ಶುಕ್ರವಾರ, ಆಗಸ್ಟ್ 14, 2020
21 °C
ಮುಂದುವರಿದ ಭಾರತದ ಶೂಟರ್‌ಗಳ ಪ್ರಾಬಲ್ಯ; ವೇಟ್‌ಲಿಫ್ಟಿಂಗ್‌ನಲ್ಲಿ ಪ್ರದೀಪ್‌ ಸಿಂಗ್‌ಗೆ ಬೆಳ್ಳಿ

ಜಿತುಗೆ ದಾಖಲೆಯ ಚಿನ್ನ, ಬೆಳ್ಳಿ ಗೆದ್ದ ಮೆಹುಲಿ

ಪಿಟಿಐ Updated:

ಅಕ್ಷರ ಗಾತ್ರ : | |

ಜಿತುಗೆ ದಾಖಲೆಯ ಚಿನ್ನ, ಬೆಳ್ಳಿ ಗೆದ್ದ ಮೆಹುಲಿ

ಗೋಲ್ಡ್‌ ಕೋಸ್ಟ್‌: ಕಾಮನ್‌ವೆಲ್ತ್‌ ಕ್ರೀಡಾಕೂಟದ ಶೂಟಿಂಗ್‌ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ ಪ್ರಾಬಲ್ಯ ಮುಂದುವರಿದಿದೆ.

ಐದನೆ ದಿನವಾದ ಸೋಮವಾರ, ಶೂಟರ್‌ಗಳು ನಾಲ್ಕು ಪದಕ ಗೆದ್ದರೆ, ವೇಟ್‌ಲಿಫ್ಟರ್‌ ಪ್ರದೀಪ್‌ ಸಿಂಗ್‌ ಭಾರತದ ಖಾತೆಗೆ ಬೆಳ್ಳಿಯ ಪದಕ ಸೇರ್ಪಡೆ ಮಾಡಿದರು.

ಬೆಲ್‌ಮೊಂಟ್‌ ಶೂಟಿಂಗ್‌ ಕೇಂದ್ರದಲ್ಲಿ ನಡೆದ ಪುರುಷರ 10 ಮೀಟರ್ಸ್‌ ಏರ್‌ ಪಿಸ್ತೂಲ್ ವಿಭಾಗದಲ್ಲಿ ಅನುಭವಿ ಶೂಟರ್‌ ಜಿತು ರಾಯ್‌ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿತು, ಫೈನಲ್‌ನಲ್ಲಿ 235.1 ಸ್ಕೋರ್‌ ಕಲೆಹಾಕಿ ಈ ಸಾಧನೆ ಮಾಡಿದರು.

ಅರ್ಹತಾ ಸುತ್ತಿನಲ್ಲಿ (570 ಸ್ಕೋರ್‌) ನಾಲ್ಕನೆ ಸ್ಥಾನ ಗಳಿಸಿದ್ದ ಜಿತು, ಫೈನಲ್‌ನಲ್ಲಿ ಮೋಡಿ ಮಾಡಿದರು.

ಏಕಾಗ್ರತೆ ಕಾಪಾಡಿಕೊಂಡು ನಿಖರ ಗುರಿ ಹಿಡಿದ ಜಿತು, ಮೊದಲ ಹಂತದ ಮೊದಲ ಅವಕಾಶದಲ್ಲಿ 49.7 ಸ್ಕೋರ್‌ ಗಳಿಸಿದರು. ಎರಡನೆ ಅವಕಾಶದ ಐದು ಶಾಟ್‌ಗಳಲ್ಲಿ ಕ್ರಮವಾಗಿ 10.2, 9.7, 10.6, 9.6 ಮತ್ತು 10.6 ಸ್ಕೋರ್‌ ಕಲೆಹಾಕಿ ಒಟ್ಟು ಸ್ಕೋರ್‌ ಅನ್ನು 100.4ಕ್ಕೆ ಹೆಚ್ಚಿಸಿಕೊಂಡರು.

