ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಟಿಕೆಟ್‌ ಹಂಚಿಕೆ, ಬೈಲಹೊಂಗಲ, ಕುಡಚಿ: ಆಕಾಂಕ್ಷಿಗಳ ವಿರೋಧ

ಪಿ.ರಾಜೀವ್‌ ಸೇರಿ 10 ಜನ ಶಾಸಕರಿಗೆ ಟಿಕೆಟ್‌;
Last Updated 10 ಏಪ್ರಿಲ್ 2018, 5:48 IST
ಅಕ್ಷರ ಗಾತ್ರ

ಬೆಳಗಾವಿ: ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಪ್ರಕಟ ಮಾಡಿದ್ದು, ಜಿಲ್ಲೆಯ ಹಾಲಿ 9 ಜನ ಶಾಸಕರಿಗೆ ಟಿಕೆಟ್‌ ಲಭಿಸಿದೆ.

ಇವರ ಜೊತೆಗೆ ಬಿಎಸ್‌ಆರ್‌ ಕಾಂಗ್ರೆಸ್‌ ತೊರೆದು ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾಗಿದ್ದ ಪಿ.ರಾಜೀವ್‌ ಅವರಿಗೂ ಟಿಕೆಟ್‌ ದೊರೆತಿದೆ. ಜಿಲ್ಲೆಯ ಒಟ್ಟು 18 ಕ್ಷೇತ್ರಗಳ ಪೈಕಿ 10 ಕ್ಷೇತ್ರಗಳ ಅಭ್ಯರ್ಥಿಗಳು ಅಂತಿಮಗೊಂಡಂತಾಗಿದೆ.

ನಿಪ್ಪಾಣಿ– ಶಶಿಕಲಾ ಜೊಲ್ಲೆ, ಅಥಣಿ– ಲಕ್ಷ್ಮಣ ಸವದಿ, ಕಾಗವಾಡ– ರಾಜು ಕಾಗೆ, ಕುಡಚಿ (ಎಸ್‌ಸಿ ಮೀಸಲು)– ಪಿ.ರಾಜೀವ, ರಾಯಬಾಗ (ಎಸ್‌ಸಿ ಮೀಸಲು)– ದುರ್ಯೋಧನ ಐಹೊಳೆ, ಹುಕ್ಕೇರಿ– ಉಮೇಶ ಕತ್ತಿ, ಅರಬಾವಿ– ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ– ಸಂಜಯ ಪಾಟೀಲ, ಬೈಲಹೊಂಗಲ– ಡಾ.ವಿಶ್ವನಾಥ ಪಾಟೀಲ ಹಾಗೂ ಸವದತ್ತಿ– ಆನಂದ ಮಾಮನಿ ಅವರಿಗೆ ಟಿಕೆಟ್‌ ಲಭಿಸಿದೆ.

ತೀವ್ರ ವಿರೋಧ: ಬೈಲಹೊಂಗಲ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಜಗದೀಶ ಮೆಟಗುಡ್ಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಇಷ್ಟು ವರ್ಷಗಳ ಕಾಲ ಪಕ್ಷವನ್ನು ಕಟ್ಟಿದ್ದ ನಮ್ಮಂತಹವರನ್ನು ಕಡೆಗಣಿಸಲಾಗಿದೆ. ಕಳೆದ ಬಾರಿ ನಾನು ಸೋಲಲು ಕಾರಣರಾಗಿದ್ದ ಕೆಜೆಪಿಯ ಡಾ.ವಿಶ್ವನಾಥ ಪಾಟೀಲ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಲ್ಲದೇ, ಅವರಿಗೆ ಟಿಕೆಟ್‌ ನೀಡಿರುವುದು ನೋವು ತಂದಿದೆ’ ಎಂದು ಪ್ರತಿಕ್ರಿಯಿಸಿದರು.

‘ಪಕ್ಷದ ವತಿಯಿಂದ ನಡೆಸಲಾದ ಸಮೀಕ್ಷೆಯಲ್ಲಿ ನಾನು ಅಗ್ರಸ್ಥಾನದಲ್ಲಿದ್ದೆ. ಮೂರನೇ ಸ್ಥಾನದಲ್ಲಿದ್ದ ಡಾ.ವಿಶ್ವನಾಥ ಪಾಟೀಲ ಅವರಿಗೆ ಟಿಕೆಟ್‌ ನೀಡಿರುವುದು ಅಕ್ಷಮ್ಯ. 2004, 2008ರಲ್ಲಿ ನಾನು ಶಾಸಕನಾಗಿ ಆಯ್ಕೆಯಾಗಿದ್ದೆ. ಪಕ್ಷವನ್ನು ಕಟ್ಟಿ ಬೆಳೆಸಲು ಸಾಕಷ್ಟು ಶ್ರಮ ವಹಿಸಿದ್ದೇನೆ. ಇದೆಲ್ಲವನ್ನು ಪಕ್ಷದ ವರಿಷ್ಠರು ಪರಿಗಣಿಸಬೇಕಾಗಿತ್ತು’ ಎಂದು ಹೇಳಿದರು.‘ಮುಂದೆ ಏನು ಮಾಡಬೇಕು ಎನ್ನುವುದನ್ನು ಎರಡು ದಿನಗಳೊಳಗೆ ಕಾರ್ಯಕರ್ತರು ಹಾಗೂ ಹಿತೈಷಿಗಳ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ತಿಳಿಸಿದರು.

