ಮಂಗಳವಾರ, ಜೂಲೈ 7, 2020
24 °C
ಅಥ್ಲೆಟಿಕ್ಸ್‌: ಚಿನ್ನ, ಬೆಳ್ಳಿ ಗೆದ್ದ ದಕ್ಷಿಣ ಆಫ್ರಿಕಾ ಓಟಗಾರರು; ನೋವಿನಿಂದ ಬಳಲಿದ ಆ್ಯಡಂ ಜೆಮಿಲಿ

ಜಮೈಕನ್ನರಿಗೆ ಆಘಾತ ನೀಡಿದ ಅಕಾನಿ, ಅಹಿಯೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಜಮೈಕನ್ನರಿಗೆ ಆಘಾತ ನೀಡಿದ ಅಕಾನಿ, ಅಹಿಯೆ

ಗೋಲ್ಡ್ ಕೋಸ್ಟ್‌ (ರಾಯಿಟರ್ಸ್‌): ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದ ಜಮೈಕಾದ ಯೊಹಾನ್‌ ಬ್ಲೇಕ್‌ಗೆ ಆಘಾತ ನೀಡಿದ ದಕ್ಷಿಣ ಆಫ್ರಿಕಾದ ಅಕಾನಿ ಸಿಂಬಿನೆ  100 ಮೀಟರ್‌ ಓಟದ ಸ್ಪರ್ಧೆಯಲ್ಲಿ ಮೊದಲಿಗರಾದರು.

10.3 ಸೆಕೆಂಡುಗಳಲ್ಲಿ ಸಿಂಬಿನೆ ಗುರಿ ಮುಟ್ಟಿದರೆ, ದಕ್ಷಿಣ ಆಫ್ರಿಕಾದವರೇ ಆದ ಹೆನ್ರಿಕ್ ಬ್ರುಯಿಂಟ್‌ಜೀಸ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅವರು 10.17 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಬ್ಲೇಕ್‌ (10.19 ಸೆ) ಕಂಚು ಗೆದ್ದರು.

ಸೆಮಿಫೈನಲ್‌ ಸ್ಪರ್ಧೆಯಲ್ಲಿ ಅತ್ಯಂತ ವೇಗದ ಓಟಗಾರ (10.06 ಸೆ) ಎಂದೆನಿಸಿಕೊಂಡಿದ್ದ ಬ್ಲೇಕ್‌ ಇಲ್ಲಿ ಉತ್ತಮ ಆರಂಭ ಮಾಡಿದರು.

(ಮಹಿಳೆಯರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಲೀ ಅಹಿಯೆ ಸಂಭ್ರಮಿಸಿದ ರೀತಿ ರಾಯಿಟರ್ಸ್ ಚಿತ್ರ)

ಕಿಕ್ಕಿರಿದು ತುಂಬಿದ್ದ ಕ್ಯಾರರಾ ಕ್ರೀಡಾಂಗಣದಲ್ಲಿ ಮಿಂಚು ಹರಿಸಿದ ಸಿಂಬಿನೆ ಮತ್ತು ಹೆನ್ರಿಕ್ ಕೆಲವೇ ಸೆಕೆಂಡುಗಳಲ್ಲಿ ಬ್ಲೇಕ್ ಅವರನ್ನು ಹಿಂದಿಕ್ಕಿದರು.

ಲಂಡನ್ ವಿಶ್ವ ಚಾಂಪಿಯನ್‌ಷಿಪ್‌ನ ರಿಲೇಯಲ್ಲಿ ಚಿನ್ನ ಗೆದ್ದಿದ್ದ ಆ್ಯಡಂ ಜೆಮಿಲಿ ಕೊನೆಯ ಹಂತದ ವರೆಗೂ ಸಿಂಬಿನೆ ಮತ್ತು ಹೆನ್ರಿಕ್‌ಗೆ ‍ಪ್ರಬಲ ಪೈಪೋಟಿ ನೀಡಿದರು.

ಆದರೆ ತೊಡೆಯ ನೋವಿನಿಂದಾಗಿ ಅವರು ಹಿಂದೆ ಬಿದ್ದ ಕಾರಣ ದಕ್ಷಿಣ ಆಫ್ರಿಕಾ ಓಟಗಾರರ ಹಾದಿ ಸುಗಮವಾಯಿತು.

ಅಹಿಯೆಗೆ ಚಿನ್ನದ ಸಂಭ್ರಮ: ಮಹಿಳಾ ವಿಭಾಗದಲ್ಲೂ ಜಮೈಕಾದ ಓಟಗಾರರು ಆಘಾತಕ್ಕೆ ಒಳಗಾದರು. ಕ್ರಿಸ್ಟಿಯಾನ ವಿಲಿಯಮ್ಸ್‌ ಮತ್ತು ಗೆಯಾನ್‌ ಇವಾನ್ಸ್ ಅವರನ್ನು ಹಿಂದಿಕ್ಕಿದ ಟ್ರಿನಿಡಾಡ್ ಮತ್ತು ಟೊಬ್ಯಾಗೊದ ಮಿಕಾಯಿಲ್‌ ಲೀ ಅಹಿಯೆ ಚಿನ್ನ ಗೆದ್ದರು. ಅಹಿಯೆ 11.14 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರೆ ಕ್ರಿಶ್ಚಿಯಾನ ಓಟ ಪೂರ್ತಿಗೊಳಿಸಲು 11.21 ಸೆಕೆಂಡುಗಳನ್ನು ತೆಗೆದುಕೊಂಡರು.