ಎರಡನೆ ಹಂತದ ಎಲಿಮಿನೇಷನ್‌ ಸುತ್ತಿನಲ್ಲೂ ಜಿತು, ಮೇಲುಗೈ ಸಾಧಿಸಿದರು. ಮೊದಲ ಅವಕಾಶದ ಎರಡು ಶಾಟ್‌ಗಳಲ್ಲಿ ಅವರು ತಲಾ 10.3 ಸ್ಕೋರ್‌ ಗಳಿಸಿದರು. ಹೀಗಾಗಿ ಮುನ್ನಡೆ 121.0ಗೆ ಏರಿತು.

ಎರಡು ಮತ್ತು ಮೂರನೆ ಅವಕಾಶಗಳಲ್ಲಿ ಜಿತು ಅವರ ಸ್ಕೋರ್‌ ಗಳಿಕೆ ತಗ್ಗಿತು. ಹೀಗಿದ್ದರೂ ಅವರು ಆಸ್ಟ್ರೇಲಿಯಾದ ಕೆರಿ ಬೆಲ್ ಅವರಿಗಿಂತ ಐದು ಪಾಯಿಂಟ್ಸ್‌ ಮುಂದಿದ್ದರು. ನಂತರದ ನಾಲ್ಕು ಅವಕಾಶಗಳಲ್ಲಿ ಪಾರಮ್ಯ ಮೆರೆದ ಜಿತು, ಖುಷಿಯ ಕಡಲಲ್ಲಿ ತೇಲಿದರು.

ಆಸ್ಟ್ರೇಲಿಯಾದ ಬೆಲ್‌ (233.5 ಸ್ಕೋರ್‌) ಬೆಳ್ಳಿ ತಮ್ಮದಾಗಿಸಿಕೊಂಡರು. ಈ ವಿಭಾಗದ ಕಂಚು ಭಾರತದ ಓಂ ಪ್ರಕಾಶ್‌ ಮಿಥಾರ್ವಲ್‌ ಅವರ ಪಾಲಾಯಿತು.  ಓಂ ಪ್ರಕಾಶ್ 214.3 ಸ್ಕೋರ್‌ ಸಂಗ್ರಹಿಸಿದರು.

ದಾಖಲೆ ಸರಿಗಟ್ಟಿದ ಓಂ: ಮಿಥಾರ್ವಲ್‌ ಅವರು ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಗಳಿಸಿ ಫೈನಲ್‌ಗೆ ಲಗ್ಗೆ ಇಟ್ಟಿದ್ದರು.

ಆರು ಅವಕಾಶಗಳಿಂದ 584 ಸ್ಕೋರ್‌ ಸಂಗ್ರಹಿಸಿದ್ದ ಓಂ ಪ್ರಕಾಶ್‌, ಭಾರತದ ಸಮರೇಶ್‌ ಜಂಗ್‌ ಹೆಸರಿನಲ್ಲಿದ್ದ 12 ವರ್ಷಗಳ ಹಿಂದಿನ ದಾಖಲೆ ಸರಿಗಟ್ಟಿದರು.

2006ರಲ್ಲಿ ಮೆಲ್ಬರ್ನ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಕೂಟದ ಅರ್ಹತಾ ಸುತ್ತಿನಲ್ಲಿ ಸಮರೇಶ್ 584 ಸ್ಕೋರ್‌ ಗಳಿಸಿ ದಾಖಲೆ ನಿರ್ಮಿಸಿದ್ದರು.

ಮೆಹುಲಿಗೆ ಬೆಳ್ಳಿ: ಅರ್ಹತಾ ಸುತ್ತಿನಲ್ಲಿ (413.7 ಸ್ಕೋರ್‌) ಐದನೆ ಸ್ಥಾನ ಗಳಿಸಿ ಫೈನಲ್‌ ಪ್ರವೇಶಿಸಿದ್ದ ಮೆಹುಲಿ, ಅಂತಿಮ ಘಟ್ಟದಲ್ಲೂ ಶ್ರೇಷ್ಠ ಸಾಮರ್ಥ್ಯ ತೋರಿದರು.