ಪಿ.ರಾಜೀವ್‌ಗೆ ವಿರೋಧ: ಕುಡಚಿ ಕ್ಷೇತ್ರಕ್ಕೆ ಪಿ.ರಾಜೀವ್‌ ಅವರಿಗೆ ಟಿಕೆಟ್‌ ನೀಡಿರುವುದಕ್ಕೆ ಕುಡಚಿ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ಸನದಿ ವಿರೋಧ ವ್ಯಕ್ತಪಡಿಸಿದ್ದಾರೆ.

‘ಪಕ್ಷವನ್ನು ತಳಹಂತದಿಂದ ಕಟ್ಟಿದ ಕಾರ್ಯಕರ್ತರು ಹಾಗೂ ಮುಖಂಡರನ್ನು ಪರಿಗಣಿಸದೆ ಪಕ್ಷಾಂತರಿಗಳಿಗೆ ಮಣೆ ಹಾಕಿರುವುದು ಸರಿಯಲ್ಲ. ಅಧಿಕಾರದ ಆಸೆಗಾಗಿ ಬಂದಿರುವ ಇವರು, ಅಧಿಕಾರ ಅನುಭವಿಸಿದ ನಂತರ ಬೇರೊಂದು ಪಕ್ಷಕ್ಕೆ ಹಾರಿಹೋಗುತ್ತಾರೆ’ ಎಂದು ಹೇಳಿದರು.

‘ಮಾಜಿ ಶಾಸಕ ಬಿ.ಸಿ. ಸರಿಕಾರ ಸೇರಿದಂತೆ ಅಶೋಕ ಗುತ್ತೆ, ಗಣೇಶ ರೋಡಕರ, ವೆಂಕಟೇಶ ವಡ್ಡರ ಸೇರಿದಂತೆ ಹಲವರು ಆಕಾಂಕ್ಷಿಗಳಾಗಿದ್ದರು. ಇವರನ್ನು ಪರಿಗಣಿಸದೇ ಸಮಯ ಸಾಧಕರಿಗೆ ಟಿಕೆಟ್‌ ನೀಡಿರುವುದು ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ.

ನಮ್ಮ ಅಸಮಾಧಾನವನ್ನು ಪಕ್ಷದ ಜಿಲ್ಲಾ ಅಧ್ಯಕ್ಷ ಶಶಿಕಾಂತ ನಾಯಿಕ ಅವರ ಗಮನಕ್ಕೆ ತಂದಿದ್ದೇವೆ. ಪಕ್ಷದ ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದೆ ಏನು ಮಾಡಬೇಕು ಎನ್ನುವುದನ್ನು ತೀರ್ಮಾನಿಸುತ್ತೇವೆ’ ಎಂದು ತಿಳಿಸಿದರು.

ಅಸಮಾಧಾನ ಸರಿಪಡಿಸುವ ವಿಶ್ವಾಸ: ‘ಪ್ರತಿಯೊಂದು ಕ್ಷೇತ್ರದಲ್ಲಿ ಇಬ್ಬರು ಮೂವರು ಆಕಾಂಕ್ಷಿಗಳು ಇದ್ದೇ ಇರುತ್ತಾರೆ. ಟಿಕೆಟ್‌ ಸಿಗದೇ ಇದ್ದಾಗ ಅಸಮಾಧಾನ ಹೊರಹಾಕುವುದು ಸಹಜ. ಪಕ್ಷದ ವರಿಷ್ಠರು ಮಾತುಕತೆ ಮಾಡಿ, ಸರಿಪಡಿಸುವ ವಿಶ್ವಾಸವಿದೆ’ ಎಂದು ಬೆಳಗಾವಿ ಮಹಾನಗರ ಘಟಕದ ಅಧ್ಯಕ್ಷ ರಾಜೇಂದ್ರ ಹರಕುಣಿ ಹೇಳಿದರು.

ಊಹೋಪೋಹಗಳಿಗೆ ತೆರೆ: ಬೆಳಗಾವಿ ಉತ್ತರ ಕ್ಷೇತ್ರದಿಂದ ಸಂಜಯ ಪಾಟೀಲ ಕಣಕ್ಕಿಳಿಯಲಿದ್ದಾರಂತೆ... ಸಂಸದ ಸುರೇಶ ಅಂಗಡಿ ಅವರು ವಿಧಾನಸಭೆಗೆ ಸ್ಪರ್ಧಿಸುವರಂತೆ... ಲಕ್ಷ್ಮಣ ಸವದಿ, ರಾಜು ಕಾಗೆ ಅವರಿಗೆ ಟಿಕೆಟ್‌ ತಪ್ಪಬಹುದಂತೆ... ಸಾಮಾನ್ಯ ಕ್ಷೇತ್ರವಾಗಿರುವ ಅರಬಾವಿ ಕ್ಷೇತ್ರಕ್ಕೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಬಹುದು ಎನ್ನುವಂತಹ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಕಳೆದ ಬಾರಿ 2013ರಲ್ಲಿ ತೀರ್ಮಾನ ಕೈಗೊಂಡಂತೆ ಈ ಸಲವೂ ಹಾಲಿ ಶಾಸಕರಿಗೆ ಟಿಕೆಟ್‌ ನೀಡಿರುವುದು ಕಂಡುಬಂದಿದೆ. ಇನ್ನುಳಿದ ಕ್ಷೇತ್ರಗಳ ಟಿಕೆಟ್‌ ಅನ್ನು 2–3 ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT