ಶುಕ್ರವಾರ, ಡಿಸೆಂಬರ್ 6, 2019
26 °C

ಅಪಘಾತ: ಫುಟ್‌ಬಾಲ್‌ ಆಟಗಾರ್ತಿ ಸಾವು

Published:
Updated:
ಅಪಘಾತ: ಫುಟ್‌ಬಾಲ್‌ ಆಟಗಾರ್ತಿ ಸಾವು

ಬೆಂಗಳೂರು: ನಗರದ ನಾಯಂಡಹಳ್ಳಿ ಹೊರವರ್ತುಲ ರಸ್ತೆಯ ಮೇಲ್ಸೇತುವೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ್ದ ಅಪಘಾತದಲ್ಲಿ ಕರ್ನಾಟಕದ ಫುಟ್‌ಬಾಲ್‌ ಆಟಗಾರ್ತಿ ಎನ್‌.ಡಿ. ತೇಜಸ್ವಿನಿ (22) ದುರ್ಮರಣಕ್ಕೀಡಾಗಿದ್ದಾರೆ.

ಹಾಸನ ಜಿಲ್ಲೆ ಅರಕಲಗೂಡು ನರಸಿನಕುಪ್ಪೆಯ ತೇಜಸ್ವಿನಿ, ಮಾರತಹಳ್ಳಿಯ ಸಾಫ್ಟ್‌ವೇರ್‌ ಕಂಪನಿಯೊಂದರ ಉದ್ಯೋಗಿಯಾಗಿದ್ದರು.

ಅವರು, ಸಂಬಂಧಿಯೊಬ್ಬರ ಜತೆಯಲ್ಲಿ ಬೈಕ್‌ನಲ್ಲಿ ಹೊರಟಿದ್ದಾಗ ಅಪಘಾತ ಸಂಭವಿಸಿತ್ತು ಎಂದು ಬನಶಂಕರಿ ಸಂಚಾರ ಪೊಲೀಸರು ತಿಳಿಸಿದರು.

‘ತೇಜಸ್ವಿನಿ ಅವರ ಸಂಬಂಧಿಯೇ ಬೈಕ್‌ ಓಡಿಸುತ್ತಿದ್ದರು. ಅದೇ ಬೈಕ್‌ಗೆ ಮೇಲ್ಸೇತುವೆಯಲ್ಲಿ ಕಾರೊಂದು ಗುದ್ದಿತ್ತು. ನಿಯಂತ್ರಣ ತಪ್ಪಿದ ಬೈಕ್‌ ರಸ್ತೆಯಲ್ಲೇ ಉರುಳಿಬಿತ್ತು. ರಸ್ತೆಯಲ್ಲಿ ಬಿದ್ದ ತೇಜಸ್ವಿನಿ ಅವರ ಮೈ ಮೇಲೆ ಕಾರಿನ ಚಕ್ರಗಳು ಹರಿದು ಹೋಗಿದ್ದವು. ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ನಸುಕಿನ 5ರ ಸುಮಾರಿಗೆ ಅಸುನೀಗಿದರು’ ಎಂದು ಹೇಳಿದರು.

‘ಘಟನೆಯಲ್ಲಿ ತೇಜಸ್ವಿನಿ ಅವರ ಸಂಬಂಧಿಗೂ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಕ್ಕೆ ಕಾರು ಚಾಲಕನ ನಿರ್ಲಕ್ಷ್ಯವೇ ಕಾರಣ. ಘಟನೆ ನಂತರ ಆತ, ಕಾರಿನ ಸಮೇತ ಪರಾರಿಯಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡು ಆತನನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)