ಫೈನಲ್‌ನಲ್ಲಿ ಮೆಹುಲಿ, 247.2 ಸ್ಕೋರ್‌ ಗಳಿಸಿ ಕೂಟ ದಾಖಲೆ ನಿರ್ಮಿಸಿದರು. ಸಿಂಗಪುರದ ಮಾರ್ಟಿನಾ ಲಿಂಡ್ಸೆ ವೆಲೊಸೊ ಕೂಡ ಇಷ್ಟೇ ಸ್ಕೋರ್‌ ಸಂಗ್ರಹಿಸಿದ್ದರು. ಹೀಗಾಗಿ ಚಿನ್ನದ ಪದಕದ ವಿಜೇತರನ್ನು ನಿರ್ಧರಿಸಲು ‘ಶೂಟ್‌ ಆಫ್‌’ ಮೊರೆ ಹೋಗಲಾಯಿತು.

ಇದರಲ್ಲಿ ಮಾರ್ಟಿನಾ 10.3 ಸ್ಕೋರ್‌ ಗಳಿಸಿ ಚಿನ್ನ ತಮ್ಮದಾಗಿಸಿಕೊಂಡರು. 9.9 ಸ್ಕೋರ್‌ ಸಂಗ್ರಹಿಸಿದ ಮೆಹುಲಿ, ಬೆಳ್ಳಿಗೆ ತೃಪ್ತಿಪಟ್ಟರು.

ಮೊದಲ ಹಂತದ ಮೊದಲ ಅವಕಾಶದಲ್ಲಿ 51.8 ಸ್ಕೋರ್‌ ಸಂಗ್ರಹಿಸಿದ ಮೆಹುಲಿ, ಮಾರ್ಟಿನಾ ಅವರನ್ನು ಹಿಂದಿಕ್ಕಿದ್ದರು. ನಂತರದ ಅವಕಾಶಗಳಲ್ಲಿ ಇಬ್ಬರು ಜಿದ್ದಾಜಿದ್ದಿನ ಪೈಪೋಟಿ ನಡೆಸಿದರು. ಎರಡನೆ ಹಂತದ ಎಲಿಮಿನೇಷನ್‌ ಸುತ್ತಿನಲ್ಲೂ ಇಬ್ಬರ ನಡುವೆ ತುರುಸಿನ ಪೈಪೋಟಿ ಕಂಡುಬಂತು. ಆರನೆ ಅವಕಾಶದವರೆಗೂ ಮಾರ್ಟಿನಾ ಅಲ್ಪ ಮುನ್ನಡೆ ಹೊಂದಿದ್ದರು. ಆದರೆ ಏಳನೆ ಅವಕಾಶದ ಎರಡು ಶಾಟ್‌ಗಳಲ್ಲಿ ಕ್ರಮವಾಗಿ 10.3 ಮತ್ತು 10.9 ಸ್ಕೋರ್‌ ಹೆಕ್ಕಿದ ಮೆಹುಲಿ, ತಾವೇ ಚಿನ್ನ ಗೆದ್ದಿರುವುದಾಗಿ ಭಾವಿಸಿ ಸಂಭ್ರಮಿಸಿದರು. ನಂತರ ಆಯೋಜಕರು ಮೆಹುಲಿ ಮತ್ತು ಮಾರ್ಟಿನಾ ಅವರು ತಲಾ 247.2 ಸ್ಕೋರ್‌ ಕಲೆಹಾಕಿರುವುದಾಗಿ ಪ್ರಕಟಿಸಿದರು.

ಭಾರತದ ಅಪೂರ್ವಿ ಚಾಂಡೇಲಾ (225.3 ಸ್ಕೋರ್‌) ಕಂಚಿಗೆ ತೃಪ್ತಿಪಟ್ಟರು. ಅಪೂರ್ವಿ ಅವರು ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಗಳಿಸಿ ಫೈನಲ್‌ ಪ್ರವೇಶಿಸಿದ್ದರು.