*

ಸೂರ್ಯಾ ವೈಯಕ್ತಿಕ ಉತ್ತಮ ಸಾಧನೆ

ಭಾರತದ ಸೂರ್ಯಾ ಲೋಕ ನಾಥನ್‌ 10 ಸಾವಿರ ಮೀಟರ್ ಓಟದಲ್ಲಿ ವೈಯಕ್ತಿಕ ಉತ್ತಮ ಸಾಧನೆ ಮಾಡಿದರು. ಆದರೆ ಸ್ಪರ್ಧೆಯಲ್ಲಿ 13ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಈ ಹಿಂದೆ 32:23.96 ನಿಮಿಷದಲ್ಲಿ ಸಾಧನೆ ಮಾಡಿದ್ದ ಸೂರ್ಯಾ ಸೋಮವಾರ 32:23.56 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಉಗಾಂಡದ ಸ್ಟೆಲ್ಲಾ ಚೆಸಾಂಗ್ (31:45.30 ನಿ) ಚಿನ್ನ ಗೆದ್ದರೆ ಸ್ಟಾಸಿ ಡಿವಾ (31:46.36ನಿ) ಮತ್ತು ಮೆರ್ಸಿಲಿನ್‌ ಚೆಲಂಗಟ್‌ (31:48.41 ನಿ) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.

ಅನಾಸ್ ಫೈನಲ್‌ಗೆ: ಮಹಮ್ಮದ್‌ ಅನಾಸ್‌ ಪುರುಷರ 400 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಫೈನಲ್‌ಗೆ ಲಗ್ಗೆ ಇಟ್ಟರು. ಸಮಿಫೈನಲ್‌ನಲ್ಲಿ ಅವರು 45.44 ಸೆಕೆಂಡುಗಳಲ್ಲಿ ಗುರಿಮುಟ್ಟಿದರು. ಈ ಮೂಲಕ 400 ಮೀಟರ್ಸ್ ಓಟದಲ್ಲಿ ಫೈನಲ್‌ಗೆ ತಲುಪಿದ ಎರಡನೇ ಭಾರತೀಯ ಎಂಬ ದಾಖಲೆ ತಮ್ಮದಾಗಿಸಿಕೊಂಡರು. 1954ರಲ್ಲಿ ಮಿಲ್ಕಾ ಸಿಂಗ್ ಈ ಸಾಧನೆ ಮಾಡಿದ್ದರು. 440 ಮೀಟರ್ಸ್ ಓಟದಲ್ಲಿ ಅವರು ಚಿನ್ನ ಗೆದ್ದಿದ್ದರು.

ಹೈಜಂಪ್‌ನಲ್ಲಿ ತೇಜಸ್ವಿನ್‌ ಶಂಕರ್‌ ಕೂಡ ಫೈನಲ್ ತಲುಪಿದ್ದಾರೆ. ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಅವರು 2.21 ಮೀಟರ್ ಎತ್ತರ ಜಿಗಿದರು. ಮಹಿಳೆಯರ 400 ಮೀಟರ್ಸ್ ಓಟದಲ್ಲಿ ಹೀಮಾ ದಾಸ್‌ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದರು. ಆದರೆ ಎಂ.ಆರ್‌.‍ಪೂವಮ್ಮ ನಿರಾಸೆಗೆ ಒಳಗಾದರು. ಅರ್ಹತಾ ಸುತ್ತಿನಲ್ಲಿ ಅವರು ಐದನೇಯವರಾದರು. ಪುರುಷರ ಶಾಟ್‌ಪಟ್‌ನಲ್ಲಿ ತೇಜಿಂದರ್ ಪಾಲ್‌ ಸಿಂಗ್ ಎಂಟನೇ ಸ್ಥಾನ ಗಳಿಸಿದರು.

**

ಅಭಿನಂದನೆಗಳು ಸಿಂಬಿನೆ. ಬ್ಲೇಕ್‌ ನಿರಾಸೆಗೊಳಗಾಗುವ ಅಗತ್ಯವಿಲ್ಲ. ನಿಮಗೆ ಇನ್ನು ಅಕವಾಶಗಳು ಸಾಕಷ್ಟು ಇವೆ.

-ಉಸೇನ್ ಬೋಲ್ಡ್‌ ಜಮೈಕಾದ ವೇಗದ ಓಟಗಾರ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.