ಸ್‌ ಸಂಗ್ರಹಿಸಿದ ಗೌರವ್‌ ನಿರಾಯಾಸವಾಗಿ ಪಂದ್ಯ ಗೆದ್ದರು.

ಪುರುಷರ 60 ಕೆ.ಜಿ ವಿಭಾಗದಲ್ಲಿ ‘ರಿಂಗ್‌’ಗೆ ಇಳಿದಿದ್ದ ಮನೀಷ್‌ ಕೌಶಿಕ್‌ ಕೂಡ ಜಯದ ಸಿಹಿ ಸವಿದರು.

16ರ ಘಟ್ಟದ ಹೋರಾಟ ದಲ್ಲಿ ಮನೀಷ್‌ 4–0ಯಿಂದ ಮೈಕಲ್‌ ಅಲೆಕ್ಸಾಂಡರ್‌ ಅವ ರನ್ನು ಮಣಿಸಿದರು.

ಮೊದಲ ಸುತ್ತಿನಲ್ಲಿ ಮನೀಷ್‌ ಮತ್ತು ಅಲೆಕ್ಸಾಂಡರ್‌ ಸಮಬಲದ ಪೈಪೋಟಿ ನಡೆಸಿ ದರು. ಎರಡನೆ ಸುತ್ತಿನಲ್ಲಿ ಭಾರ ತದ ಬಾಕ್ಸರ್‌ ಮಿಂಚಿದರು. ಶಕ್ತಿಯುತ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಮನೀಷ್‌ಗೆ ಐದು ಮಂದಿ ನಿರ್ಣಾಯಕರು ತಲಾ 10 ಪಾಯಿಂಟ್ಸ್‌ ನೀಡಿದರು.

ಮೂರನೆ ಸುತ್ತಿನಲ್ಲೂ ಮೋಡಿ ಮಾಡಿದ ಮನೀಷ್‌ ಸಂಭ್ರಮದ ಹೊಳೆಯಲ್ಲಿ ಮಿಂದೆದ್ದರು.

ಅಮಿತ್‌ ಹೋರಾಟ ಇಂದು: ಮಂಗಳವಾರ ನಡೆಯುವ ಪುರುಷರ 49 ಕೆ.ಜಿ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಅಮಿತ್‌ ಅವರು ಸ್ಕಾಟ್ಲೆಂಡ್‌ನ ಅಕ್ವೀಲ್‌ ಅಹಮದ್‌ ವಿರುದ್ಧ ಸೆಣಸಲಿದ್ದಾರೆ.

ಪುರುಷರ 91 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ನಮನ್‌ ತನ್ವರ್‌, ಫ್ರಾಂಕ್‌ ಮಸೊಯೆ ಎದುರು ಆಡಲಿದ್ದಾರೆ.

ಪುರುಷರ 56 ಕೆ.ಜಿ. ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಹಸಮುದ್ದೀನ್‌ ಮಹಮ್ಮದ್‌ ಅವರು ಜಾಂಬಿಯಾದ ಎವರಿಸ್ಟೊ ಮುಲೆಂಗಾ ಸವಾಲು ಎದುರಿಸಲಿದ್ದು ಸುಲಭ ಜಯದ ನಿರೀಕ್ಷೆಯಲ್ಲಿದ್ದಾರೆ.

69 ಕೆ.ಜಿ. ವಿಭಾಗದ ಎಂಟರ ಘಟ್ಟದ ಹಣಾಹಣಿಯಲ್ಲಿ ಮನೋಜ್‌ ಕುಮಾರ್‌, ಆಸ್ಟ್ರೇಲಿಯಾದ ಟೆರಿ ನಿಕೊಲಸ್‌ ವಿರುದ್ಧ ಸೆಣಸಲಿದ್ದಾರೆ. 91+ ಕೆ.ಜಿ. ವಿಭಾಗದಲ್ಲಿ ಸತೀಶ್‌ ಕುಮಾರ್‌, ಟ್ರಿನಿಡಾಡ್‌ ಮತ್ತು ಟೊಬ್ಯಾಗೊದ ನಿಗೆಲ್‌ ಪಾಲ್‌ ಎದುರು ಪೈಪೋಟಿ ನಡೆಸಲಿದ್ದಾರೆ.

ಪ್ರತಿಕ್ರಿಯಿಸಿ (+)