ಅರ್ಹತಾ ಸುತ್ತಿನಲ್ಲಿ ಅಪೂರ್ವಿ 432.2 ಸ್ಕೋರ್‌ ಗಳಿಸಿ ತಮ್ಮದೇ ಹೆಸರಿನಲ್ಲಿದ್ದ ಕೂಟ ದಾಖಲೆ ಉತ್ತಮ ಪಡಿಸಿಕೊಂಡರು. 2014ರ ಗ್ಲಾಸ್ಗೊ ಕೂಟದ ಅರ್ಹತಾ ಸುತ್ತಿನಲ್ಲಿ ಅವರು 415.6 ಸ್ಕೋರ್‌ ಕಲೆಹಾಕಿದ್ದರು.

ಜಾರ್ಜಿಯಸ್‌ಗೆ ಚಿನ್ನ: ಪುರುಷರ ಸ್ಕೀಟ್‌ ವಿಭಾಗದಲ್ಲಿ ಸೈಪ್ರಸ್‌ನ ಜಾರ್ಜಿಯಸ್‌ ಅಚಿಲ್ಲಿಯೊಸ್‌ ಚಿನ್ನದ ಸಾಧನೆ ಮಾಡಿದರು.

ಫೈನಲ್‌ನಲ್ಲಿ ಜಾರ್ಜಿಯಸ್‌ ಅವರು 57 ಪಾಯಿಂಟ್ಸ್‌ ಕಲೆಹಾಕಿದರು.

ವೇಲ್ಸ್‌ನ ಬೆನ್‌ ಲೆವೆಲಿನ್‌ (56 ಪಾ.) ಮತ್ತು ನಾರ್ಥರ್ನ್‌ ಐರ್ಲೆಂಡ್‌ನ ಗರೆತ್‌ ಮೆಕೌಲಿ (45 ಪಾ.) ಕ್ರಮವಾಗಿ ಬೆಳ್ಳಿ ಮತ್ತು ಚಿನ್ನ ಜಯಿಸಿದರು.

ಈ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಸ್ಮಿತ್‌ ಸಿಂಗ್‌, ಆರನೆಯವರಾಗಿ ಸ್ಪರ್ಧೆ ಮುಗಿಸಿದರು. ಅವರು 15 ಪಾಯಿಂಟ್ಸ್‌ ಕಲೆಹಾಕಲಷ್ಟೇ ಶಕ್ತರಾದರು.

**

2017ರಲ್ಲಿ ಏಳು ಪದಕ ಗೆದ್ದಿದ್ದ ಜಿತು

ಜಿತು ರಾಯ್‌ ಅವರು 2017ರಲ್ಲಿ ಏಳು ಪದಕ ಗೆದ್ದು ಗಮನ ಸೆಳೆದಿದ್ದರು.

ಐಎಸ್‌ಎಸ್‌ಎಫ್‌ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ಗಳಲ್ಲಿ ಅವರು ನಾಲ್ಕು ಚಿನ್ನ ಮತ್ತು ಒಂದು ಕಂಚು ಜಯಿಸಿದ್ದರು.

ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದರು.

**

ಪ್ರದೀಪ್‌ ಅಮೋಘ ಸಾಧನೆ

ಪುರುಷರ ವೇಟ್‌ಲಿಫ್ಟಿಂಗ್‌ನಲ್ಲಿ ಪ್ರದೀಪ್‌ ಸಿಂಗ್‌ ಅವರು ಬೆಳ್ಳಿಯ ಸಾಧನೆ ಮಾಡಿದರು. 105 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಪ್ರದೀಪ್‌, ಒಟ್ಟು 352 ಕೆ.ಜಿ. ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ 152 ಕೆ.ಜಿ. ಭಾರ ಎತ್ತಿದ ಅವರು ಕ್ಲೀನ್‌ ಮತ್ತು ಜೆರ್ಕ್‌ನಲ್ಲಿ 200 ಕೆ.ಜಿ. ಸಾಮರ್ಥ್ಯ ತೋರಿದರು.

ಸಮೊವಾ ದೇಶದ ಸನೆಲೆ ಮಾವೊ ಈ ವಿಭಾಗದ ಚಿನ್ನಕ್ಕೆ ಕೊರಳೊಡ್ಡಿದರು. ಸನೆಲೆ, ಒಟ್ಟು 360 ಕೆ.ಜಿ. ಭಾರ ಎತ್ತಿದರು. ಸ್ನ್ಯಾಚ್‌ನಲ್ಲಿ 154 ಕೆ.ಜಿ. ಸಾಮರ್ಥ್ಯ ತೋರಿದ ಅವರು ಕ್ಲೀನ್‌ ಮತ್ತು ಜೆರ್ಕ್‌ನಲ್ಲಿ 206ಕೆ.ಜಿ. ಭಾರ ಎತ್ತಿ ಗಮನ ಸೆಳೆದರು. ಇಂಗ್ಲೆಂಡ್‌ನ ಒವೆನ್‌ ಬೊಕ್ಸಾಲ್‌ ಕಂಚು ಗೆದ್ದರು. ಅವರು ಒಟ್ಟು 351 ಕೆ.ಜಿ. ಭಾರ ಎತ್ತಿದರು. ಫೈನಲ್‌ನಲ್ಲಿ ಒಟ್ಟು 14 ಮಂದಿ ಭಾಗವಹಿಸಿದ್ದರು.

ಲಾಲಚಾನ್‌ಹಿಮಿಗೆ ನಿರಾಸೆ: ಮಹಿಳೆಯರ 90 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ಲಾಲಚಾನ್‌ಹಿಮಿ ಎಂಟನೆ ಸ್ಥಾನಕ್ಕೆ ತೃಪ್ತಿಪಟ್ಟರು. ಅವರು ಒಟ್ಟು 194 ಕೆ.ಜಿ. ಭಾರ ಎತ್ತಲಷ್ಟೇ ಶಕ್ತರಾದರು. ಫಿಜಿ ದೇಶದ ಎಲೀನಾ ಸಿಕಮಾಟನ (233 ಕೆ.ಜಿ) ಚಿನ್ನ ತಮ್ಮದಾಗಿಸಿಕೊಂಡರು. ಆಸ್ಟ್ರೇಲಿಯಾದ ಕೇಟಿ ಫಾಸೀನ (232 ಕೆ.ಜಿ) ಬೆಳ್ಳಿ ಗೆದ್ದರೆ, ಕ್ಯಾಮರೂನ್‌ನ ಕ್ಲೆಮೆಂಟಿನೆ ಮೆಯುಕೆಯುಗ್ನಿ (226 ಕೆ.ಜಿ) ಕಂಚು ಜಯಿಸಿದರು. ಮಹಿಳೆಯರ +90 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಪೂರ್ಣಿಮಾ ಪಾಂಡೆ (212 ಕೆ.ಜಿ) ಆರನೆ ಸ್ಥಾನ ಗಳಿಸಿದರು.

ಫಿಯಾಗೈಗಾ ಸ್ಟೋವರ್ಸ್‌ (253 ಕೆ.ಜಿ) ಚಿನ್ನ ಜಯಿಸಿದರು.

ಪುರುಷರ +105 ಕೆ.ಜಿ. ವಿಭಾಗದಲ್ಲಿ ಭಾರತದ ಗುರುದೀಪ್‌ ಸಿಂಗ್‌ (382 ಕೆ.ಜಿ) ನಾಲ್ಕನೆ ಸ್ಥಾನ ಗಳಿಸಿದರು. ನ್ಯೂಜಿಲೆಂಡ್‌ನ ಡೇವಿಡ್‌ ಲಿಟಿ (403 ಕೆ.ಜಿ) ಕೂಟ ದಾಖಲೆಯೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.